Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 15 - ಕನ್ನಡ ಸತ್ಯವೇದವು C.L. Bible (BSI)


ಬಲಿಕಾಣಿಕೆಯೊಂದಿಗೆ ಸಮರ್ಪಿಸಬೇಕಾದ ನೈವೇದ್ಯ ದ್ರವ್ಯಗಳು

1 ಸರ್ವೇಶ್ವರ ಸ್ವಾಮಿ ಮೋಶೆಗೆ:

2 “ನೀನು ಇಸ್ರಯೇಲರಿಗೆ ಹೀಗೆಂದು ಹೇಳು: ‘ನಿಮ್ಮ ನಿವಾಸಕ್ಕಾಗಿ ನಾನು ಕೊಡುವ ನಾಡಿಗೆ ನೀವು ಬಂದು ಸೇರಿದ ನಂತರ

3 ಸರ್ವೇಶ್ವರನಾದ ನನಗೆ ಸುವಾಸನೆಯ ಕಾಣಿಕೆಯಾಗಿ ದನಕರುಗಳಿಂದ ಬಲಿಯನ್ನು ಅರ್ಪಿಸುವಾಗ ಅದು ಹರಕೆಯ, ಕೃತಜ್ಞತೆಯ ಹಬ್ಬಾಚರಣೆಯ, ಶಾಂತಿಸಮಾಧಾನದ ಬಲಿಯಾಗಿರಲಿ ಅಥವಾ ದಹನಬಲಿಯಾಗಿರಲಿ.

4 ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರೆಸಿದ ಮೂರು ಸೇರು ಗೋದಿಯ ಹಿಟ್ಟನ್ನು ತರಬೇಕು.

5 ಮತ್ತು ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ದಹನಬಲಿದಾನವಾಗಿ ಇಲ್ಲವೆ ಸಮಾಧಾನ ಬಲಿಯಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನು ಸಮರ್ಪಿಸಬೇಕು.

6 “ಸರ್ವೇಶ್ವರನಾದ ನನಗೆ ಸುವಾಸನೆ ಕಾಣಿಕೆಯಾಗಿ ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರೆಸಿದ ಆರುಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು;

7 ಮತ್ತು ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನು ಸಮರ್ಪಿಸಬೇಕು.

8 ‘ನೀವು ಅರ್ಪಿಸುವಂಥದ್ದು ಹೋರಿಯಾಗಿದ್ದರೆ, ಅದು ಸರ್ವಾಂಗಹೋಮವೇ ಆಗಿರಲಿ ಅಥವಾ ಹರಕೆಯ ಹಾಗೂ ಬೇರೆ ವಿಧವಾದ ಬಲಿಯೇ ಆಗಿರಲಿ,

9 ಆಗ ನೀವು ‘ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರೆಸಿದ ಒಂಬತ್ತು ಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು.

10 ಮತ್ತು ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು. ಇದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗುವುದು.

11 ‘ಕುರಿ, ಆಡು, ಟಗರು, ಹೋರಿ - ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ನೀವು ಈ ಮೇರೆಗೆ ನೈವೇದ್ಯಮಾಡಬೇಕು.

12 ನೀವು ಸಮರ್ಪಿಸುವ ಬಲಿಪ್ರಾಣಿಗಳ ಸಂಖ್ಯಾನುಸಾರ ಒಂದೊಂದು ಪ್ರಾಣಿಯ ಸಮೇತ ಹೀಗೆಯೇ ಮಾಡಬೇಕು.

13 ಸ್ವದೇಶದವರೆಲ್ಲರೂ ಸರ್ವೇಶ್ವರನಿಗೆ ಸುಗಂಧಬಲಿಯನ್ನು ಸಮರ್ಪಿಸುವಾಗ ಈ ರೀತಿಯಾಗಿಯೇ ಮಾಡಬೇಕು.

14 ನಿಮ್ಮ ಮಧ್ಯೆ, ಇಲ್ಲವೆ ನಿಮ್ಮ ಸಂತತಿಯವರ ಮಧ್ಯೆ ವಾಸಿಸುವ ಅನ್ಯದೇಶೀಯನಾಗಲಿ ಪ್ರವಾಸಿಯಾಗಲಿ ಸುಗಂಧ ದಹನಬಲಿಯನ್ನು ಅರ್ಪಿಸಲಾಶಿಸಿದರೆ ನಿಮ್ಮಂತೆಯೇ ಅವನೂ ಮಾಡಬೇಕು.

15 ಸರ್ವರಿಗೂ ಅಂದರೆ ನಿಮಗೂ ನಿಮ್ಮಲ್ಲಿರುವ ಅನ್ಯದೇಶೀಯರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ. ಸರ್ವೇಶ್ವರನ ಸನ್ನಿಧಿಯಲ್ಲಿ ನೀವು ಹೇಗೆ ಇರುವಿರೋ ಹಾಗೆಯೇ ಅನ್ಯದೇಶೀಯನೂ ಇರುವನು.

16 ನಿಮಗೂ ನಿಮ್ಮಲ್ಲಿ ವಾಸಿಸುವ ವಿದೇಶೀಯನಿಗೂ ಒಂದೇ ವಿಧಿ, ಒಂದೇ ನಿಯಮ ಇರಬೇಕು,’ ಎಂದರು.


ಗೋದಿಯ ಹಸಿಹಿಟ್ಟಿನಿಂದ ಮಾಡಿದ ಮೊದಲ ರೊಟ್ಟಿ

17 ಸರ್ವೇಶ್ವರ ಮೋಶೆಗೆ:

18 “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು: ‘ನಾನು ನಿಮ್ಮನ್ನು ಕರೆದುಕೊಂಡು ಹೋಗುವ ನಾಡಿಗೆ ನೀವು ಸೇರಿದ ನಂತರ

19 ಆ ಭೂಮಿಯ ಬೆಳೆಯನ್ನು ಅನುಭವಿಸುವಾಗ ಅದರಲ್ಲಿ ಸ್ವಲ್ಪವನ್ನು ಸರ್ವೇಶ್ವರನಿಗೆ ಮೀಸಲಾಗಿಡಬೇಕು.

20 ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಕಿಂಚಿತ್ತನ್ನು ಸರ್ವೇಶ್ವರನಿಗೆಂದು ಮೀಸಲಾಗಿಡುವಂತೆಯೆ ಆ ಕಣಕದಿಂದ ಮಾಡುವ ಮೊದಲ ರೊಟ್ಟಿಯನ್ನು ಮೀಸಲಾಗಿಡಬೇಕು.

21 ನೀವು ಹಾಗು ನಿಮ್ಮ ಸಂತತಿಯವರು ಹೀಗೆ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಸರ್ವೇಶ್ವರನಿಗೆ ಮೀಸಲಾಗಿಡಬೇಕು.” ಎಂದರು.


ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರ

22 ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಕೊಟ್ಟ ಈ ಆಜ್ಞೆಗಳಲ್ಲಿ ಒಂದನ್ನು, ಒಬ್ಬನು ತಿಳಿಯದೆ ಮೀರಿ ನಡೆಯಲು ಸಾಧ್ಯ.

23 ಅಂತೆಯೇ ಮುಂಬರುವ ಕಾಲದಲ್ಲಿ ಎಂದಾದರೂ ಒಂದು ಸಭೆ ಇವುಗಳಲ್ಲಿ ಒಂದನ್ನು ಮೀರಿ ದೋಷಿಯಾಗಲು ಸಾಧ್ಯ.

24 ಆಗ ಅವರೆಲ್ಲರು ಒಟ್ಟಿಗೆ ಸೇರಿ ಸರ್ವೇಶ್ವರನಿಗೆ ಸುಗಂಧ ಕಾಣಿಕೆಯಾಗಿ ಹಾಗೂ ದಹನಬಲಿಯಾಗಿ ಒಂದು ಹೋರಿಯನ್ನು ಅರ್ಪಿಸಬೇಕು; ನೈವೇದ್ಯವಾಗಿ ನಿಯಮಿತ ಧಾನ್ಯದ್ರವ್ಯಗಳನ್ನು ಹಾಗೂ ಪಾನದ್ರವ್ಯಗಳನ್ನೂ ಅರ್ಪಿಸಬೇಕು; ಅಲ್ಲದೆ ದೋಷಪರಿಹಾರಕ ಬಲಿಯಾಗಿ ಒಂದು ಹೋತವನ್ನು ಸಮರ್ಪಿಸಬೇಕು.

25 ಹೀಗೆ ಯಾಜಕನು ಇಸ್ರಯೇಲರ ಸರ್ವಸಮೂಹದವರ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆ ದೊರಕುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ ಮತ್ತು ಅವರು ಅದರ ಪರಿಹಾರಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿಯನ್ನೂ ದೋಷಪರಿಹಾರಕಬಲಿಯನ್ನೂ ಅರ್ಪಿಸಿದ್ದರಿಂದ ಕ್ಷಮೆ ಲಭಿಸುವುದು.

26 ಇಸ್ರಯೇಲರ ಸರ್ವಸಭೆಯವರಿಗೂ ಅವರ ಮಧ್ಯೆ ವಾಸಿಸುವ ವಿದೇಶೀಯರಿಗೂ ಅವರೆಲ್ಲರೂ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಲಭಿಸುವುದು.

27 ಯಾವನಾದರೂ ಒಬ್ಬನು ವೈಯಕ್ತಿಕವಾಗಿ ತಿಳಿಯದೆ ತಪ್ಪು ಮಾಡಿದರೆ ಅಂಥವನು ದೋಷಪರಿಹಾರಕ ಬಲಿಗಾಗಿ ಒಂದು ವರ್ಷದ ಆಡನ್ನು ಸಮರ್ಪಿಸಬೇಕು.

28 ತಿಳಿಯದೆ ತಪ್ಪುಮಾಡಿದ ಅಂಥವನ ಪರವಾಗಿ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ವಿಧಿಯನ್ನು ನೆರವೇರಿಸಿದರೆ ಅವನಿಗೆ ಕ್ಷಮೆ ದೊರಕುವುದು.

29 ಈ ಬಗ್ಗೆ ಇಸ್ರಯೇಲರಲ್ಲಿರುವ ಸ್ವದೇಶೀಯರಿಗೂ ವಿದೇಶೀಯರಿಗೂ ಒಂದೇ ವಿಧಿಯಿರಬೇಕು.

30 ಆದರೆ ಒಬ್ಬನು ಸ್ವದೇಶದವನೇ ಆಗಲಿ ವಿದೇಶದವನೇ ಆಗಲಿ ಮನಪೂರ್ವಕವಾಗಿ, ಬೇಕು ಬೇಕೆಂದು ಪಾಪವನ್ನು ಮಾಡಿದರೆ ಅಂಥವನನ್ನು ಕುಲದಿಂದ ತೆಗೆದುಹಾಕಬೇಕು. ಏಕೆಂದರೆ ಅವನು ಸರ್ವೇಶ್ವರನನ್ನು ತೃಣೀಕರಿಸಿದ್ದಾನೆ.

31 ಸರ್ವೇಶ್ವರನ ಮಾತನ್ನು ತಾತ್ಸಾರ ಮಾಡಿ, ಅವರ ಆಜ್ಞೆಯನ್ನು ಉಲ್ಲಂಘಿಸಿದ್ದರಿಂದ ಅಂಥವನಿಗೆ ಬಹಿಷ್ಕಾರ ಹಾಕಲೇಬೇಕು. ಅವನು ತನ್ನ ಪಾಪದ ದುಷ್ಪಲವನ್ನು ಅನುಭವಿಸುವಂತಾಗಬೇಕು.


ವಿಶ್ರಾಂತಿ ದಿನಾಚರಣೆಯ ಉಲ್ಲಂಘನೆ

32 ಇಸ್ರಯೇಲರು ಮರುಭೂಮಿಯಲ್ಲಿದ್ದಾಗ ಒಬ್ಬನು ‘ಸಬ್ಬತ್’ ದಿನದಂದು ಸೌದೆ ಕೂಡಿಸುವುದನ್ನು ಕಂಡರು.

33 ಅವನನ್ನು ಮೋಶೆ, ಆರೋನ್ ಹಾಗೂ ಸರ್ವಸಮುದಾಯದ ಬಳಿಗೆ ಹಿಡಿದುಕೊಂಡು ಬಂದರು.

34 ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ಇದುವರೆಗೂ ಯಾವ ನಿಯಮವೂ ಇರಲಿಲ್ಲ. ಆದುದರಿಂದ ಅವನನ್ನು ಕಾವಲಿನಲ್ಲಿಟ್ಟರು.

35 ಆಗ ಸರ್ವೇಶ್ವರ ಮೋಶೆಗೆ, “ಆ ಮನುಷ್ಯನಿಗೆ ಮರಣ ಶಿಕ್ಷೆಯಾಗಬೇಕು. ಜನಸಮೂಹದವರೆಲ್ಲ ಅವನನ್ನು ಪಾಳೆಯದ ಹೊರಗೆ ಕಲ್ಲೆಸೆದು ಕೊಲ್ಲಬೇಕು,” ಎಂದು ಆಜ್ಞಾಪಿಸಿದರು.

36 ಅಂತೆಯೇ ಜನಸಮೂಹದವರೆಲ್ಲರು ಆ ವ್ಯಕ್ತಿಯನ್ನು ಪಾಳೆಯದ ಹೊರಗೆ ಎಳೆದುಕೊಂಡು ಹೋಗಿ ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಕಲ್ಲೆಸೆದು ಕೊಂದರು.


ಬಟ್ಟೆಮೂಲೆಗಳಲ್ಲಿ ಗೊಂಡೆಯಿರಲಿ

37 ಸರ್ವೇಶ್ವರ ಮೋಶೆಗೆ ಹೀಗೆಂದರು:

38 “ಇಸ್ರಯೇಲರು ಮತ್ತು ಅವರ ಸಂತತಿಯವರು ತಮ್ಮ ಬಟ್ಟೆಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಆಜ್ಞಾಪಿಸು.

39 ಆ ಗೊಂಡೆಗಳ ಪ್ರಯೋಜನವಿದು - ನೀವು ಅವುಗಳನ್ನು ನೋಡುವಾಗ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅವುಗಳನ್ನು ಪಾಲಿಸಬೇಕು. ಹಿಂದೆ ನೀವು ನನಗೆ ದ್ರೋಹಿಗಳಾಗಿ ನಿಮ್ಮ ಮನಸ್ಸಿಗೆ ಬಂದಂತೆ, ಕಣ್ಣಿಗೆ ತೋರಿದಂತೆ ದಾರಿತಪ್ಪಿ ನಡೆದಿರಿ.

40 ಈಗ ನನ್ನ ಆಜ್ಞೆಗಳನ್ನೇ ಗಮನದಲ್ಲಿಟ್ಟು ಅವುಗಳನ್ನು ಅನುಸರಿಸಬೇಕು. ಹೀಗೆ ನಿಮ್ಮ ದೇವರಿಗೇ ಪ್ರತಿಷ್ಠಿತರಾಗಿರಬೇಕು.

41 ನಿಮ್ಮ ದೇವರಾಗಬೇಕೆಂಬ ಉದ್ದೇಶದಿಂದಲೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ ಸರ್ವೇಶ್ವರನಾದ ದೇವರು ನಾನು. ನಾನೇ ನಿಮ್ಮ ದೇವರಾದ ಸರ್ವೇಶ್ವರ.‘

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು