ಆದಿಕಾಂಡ 46 - ಕನ್ನಡ ಸತ್ಯವೇದವು C.L. Bible (BSI)ಈಜಿಪ್ಟಿಗೆ ಯಕೋಬನ ಮತ್ತು ಅವನ ಕುಟುಂಬದ ಯಾತ್ರೆ 1 ಯಕೋಬನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು ಪ್ರಯಾಣಮಾಡಿ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ತಂದೆ ಇಸಾಕನ ದೇವರಿಗೆ ಬಲಿದಾನಗಳನ್ನು ಅರ್ಪಿಸಿದನು. 2 ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, “ಯಕೋಬನೇ, ಯಕೋಬನೇ,” ಎಂದು ಕರೆಯಲು, ಅವನು, "ಇಗೋ, ಸಿದ್ಧನಿದ್ದೇನೆ,” ಎಂದನು. 3 ಆಗ ದೇವರು, “ನಾನೇ ದೇವರು, ನಿನ್ನ ತಂದೆ ಆರಾಧಿಸಿದ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು; 4 ನಾನೇ ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಅಲ್ಲಿಂದ ನಿನ್ನನ್ನು ನಿಶ್ಚಯವಾಗಿ ವಾಪಸ್ಸು ಕರೆದುಕೊಂಡು ಬರುವೆನು. ನೀನು ಸಾಯುವ ಕಾಲದಲ್ಲಿ ಜೋಸೆಫನು ಹಾಜರಿದ್ದು ನಿನ್ನ ಕಣ್ಣುಗಳನ್ನು ಮುಚ್ಚುವನು,” ಎಂದರು. 5 ಬಳಿಕ ಯಕೋಬನು ಬೇರ್ಷೆಬದಿಂದ ಪ್ರಯಾಣ ಮಾಡಿದನು. ಯಕೋಬನ ಮಕ್ಕಳು ತಮ್ಮ ತಂದೆಯಾದ ಯಕೋಬನನ್ನು ಮತ್ತು ತಮ್ಮ ಮಡದಿಮಕ್ಕಳನ್ನು ಫರೋಹನು ಕಳಿಸಿದ್ದ ಬಂಡಿಗಳಲ್ಲಿ ಕೂರಿಸಿಕೊಂಡು ಹೊರಟರು.. 6 ಕಾನಾನ್ ನಾಡಿನಲ್ಲಿ ತಾವು ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನೂ ದನಕುರಿಗಳನ್ನೂ ತೆಗೆದುಕೊಂಡು ಈಜಿಪ್ಟ್ ದೇಶವನ್ನು ತಲುಪಿದರು. 7 ಹೀಗೆ ಯಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ ಮೊಮ್ಮಕ್ಕಳನ್ನೂ ತನ್ನ ಕುಟುಂಬದವರೆಲ್ಲರನ್ನೂ ತನ್ನ ಸಂಗಡವೇ ಕರೆದುಕೊಂಡು ಈಜಿಪ್ಟಿಗೆ ಬಂದನು. 8 ಈಜಿಪ್ಟಿಗೆ ಬಂದು ಸೇರಿದ ಯಕೋಬನ ಮತ್ತು ಅವನ ಮಕ್ಕಳಾದ ಇಸ್ರಯೇಲರ ಹೆಸರುಗಳು ಇವು - ಯಕೋಬನ ಜೇಷ್ಠ ಪುತ್ರ ರೂಬೇನನು. 9 ರೂಬೇನನ ಮಕ್ಕಳು - ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ. 10 ಸಿಮೆಯೋನನ ಮಕ್ಕಳು - ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಲ್ಲಿ ಹುಟ್ಟಿದ ಸೌಲ. 11 ಲೇವಿಯ ಮಕ್ಕಳು - ಗೆರ್ಷೋನ್, ಕೆಹಾತ್ ಮತ್ತು ಮೆರಾರಿ. 12 ಯೆಹೂದನ ಮಕ್ಕಳು - ಏರ್, ಓನಾನ್, ಶೆಲಾಹ, ಪೆರೆಜ್ ಮತ್ತು ಜೆರಹ (ಇವರಲ್ಲಿ ಏರ್ ಹಾಗೂ ಓನಾನ್ ಕಾನಾನ್ ನಾಡಿನಲ್ಲೇ ಕಾಲವಾಗಿದ್ದರು). ಪೆರೆಚನ ಮಕ್ಕಳು - ಹೆಚ್ರೋನ್ ಮತ್ತು ಹಾಮೂಲ್. 13 ಇಸ್ಸಾಕಾರನ ಮಕ್ಕಳು - ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್. 14 ಜೆಬುಲೂನನ ಮಕ್ಕಳು - ಸೆರೆದ್, ಏಲೋನ್ ಮತ್ತು ಯಹ್ಲೇಲ್. 15 ಇವರೆಲ್ಲರು ಲೇಯಳ ಸಂತತಿಯವರು. ಆಕೆ ಯಕೋಬನಿಗೆ ಇವರನ್ನಲ್ಲದೆ ದೀನಳೆಂಬ ಮಗಳನ್ನೂ ಮೆಸಪೊಟೇಮಿಯಾದಲ್ಲಿ ಪಡೆದಳು. ಆಕೆಯಿಂದಾದ ಗಂಡು ಹೆಣ್ಣು ಮಕ್ಕಳು ಒಟ್ಟು ಮೂವತ್ತು ಮಂದಿ. 16 ಗಾದನ ಮಕ್ಕಳು - ಚಿಪ್ಯೋನ್, ಹಗ್ಗಿ, ಶೂನೀ, ಎಚ್ಬೋನ್, ಏರಿ, ಅರೋದಿ ಮತ್ತು ಅರೇಲಿ. 17 ಅಶೇರನ ಮಕ್ಕಳು - ಇಮ್ನಾ, ಇಷ್ವಾ, ಇಷಿವೀ, ಬೆರೀಗಾ ಮತ್ತು ಇವರ ತಂಗಿ ಸೆರಹ; ಬೆರೀಗಾನ ಮಕ್ಕಳು - ಹೆಬೆರ್ ಮತ್ತು ಮಲ್ಕೀಯೇಲ್; 18 ಇವರು ಲಾಬಾನನು ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟ ಜಿಲ್ಪಳ ಸಂತತಿಯವರು. ಈಕೆಯಿಂದ ಯಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ. 19 ಯಕೋಬನ ಹೆಂಡತಿಯಾದ ರಾಖೇಲಳ ಮಕ್ಕಳು - ಜೋಸೆಫ್ ಮತ್ತು ಬೆನ್ಯಾಮೀನ್. 20 ಈಜಿಪ್ಟಿನಲ್ಲಿ ಜೋಸೆಫನಿಗೆ ಓನ್ ಪಟ್ಟಣದ ಆಚಾರ್ಯ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದ ಮನಸ್ಸೆ ಮತ್ತು ಎಫ್ರಯಿಮ್. 21 ಬೆನ್ಯಾಮೀನನ ಮಕ್ಕಳು - ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಏಹೀರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದಾ. 22 ಈ ಹದಿನಾಲ್ಕು ಮಂದಿ ರಾಖೇಲಳ ಮೂಲಕ ಯಕೋಬನಿಂದಾದ ಸಂತತಿಯವರು. 23 ದಾನನ ಮಗ - ಹುಶೀಮ್. 24 ನಪ್ತಾಲಿಯ ಮಕ್ಕಳು - ಯಹೇಲ್, ಗೂನಿ, ಯೇಚರ್ ಮತ್ತು ಶಿಲ್ಲೇಮ್; 25 ಇವರು ಲಾಬಾನನು ತನ್ನ ಮಗಳು ರಾಖೇಲಳಿಗೆ ಕೊಟ್ಟ ದಾಸಿ ಬಿಲ್ಹಳ ಸಂತತಿಯವರು. ಈಕೆಯಿಂದ ಯಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಏಳು ಮಂದಿ. 26 ಯಕೋಬನ ಸೊಸೆಯರಲ್ಲದೆ ಯಕೋಬನಿಂದಲೇ ಹುಟ್ಟಿ ಅವನೊಂದಿಗೆ ಈಜಿಪ್ಟ್ ದೇಶಕ್ಕೆ ಹೋದವರು ಒಟ್ಟು ಅರವತ್ತಾರು ಮಂದಿ. 27 ಅವರಲ್ಲದೆ ಈಜಿಪ್ಟ್ ದೇಶದಲ್ಲಿ ಜೋಸೆಫನಿಗೆ ಹುಟ್ಟಿದವರು ಇಬ್ಬರು. ಈಜಿಪ್ಟ್ ದೇಶಕ್ಕೆ ಹೋದ ಯಕೋಬನ ಕುಟುಂಬದವರೆಲ್ಲರು ಒಟ್ಟಾಗಿ ಎಪ್ಪತ್ತು ಮಂದಿ. ಈಜಿಪ್ಟಿನಲ್ಲಿ ಯಕೋಬನ ಕುಟುಂಬ 28 ಗೋಷೆನ್ ಪ್ರಾಂತದಲ್ಲಿ ಜೋಸೆಫ್ ತನ್ನನ್ನು ಭೇಟಿಯಾಗಬೇಕೆಂದು ತಿಳಿಸಲು ಯಕೋಬನು ಯೆಹೂದನನ್ನು ಮುಂದಾಗಿ ಜೋಸೆಫನ ಬಳಿಗೆ ಕಳಿಸಿದನು. ಅವರೆಲ್ಲರು ಗೋಷೆನ್ ಪ್ರಾಂತ್ಯವನ್ನು ಬಂದು ಸೇರಿದರು. 29 ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಭೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು. 30 ಯಕೋಬನು ಜೋಸೆಫನಿಗೆ, “ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು. ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ದಾಯಿತು,” ಎಂದನು. 31 ತರುವಾಯ ಜೋಸೆಫನು ತನ್ನ ಅಣ್ಣತಮ್ಮಂದಿರನ್ನೂ ತಂದೆಯ ಮನೆಯವರೆಲ್ಲರನ್ನೂ ನೋಡಿ, “ನಾನು ಫರೋಹನ ಸನ್ನಿಧಿಗೆ ಹೋಗಿ ನೀವು ಬಂದಿರುವ ಸಮಾಚಾರವನ್ನು ತಿಳಿಸಿ, ‘ಕಾನಾನ್ ನಾಡಿನಲ್ಲಿದ್ದ ನನ್ನ ಸಹೋದರರೂ ನನ್ನ ತಂದೆಯೂ, ಕುಟುಂಬದವರೂ ನನ್ನ ಬಳಿಗೆ ಬಂದಿದ್ದಾರೆ. 32 ಅವರು ಕುರಿಕಾಯುವವರು, ಮಂದೆ ಮೇಯಿಸುವುದು ಅವರ ಕಸುಬು. ಅವರು ತಮ್ಮ ಕುರಿದನಗಳನ್ನೂ ತಮಗಿದ್ದ ಎಲ್ಲವನ್ನೂ ತಂದಿದ್ದಾರೆ,’ ಎಂದು ಹೇಳುತ್ತೇನೆ. 33 ಫರೋಹನು ನಿಮ್ಮನ್ನು ಕರೆಸಿ, ‘ನಿಮ್ಮ ಕಸುಬು ಏನೆಂದು ಕೇಳಿದರೆ, 34 'ಚಿಕ್ಕಂದಿನಿಂದ ಇಂದಿನವರೆಗೂ ನಿಮ್ಮ ಸೇವಕರಾದ ನಾವು, ನಮ್ಮ ಪೂರ್ವಜರ ಪದ್ಧತಿಯಂತೆ ಮಂದೆ ಮೇಯಿಸುವವರು,’ ಎಂದು ಹೇಳಿರಿ. ಆಗ ಗೋಷೆನ್ ಪ್ರಾಂತ್ಯವನ್ನು ನಿಮ್ಮ ನಿವಾಸಕ್ಕೆ ನೇಮಿಸುವನು - ಏಕೆಂದರೆ ಕುರಿ ಕಾಯುವವರೆಂದರೆ ಈಜಿಪ್ಟಿಯರಿಗೆ ಹಿಡಿಸದು,” ಎಂದು ಹೇಳಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India