ಅರಣ್ಯಕಾಂಡ 34 - ಕನ್ನಡ ಸತ್ಯವೇದವು C.L. Bible (BSI)ಕಾನಾನಿನ ಮೇರೆಗಳು 1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ: 2 “ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ಇಡೀ ಕಾನಾನ್ ನಾಡು ನಿಮಗೆ ಸ್ವಂತ ನಾಡಾಗಿ ದೊರಕುವುದು. 3 ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಿರುವ ಚಿನ್ ಮರುಭೂಮಿಯೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆ ಮೂಡಣ ದಿಕ್ಕಿನಲ್ಲಿ ಲವಣಸಮುದ್ರದ ಕೊನೆಯಿಂದ ತೊಡಗುವುದು. 4 ಅದು ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರುವುದು. ಅದರ ಮೂಲೆ ಕಾದೇಶ್ ಬರ್ನೆಯದ ದಕ್ಷಿಣ ಕಡೆಯಲ್ಲಿರುವುದು. ಅಲ್ಲಿಂದ ಹಚರದ್ದಾರ್, ಆಚ್ಮೋನ್ ಎಂಬ ಊರುಗಳ ಮೇಲೆ 5 ಈಜಿಪ್ಟ್ ದೇಶದ ಮುಂದೆ ಇರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯುವುದು. 6 ‘ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ನಾಡಿನ ಮೇರೆಯಾಗಿರುವುದು. 7 ‘ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ ಹೋರ್ ಎಂಬ ಪರ್ವತಕ್ಕೂ 8 ಆ ಪರ್ವತದಿಂದ ಹಮಾತಿನ ದಾರಿಗೂ ಗುರುತು ಹಾಕಿಕೊಳ್ಳಬೇಕು. ಅದರ ಮೂಲೆ ಚೆದಾದಿನ ಹತ್ತಿರ ಇರುವುದು. 9 ಆಮೇಲೆ ಅದು ಜಿಫ್ರೋನಿಗೆ ಹೋಗಿ ಹಚೆರೇನಾನಿನ ಬಳಿಯಲ್ಲಿ ಮುಗಿಯುವುದು. 10 ‘ಪೂರ್ವದಿಕ್ಕಿನ ಮೇರೆಗಾಗಿ ಹಚೆರೇನಾನಿನಿ0ದ ಶೆಫಾಮಿಗೆ ಗುರುತು ಹಾಕಬೇಕು. 11 ಅಲ್ಲಿ0ದ ಅದು ಅಯಿನಿನ ಮೂಡಲಲ್ಲಿರುವ ರಿಬ್ಲಕ್ಕೆ ಬರಬೇಕು.ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಮೂಡಲಲ್ಲಿರುವ ಬೆಟ್ಟಗಳಿಗೆ ಹೋಗಬೇಕು. 12 ಅದೂ ಅಲ್ಲಿಂದ ಜೋರ್ಡನ್ ನದಿಗೆ ಇಳಿದು, ಅದನ್ನು ಅನುಸರಿಸುತ್ತಾ ಲವಣ ಸಮುದ್ರದ ಬಳಿಯಲ್ಲಿ ಮುಗಿಯಬೇಕು.’ ಇವೇ ನಿಮ್ಮ ನಾಡಿನ ಮೇರೆಗಳು,” ಎಂದರು. 13 ಅದಕ್ಕನುಸಾರವಾಗಿ ಮೋಶೆ ಇಸ್ರಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ ನಾಡು ಇದೇ. ಒಂಬತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು. 14-15 ಬೇರೆ ಎರಡುವರೆ ಕುಲಗಳವರು, ಅಂದರೆ ರೂಬೇನ್ಯರ ಕುಟುಂಬಗಳು, ಗಾದ್ಯರ ಕುಟುಂಬಗಳು ಹಾಗು ಮನಸ್ಸೆಕುಲದವರಲ್ಲಿ ಅರ್ಧಜನರು ಜೋರ್ಡನ್ ನದಿಯ ಈಚೆ ಜೆರಿಕೊ ಪಟ್ಟಣಕ್ಕೆ ಪೂರ್ವದಿಕ್ಕಿನಲ್ಲಿ ಸೊತ್ತನ್ನು ಹೊಂದಿದ್ದಾರೆ,” ಎಂದು ಅಪ್ಪಣೆಕೊಟ್ಟನು. ಕಾನಾನ್ ನಾಡನ್ನು ಹಂಚಲು ನೇಮಿತರಾದ ನಾಯಕರು 16 ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದು ಏನೆಂದರೆ: 17 “ಮಹಾಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು 18 ಹಾಗು ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲನಾಯಕನು ಇವರೇ ಕಾನಾನ್ ನಾಡಿನಲ್ಲಿ ನಿಮ್ಮ ನಿಮ್ಮ ಸೊತ್ತುಗಳನ್ನು ಹಂಚಿಕೊಡಬೇಕಾದವರು. 19 ಆಯಾ ಕುಲದಿಂದ ನೀವು ನೇಮಿಸಬೇಕಾದವರು ಇವರು: ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್, 20 ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗ ಶೆಮೂವೇಲ್, 21 ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್, 22 ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ನಾಯಕ, 23 ಜೋಸೆಫನ ವಂಶದವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ನಾಯಕ, 24 ಎಫ್ರಯಿಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ನಾಯಕ, 25 ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫನ್ ನಾಯಕ, 26 ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟಿಯೇಲ್ ನಾಯಕ, 27 ಆಶೇರ್ ಕುಲದಿಂದ ಶೆಲೋಮಿಯ ಮಗ ಅಹೀಹೂದ್ ನಾಯಕ, 28 ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗ ಪೆದಹೇಲ್ ನಾಯಕ.” 29 ಕಾನಾನ್ ನಾಡಿನಲ್ಲಿ ಇಸ್ರಯೇಲರಿಗೆ ಸೊತ್ತನ್ನು ಹಂಚಿಕೊಡುವುದಕ್ಕೆ ಸರ್ವೇಶ್ವರ ಇವರೆಲ್ಲರನ್ನು ನೇಮಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India