ಅರಣ್ಯಕಾಂಡ 22 - ಕನ್ನಡ ಸತ್ಯವೇದವು C.L. Bible (BSI)ಮೋವಾಬ್ ಮೈದಾನದಲ್ಲಿ ಬಿಳಾಮನ ಭವಿಷತ್ ವಾಣಿ 1 ಇಸ್ರಯೇಲರು ಪ್ರಯಾಣಮಾಡಿ ಜೋರ್ಡನ್ ನದಿತೀರದಲ್ಲಿ ಜೆರಿಕೋ ನಗರಕ್ಕೆ ಹತ್ತಿರವಿರುವ ಮೋವಾಬ್ಯರ ಬೈಲಿನಲ್ಲಿ ಇಳಿದುಕೊಂಡರು. 2 ಆ ಕಾಲದಲ್ಲಿ ಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರಿಗೆ ಅರಸನಾಗಿದ್ದನು. ಇಸ್ರಯೇಲರು ಅಮೋರಿಯರನ್ನು ಕೊಂದ ವರ್ತಮಾನವನ್ನು ಈತ ಕೇಳಿದ್ದನು. 3 ಇಸ್ರಯೇಲರು ಬಹುಮಂದಿ ಇದ್ದುದರಿಂದ ಮೋವಾಬ್ಯರು ಬಹಳವಾಗಿ ದಿಗಿಲುಪಟ್ಟರು; ಇಸ್ರಯೇಲರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು. 4 ಮಿದ್ಯಾನ್ಯರ ಹಿರಿಯರಿಗೆ, “ದನಕರುಗಳು ಅಡವಿಯ ಹುಲ್ಲನ್ನೆಲ್ಲಾ ಮೇದುಬಿಡುವಂತೆ ಈ ಸಮುದಾಯದವರು ನಮ್ಮನ್ನೂ ನಮ್ಮ ಸುತ್ತಮುತ್ತಲಿನವರನ್ನೂ ನಿರ್ಮೂಲ ಮಾಡುವ ಹಾಗಿದೆ,” ಎಂದು ಎಚ್ಚರಿಸಿದರು. 5 ಬಾಲಾಕನು ಬೆಯೋರನ ಮಗ ಬಿಳಾಮನನ್ನು ಕರೆಸುವುದಕ್ಕೆ ಸ್ವಜನರ ನಾಡಾದ ಯೂಫ್ರೆಟಿಸ್ ನದಿಯ ತೀರದಲ್ಲಿರುವ ‘ಪೆತೋರ್’ ಎಂಬ ಊರಿಗೆ ದೂತರನ್ನು ಕಳಿಸಿದನು. “ತಾವು ದಯವಿಟ್ಟು ಬರಬೇಕು. ಯಾವುದೋ ಒಂದು ಜನಾಂಗ ಈಜಿಪ್ಟ್ ದೇಶದಿಂದ ಬಂದಿದೆ; ಭೂಮಿಯನ್ನೆಲ್ಲಾ ಆವರಿಸಿಕೊಂಡಿದೆ; ನನಗೆದುರಾಗಿ ಬಂದಿಳಿದಿದೆ. ಅವರು ನಮಗಿಂತ ಬಲಿಷ್ಠರು. 6 ಆದುದರಿಂದ ತಾವು ದಯಮಾಡಿ ಬಂದು ಈ ಜನಕ್ಕೆ ಶಾಪಹಾಕಿ ನಮಗೆ ನೆರವಾಗಬೇಕು. ಆಗ ಇವರನ್ನು ಸೋಲಿಸಿ ಈ ನಾಡಿನಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ತಮ್ಮ ಆಶೀರ್ವಾದದಿಂದ ಶುಭ, ತಮ್ಮ ಶಾಪದಿಂದ ಅಶುಭವುಂಟಾಗುತ್ತದೆ ಎಂದು ನಾನು ಬಲ್ಲೆ,” ಎಂದು ಹೇಳಿಕಳಿಸಿದನು. 7 ಮೋವಾಬ್ಯರ ಹಾಗೂ ಮಿದ್ಯಾನ್ಯರ ಮುಖ್ಯಸ್ಥರು ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಯನ್ನು ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದರು. ಬಾಲಾಕನು ಹೇಳಿಕಳಿಸಿದ್ದ ಮಾತುಗಳನ್ನು ತಿಳಿಸಿದರು. 8 ಆಗ ಬಿಳಾಮನು, “ಈ ರಾತ್ರಿ ನೀವು ಇಲ್ಲೇ ತಂಗಿರಿ. ಸರ್ವೇಶ್ವರ ನನಗೆ ಕೊಡುವ ಉತ್ತರವನ್ನು ಬೆಳಿಗ್ಗೆ ತಿಳಿಸುವೆನು,” ಎಂದನು. ಅಂತೆಯೇ, ಮೋವಾಬ್ಯರ ಮುಖಂಡರು ಬಿಳಾಮನ ಬಳಿಯಲ್ಲಿ ಉಳಿದುಕೊಂಡರು. 9 ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿ ತಂಗಿರುವ ಆ ಜನರು ಯಾರು?” ಎಂದು ವಿಚಾರಿಸಿದರು. 10 ಬಿಳಾಮನು, “ಮೋವಾಬ್ಯರ ಅರಸನು, ಅಂದರೆ ಚಿಪ್ಪೋರನ ಮಗ ಬಾಲಾಕನು ಅವರನ್ನು ನನ್ನ ಬಳಿಗೆ ದೂತರನ್ನಾಗಿ ಕಳಿಸಿದ್ದಾನೆ; 11 ‘ದಯಮಾಡಿ ಬರಬೇಕು. ಯಾವುದೋ ಒಂದು ಜನಾಂಗ ಈಜಿಪ್ಟ್ ದೇಶದಿಂದ ಹೊರಟು ಬಂದಿದೆ; ಭೂಮಿಯನ್ನೆಲ್ಲಾ ಆವರಿಸಿಕೊಂಡಿದೆ; ನೀನು ಬಂದು ಅವರಿಗೆ ಶಾಪಹಾಕಬೇಕು; ಹಾಕಿದರೆ ಅವರನ್ನು ಸೋಲಿಸಿ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು,‘ ಎಂದು ಹೇಳಿಕಳಿಸಿದ್ದಾನೆ,” ಎಂದು ಉತ್ತರಕೊಟ್ಟನು. 12 ಅದಕ್ಕೆ ದೇವರು, “ನೀನು ಅವರ ಜೊತೆಯಲ್ಲಿ ಹೋಗಬಾರದು. ಆ ಜನಾಂಗದವರು ನನ್ನ ಆಶೀರ್ವಾದ ಹೊಂದಿದವರು. ಅವರನ್ನು ಶಪಿಸಬಾರದು,” ಎಂದು ಹೇಳಿಬಿಟ್ಟರು. 13 ಬೆಳಿಗ್ಗೆ ಬಿಳಾಮನು ಬಾಲಾಕನ ಮುಖಂಡರಿಗೆ, “ನಾನು ನಿಮ್ಮ ಜೊತೆಯಲ್ಲಿ ಬರುವುದಕ್ಕೆ ಸರ್ವೇಶ್ವರನ ಅಪ್ಪಣೆಯಿಲ್ಲ. ನೀವು ನಿಮ್ಮ ನಾಡಿಗೆ ತೆರಳಿ,” ಎಂದನು. 14 ಮೋವಾಬ್ಯರ ಮುಖಂಡರು ಹೊರಟು ಬಾಲಾಕನ ಬಳಿಗೆ ಬಂದರು. ಬಿಳಾಮನು ಬರಲು ಒಪ್ಪಲಿಲ್ಲವೆಂದು ತಿಳಿಸಿದರು. 15 ಬಾಲಾಕನು ಅವರಿಗಿಂತಲೂ ಹೆಚ್ಚು ಗಣ್ಯವಂತ ಮುಂದಾಳುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕಳಿಸಿದನು. 16 ಇವರು ಬಿಳಾಮನ ಬಳಿಗೆ ಬಂದು, “ಚಿಪ್ಪೋರನ ಮಗ ಬಾಲಾಕನು ತಮಗೆ ತಿಳಿಸುವುದು ಇದು: ‘ತಾವು ದಯಮಾಡಿ ನನ್ನ ಬಳಿಗೆ ಬರಲು ಅಡ್ಡಿಯನ್ನು ಒಡ್ಡಬೇಡಿ. 17 ನಾನು ತಮ್ಮನ್ನು ಬಹಳವಾಗಿ ಸನ್ಮಾನಿಸುವೆನು; ತಾವು ಏನು ಹೇಳಿದರೂ ಅದರಂತೆಯೇ ಮಾಡುವೆನು; ತಾವು ಅಗತ್ಯವಾಗಿ ಬಂದು ಈ ಜನಾಂಗದವರನ್ನು ಶಪಿಸಿ ನನಗೆ ನೆರವಾಗಬೇಕು’ ಎಂದು ಹೇಳಿಕಳಿಸಿದ್ದಾರೆ,” ಎಂದರು. 18 ಅದಕ್ಕೆ ಬಿಳಾಮನು, “ಬಾಲಾಕನು ತನ್ನ ಮನೆ ತುಂಬ ಬೆಳ್ಳಿ ಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಉಲ್ಲಂಘಿಸಲಾರೆ. 19 ನೀವು ಕೂಡ ಈ ರಾತ್ರಿ ಇಲ್ಲೇ ತಂಗಿರಿ, ಸರ್ವೇಶ್ವರ ಏನು ಹೇಳುತ್ತಾರೋ ಅದನ್ನು ತಿಳಿದುಕೊಳ್ಳುತ್ತೇನೆ,” ಎಂದು ಬಾಲಾಕನು ದೂತರಿಗೆ ಉತ್ತರಕೊಟ್ಟನು. 20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಜನರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು; ಆದರೆ ನಾನು ಆಜ್ಞಾಪಿಸುವ ಪ್ರಕಾರವೇ ಮಾಡಬೇಕು,” ಎಂದರು. 21 ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಮುಂದಾಳುಗಳ ಜೊತೆಯಲ್ಲಿ ಹೊರಟನು. ಬಿಳಾಮನ ಕತ್ತೆ 22 ಬಿಳಾಮನು ಹೀಗೆ ಹೋದುದರಿಂದ ದೇವರಿಗೆ ಸಿಟ್ಟಾಯಿತು. ಸರ್ವೇಶ್ವರನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಹತ್ತಿ ಇಬ್ಬರು ಆಳುಗಳ ಸಂಗಡ ಸವಾರಿ ಮಾಡುತ್ತಿದ್ದನು. 23 ಸರ್ವೇಶ್ವರನ ದೂತನು ಬಿಚ್ಚುಗತ್ತಿಯನ್ನು ಕೈಯಲ್ಲಿ ಹಿಡಿದು ದಾರಿಯಲ್ಲೇ ನಿಂತನು. ಇದನ್ನು ಕಂಡ ಆ ಕತ್ತೆ ದಾರಿಯನ್ನು ಬಿಟ್ಟು ಅಡವಿಯ ಕಡೆಹೋಯಿತು. ದಾರಿಗೆ ತಿರುಗಿಸಲು ಬಿಳಾಮನು ಅದನ್ನು ಹೊಡೆದನು. 24 ಬಳಿಕ ಸರ್ವೇಶ್ವರನ ದೂತನು ದ್ರಾಕ್ಷಿತೋಟಗಳ ಸಂದಿಯಲ್ಲಿ ನಿಂತನು. ಈ ಕಡೆಯಲ್ಲೂ ಗೋಡೆಯಿತ್ತು. 25 ಕತ್ತೆ ಆ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡಿತು. ಬಿಳಾಮನ ಕಾಲನ್ನು ಆ ಗೋಡೆಗೆ ಇರುಕಿಸಿತು. ಅವನು ಅದನ್ನು ಮತ್ತೆ ಹೊಡೆದನು. 26 ಅನಂತರ ಸರ್ವೇಶ್ವರನ ದೂತನು ಮುಂದೆ ಹೋಗಿ ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲು ದಾರಿಯಿಲ್ಲದೆ ಇಕ್ಕಟ್ಟಾದ ಒಂದು ಸ್ಥಳದಲ್ಲಿ ನಿಂತುಕೊಂಡನು. 27 ಕತ್ತೆ ಅವನನ್ನು ನೋಡಿ ಬಿಳಾಮನ ಕೆಳಗೆ ಬಿದ್ದುಕೊಂಡಿತು. ಬಿಳಾಮನು ಸಿಟ್ಟುಗೊಂಡು ಕೈಗೋಲಿನಿಂದ ಹೊಡೆದನು. 28 ಆಗ ಸರ್ವೇಶ್ವರ ಆ ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದೆ?” ಎಂದು ಪ್ರಶ್ನೆ ಹಾಕಿತು. 29 ಅದಕ್ಕೆ ಬಿಳಾಮನು, “ನೀನು ಇಷ್ಟಬಂದಂತೆ ನನ್ನನ್ನು ಅತ್ತಿತ್ತ ಆಡಿಸಿದೆ; ನನ್ನ ಕೈಯಲ್ಲಿ ಕತ್ತಿಯಿದ್ದಿದ್ದರೆ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆ,” ಎಂದನು. 30 ಅದಕ್ಕೆ ಆ ಕತ್ತೆ, “ನಿನ್ನ ಜೀವಮಾನವೆಲ್ಲ, ಇಂದಿನ ತನಕ ಸವಾರಿ ಮಾಡುತ್ತಿದ್ದ ಕತ್ತೆ ನಾನಲ್ಲವೆ? ನಾನು ಎಂದಾದರೂ ಈ ರೀತಿ ಮಾಡಿದ್ದುಂಟೆ?” ಎಂದಿತು. ಆಗ ಬಿಳಾಮನು “ಇಲ್ಲ” ಎಂದನು. 31 ಅಷ್ಟರಲ್ಲೇ ಸರ್ವೇಶ್ವರ ಬಿಳಾಮನ ಕಣ್ಣುಗಳನ್ನು ತೆರೆದರು. ಅವರ ದೂತನು ಬಿಚ್ಚುಕತ್ತಿಯನ್ನು ಹಿಡಿದು ದಾರಿಯಲ್ಲೆ ನಿಂತಿರುವುದನ್ನು ಕಂಡನು. ಕೂಡಲೆ ಅಡ್ಡಬಿದ್ದು ನಮಸ್ಕರಿಸಿದನು. 32 ಆಗ ಸರ್ವೇಶ್ವರನ ದೂತ, “ಮೂರು ಸಾರಿ ನಿನ್ನ ಕತ್ತೆಯನ್ನೇಕೆ ಹೊಡೆದೆ? ನೀನು ಹಿಡಿದ ಮಾರ್ಗ ಸರಿಯಲ್ಲ. ನಿನ್ನನ್ನು ತಡೆಗಟ್ಟಲು ನಾನೇ ಬಂದೆ. 33 ಈ ಕತ್ತೆ ನನ್ನನ್ನು ನೋಡಿ ಮೂರು ಸಾರಿ ನನ್ನೆದುರಿನಿಂದ ಪಕ್ಕಕ್ಕೆ ತಿರುಗಿಕೊಂಡಿತು. ಹಾಗೇ ತಿರುಗಿಕೊಳ್ಳದೆ ಹೋಗಿದ್ದರೆ ನಿನ್ನನ್ನು ಕೊಂದು ಕತ್ತೆಯನ್ನು ಉಳಿಸುತ್ತಿದ್ದೆ,” ಎಂದು ಹೇಳಿದನು. 34 ಅದಕ್ಕೆ ಬಿಳಾಮನು, “ನಾನು ಪಾಪಮಾಡಿದೆ, ನೀನೆ ನನಗೆದುರಾಗಿ ದಾರಿಯಲ್ಲಿ ನಿಂತಿರುವುದು ನನಗೆ ತಿಳಿಯದೆ ಹೋಯಿತು. ನಾನು ಮಾಡುವುದು ನಿನಗೆ ಕೆಟ್ಟದ್ದಾಗಿ ತೋರಿದರೆ ಹಿಂದಕ್ಕೆ ತಿರುಗಿಕೊಳ್ಳುತ್ತೇನೆ,” ಎಂದನು. 35 ಆಗ ಸರ್ವೇಶ್ವರನ ದೂತನು, “ಆ ವ್ಯಕ್ತಿಗಳ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವುದನ್ನೇ ಹೊರತು ಬೇರೆ ಏನನ್ನೂ ಹೇಳಬೇಡ,” ಎಂದು ತಿಳಿಸಿದನು. ಬಿಳಾಮನು ಬಾಲಾಕನ ಮುಂದಾಳುಗಳ ಜೊತೆ ಹೊರಟನು. ಬಿಳಾಮನ ಮತ್ತು ಬಾಲಾಕನ ಭೇಟಿ 36 ಬಿಳಾಮನು ಬಂದ ಸಮಾಚಾರ ಬಾಲಾಕನಿಗೆ ಮುಟ್ಟಿತು. ಅವನು ಬಿಳಾಮನನ್ನು ಬರಮಾಡಿಕೊಳ್ಳಲು ತನ್ನ ನಾಡಗಡಿಯಾದ ಅರ್ನೋನ್ ಹೊಳೆಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೊರಟುಬಂದನು. 37 ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ್ಯ ನೀಡಲು ನಾನು ಅಸಮರ್ಥನೇ?” ಎಂದನು. 38 ಅದಕ್ಕೆ ಬಿಳಾಮನು, “ಅದಿರಲಿ, ನಾನೀಗ ಬಂದಾಯಿತು, ಆದರೆ ನಾನಾಗಿ ಏನನ್ನು ಹೇಳುವ ಶಕ್ತಿ ನನಗಿಲ್ಲ, ದೇವರು ಆಡಿಸಿದ ಮಾತನ್ನೇ ಹೇಳಲು ಸಾಧ್ಯ,” ಎಂದು ಹೇಳಿದನು. 39 ಇದಾದ ಬಳಿಕ ಬಿಳಾಮನು ಬಾಲಾಕನೊಂದಿಗೆ ಹೋದನು. ಅವರು ಕಿರ್ಯತ್ ಹುಚೋತಿಗೆ ಬಂದರು. 40 ಬಾಲಾಕನು ಹೋರಿಗಳನ್ನು ಹಾಗೂ ಕುರಿಗಳನ್ನು ಕೊಂದು ಬಲಿಕೊಟ್ಟು, ಅವುಗಳ ಮಾಂಸವನ್ನು ಬಿಳಾಮನಿಗೂ ಅವನ ಸಂಗಡವಿದ್ದ ಮುಂದಾಳುಗಳಿಗೂ ಕಳಿಸಿದನು. 41 ಮರುದಿನ ಬೆಳಿಗ್ಗೆ ಬಾಲಾಕನು ಬಿಳಾಮನನ್ನು ಕರೆದುಕೊಂಡು ‘ಬಾಳ್’ ಎಂಬ ದೇವತೆಯ ಪೂಜಾಸ್ಥಳಗಳಿದ್ದ ಗುಡ್ಡವನ್ನು ಹತ್ತಿ ಇಸ್ರಯೇಲರ ಶಿಬಿರದೊಂದು ಭಾಗವನ್ನು ತೋರಿಸಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India