Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 48 - ಕನ್ನಡ ಸತ್ಯವೇದವು C.L. Bible (BSI)


ಎಫ್ರಯಿಮ್‍ ಮತ್ತು ಮನಸ್ಸೆ ಇವರಿಗೆ ಯಕೋಬನ ಅಂತಿಮ ಆಶೀರ್ವಾದ

1 ಕೆಲವು ಕಾಲವಾದ ಮೇಲೆ, “ತಂದೆ ಬಹಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ,” ಎಂಬ ಸುದ್ದಿ ಜೋಸೆಫನಿಗೆ ಬಂದಿತು. ಅವನು ಮನಸ್ಸೆ ಮತ್ತು ಎಫ್ರಯಿಮ್‍ ಎಂಬ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.

2 “ನಿಮ್ಮ ಮಗ ಜೋಸೆಫನು ಬಂದಿದ್ದಾನೆ,” ಎಂದು ಯಕೋಬನಿಗೆ ತಿಳಿಸಿದಾಗ ಅವನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.

3 ಅವನು ಜೋಸೆಫನಿಗೆ, “ಸರ್ವವಲ್ಲಭರಾದ ದೇವರು ಕಾನಾನ್ ನಾಡಿನ ಲೂಜಿನಲ್ಲಿ ನನಗೆ ದರ್ಶನಕೊಟ್ಟು, ಆಶೀರ್ವದಿಸಿ -

4 ‘ನಾನು ನಿನ್ನನ್ನು ಫಲಪ್ರದನನ್ನಾಗಿ ಮಾಡಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು; ಅನೇಕ ಜನರಿಗೆ ನಿನ್ನನ್ನು ಮೂಲಪುರುಷನನ್ನಾಗಿ ಮಾಡುವೆನು; ನಿನ್ನ ತರುವಾಯ ನಿನ್ನ ಸಂತತಿಗೆ ಈ ನಾಡನ್ನು ಶಾಶ್ವತ ಸೊತ್ತನ್ನಾಗಿ ಕೊಡುವೆನು,’ ಎಂದು ಹೇಳಿದರು.

5 “ನಾನು ನಿನ್ನ ಬಳಿಗೆ ಈಜಿಪ್ಟ್ ದೇಶಕ್ಕೆ ಬರುವುದಕ್ಕೆ ಮುಂಚೆ ಇಲ್ಲಿ ಹುಟ್ಟಿದ್ದ ನಿನ್ನಿಬ್ಬರು ಮಕ್ಕಳು ನನ್ನ ಮಕ್ಕಳಾಗಬೇಕು. ರೂಬೇನ್ ಮತ್ತು ಸಿಮೆಯೋನ್ ನನ್ನ ಮಕ್ಕಳಾಗಿರುವಂತೆಯೇ ಎಫ್ರಯಿಮ್ ಮತ್ತು ಮನಸ್ಸೆ ನನ್ನ ಮಕ್ಕಳಾಗಿರಲಿ.

6 ಅವರ ತರುವಾಯ ನೀನು ಪಡೆದ ಮಕ್ಕಳು ನಿನ್ನವರಾಗಿರಲಿ. ಅವರು ತಮ್ಮ ಅಣ್ಣಂದಿರ ಸೊತ್ತಿಗೆ ಬಾಧ್ಯತೆ ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.

7 ಏಕೆಂದರೆ ನಿಮ್ಮ ತಾಯಿ ರಾಖೇಲಳು, ನಾನು ಮೆಸಪೊಟೇಮಿಯಾದಿಂದ ಬರುವಾಗ, ಕಾನಾನ್ ನಾಡಿನಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನು ಸ್ವಲ್ಪ ದೂರ ಇದ್ದಾಗಲೆ ದಾರಿಯಲ್ಲಿ ಸತ್ತು ನನ್ನನ್ನು ಅಗಲಿಹೋದಳು. ಈಗ ಬೇತ್ಲೆಹೇಮ್ ಎನಿಸಿಕೊಳ್ಳುವ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಆಕೆಯನ್ನು ಸಮಾಧಿಮಾಡಿದೆ,” ಎಂದು ಹೇಳಿದನು.

8 ಯಕೋಬನು ಜೋಸೆಫನ ಮಕ್ಕಳನ್ನು ನೋಡಿ, “ಇವರು ಯಾರು?” ಎಂದು ಕೇಳಿದನು.

9 ಅದಕ್ಕೆ ಜೋಸೆಫನು, “ಈ ದೇಶದಲ್ಲಿ ದೇವರು ನನಗೆ ಅನುಗ್ರಹಿಸಿದ ಮಕ್ಕಳು,” ಎಂದನು. ಆಗ ತಂದೆ ಯಕೋಬನು, “ಇವರನ್ನು ನಾನು ಆಶೀರ್ವದಿಸುತ್ತೇನೆ; ನನ್ನ ಹತ್ತಿರಕ್ಕೆ ಕರೆದುಕೊಂಡು ಬಾ,” ಎಂದನು.

10 ವೃದ್ಧಾಪ್ಯದ ನಿಮಿತ್ತ ಯಕೋಬನ ಕಣ್ಣು ಮೊಬ್ಬಾಗಿತ್ತು. ಜೋಸೆಫನು ಆ ಮಕ್ಕಳನ್ನು ಹತ್ತಿರಕ್ಕೆ ತಂದಾಗ ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.

11 ಅನಂತರ ಜೋಸೆಫನಿಗೆ, “ನಿನ್ನ ಮುಖವನ್ನು ಮತ್ತೆ ನೋಡುವೆನೆಂದು ನಾನು ನೆನಸಿರಲಿಲ್ಲ. ಈಗ ನಿನ್ನನ್ನು ಮಾತ್ರವಲ್ಲ, ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾರೆ!” ಎಂದನು.

12 ಆಗ ಜೋಸೆಫನು ತಂದೆಯ ಮಡಲಿನಿಂದ ತನ್ನ ಮಕ್ಕಳನ್ನು ಎತ್ತಿಕೊಂಡು ತಂದೆಗೆ ನೆಲದ ತನಕ ಬಾಗಿ ನಮಸ್ಕರಿಸಿದನು.

13 ತರುವಾಯ ಜೋಸೆಫನು ಎಫ್ರಯಿಮನನ್ನು ತನ್ನ ಬಲಕ್ಕೆ ಯಕೋಬನ ಎಡಗೈಗೆದುರಾಗಿ ಮತ್ತು ಮನಸ್ಸೆಯನ್ನು ತನ್ನ ಎಡಕ್ಕೆ, ಯಕೋಬನ ಬಲಗೈಗೆದುರಾಗಿ, ತಂದೆಯ ಮುಂದೆ ನಿಲ್ಲಿಸಿದನು.

14 ಮನಸ್ಸೆಯು ಜೇಷ್ಠಮಗನಾಗಿದ್ದರೂ ಯಕೋಬನು ತನ್ನ ಕೈಗಳನ್ನು ಅಡ್ಡಡ್ಡವಾಗಿ ಚಾಚಿ ಕಿರಿಯವನಾದ ಎಫ್ರಯಿಮನ ತಲೆಯ ಮೇಲೆ ಬಲಗೈಯನ್ನು, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನು ಇಟ್ಟು,

15 ಜೋಸೆಫನನ್ನು ಹೀಗೆಂದು ಆಶೀರ್ವದಿಸಿದನು: “ನನ್ನ ಪಿತೃಗಳಾದ ಅಬ್ರಹಾಮ್, ಇಸಾಕರು ಯಾವ ದೇವರ ಸಮ್ಮುಖದಲ್ಲಿ ನಡೆದುಕೊಂಡರೋ ಆ ದೇವರು, ಚಿಕ್ಕಂದಿನಿಂದ ಇಂದಿನವರೆಗೆ ನನ್ನನ್ನು ಪರಿಪಾಲಿಸಿಕೊಂಡು ಬಂದ ಆ ದೇವರು,

16 ಸಕಲ ಆಪತ್ತು ಕೇಡುಗಳಿಂದ ನನ್ನನ್ನು ಕಾಪಾಡಿಕೊಂಡು ಬಂದ ಆ ದೂತನು, ಈ ಹುಡುಗರನ್ನು ಆಶೀರ್ವದಿಸಲಿ! ಅವರ ಮುಖಾಂತರ ನನ್ನ ಹೆಸರೂ ನನ್ನ ಪಿತೃಗಳಾದ ಅಬ್ರಹಾಮ್ - ಇಸಾಕರ ಹೆಸರೂ ಊರ್ಜಿತಗೊಳ್ಳಲಿ; ಧರೆಯಲ್ಲಿ ಇವರು ದೊಡ್ಡ ಜನಸ್ತೋಮವಾಗಿ ಬೆಳೆಯಲಿ!”

17 ತನ್ನ ತಂದೆ ಬಲಗೈಯನ್ನು ಎಫ್ರಯಿಮನ ತಲೆಯ ಮೇಲೆ ಇಟ್ಟದ್ದು ಜೋಸೆಫನಿಗೆ ಹಿಡಿಸಲಿಲ್ಲ. ಅವನು ಆ ಕೈಯನ್ನು ಹಿಡಿದು ಎಫ್ರಯಿಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಡುವಂತೆ ತಂದೆಗೆ,

18 “ಹಾಗಲ್ಲ ಅಪ್ಪಾ, ಇವನೇ ಜೇಷ್ಠ ಪುತ್ರ; ಬಲಗೈಯನ್ನು ಇವನ ತಲೆಯ ಮೇಲೆ ಇಡು”, ಎಂದು ಹೇಳಿದ.

19 ಆದರೆ ತಂದೆ ಅದಕ್ಕೆ ಒಪ್ಪದೆ, “ಗೊತ್ತು ಮಗನೇ, ನನಗೆ ಗೊತ್ತು; ಇವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವುದು; ಇವನೂ ಬಲಿಷ್ಠನಾಗುವನು. ಅವನಿಂದ ರಾಷ್ಟ್ರಗಳ ಸಮೂಹವೆ ಉತ್ಪತ್ತಿಯಾಗುವುದು,” ಎಂದು ಹೇಳಿದನು.

20 ಆ ದಿನ ಅವರನ್ನು ಆಶೀರ್ವದಿಸುತ್ತಾ ಹೀಗೆಂದನು: "ಎಫ್ರಯಿಮ್ - ಮನಸ್ಸೆಯಂತೆ ನಿಮ್ಮನ್ನೂ ಅಭಿವೃದ್ಧಿಗೊಳಿಸಲಿ ದೇವರು! ಹೀಗೆ ನಿಮ್ಮ ಹೆಸರನ್ನು ಉಚ್ಚರಿಸುತ್ತಾ ಇತರರನ್ನು ಆಶೀರ್ವದಿಸುವರು ಇಸ್ರಯೇಲರು". ಈ ರೀತಿಯಾಗಿ ಅವನು ಎಫ್ರಯಿಮನನ್ನು ಮನಸ್ಸೆಗಿಂತ ಮುಂದಿಟ್ಟನು.

21 ಬಳಿಕ ಯಕೋಬನು ಜೋಸೆಫನಿಗೆ, “ನನಗೆ ಮರಣ ಸಮೀಪಿಸಿದೆ; ಆದರೆ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ಪಿತೃಗಳ ನಾಡಿಗೆ ಮರಳಿ ಬರಮಾಡುವರು.

22 ಇದಲ್ಲದೆ, ಕತ್ತಿ - ಬಿಲ್ಲುಗಳಿಂದ ನಾನು ಅಮೋರಿಯರ ವಶದಿಂದ ಪಡೆದ ಬೆಟ್ಟದ ತಪ್ಪಲನ್ನು, ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ, ನಿನಗೆ ಕೊಟ್ಟಿದ್ದೇನೆ,” ಎಂದು ಹೇಳಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು