ಆದಿಕಾಂಡ 45 - ಕನ್ನಡ ಸತ್ಯವೇದವು C.L. Bible (BSI)ಜೋಸೆಫನ ಪರಿಚಯ - ಸ್ವಜನರಿಗೆ ಆಶ್ಚರ್ಯ 1 ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನ ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ. 2 ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು. 3 ಜೋಸೆಫನು ತನ್ನ ಅಣ್ಣತಮ್ಮಂದಿರಿಗೆ, “ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?” ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು. 4 ಜೋಸೆಫನು, “ಹತ್ತಿರಕ್ಕೆ ಬನ್ನಿ” ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, “ಈಜಿಪ್ಟ್ ದೇಶಕ್ಕೆ ಹೋಗಲಿ" ಎಂದು ನೀವು ಮಾರಿಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ. 5 ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು. 6 ದೇಶಕ್ಕೆ ಬರಗಾಲ ಬಂದು ಈಗಾಗಲೇ ಎರಡು ವರ್ಷಗಳಾದವು. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ ಕೊಯ್ಯುವುದಕ್ಕಾಗಲಿ ಅವಕಾಶವಿಲ್ಲ. 7 ನಿಮ್ಮ ಜನ ಧರೆಯಲ್ಲಿ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಅಭಿವೃದ್ಧಿಯಾಗುವಂತೆಯೂ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಕಳಿಸಿದರು. 8 ನನ್ನನ್ನು ಇಲ್ಲಿಗೆ ಕಳಿಸಿದವರು ನೀವಲ್ಲ, ದೇವರೇ. ಅವರು ನನ್ನನ್ನು ಫರೋಹನಿಗೆ ಮಂತ್ರಿಯಾಗಿಯೂ ಅವರ ಆಸ್ಥಾನಕ್ಕೆ ಅಧಿಪತಿಯಾಗಿಯೂ ಈಜಿಪ್ಟ್ ದೇಶಕ್ಕೆ ಸರ್ವಾಧಿಕಾರಿಯಾಗಿಯೂ ಮಾಡಿದ್ದಾರೆ. 9 “ನೀವು ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವರಿಗೆ, ‘ನಿಮ್ಮ ಮಗ ಜೋಸೆಫ್ ಹೀಗೆನ್ನುತ್ತಾನೆ; ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದಾರೆ. ನೀವು ತಡಮಾಡದೆ ನನ್ನ ಬಳಿಗೆ ಬರಬೇಕು. 10 ಗೋಷೆನ್ ಪ್ರಾಂತ್ಯದಲ್ಲಿ ನನ್ನ ಬಳಿಯಲ್ಲೇ ನೀವೂ ನಿಮ್ಮ ಮಕ್ಕಳೂ ಮೊಮ್ಮಕ್ಕಳೂ ದನ, ಕುರಿ ಮೊದಲಾದ ಆಸ್ತಿಪಾಸ್ತಿಗಳ ಸಮೇತ ವಾಸಮಾಡಬಹುದು. 11 ಬರಗಾಲ ತೀರುವುದಕ್ಕೆ ಇನ್ನೂ ಐದು ವರ್ಷ ಕಳೆಯಬೇಕಾಗಿದೆ. ಆದುದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ನಿಮಗಿರುವ ಸಮಸ್ತಕ್ಕೂ ಬಡತನ ತಟ್ಟದಂತೆ ನಾನು ನಿಮ್ಮನ್ನು ಪೋಷಿಸುತ್ತೇನೆ’, ಎಂದು ಹೇಳಿರುವುದಾಗಿ ತಿಳಿಸಿರಿ. 12 “ನಾನೇ ಖುದ್ದಾಗಿ ನಿಮ್ಮ ಸಂಗಡ ಮಾತಾಡಿದ್ದೇನೆ; ಅದಕ್ಕೆ ನೀವೂ ಸಾಕ್ಷಿ: ನನ್ನ ಒಡಹುಟ್ಟಿದ ಬೆನ್ಯಾಮೀನನೂ ಸಾಕ್ಷಿ: 13 ಈಜಿಪ್ಟ್ ದೇಶದಲ್ಲಿ ನನಗಿರುವ ಘನತೆ ಗೌರವವನ್ನೂ ನೀವು ಕಂಡದ್ದೆಲ್ಲವನ್ನೂ ತಂದೆಗೆ ತಿಳಿಸಿ, ಬೇಗನೆ ಅವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ,” ಎಂದು ಹೇಳಿದನು. 14 ಬಳಿಕ ಜೋಸೆಫನು ತನ್ನ ತಮ್ಮ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. 15 ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟನು. ತರುವಾಯ ಅವರು ಅವನ ಸಂಗಡ ಮಾತನಾಡತೊಡಗಿದರು. 16 ಜೋಸೆಫನ ಅಣ್ಣತಮ್ಮಂದಿರು ಬಂದಿರುವ ಸಮಾಚಾರ ಫರೋಹನ ಅರಮನೆಗೆ ತಲುಪಿತು. ಫರೋಹನೂ ಅವನ ಪರಿವಾರದವರೂ ಅದನ್ನು ಕೇಳಿ ಸಂತೋಷಪಟ್ಟರು. 17 ಫರೋಹನು ಜೋಸೆಫನನ್ನು ಕರೆಸಿ, “ನೀನು ನಿನ್ನ ಸಹೋದರರಿಗೆ ತಿಳಿಸಬೇಕಾದ ನನ್ನ ಆಜ್ಞೆ ಇದು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ನಾಡಿಗೆ ಹೋಗಿ, ಅಲ್ಲಿಂದ 18 ನಿಮ್ಮ ತಂದೆಯನ್ನೂ ಕುಟುಂಬದವರನ್ನೂ ನನ್ನ ಬಳಿಗೆ ಕರೆದುಕೊಂಡು ಬರತಕ್ಕದ್ದು. ಈಜಿಪ್ಟ್ ದೇಶದಲ್ಲಿ ನಿಮಗೆ ಅತ್ಯುತ್ತಮವಾದ ಭೂಮಿಯನ್ನು ಕೊಡುವೆನು. ನೀವು ಈ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.” 19 ನಿನ್ನ ಸಹೋದರರಿಗೆ ಈ ಆಜ್ಞೆಯನ್ನೂ ತಿಳಿಸು: ‘ನೀವು ನಿಮ್ಮ ಮಡದಿ ಮಕ್ಕಳನ್ನು ಕರೆದುತರಲು ಈಜಿಪ್ಟ್ ದೇಶದ ಬಂಡಿಗಳನ್ನು ತೆಗೆದುಕೊಂಡುಹೋಗಿರಿ: ನಿಮ್ಮ ತಂದೆಯನ್ನು ತಂದು ಸೇರಿಸಿರಿ. 20 ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಚಿಂತಿಸಬೇಕಾಗಿಲ್ಲ. ಈಜಿಪ್ಟ್ ದೇಶದ ಅತ್ಯುತ್ತಮವಾದುವುಗಳು ನಿಮ್ಮದಾಗುವುವು'." 21 ಯಕೋಬನ ಮಕ್ಕಳು ಅದೇ ಮೇರೆಗೆ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಜೋಸೆಫನು ಅವರಿಗೆ ಬಂಡಿಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು. 22 ಅದೂ ಅಲ್ಲದೆ, ಪ್ರತಿಯೊಬ್ಬನಿಗೂ ಶ್ರೇಷ್ಠವಾದ ಹೊಸ ಬಟ್ಟೆಗಳನ್ನು ಕೊಟ್ಟನು. ಬೆನ್ಯಾಮೀನನಿಗಾದರೋ ಮುನ್ನೂರು ಬೆಳ್ಳಿನಾಣ್ಯಗಳನ್ನು ಹಾಗು ಐದು ಶ್ರೇಷ್ಠವಾದ ಹೊಸಬಟ್ಟೆಗಳನ್ನು ಕೊಟ್ಟನು. 23 ತನ್ನ ತಂದೆಗೆ ಈಜಿಪ್ಟ್ ದೇಶದ ಒಳ್ಳೊಳ್ಳೆಯ ವಸ್ತುಗಳನ್ನೂ ಹತ್ತು ಗಂಡು ಕತ್ತೆಗಳ ಮೇಲೆ ಹೇರಿಸಿದನು. ಅವನ ಪ್ರಯಾಣಕ್ಕೆ ಹತ್ತು ಹೆಣ್ಣು ಕತ್ತೆಗಳ ಮೇಲೆ ದವಸಧಾನ್ಯಗಳನ್ನೂ ಇತರ ಆಹಾರಪದಾರ್ಥಗಳನ್ನೂ ಕಳಿಸಿಕೊಟ್ಟನು. 24 ತನ್ನ ಅಣ್ಣತಮ್ಮಂದಿರಿಗೆ, “ದಾರಿಯಲ್ಲಿ ಜಗಳವಾಡಬೇಡಿ” ಎಂದು ಬುದ್ಧಿ ಹೇಳಿ, ಅವರನ್ನು ಬೀಳ್ಕೊಟ್ಟನು. ಅವರು ಹೊರಟುಹೋದರು. 25 ಅವರು ಈಜಿಪ್ಟ್ ದೇಶವನ್ನು ಬಿಟ್ಟು ಕಾನಾನ್ ನಾಡನ್ನು ಸೇರಿದರು. 26 ತಂದೆ ಯಕೋಬನ ಬಳಿಗೆ ಬಂದು, “ಜೋಸೆಫನು ಇನ್ನೂ ಜೀವದಿಂದಿದ್ದಾನೆ; ಅವನೇ ಈಜಿಪ್ಟ್ ದೇಶದ ಪ್ರಧಾನಮಂತ್ರಿ” ಎಂದು ಅರುಹಿದರು. ಅವನು ಅದನ್ನು ಕೇಳಿ ಸ್ತಬ್ಧನಾದ; ಅವರನ್ನು ನಂಬಲೇ ಇಲ್ಲ. 27 ಆದರೆ ಜೋಸೆಫನು ಹೇಳಿಕಳಿಸಿದ ಎಲ್ಲ ಮಾತುಗಳನ್ನು ಕೇಳಿ, ತನ್ನ ಪ್ರಯಾಣಕ್ಕಾಗಿ ಅವನಿಂದ ಬಂದಿದ್ದ ಬಂಡಿಗಳನ್ನು ನೋಡಿ ಅವರ ತಂದೆ ಯಕೋಬನಿಗೆ ಹೊಸ ಜೀವ ಬಂದಿತು. 28 ಕೊನೆಗೆ ಯಕೋಬನು, “ನನ್ನ ಮಗ ಜೋಸೆಫ್ ಜೀವದಿಂದಿದ್ದಾನೆ, ನನಗೆ ಅಷ್ಟೇ ಸಾಕು! ನಾನು ಸಾಯುವುದಕ್ಕೆ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India