Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 29 - ಕನ್ನಡ ಸತ್ಯವೇದವು C.L. Bible (BSI)


ಲಾಬಾನನ ಮನೆಯಲ್ಲಿ ಯಕೋಬನು

1 ಬಳಿಕ ಯಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಮೂಡಣದವರ ನಾಡಿಗೆ ಬಂದನು.

2 ಕೂಡಲೆ ಅವನಿಗೆ ಆ ಅಡವಿಯಲ್ಲಿ ಬಾವಿಯೊಂದು ಕಾಣಿಸಿತು. ಅದರ ಬಳಿ ಮೂರು ಕುರಿಹಿಂಡು ಮಲಗಿದ್ದವು. ಕುರಿಗಳನ್ನು ನೀರು ಕುಡಿಸುವುದಕ್ಕಾಗಿ ಆ ಬಾವಿಗೆ ಹೊಡೆದುಕೊಂಡು ಬರುವುದು ವಾಡಿಕೆ. ಬಾವಿಯ ಮೇಲೆ ಮುಚ್ಚಿದ್ದ ಕಲ್ಲು ದೊಡ್ಡದಾಗಿತ್ತು.

3 ಹಿಂಡುಗಳೆಲ್ಲ ಅಲ್ಲಿ ಕೂಡಿದ್ದಾಗ ಕಾಯುವವರು ಬಾವಿಯ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ಕುರಿಗಳಿಗೆ ನೀರು ಕುಡಿಸಿ ಮತ್ತೆ ಕಲ್ಲನ್ನು ಬಾವಿಯ ಮೇಲೆ ಮುಚ್ಚುತ್ತಿದ್ದರು.

4 ಯಕೋಬನು ಅವರಿಗೆ, “ಏನ್ರಪ್ಪ, ನೀವು ಯಾವ ಊರಿನವರು?” ಎಂದು ವಿಚಾರಿಸಿದನು. ಅವರು, “ನಾವು ಖಾರಾನ್ ಊರಿನವರು,” ಎಂದರು.

5 “ನಾಹೋರನ ಮಗ-ಲಾಬಾನರನ್ನು ಬಲ್ಲಿರಾ?’ ಎಂದು ಕೇಳಿದ್ದಕ್ಕೆ “ಬಲ್ಲೆವು” ಎಂದು ಉತ್ತರಕೊಟ್ಟರು.

6 “ಅವರು ಆರೋಗ್ಯವೇ?” ಎಂದು ಕೇಳಲು ಅವರು, “ಹೌದು ಆರೋಗ್ಯ; ಅಗೋ, ಅವರ ಮಗಳು ರಾಖೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು.

7 ಯಕೋಬನು, “ಇನ್ನೂ ಬಹಳ ಹೊತ್ತು ಇದೆ; ಕುರಿಗಳನ್ನು ಒಟ್ಟುಗೂಡಿಸುವ ಸಮಯ ಆಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಬಾರದೇಕೆ?” ಎಂದನು.

8 ಅವರು, “ಇಲ್ಲ, ಕುರಿಗಾಹಿಗಳೆಲ್ಲ ಒಂದುಗೂಡಿ ಬಾವಿಯ ಮೇಲೆ ಮುಚ್ಚಿರುವ ಕಲ್ಲನ್ನು ತೆಗೆಯುವ ತನಕ ಕುಡಿಸಕೂಡದು, ಅನಂತರ ಕುರಿಗಳಿಗೆ ನೀರು ಕುಡಿಸುತ್ತೇವೆ,” ಎಂದರು.

9 ಯಕೋಬನು ಅವರೊಂದಿಗೆ ಮಾತಾಡುತ್ತ ಇರುವಾಗಲೆ ಕುರಿಗಾಹಿ ರಾಖೇಲಳು ತನ್ನ ತಂದೆಯ ಕುರಿಗಳನ್ನು ಹೊಡೆದುಕೊಂಡು ಅಲ್ಲಿಗೆ ಬಂದಳು.

10 ತನ್ನ ಸೋದರಮಾವ ಲಾಬಾನನ ಮಗಳಾದ ಆ ರಾಖೇಲಳನ್ನೂ ಅವನ ಕುರಿಗಳನ್ನೂ ಕಂಡ ಕೂಡಲೆ ಯಕೋಬನು ಬಾವಿಯ ಹತ್ತಿರಕ್ಕೆ ಹೋಗಿ ಅದರ ಮೇಲಿದ್ದ ಕಲ್ಲನ್ನು ಸರಿಸಿ ಸೋದರಮಾವನ ಆ ಕುರಿಗಳಿಗೆ ನೀರು ಕುಡಿಸಿದನು.

11 ಅನಂತರ ರಾಖೇಲಳಿಗೆ ಮುದ್ದಿಟ್ಟನು; ಸಂತೋಷ ಉಕ್ಕಿಬಂದು ಗಟ್ಟಿಯಾಗಿ ಅತ್ತನು.

12 ತಾನು ಆಕೆಯ ತಂದೆಗೆ ಸೋದರಳಿಯ, ರೆಬೆಕ್ಕಳ ಮಗ ಎಂದು ತಿಳಿಸಿದನು. ರಾಖೇಲಳು ಕೂಡಲೆ ಓಡಿಹೋಗಿ ತನ್ನ ತಂದೆಗೆ ಸಮಾಚಾರ ಮುಟ್ಟಿಸಿದಳು.

13 ಲಾಬಾನನು ತನ್ನ ಸೋದರಳಿಯ ಬಂದ ಸುದ್ದಿಯನ್ನು ಕೇಳಿ ಅವನನ್ನು ಎದುರುಗೊಳ್ಳಲು ಓಡಿಬಂದನು. ಯಕೋಬನನ್ನು ಅಪ್ಪಿಕೊಂಡು ಮುದ್ದಿಟ್ಟು, ಮನೆಗೆ ಕರೆದುಕೊಂಡು ಹೋದನು. ನಡೆದ ಸಂಗತಿಗಳನ್ನೆಲ್ಲ ಯಕೋಬನು ಲಾಬಾನನಿಗೆ ತಿಳಿಸಿದನು.

14 ಲಾಬಾನನು, “ನಿಜವಾಗಿಯೂ ನೀನು ನನ್ನ ರಕ್ತಸಂಬಂಧಿ,” ಎಂದನು. ಅವನೊಂದಿಗೆ ಯಕೋಬನು ಒಂದು ತಿಂಗಳವರೆಗೂ ವಾಸಮಾಡಿದನು.


ಯಕೋಬನ ವಿವಾಹ

15 ಆ ಬಳಿಕ ಲಾಬಾನನು ಯಕೋಬನಿಗೆ, “ನೀನು ನನ್ನ ಸಂಬಂಧಿಯೆಂದ ಮಾತ್ರಕ್ಕೆ ಬಿಟ್ಟಿ ಸೇವೆ ಮಾಡಿಸಿಕೊಳ್ಳುವುದು ಸರಿಯಲ್ಲ; ನಿನ್ನ ಕೆಲಸಕ್ಕೆ ಏನು ಸಂಬಳ ಕೊಡಲಿ, ಹೇಳು?” ಎಂದು ಕೇಳಿದನು.

16 ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ದೊಡ್ಡವಳ ಹೆಸರು ಲೇಯಾ, ಚಿಕ್ಕವಳ ಹೆಸರು ರಾಖೇಲ್.

17 ಲೇಯಾ ಹೊಳಪಿನ ಕಣ್ಣಿನವಳು. ರಾಖೇಲಳಾದರೋ ರೂಪವತಿ, ಲಾವಣ್ಯವತಿ.

18 ಯಕೋಬನಿಗೆ ರಾಖೇಲಳ ಮೇಲೆ ಪ್ರೀತಿ. ಎಂತಲೇ, “ನಿಮ್ಮ ಕಿರಿಯ ಮಗಳು ರಾಖೇಲಳಿಗೋಸ್ಕರ ನಿಮ್ಮಲ್ಲಿ ಏಳು ವರುಷ ಸೇವೆಮಾಡುತ್ತೇನೆ,” ಎಂದು ಹೇಳಿದನು.

19 ಲಾಬಾನನು, “ಆಕೆಯನ್ನು ಬೇರೆ ಒಬ್ಬನಿಗೆ ಕೊಡುವುದಕ್ಕಿಂತ ನಿನಗೆ ಕೊಡುವುದೇ ಲೇಸು, ನನ್ನಲ್ಲೇ ತಂಗಿರು,” ಎಂದನು.

20 ಅಂತೆಯೇ ಯಕೋಬನು ರಾಖೇಲಳಿಗಾಗಿ ಏಳು ‌ವರ್ಷ‌ಕಾಲ ಸೇವೆಮಾಡಿದನು. ಆಕೆಯ ಮೇಲೆ ಅವನಿಗೆ ಬಹಳ ಪ್ರೀತಿಯಿದ್ದುದರಿಂದ ಅದು ಅವನಿಗೆ ಕೇವಲ ಕೆಲವೇ ದಿನಗಳಂತೆ ಕಾಣಿಸಿತು.

21 ತರುವಾಯ ಯಕೋಬನು ಲಾಬಾನನಿಗೆ, “ನನ್ನ ಸೇವಾವಧಿ ಮುಗಿಯಿತು. ಆಕೆ ನನ್ನ ಹೆಂಡತಿಯಾಗುವಂತೆ ನನ್ನ ಸ್ವಾಧೀನಕ್ಕೆ ಕೊಡಿ,” ಎಂದು ಕೇಳಿದನು.

22 ಆಗ ಲಾಬಾನನು ಊರಿನವರನ್ನೆಲ್ಲ ಕರೆಯಿಸಿ ಔತಣವನ್ನು ಏರ್ಪಡಿಸಿದನು.

23 ರಾತ್ರಿಯಾದಾಗ ತನ್ನ ಹಿರಿಯ ಮಗಳು ಲೇಯಳನ್ನೇ ಯಕೋಬನ ಬಳಿಗೆ ಕರೆತಂದನು. ಯಕೋಬನು ಆಕೆಯನ್ನು ಕೂಡಿದನು. (

24 ಲಾಬಾನನು ತನ್ನ ಮಗಳು ಲೇಯಳಿಗೆ ಜಿಲ್ಪಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.)

25 ಆ ಹೆಣ್ಣು ಲೇಯಳೆಂದು ಯಕೋಬನಿಗೆ ಬೆಳಿಗ್ಗೆ ತಿಳಿಯಿತು. ಅವನು ಲಾಬಾನನಿಗೆ, “ನೀವು ನನಗೇಕೆ ಹೀಗೆ ಮಾಡಿದಿರಿ? ರಾಖೇಲಳಿಗಾಗಿ ಅಲ್ಲವೆ ನಾನು ನಿಮಗೆ ಸೇವೆಮಾಡಿದ್ದು? ನನಗೆ ಮೋಸಮಾಡಿದ್ದೇಕೆ?” ಎಂದು ಕೇಳಿದನು.

26 ಅದಕ್ಕೆ ಲಾಬಾನನು, “ಹಿರಿಯ ಮಗಳನ್ನು ಇರಿಸಿಕೊಂಡು ಕಿರಿಯ ಮಗಳನ್ನು ಮದುವೆಮಾಡಿಕೊಡುವುದು ನಮ್ಮ ನಾಡಿನ ಪದ್ಧತಿಯಲ್ಲ.

27 ಹಿರಿಯಳೊಡನೆ ಮದುವೆಯ ವಾರವನ್ನು ಕಳೆದುಬಿಡು; ಅನಂತರ ಕಿರಿಯ ಮಗಳನ್ನೂ ನಿನಗೆ ಕೊಡುತ್ತೇನೆ. ಅವಳಿಗೋಸ್ಕರ ನೀನು ಇನ್ನೂ ಏಳು ವರ್ಷ ಸೇವೆಮಾಡುವೆಯಂತೆ,” ಎಂದನು.

28 ಯಕೋಬನು ಅದಕ್ಕೆ ಒಪ್ಪಿ ಹಿರಿಯವಳೊಂದಿಗೆ ಮದುವೆಯ ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳು ರಾಖೇಲಳನ್ನು ಯಕೋಬನಿಗೆ ಹೆಂಡತಿಯಾಗಿ ಕೊಟ್ಟನು.

29 (ಆಕೆಗೆ ಬಿಲ್ಹಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.)

30 ಯಕೋಬನು ರಾಖೇಲಳನ್ನು ಕೂಡಿದನು. ಆಕೆಯನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಆಕೆಗೋಸ್ಕರ ಲಾಬಾನನ ಬಳಿ ಇನ್ನೂ ಏಳು ವರ್ಷ ಸೇವೆಮಾಡಿದನು.


ಯಕೋಬನಿಗೆ ಹುಟ್ಟಿದ ಮಕ್ಕಳು

31 ಹೀಗಿರಲು ಲೇಯಳ ಬಗ್ಗೆ ಯಕೋಬನಿಗೆ ಉದಾಸೀನ ಉಂಟಾಯಿತು. ಇದನ್ನು ಕಂಡು ಸರ್ವೇಶ್ವರಸ್ವಾಮಿ ಆಕೆಗೆ ತಾಯ್ತನವನ್ನು ಅನುಗ್ರಹಿಸಿದರು; ರಾಖೇಲಳು ಬಂಜೆಯಾಗೇ ಉಳಿದಳು.

32 ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. “ಸರ್ವೇಶ್ವರ ನನ್ನ ದೀನ ಸ್ಥಿತಿಯನ್ನು ನೋಡಿದ್ದಾರೆ, ಇನ್ನು ಮುಂದೆ ಗಂಡ ನನ್ನನ್ನು ಪ್ರೀತಿಸುತ್ತಾನೆ,” ಎಂದುಕೊಂಡು ಆ ಮಗುವಿಗೆ ‘ರೂಬೇನ್’ ಎಂದು ಹೆಸರಿಟ್ಟಳು.

33 ಆಕೆ, ಇನ್ನೊಮ್ಮೆ ಗರ್ಭಿಣಿಯಾಗಿ ಗಂಡು ಮಗುವನ್ನೇ ಹೆತ್ತಳು. “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆ, ಇದನ್ನು ತಿಳಿದೇ ಸರ್ವೇಶ್ವರ ನನಗೆ ಈ ಮಗನನ್ನು ದಯಪಾಲಿಸಿದರು,” ಎಂದು ಹೇಳಿ ಆ ಮಗನಿಗೆ ‘ಸಿಮೆಯೋನ್’ ಎಂದು ಹೆಸರಿಟ್ಟಳು.

34 ಮತ್ತೊಮ್ಮೆ ಗರ್ಭಧರಿಸಿ ಗಂಡು ಮಗುವನ್ನೇ ಹೆತ್ತಳು. “ಈಗಲಾದರೂ ನನ್ನ ಗಂಡನೂ ನಾನೂ ಒಂದಾಗುತ್ತೇವೆ. ಅವರಿಗೆ ಮೂರು ಮಂದಿ ಗಂಡುಮಕ್ಕಳನ್ನು ಹೆತ್ತಿದ್ದೇನಲ್ಲವೆ,” ಎಂದುಕೊಂಡು ಆ ಮಗುವಿಗೆ ‘ಲೇವಿ’ ಎಂದು ಹೆಸರಿಟ್ಟಳು.

35 ಮಗದೊಮ್ಮೆ ಗರ್ಭಧರಿಸಿ ಈ ಸಾರಿಯೂ ಗಂಡು ಮಗುವನ್ನೇ ಹೆತ್ತಳು. "ಈಗ ಸರ್ವೇಶ್ವರಸ್ವಾಮಿಯ ಸ್ತುತಿಮಾಡುತ್ತೇನೆ,“ ಎಂದು ಹೇಳಿ ಆ ಮಗುವಿಗೆ “ಯೆಹೂದ" ಎಂದು ನಾಮಕರಣ ಮಾಡಿದಳು. ಆ ಮೇಲೆ ಆಕೆಗೆ ಗರ್ಭಧಾರಣೆ ಆಗುವುದು ನಿಂತುಹೋಯಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು