Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 30 - ಕನ್ನಡ ಸತ್ಯವೇದವು C.L. Bible (BSI)


ಹರಕೆ ಕುರಿತ ನಿಯಮಗಳು

1 ಮೋಶೆ ಇಸ್ರಯೇಲರ ಕುಲನಾಯಕರಿಗೆ ಹೀಗೆಂದು ಹೇಳಿದನು: ಸರ್ವೇಶ್ವರ ಸ್ವಾಮಿಯ ಆಜ್ಞೆ ಇದು:

2 “ನಿಮ್ಮಲ್ಲಿ ಯಾರಾದರು ಸರ್ವೇಶ್ವರನಿಗೆ ಹರಕೆ ಮಾಡಿದರೆ, ಇಲ್ಲವೆ ತಾನು ವಸ್ತುವೊಂದನ್ನು ಮುಟ್ಟುವುದಿಲ್ಲವೆಂದು ಆಣೆಯಿಟ್ಟು ಹೇಳಿದರೆ ಅಂಥವನು ತನ್ನ ಮಾತನ್ನು ಮೀರದೆ ನುಡಿದಂತೆ ನೆರವೇರಿಸಬೇಕು.

3 “ಕನ್ಯೆಯೊಬ್ಬಳು ತನ್ನ ತಂದೆಯ ಮನೆಯಲ್ಲಿದ್ದು ಸರ್ವೇಶ್ವರನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವುದಾದರೊಂದನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆಮಾಡಿದಾಗ

4 ಅವಳ ತಂದೆ ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವುದನ್ನು ಮುಟ್ಟುವುದಿಲ್ಲವೆಂದು ಹೇಳಿದ್ದಳೋ ಅದನ್ನು ಮುಟ್ಟಲೇಬಾರದು.

5 ಆದರೆ ಅವಳ ತಂದೆ ಆ ಸಂಗತಿಯನ್ನು ತಿಳಿದು ಹಾಗೆ ಮಾಡಬಾರದೆಂದು ಆಜ್ಞೆ ಮಾಡಿದರೆ ಅವಳು ಮಾಡಿದ ಹರಕೆ ಹಾಗೂ ಪ್ರತಿಜ್ಞೆಗಳು ವ್ಯರ್ಥವಾಗುತ್ತವೆ. ತಂದೆ ಬೇಡವೆಂದು ಹೇಳಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

6 “ಆಕೆ ಮಾಡಿದ ಹರಕೆ ಇಲ್ಲವೆ ಪರ್ಯಾಲೋಚಿಸದೆ ಮಾಡಿದ ಪ್ರತಿಜ್ಞೆ ಮುಗಿಯುವಷ್ಟರೊಳಗೆ ಅವಳಿಗೆ ಮದುವೆಯಾಯಿತೆಂದು ಇಟ್ಟುಕೊಳ್ಳೋಣ.

7 ಆಗ ಗಂಡಸು ಆ ಪ್ರಮಾಣದ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಡೆಯಲೇಬೇಕು.

8 ಆದರೆ ಗಂಡನು, ಕೇಳಿದಾಗಲೆ ಬೇಡವೆಂದು ಆಜ್ಞೆ ಮಾಡಿದರೆ ಆ ಹರಕೆ ಇಲ್ಲವೆ ಆ ಅವಿಚಾರ ಪ್ರತಿಜ್ಞೆ ನಿರರ್ಥಕವಾಗುತ್ತವೆ. ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

9 “ವಿಧವೆ ಇಲ್ಲವೆ ಗಂಡನಿಂದ ಬೇರ್ಪಟ್ಟ ಮಹಿಳೆ ಇಂಥ ಪ್ರಮಾಣವನ್ನು ಕೈಗೊಂಡಿದ್ದರೆ ಅದು ನಿಲ್ಲುತ್ತದೆ. ಅವಳು ಅದನ್ನು ನೆರವೇರಿಸಬೇಕು.

10 “ಮಡದಿ ಅಂಥ ಹರಕೆಯನ್ನಾಗಲಿ, ಪ್ರಮಾಣವನ್ನಾಗಲಿ ಮಾಡಿದಾಗ

11 ಅವಳ ಗಂಡ ಅದನ್ನು ತಿಳಿದೂ ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುತ್ತವೆ.

12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುತ್ತವೆ. ಗಂಡನು ರದ್ದುಮಾಡಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

13 ಹೆಂಡತಿ ಮಾಡಿದ ಹರಕೆಯನ್ನು ಹಾಗು ಉಪವಾಸವಿರುವೆನೆಂದು ಅವಳು ಮಾಡಿದ ಪ್ರಮಾಣವನ್ನು ದೃಢೀಕರಿಸುವುದಕ್ಕಾಗಲಿ, ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಹಕ್ಕಿದೆ.

14 ಆದರೆ ಅವಳ ಗಂಡ ಯಾವ ಅಡ್ಡಿಯನ್ನೂ ಮಾಡದೆ ದಿನದಿನಕ್ಕೂ ಸುಮ್ಮನಿದ್ದರೆ ಅವಳ ಹರಕೆಗಳನ್ನೂ ಅವನು ಅನುಮೋದಿಸಿದಂತಾಗುವುದು.

15 ಅನಂತರ ಅವನು ಬೇಡವೆಂದರೆ ಆ ಪಾಪದ ಫಲವನ್ನು ಅವನೇ ಅನುಭವಿಸಬೇಕು.”

16 ಇವೇ ಗಂಡಹೆಂಡಿರ ವಿಷಯವಾಗಿ ಹಾಗು ಇನ್ನೂ ಮದುವೆಯಿಲ್ಲದ ಪುತ್ರಿ ಮತ್ತು ಅವಳ ತಂದೆಯ ವಿಷಯವಾಗಿ ಸರ್ವೇಶ್ವರ ಸ್ವಾಮಿ ಕೊಟ್ಟ ನಿಯಮಗಳು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು