Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 36 - ಕನ್ನಡ ಸತ್ಯವೇದವು C.L. Bible (BSI)


ಮದುವೆಯಾದ ಮಹಿಳೆಯರಿಗೆ ಸೊತ್ತಿನ ಹಕ್ಕು

1 ಜೋಸೆಫನ ವಂಶದವರೊಳಗೆ ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನೂ ಆಗಿದ್ದ ಗಿಲ್ಯಾದನ ಸಂತತಿಯವರ ಮುಖಂಡರು ಮೋಶೆಯ ಹಾಗು ಇಸ್ರಯೇಲ್ ಕುಲನಾಯಕರ ಬಳಿಗೆ ಬಂದರು.

2 “ಚೀಟುಹಾಕಿ ನಾಡನ್ನು ಇಸ್ರಯೇಲರಿಗೆ ಹಂಚಿಕೊಡಬೇಕೆಂದು ಸರ್ವೇಶ್ವರ ಸ್ವಾಮಿ ಒಡೆಯರಾದ ತಮಗೆ ಆಜ್ಞಾಪಿಸಿದರು. ತರುವಾಯ ನಮ್ಮ ಸ್ವಕುಲದವನಾದ ಚಲ್ಪಹಾದನಿಗೆ ಬರತಕ್ಕ ಸೊತ್ತನ್ನು ಅವನ ಹೆಣ್ಣು ಮಕ್ಕಳಿಗೆ ಕೊಡಬೇಕೆಂದು ಅಪ್ಪಣೆ ಮಾಡಿದರು.

3 ಹೀಗಿರಲು ಆ ಹೆಣ್ಣುಮಕ್ಕಳು ಇಸ್ರಯೇಲರ ಬೇರೆ ಕುಲದವರಿಗೆ ಮದುವೆಯಾದರೆ ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುತ್ತದೆ. ಇದರಿಂದ ನಮ್ಮ ಸೊತ್ತಿಗೆ ನಷ್ಟ ಉಂಟಾಗುತ್ತದೆ.

4 ಇಸ್ರಯೇಲರ ಜೂಬಿಲಿ ವರ್ಷವು ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಕುಲದ ಸೊತ್ತಿಗೆ ಸೇರಿಕೊಳ್ಳುತ್ತದೆ; ನಮ್ಮ ಕುಲದ ಸೊತ್ತಿನಿಂದ ವರ್ಗಾಯಿಸಲ್ಪಡುತ್ತದೆ,” ಎಂದು ಮೊರೆಯಿಟ್ಟರು.

5 ಆಗ ಮೋಶೆ ಸರ್ವೇಶ್ವರನಿಂದ ಅಪ್ಪಣೆಯನ್ನು ಹೊಂದಿ ಇಸ್ರಯೇಲರಿಗೆ, “ಜೋಸೆಫನ ಕುಲದವರು ಹೇಳುವ ಮಾತು ನ್ಯಾಯವಾದುದು.

6 ಆದಕಾರಣ ಚಲ್ಪಹಾದನ ಹೆಣ್ಣುಮಕ್ಕಳು ತಮ್ಮ ಕುಲದ ಕುಟುಂಬಗಳಲ್ಲಿ ಮಾತ್ರವೇ ತಮಗೆ ಇಷ್ಟಬಂದವರನ್ನು ಮದುವೆಮಾಡಿಕೊಳ್ಳಬೇಕೆಂದು ಸರ್ವೇಶ್ವರ ಅಪ್ಪಣೆಮಾಡಿದ್ದಾರೆ.

7 ಇಸ್ರಯೇಲರ ಯಾವ ಸೊತ್ತೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಯೇಲರೆಲ್ಲರು ತಮ್ಮ ತಮ್ಮ ಕುಲಗಳ ಸೊತ್ತನ್ನು ತಾವೇ ಹೊಂದಿರಬೇಕು.

8 ಇದಕ್ಕಾಗಿ ಇಸ್ರಯೇಲರಲ್ಲಿ ಸೊತ್ತನ್ನು ಹೊಂದಿದ ಹೆಣ್ಣುಮಕ್ಕಳು ಸ್ವಕುಲದಲ್ಲಿ ಮದುವೆಮಾಡಿಕೊಳ್ಳಬೇಕು.

9 ಹೀಗೆ ಯಾವ ಸೊತ್ತು ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರಯೇಲರ ಪ್ರತಿಯೊಂದು ಕುಲವೂ ತನ್ನ ಸೊತ್ತನ್ನು ಹೊಂದಿರುತ್ತದೆ,” ಎಂದು ಆಜ್ಞಾಪಿಸಿದನು.

10-11 “ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೋಗ್ಲಾ, ಮಿಲ್ಕಾ ಹಾಗು ನೋವಾ ಎಂಬವರು ಸರ್ವೇಶ್ವರನ ಆಜ್ಞಾನುಸಾರ ತಂದೆಯ ಅಣ್ಣತಮ್ಮಂದಿರ ಮಕ್ಕಳನ್ನು ಮದುವೆಮಾಡಿಕೊಂಡರು.

12 ಅವರು ಜೋಸೆಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆಯಾದುದರಿಂದ ಅವರ ಸೊತ್ತು ತಂದೆಯ ಕುಲದಲ್ಲೇ ಉಳಿಯಿತು.


ಮುಗಿವು

13 ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಆಜ್ಞಾವಿಧಿಗಳು ಇವೇ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು