Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 6 - ಕನ್ನಡ ಸತ್ಯವೇದವು C.L. Bible (BSI)


ನಾಜೀರ ವ್ರತಸ್ಥರು

1 ಸರ್ವೇಶ್ವರ ಸ್ವಾಮಿ, ಮೋಶೆಗೆ ಹೀಗೆಂದರು:

2 “ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾದುದು ಇದು - ಯಾವ ಗಂಡಸೇ ಆಗಲಿ, ಹೆಂಗಸೇ ಆಗಲಿ ನಾಜೀರರ ವ್ರತವನ್ನು ಅಂದರೆ ಸರ್ವೇಶ್ವರನಿಗೆ ತನ್ನನ್ನೇ ಪ್ರತಿಷ್ಠಿಸಿಕೊಳ್ಳುವ ವಿಶೇಷ ವ್ರತವನ್ನು ಕೈಗೊಂಡಾಗ

3 ದ್ರಾಕ್ಷಾರಸವನ್ನು ಹಾಗೂ ಮದ್ಯಪಾನವನ್ನು ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣಗಿದ ದ್ರಾಕ್ಷಿಹಣ್ಣನ್ನು ತಿನ್ನಬಾರದು.

4 ಅಂಥವನು ವ್ರತ ಕೈಗೊಂಡು ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ದ್ರಾಕ್ಷಾಬಳ್ಳಿಯಿಂದ ಉತ್ಪನ್ನವಾದ ಹೀಚನ್ನಾಗಲಿ, ಸಿಪ್ಪೆಯನ್ನಾಗಲಿ ತಿನ್ನಬಾರದು.

5 ಅವನು ತನ್ನ ವ್ರತ ದಿನಗಳಲ್ಲೆಲ್ಲಾ ಕ್ಷೌರ ಮಾಡಿಸಿಕೊಳ್ಳಬಾರದು. ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ವ್ರತಬದ್ಧನಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬೆಳೆಯಬಿಡಬೇಕು.

6 ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ಯಾವ ಶವವನ್ನು ಮುಟ್ಟಬಾರದು.

7 ತಾಯಿತಂದೆ, ಅಣ್ಣತಮ್ಮ, ಅಕ್ಕತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಕೈಗೊಂಡ ವ್ರತ ಅವನ ತಲೆಯ ಮೇಲಿದೆ;

8 ತಾನು ಪ್ರತಿಸ್ಠಿಸಿಕೊಂಡಿರುವ ದಿನಗಳಲ್ಲೆಲ್ಲಾ ಅವನು ಸರ್ವೇಶ್ವರನಿಗೆ ಮೀಸಲಾಗಿಯೇ ಇರಬೇಕು.

9 ಆಕಸ್ಮಿಕವಾಗಿ ಯಾರಾದರೂ ಅವನ ಬಳಿಯಲ್ಲೇ ಸತ್ತು, ಅವನು ಪ್ರತಿಷ್ಠಿಸಿಕೊಂಡಿದ್ದ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಂದು ಅಂದರೆ ಶುದ್ಧೀಕರಣ ದಿನದಂದು ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು.

10 ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಕೊಡಬೇಕು.

11 ಯಾಜಕನು ದೋಷಪರಿಹಾರ ಬಲಿಯನ್ನಾಗಿ ಒಂದನ್ನೂ ಸಂಪೂರ್ಣ ದಹನ ಬಲಿಯನ್ನಾಗಿ ಇನ್ನೊಂದನ್ನೂ ಸಮರ್ಪಿಸಲಿ. ಹೀಗೆ ಶವಸೋಂಕಿದವನಿಗಾಗಿ ದೋಷಪರಿಹಾರಮಾಡಿ ಅವನ ತಲೆಗೂದಲು ಅಂದಿನಿಂದ ಪವಿತ್ರವೆಂದು ನಿರ್ಣಯಿಸಲಿ.

12 ಅವನು ಎಷ್ಠು ದಿನಗಳವರೆಗೆ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನೋ ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಸರ್ವೇಶ್ವರನಿಗೆ ಪ್ರತಿಷ್ಠಿಸಿಕೊಳ್ಳಬೇಕು. ಅದಲ್ಲದೆ ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ವ್ರತಕ್ಕೆ ವಿಘ್ನಪ್ರಾಪ್ತವಾದ್ದರಿಂದ ಕಳೆದುಹೋದ ದಿನಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.

13 ನಾಜೀರ ವ್ರತಸ್ಥನು ತನ್ನ ವ್ರತಾವಧಿ ಮುಗಿದಾಗ ಈ ಕ್ರಮವನ್ನು ಅನುಸರಿಸಬೇಕು. ಅವನು ದೇವದರ್ಶನದ ಗುಡಾರದ ಬಾಗಿಲಿಗೆ ಬಂದು ಸರ್ವೇಶ್ವರನಿಗೆ ಈ ಕಾಣಿಕೆಗಳನ್ನು ಸಲ್ಲಿಸಬೇಕು;

14 ದಹನಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಟಗರು, ಪಾಪಪರಿಹಾರ ಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಕುರಿ, ಸಮಾಧಾನ ಬಲಿಗಾಗಿ ಕಳಂಕರಹಿತವಾದ ಒಂದು ಟಗರು.

15 ಇದಲ್ಲದೆ ಒಂದು ಬುಟ್ಟಿ ತುಂಬ ಎಣ್ಣೆಬೆರಸಿದ ಗೋದಿಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆಹಾಕಿದ ಹುಳಿಯಿಲ್ಲದ ಕಡಬುಗಳು ಮತ್ತು ಮೇಲೆ ಹೇಳಿದ ಬಲಿಗಳ ಸಮೇತ ಕೊಡಬೇಕಾದ ಧಾನ್ಯದ್ರವ್ಯ-ಪಾನದ್ರವ್ಯಗಳು, ಇವುಗಳನ್ನೆಲ್ಲಾ ಸಮರ್ಪಿಸಬೇಕು.

16 ಯಾಜಕನು ಇವುಗಳನ್ನು ಸರ್ವೇಶ್ವರನ ಸನ್ನಿಧಿಗೆ ತಂದು ನಾಜೀರ ವ್ರತ ಪಾಪಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಸಮರ್ಪಿಸಬೇಕು.

17 ಅನಂತರ ಟಗರನ್ನೂ ಬುಟ್ಟಿ ತುಂಬಿರುವ ಹುಳಿಯಿಲ್ಲದ ರೊಟ್ಟಿಗಳನ್ನೂ ಸರ್ವೇಶ್ವರನಿಗೆ ಸಮಾಧಾನ ಯಜ್ಞವಾಗಿ ಸಮರ್ಪಿಸಬೇಕು. ತಂದ ಧಾನ್ಯದ್ರವ್ಯ - ಪಾನದ್ರವ್ಯಗಳನ್ನು ಯಾಜಕನು ನೈವೇದ್ಯ ಮಾಡಬೇಕು.

18 ಬಳಿಕ ನಾಜೀರ ವ್ರತಸ್ಥನು ತನ್ನ ದೀಕ್ಷೆಯನ್ನು ಸೂಚಿಸುವ ತಲೆಯ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಳ್ಳಬೇಕು. ಆ ಕೂದಲನ್ನು ಸಮಾಧಾನ ಬಲಿಯ ದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.

19 ತರುವಾಯ ಯಾಜಕನು ಆ ಟಗರಿನ ಬೆಂದ ಮುಂದೊಡೆಯನ್ನು ಬುಟ್ಟಿಯಲ್ಲಿನ ಹುಳಿಯಿಲ್ಲದ ಒಂದು ರೊಟ್ಟಿಯನ್ನು ಹಾಗೂ ಹುಳಿಯಿಲ್ಲದ ಒಂದು ಕಡುಬನ್ನು ತೆಗೆದುಕೊಂಡು ನಾಜೀರ ವ್ರತಸ್ಥನು ಕ್ಷೌರಮಾಡಿಸಿಕೊಂಡ ನಂತರ ಅವನ ಕೈಯಲ್ಲಿ ಇಡಬೇಕು; ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿ ಎತ್ತಬೇಕು.

20 ಇದು ನೈವೇದ್ಯವಾಗಿ ಆರತಿಯೆತ್ತುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಬೇಕು. ಇದಾದ ನಂತರ ನಾಜೀರ ವ್ರತಸ್ಥನು ದ್ರಾಕ್ಷಾರಸವನ್ನು ಪಾನಮಾಡಬಹುದು.

21 ಇದುವೇ ನಾಜೀರ ವ್ರತಸ್ಥರು ಅನುಸರಿಸಬೇಕಾದ ವಿಧಿ. ತಮ್ಮ ವ್ರತಪೂರ್ತಿಗಾಗಿ ಸರ್ವೇಶ್ವರನಿಗೆ ಅವರು ಸಮರ್ಪಿಸಬೇಕಾದ ಕಾಣಿಕೆ. ಅವರು ತಮ್ಮ ಶಕ್ತಿಗನುಸಾರ ಹೆಚ್ಚಾಗಿಯೂ ಕೊಡಬಹುದು. ಆದರೆ ತಾವು ಕೊಡುತ್ತೇವೆಂದು ಹರಕೆ ಮಾಡಿದಷ್ಟನ್ನು ವ್ರತ ವಿಧಿಗನುಸಾರ ಕೊಡಲೇಬೇಕು.


ಆಶೀರ್ವಚನ

22 ಸರ್ವೇಶ್ವರ ಮೋಶೆಗೆ ಹೀಗೆಂದರು:

23 ”ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: ‘ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು -

24 ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ!

25 ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮಗೆ ದಯೆ ತೋರಲಿ!

26 ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ!

27 ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಛರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು