Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 19 - ಕನ್ನಡ ಸತ್ಯವೇದವು C.L. Bible (BSI)


ಕೆಂದಾಕಳಿನ ಬೂದಿ

1 ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನನಿಗೆ ಹೀಗೆಂದರು:

2 “ಸರ್ವೇಶ್ವರನಾದ ನಾನು ಒಂದು ವಿಧಿಯನ್ನು ನೇಮಿಸಿದ್ದೇನೆ. ಅದೇನೆಂದರೆ - ಎಂದೂ ನೊಗವನ್ನು ಹೊರದ ಹಾಗೂ ಯಾವ ಕುಂದುಕೊರತೆಯೂ ಇಲ್ಲದ ಒಂದು ಕೆಂದಾಕಳನ್ನು ನಿನಗೆ ತಂದುಕೊಡಬೇಕೆಂದು ಇಸ್ರಯೇಲರಿಗೆ ತಿಳಿಸು.

3 ಅದನ್ನು ನೀವು ಯಾಜಕ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಆತ ಅದನ್ನು ಪಾಳೆಯದ ಹೊರಗೆ ಹೊಡೆಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು.

4 ತರುವಾಯ ಎಲ್ಲಾಜಾರನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದತ್ತ ಏಳುಸಾರಿ ಚಿಮುಕಿಸಬೇಕು.

5 ಆ ಆಕಳನ್ನು ಚರ್ಮ, ಮಾಂಸ, ರಕ್ತ, ಕಲ್ಮಷಗಳ ಸಹಿತವಾಗಿ ತನ್ನ ಎದುರಿನಲ್ಲೇ ದಹಿಸಿಬಿಡಬೇಕು.

6 ಯಾಜಕನು ದೇವದಾರು ಮರದ ಕಟ್ಟಿಗೆಯನ್ನು ಹಿಸ್ಸೋಪ್ ಗಿಡದ ಬರಲನ್ನು ಮತ್ತು ರಕ್ತವರ್ಣದ ದಾರವನ್ನು ತೆಗೆದುಕೊಂಡು ಆ ಆಕಳನ್ನು ದಹಿಸುವ ಬೆಂಕಿಯಲ್ಲಿ ಹಾಕಬೇಕು.

7 ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಿ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಂಜೆಯವರೆಗೂ ಅವನು ಮಡಿಗೆಟ್ಟವನಾಗಿರಬೇಕು.

8 ಆ ಆಕಳನ್ನು ಸುಟ್ಟವನು ಕೂಡ ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸ್ನಾನ ಮಾಡಿ ಆ ದಿನದ ಸಂಜೆಯ ತನಕ ಮಡಿಗೆಟ್ಟವನಾಗಿರಬೇಕು.

9 “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಯೇಲ್ ಸಮಾಜದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷಪರಿಹಾರಕವಾದುದು. ಅದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು.

10 ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸಂಜೆಯವರೆಗೆ ಮಡಿಗೆಟ್ಟವನಾಗಿರಬೇಕು. ಇದು ಇಸ್ರಯೇಲರಿಗೂ ಅವರ ಮಧ್ಯೆ ವಾಸಿಸುವ ಇತರರಿಗೂ ಅನ್ವಯಿಸುವ ಶಾಶ್ವತ ನಿಯಮ.


ಶವ ಸೋಂಕಿದವ ಮಡಿಗೆಟ್ಟವ

11 “ಮನುಷ್ಯನ ಶವವನ್ನು ಸೋಂಕಿದವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.

12 ಮೂರನೇ ದಿನ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನ ಶುದ್ಧನಾಗುವನು. ಮೂರನೆಯ ದಿನ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆ ದಿನದಲ್ಲೂ ಶುದ್ಧನಾಗನು.

13 ಮನುಷ್ಯನ ಶವ ಸೋಂಕಿದವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಅವನು ಸರ್ವೇಶ್ವರನ ಗುಡಾರವನ್ನು ಅಪವಿತ್ರಪಡಿಸುತ್ತಾನೆ. ಅಂಥವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣ ನೀರನ್ನು ಅವನ ಮೇಲೆ ಚಿಮುಕಿಸದೆ ಇರುವ ಕಾರಣ ಅವನು ಮಡಿಗೆಟ್ಟವನು; ಅವನಿಗುಂಟಾದ ಮೈಲಿಗೆ ಅವನಲ್ಲಿ ಉಳಿದಿರುತ್ತದೆ.


ಶುದ್ಧೀಕರಣ ಜಲ

14 “ಮೈಲಿಗೆ ನಿಯಮವಿದು: ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯೊಳಗಿರುವವರೆಲ್ಲರು ಹಾಗು ಅದರೊಳಗೆ ಬರುವವರು ಕೂಡ ಮೈಲಿಗೆಯಾಗಿರುತ್ತಾರೆ.

15 ಮುಚ್ಚಳ ಹಾಕಿ ಕಟ್ಟದಿರುವ ಎಲ್ಲ ಪಾತ್ರೆಗಳು ಕೂಡ ಮೈಲಿಗೆಯಾಗಿರುತ್ತವೆ.

16 ಹೊರಗೆ ಬಯಲಿನಲ್ಲಿರುವ ಯಾವನಿಗಾದರೂ ಶಸ್ತ್ರಹತನ ಶವವಾಗಲಿ, ಬೇರೆ ಯಾವ ಮಾನುಷ್ಯ ಶವವಾಗಲಿ, ಮನುಷ್ಯನ ಎಲುಬಾಗಲಿ ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.

17 “ಅಂಥ ಮಡಿಗೆಟ್ಟವನನ್ನು ಪವಿತ್ರಪಡಿಸಬೇಕಾದರೆ ಆ ದೋಷಪರಿಹಾರಕ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿಟ್ಟು ಅದರ ಮೇಲೆ ಹರಿಯುವ ನೀರನ್ನು ಹುಯ್ಯಬೇಕು.

18 ಬಳಿಕ ಮೈಲಿಗೆಯಾಗದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಗೊಂಚಲಿನಿಂದ ಸಾವಾದ, ಆ ಡೇರೆಯ ಮೇಲೂ ಅದರಲ್ಲಿರುವ ಸಲಕರಣೆಗಳ ಮೇಲೂ ವ್ಯಕ್ತಿಗಳ ಮೇಲೂ ಚಿಮುಕಿಸಬೇಕು. ಹಾಗೆಯೇ ಎಲುಬಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾರಿಗೆ ಸೋಂಕಿತೋ ಅವರ ಮೇಲೆಯೂ ಚಿಮುಕಿಸಬೇಕು.

19 ಮೂರನೆಯ ದಿನದಲ್ಲೂ ಏಳನೆಯ ದಿನದಲ್ಲೂ ಮಡಿಗೆಟ್ಟವನ ಮೇಲೆ ಹಾಗೆಯೇ ಚಿಮುಕಿಸಬೇಕು. ಮಡಿಗೆಟ್ಟವನು ಏಳನೆಯ ದಿನ ದೋಷಪರಿಹಾರ ಹೊಂದುವನು. ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಿಕೊಂಡು ಸಂಜೆ ಶುದ್ಧನಾಗುವನು.

20 ಮಡಿಗೆಟ್ಟು ದೋಷಪರಿಹಾರ ಮಾಡಿಕೊಳ್ಳದವನು ಸರ್ವೇಶ್ವರನ ದೇವಸ್ಥಾನವನ್ನು ಅಪವಿತ್ರಗೊಳಿಸುತ್ತಾನೆ. ಆದಕಾರಣ ಅಂಥವನಿಗೆ ಸಭೆಯಿಂದ ಬಹಿಷ್ಕಾರ ಹಾಕಬೇಕು. ಶುದ್ಧೀಕರಣ ಜಲವನ್ನು ತನ್ನ ಮೇಲೆ ಚಿಮುಕಿಸಿಕೊಳ್ಳದೆ ಹೋದುದರಿಂದ ಅವನು ಮಡಿಗೆಟ್ಟವನಾಗಿಯೇ ಇರುತ್ತಾನೆ.

21 “ಇದು ಇಸ್ರಯೇಲರಿಗೆ ಶಾಶ್ವತ ನಿಯಮವಾಗಿರುತ್ತದೆ. ಮೈಲಿಗೆ ನೀಗಿಸುವ ಆ ನೀರನ್ನು ಚಿಮುಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಆ ನೀರನ್ನು ಮುಟ್ಟಿದವನು ಆ ದಿನದ ಸಂಜೆಯವರೆಗೂ ಮಡಿಗೆಟ್ಟವನಾಗಿರುವನು.

22 ಮಡಿಗೆಟ್ಟವನಿಗೆ ಸೋಂಕಿದ ಬಟ್ಟೆ ಯಾವುದೇ ಆಗಲಿ ಮೈಲಿಗೆಯಾದುದೆಂದು ನೀವು ತಿಳದುಕೊಳ್ಳಬೇಕು. ಅದು ಯಾರಿಗೆ ಸೋಂಕಿತೋ ಅವನು ಕೂಡ ಆ ದಿನದ ಸಂಜೆಯವರೆಗೆ ಮಡಿಗೆಟ್ಟವನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು