Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 28 - ಕನ್ನಡ ಸತ್ಯವೇದವು C.L. Bible (BSI)


ಕ್ರಮಬದ್ಧ ಬಲಿಯರ್ಪಣೆಗಳು
( ವಿಮೋ. 29:38-45 )

1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ:

2 “ನನಗೆ ಸಮರ್ಪಿಸಬೇಕಾದ ಬಲಿಗಳನ್ನು, ಅಂದರೆ ದಹನಬಲಿಗಾಗಿ ಇಸ್ರಯೇಲರು ನನಗೆ ತರುವ ಆಹಾರವನ್ನು ತಕ್ಕ ಕಾಲದಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ವಿಧಿಸು.

3 ಆ ವಿಷಯದಲ್ಲಿ ನೀನು ಅವರಿಗೆ ಹೀಗೆಂದು ಅಪ್ಪಣೆಮಾಡು:


ದೈನಿಕ ಬಲಿ

4 ‘ಪ್ರತಿದಿನ ನೀವು ಸರ್ವೇಶ್ವರನಿಗೆ ದಹನಬಲಿಗಾಗಿ ಬೆಳಿಗ್ಗೆ ಒಂದು ಕುರಿ, ಸಂಜೆ ಒಂದು ಕುರಿ ಹೀಗೆ ಎರಡು ಕಳಂಕರಹಿತವಾದ ಒಂದು ವರ್ಷದ ಕುರಿಗಳನ್ನು ಸಮರ್ಪಿಸಬೇಕು.

5 ಬೆಳಿಗ್ಗೆ ಆ ಕುರಿಯೊಂದಿಗೆ ಧಾನ್ಯ ನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನು ಮತ್ತು ಮೂರು ಸೇರು ಗೋದಿಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು.

6 ನೀವು ಪ್ರತಿನಿತ್ಯವು ಸರ್ವೇಶ್ವರನಿಗೆ ಸುಗಂಧಕರವಾದ ಈ ದಹನಬಲಿಯನ್ನು ಮಾಡಬೇಕೆಂದು ಸೀನಾಯಿ ಬೆಟ್ಟದಲ್ಲೇ ನೇಮಕವಾಯಿತು.

7 ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ಪವಿತ್ರಸ್ಥಾನದಲ್ಲಿ ಪೀಠದ ಮೇಲೆ ಸುರಿಯಬೇಕು.

8 ಸಂಜೆ ಎರಡನೇ ಕುರಿಯನ್ನು ದಹನಬಲಿ ಕೊಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯ ಹಾಗು ಪಾನದ್ರವ್ಯಗಳನ್ನು ಸಮರ್ಪಿಸಬೇಕು.


ವಿಶ್ರಾಂತಿ ದಿನದ ಬಲಿ

9 ‘ಪ್ರತಿದಿನ ಅರ್ಪಿಸಬೇಕಾದ ದಹನಬಲಿ ಹಾಗು ಅದಕ್ಕೆ ಸಂಬಂಧಿಸಿದ ಪಾನದ್ರವ್ಯ ಇವುಗಳ ಜೊತೆಗೆ

10 ನೀವು ಸಬ್ಬತ್ ದಿನದಂದು ಹೆಚ್ಚಾಗಿ ಎರಡು ಕಳಂಕರಹಿತವಾದ ವರ್ಷದ ಕುರಿಗಳನ್ನು ಮತ್ತು ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಆರು ಸೇರು ಗೋದಿಹಿಟ್ಟನ್ನು ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು.


ಅಮಾವಾಸ್ಯೆ ದಿನದ ಬಲಿ

11 ‘ಅಮಾವಾಸ್ಯೆಯಲ್ಲಿ ದಹನಬಲಿಗಾಗಿ ಕಳಂಕರಹಿತವಾದ ಟಗರು, ವರ್ಷದ ಎರಡು ಹೋರಿ, ಒಂದು ಟಗರು, ವರ್ಷದ ಏಳು ಕುರಿಗಳು - ಇವುಗಳನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.

12 ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಪ್ರತಿಯೊಂದು ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು,

13 ಕುರಿಯೊಂದಕ್ಕೆ ಮೂರು ಸೇರು - ಈ ಮೇರೆಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಸಮರ್ಪಿಸಬೇಕು. ಇದು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗುವುದು.

14 ಇವುಗಳಿಗೆ ತಕ್ಕ ಪಾನಾರ್ಪಣೆ ಯಾವುವೆಂದರೆ - ಒಂದೊಂದು ಹೋರಿಯೊಡನೆ ಮೂರು ಸೇರು, ಟಗರಿನೊಡನೆ ಎರಡು ಸೇರು, ಕುರಿಯೊಡನೆ ಒಂದು ಸೇರು ದ್ರಾಕ್ಷಾರಸ. ವರ್ಷದ ಪ್ರತಿ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಕೊಡಬೇಕು.

15 ಅಮಾವಾಸ್ಯೆಯಲ್ಲಿ ದಹನಬಲಿಯನ್ನೂ ಅರ್ಪಿಸುವುದಲ್ಲದೆ ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ಸರ್ವೇಶ್ವರನಿಗೆ ಹೆಚ್ಚಾಗಿ ಸಮರ್ಪಿಸಬೇಕು.


ಪಾಸ್ಕಹಬ್ಬದ ಬಲಿ
( ಯಾಜ. 23:5-14 )

16 ‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಂದು ಸರ್ವೇಶ್ವರಸ್ವಾಮಿ ನೇಮಿಸಿದ ಪಾಸ್ಕಹಬ್ಬವಾಗಬೇಕು.

17 ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಆರಂಭವಾಗಬೇಕು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.

18 ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.

19 ಸರ್ವೇಶ್ವರನಿಗೆ ದಹನಬಲಿಗಾಗಿ ಎರಡು ಹೋರಿಗಳನ್ನೂ ಒಂದು ಟಗರನ್ನೂ ಹಾಗು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪ್ರಾಣಿಗಳು ಕಳಂಕರಹಿತವಾಗಿರಬೇಕು.

20 ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು,

21 ಒಂದೊಂದು ಕುರಿಗೆ ಮೂರು ಸೇರು ಹೀಗೆ ತಂದುಕೊಡಬೇಕು.

22 ಇದಲ್ಲದೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.

23 ನಿತ್ಯಗಟ್ಟಲೆಯಾಗಿ ಪ್ರತಿದಿನ ಬೆಳಿಗ್ಗೆ ಒಪ್ಪಿಸಲಾಗುವ ದಹನಬಲಿಯ ಜೊತೆಗೆ ಇವುಗಳನ್ನು ಸೇರಿಸಿ ಸಮರ್ಪಿಸಬೇಕು.

24 ಆ ಏಳು ದಿನಗಳಲ್ಲೂ ದೈನಿಕ ದಹನಬಲಿಯನ್ನು ಮತ್ತು ಅದಕ್ಕೆ ಸೇರಿದ ಪಾನಾರ್ಪಣೆಯನ್ನು ಒಪ್ಪಿಸಬೇಕಲ್ಲದೆ ಮೇಲೆ ಹೇಳಿದ ಕ್ರಮದ ಮೇರೆಗೆ ಪ್ರತಿದಿನವೂ ದಹನಬಲಿ ರೂಪವಾಗಿ ಸರ್ವೇಶ್ವರನಿಗೆ ಅನ್ನಾರ್ಪಣೆ ಮಾಡಿ ಅವರಿಗೆ ಸುಗಂಧ ಸುವಾಸನೆಯನ್ನು ಉಂಟುಮಾಡಬೇಕು.

25 ಏಳನೆಯ ದಿನದಲ್ಲೂ ಸಭೆ ಕೂಡಬೇಕು. ಆ ದಿನದಂದು ಯಾವ ದುಡಿಮೆಯನ್ನೂ ಮಾಡಬಾರದು.


ಸುಗ್ಗಿ ಹಬ್ಬದ ಬಲಿ
( ಯಾಜ. 23:15-22 )

26 ‘ಪಾಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ನೈವೇದ್ಯ ಮಾಡಬೇಕು. ಆ ಪ್ರಥಮ ಫಲಾರ್ಪಣೆಯ ದಿನ ನೀವು ಯಾವ ದುಡಿಮೆಯನ್ನೂ ಮಾಡದೆ ದೇವಾರಾಧನೆಗಾಗಿ ಸಭೆಸೇರಬೇಕು.

27 ಆ ದಿನ ಸರ್ವೇಶ್ವರನಿಗೆ ಸುಗಂಧ ಸುವಾಸನೆಯುಂಟು ಮಾಡುವುದಕ್ಕಾಗಿ ಎರಡು ಹೋರಿ, ಒಂದು ಟಗರು, ಹಾಗು ವರ್ಷದ ಏಳು ಕುರಿ ಇವುಗಳನ್ನು,

28 ಹಾಗು ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಅಂದರೆ, ಪ್ರತಿಯೊಂದು ಹೋರಿಗೆ ಒಂಬತ್ತು ಸೇರು,

29 ಟಗರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನು;

30 ಮತ್ತು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.

31 ಈ ಪ್ರಾಣಿಗಳೆಲ್ಲಾ ಕಳಂಕರಹಿತವಾಗಿರಬೇಕು. ದೈನಿಕ ದಹನಬಲಿ ಮತ್ತು ಅದಕ್ಕೆ ಸೇರಿದ ಧಾನ್ಯನೈವೇದ್ಯ ಇವುಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನಾರ್ಪಣೆಗಳನ್ನೂ ಸೇರಿಸಿ ಸಮರ್ಪಿಸಬೇಕು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು