ಅರಣ್ಯಕಾಂಡ 14 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲರ ವಿದ್ರೋಹ 1 ಜನರೆಲ್ಲರು, ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು. 2 ಇಸ್ರಯೇಲರೆಲ್ಲರು ಮೋಶೆ ಮತ್ತು ಆರೋನರ ವಿರುದ್ಧ ಗುಣಗುಟ್ಟಿದರು. “ಈಜಿಪ್ಟಿನಲ್ಲೇ ನಾವು ಸತ್ತಿದ್ದರೆ ಚೆನ್ನಾಗಿತ್ತು. 3 ಕತ್ತಿಯ ಬಾಯಿಗೆ ತುತ್ತಾಗಿಸಲು ಸರ್ವೇಶ್ವರ ಸ್ವಾಮಿ ನಮ್ಮನ್ನೇಕೆ ಈ ನಾಡಿಗೆ ಬರಮಾಡಿದರು? ನಮ್ಮ ಮಡದಿ ಮಕ್ಕಳು ಪರರ ಪಾಲಾಗುವರಲ್ಲಾ? ನಾವು ಮರಳಿ ಈಜಿಪ್ಟ್ ದೇಶಕ್ಕೆ ಹೋಗುವುದೇ ಒಳಿತಲ್ಲವೆ?” ಎಂದು ಹೇಳಿಕೊಂಡರು. 4 “ಒಬ್ಬ ನಾಯಕನನ್ನು ನೇಮಿಸಿಕೊಂಡು ಈಜಿಪ್ಟಿಗೆ ಹಿಂತಿರುಗಿ ಹೋಗೋಣ,” ಎಂದೂ ಒಬ್ಬರಿಗೊಬ್ಬರು ಮಾತಾಡಿಕೊಂಡರು. 5 ಆಗ ಮೋಶೆ ಮತ್ತು ಆರೋನರು ಇಸ್ರಯೇಲರ ಸರ್ವಸಮೂಹದ ಮುಂದೆ ಅಡ್ಡಬಿದ್ದರು. 6 ಅಲ್ಲದೆ ನಾಡನ್ನು ಸಂಚರಿಸಿ ನೋಡಿ ಬಂದವರಲ್ಲಿ ನೂನನ ಮಗ ಯೆಹೋಶುವನು ಮತ್ತು ಯೆಫುನ್ನೆಯ ಮಗ ಕಾಲೇಬನು ಸಿಟ್ಟಿನಿಂದ ತಮ್ಮ ಬಟ್ಟೆಗಳನ್ನೇ ಹರಿದುಕೊಂಡು, 7 ಇಸ್ರಯೇಲರ ಸರ್ವಸಮೂಹದವರಿಗೆ ಹೀಗೆಂದರು: “ನಾವು ಸಂಚರಿಸಿ ನೋಡಿಬಂದ ನಾಡು ಅತ್ಯುತ್ತಮವಾದುದು; 8 ಹಾಲೂ ಜೇನೂ ಹರಿಯುವ ನಾಡದು! ಸರ್ವೇಶ್ವರನಿಗೆ ಮೆಚ್ಚುಗೆಯಾದರೆ ಅದರಲ್ಲಿ ನಮ್ಮನ್ನು ಸೇರಿಸುವರು, ಅದನ್ನೇ ನಮ್ಮ ಸ್ವಾಧೀನಕ್ಕೆ ಕೊಡುವರು. 9 ಆದ್ದರಿಂದ ಸರ್ವೇಶ್ವರನಿಗೆ ವಿರುದ್ಧ ದಂಗೆ ಏಳಬೇಡಿ. ಆ ನಾಡಿನ ಜನರಿಗೆ ದಿಗಿಲುಪಡಬೇಡಿ. ಅವರು ನಮಗೆ ತುತ್ತಾಗುವರು. ನಾವು ಪುಷ್ಠಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ. ಸರ್ವೇಶ್ವರ ನಮ್ಮ ಕಡೆ ಇದ್ದಾರೆ. ಅವರಿಗೆ ಭಯಪಡಬೇಡಿ” 10 ಆದರೆ ಜನಸಂದಣಿ ಅವರಿಗೆ ಕಿವಿಗೊಡಲೊಲ್ಲದೆ ಕಲ್ಲೆಸೆದು ಅವರನ್ನು ಕೊಲ್ಲಬೇಕೆಂದಿದ್ದರು. ಆಗ ಸರ್ವೇಶ್ವರನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಹೊಳೆದು ಇಸ್ರಯೇಲರೆಲ್ಲರಿಗೂ ಕಾಣಿಸಿಕೊಂಡಿತು. ಜನರಪರವಾಗಿ ಮೋಶೆ ಮಾಡಿದ ಪ್ರಾರ್ಥನೆ 11 ಮೋಶೆಗೆ ಸರ್ವೇಶ್ವರ, “ಇನ್ನೆಷ್ಟುಕಾಲ ಈ ಜನರು ನನ್ನನ್ನು ಅಲಕ್ಷ್ಯ ಮಾಡುವರು? ನಾನು ಮಾಡಿದ ಮಹತ್ಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಇನ್ನೆಷ್ಟು ಕಾಲ ನಂಬದೆ ಇರುವರು? 12 ಆಗಲಿ, ನಾನು ಇವರಿಗೆ ದೊಡ್ಡ ರೋಗವನ್ನು ಬರಮಾಡಿ ಇವರನ್ನು ನಿರ್ಮೂಲ ಮಾಡಿಬಿಡುತ್ತೇನೆ; ಇವರಿಗಿಂತ ದೊಡ್ಡದೂ ಬಲಿಷ್ಠವೂ ಆದ ಜನಾಂಗವೊಂದನ್ನು ನಿನ್ನಿಂದಲೇ ಹುಟ್ಟಿಸುವೆನು,” ಎಂದು ಹೇಳಿದರು. 13 ಅದಕ್ಕೆ ಮೋಶೆ: “ನೀವು ಹಾಗೆ ಮಾಡುವುದಾದರೆ ಈಜಿಪ್ಟಿನವರು ಈ ಸಮಾಚಾರವನ್ನು ಕೇಳುವರು. ಅವರ ಕೈಯಿಂದ ನೀವು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಸಂಗತಿಯನ್ನು ಈ ಕಾನಾನ್ ನಾಡಿನ ನಿವಾಸಿಗಳಿಗೆ ತಿಳಿಸುವರು. 14 ಅಲ್ಲದೆ ಸರ್ವೇಶ್ವರಾ, ನೀವು ಇಸ್ರಯೇಲರ ನಡುವೆ ಇರುವುದಾಗಿ, ನೀವು ಇಸ್ರಯೇಲರಿಗೆ ಪ್ರತ್ಯಕ್ಷ ಕಾಣಿಸಿಕೊಳ್ಳುವುದಾಗಿ, ಹಗಲಿನಲ್ಲಿ ಮೇಘಸ್ತಂಭದಲ್ಲೂ, ಇರುಳಲ್ಲಿ ಅಗ್ನಿಸ್ತಂಭದಲ್ಲೂ ಇದ್ದು ಇವರ ಮುಂದೆ ನಡೆದು ಹೋಗುವುದಾಗಿ ಹಾಗೂ ನೀವಿರುವ ಮೇಘ ಇಸ್ರಯೇಲರ ಮೇಲೆ ಇರುವುದಾಗಿ ಈ ನಾಡಿನವರು ಕೇಳಿದ್ದಾರೆ. 15 ಹೀಗಿರಲಾಗಿ ನೀವು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿಮಗೆ ವಿರುದ್ಧ ಮಾತಾಡಿಕೊಳ್ಳುವರು: 16 ‘ಸರ್ವೇಶ್ವರ ಪ್ರಮಾಣ ಪೂರ್ವಕವಾಗಿ ವಾಗ್ದಾನ ಮಾಡಿದ ನಾಡಿಗೆ ತನ್ನ ಜನರನ್ನು ಸೇರಿಸಲು ಶಕ್ತಿ ಸಾಲದೆ ಹೋಯಿತು; ಅವರನ್ನು ಮರುಭೂಮಿಯಲ್ಲೇ ಕೊಂದುಹಾಕಿಬಿಟ್ಟ’ ಎಂದುಕೊಳ್ಳುವರು. 17 ಆದ್ದರಿಂದ ಪ್ರಭೂ, ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ; ಹಿಂದೆ ನೀವು ನಿಮ್ಮ ವಿಷಯದಲ್ಲಿ: 18 ‘ಸರ್ವೇಶ್ವರ ದೀರ್ಘಶಾಂತನು, ಪ್ರೀತಿಮಯನು, ಪಾಪ-ಅಪರಾಧಗಳನ್ನು ಕ್ಷಮಿಸುವವನು, ಆದರೂ ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು,’ ಎಂದು ಹೇಳಿದ್ದೀರಿ. ಆ ಮಾತನ್ನು ನೆನಪಿಗೆ ತಂದುಕೊಳ್ಳಿ. 19 ನಾವು ಈಜಿಪ್ಟ್ ದೇಶವನ್ನು ಬಿಟ್ಟು ಬಂದ ದಿನದಿಂದ ಇಂದಿನವರೆಗೆ ಈ ಜನರ ಪಾಪಗಳನ್ನು ಕ್ಷಮಿಸಿದ್ದೀರಿ. ಅದೇ ಪ್ರಕಾರ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು. 20 ಅದಕ್ಕೆ ಸರ್ವೇಶ್ವರ, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಕ್ಷಮಿಸಿದ್ದೇನೆ. 21 ಆದರೂ ನನ್ನ ಜೀವದಾಣೆ ಸರ್ವೇಶ್ವರನ ಮಹಿಮೆ ಅಖಿಲ ವಿಶ್ವವನ್ನು ತುಂಬಿದೆಯೆಂಬ ಸತ್ಯವಾಕ್ಯದ ಆಣೆ. ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ವಾಗ್ದತ್ತ ನಾಡನ್ನು ನೋಡುವುದಿಲ್ಲ. 22 ಈಜಿಪ್ಟ್ ದೇಶದಲ್ಲೂ ಮರುಭೂಮಿಯಲ್ಲೂ ನಾನು ಮಾಡಿದ ಮಹತ್ಕಾರ್ಯಗಳನ್ನು ಹಾಗೂ ನನ್ನ ಅಸ್ತಿತ್ವದ ತೇಜಸ್ಸನ್ನು ಈ ಮಾನವರೆಲ್ಲರೂ ನೋಡಿದ್ದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ. ಬದಲಿಗೆ ನನ್ನನ್ನು ಪದೇ ಪದೇ ಪರೀಕ್ಷಿಸಿದ್ದಾರೆ. 23 ಆದ್ದರಿಂದ ಇವರ ಪೂರ್ವಜರಿಗೆ ಪ್ರಮಾಣಪೂರ್ವಕವಾಗಿ ನಾನು ವಾಗ್ದಾನ ಮಾಡಿದ ಆ ನಾಡನ್ನು ಇವರಾರು ನೋಡುವುದಿಲ್ಲ. 24 ನನ್ನ ದಾಸನಾದ ಕಾಲೇಬನಾದರೋ ಅವರಂಥ ಮನಸ್ಸುಳ್ಳವನಾಗಿರದೆ ಮನಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದಿದ್ದಾನೆ. ಆದ್ದರಿಂದ ಅವನು ಸಂಚರಿಸಿ ಬಂದ ಆ ನಾಡಿಗೆ ಅವನನ್ನು ಸೇರಿಸುವೆನು. ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು. 25 (ಅಮಾಲೇಕ್ಯರು ಹಾಗು ಕಾನಾನ್ಯರು ಅದರ ಕಣಿವೆಯಲ್ಲಿ ವಾಸಮಾಡುತ್ತಿದ್ದಾರೆ) ಈ ಕಾರಣ ನೀವು ನಾಳೆ ಹಿಂದಿರುಗಿ ಕೆಂಪುಸಮುದ್ರಕ್ಕೆ ಹೋಗುವ ದಾರಿ ಹಿಡಿದು ಮರುಭೂಮಿಗೆ ಪ್ರಯಾಣ ಮಾಡಬೇಕು,” ಎಂದು ಹೇಳಿದರು. ಗೊಣಗುಟ್ಟಿದವರಿಗಾದ ದಂಡನೆ 26 ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ: 27 “ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟುಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ. 28 ನೀವು ಅವರಿಗೆ ಹೀಗೆ ಹೇಳಬೇಕು: ‘ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ. 29 ನಿಮ್ಮ ಶವಗಳು ಈ ಮರುಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. 30 ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ನಿವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ನಾಡನ್ನು ಸೇರುವುದಿಲ್ಲ. 31 ಆದರೆ ನಿಮ್ಮ ಮಕ್ಕಳನ್ನು, ಪರರ ಪಾಲಾಗುವರು ಎಂದು ಹೇಳಿದ ನಿಮ್ಮ ಚಿಕ್ಕಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದ ನಾಡನ್ನು ಅವರು ಅನುಭವಿಸುವರು. 32 ನೀವಾದರೋ ಈ ಮರುಭೂಮಿಯಲ್ಲೇ ಬೀಳುವ ತನಕ 33 ನಿಮ್ಮ ಮಕ್ಕಳು ನೀವು ಮಾಡಿದ ದ್ರೋಹದ ಫಲವನ್ನು ಅನುಭವಿಸುವವರಾಗಿ ನಾಲ್ವತ್ತು ವರ್ಷ ಮರುಭೂಮಿಯಲ್ಲೇ ಅಲೆದಾಡುವರು. 34 ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸಿರಿ; ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ. 35 ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟುಕೂಡಿಕೊಂಡಿರುವ ಈ ದುಷ್ಟಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರು ಸಾಯಬೇಕು,” ಎಂದು ಹೇಳಿದರು. 36 ಆ ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆಯಿಂದ ಕಳಿಸಲಾಗಿದ್ದವರು ಹಿಂದಿರುಗಿ ಬಂದು ಆ ನಾಡಿನ ಬಗ್ಗೆ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧ ಗೊಣಗುವಂತೆ ಮಾಡಿದ್ದರು. 37 ಅಂಥ ವ್ಯಕ್ತಿಗಳು ಸರ್ವೇಶ್ವರನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು. 38 ಅವರಲ್ಲಿ ನೂನನ ಮಗ ಯೆಹೋಶುವನು ಮತ್ತು ಯೆಫುನ್ನೆಯ ಮಗ ಕಾಲೇಬನು ಉಳಿದುಕೊಂಡರು. ನಾಡನ್ನು ಆಕ್ರಮಿಸಲು ಪ್ರಥಮ ಪ್ರಯತ್ನ ( ಧರ್ಮೋ. 1:41-46 ) 39 ಮೋಶೆ ಸರ್ವೇಶ್ವರನ ಮಾತುಗಳನ್ನೆಲ್ಲಾ ಇಸ್ರಯೇಲರಿಗೆ ತಿಳಿಸಿದನು. ಅವರು ಬಹಳವಾಗಿ ವ್ಯಸನಪಟ್ಟರು. 40 ಮಾರನೆಯ ದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದೇನೋ ನಿಜ; ಸರ್ವೇಶ್ವರ ವಾಗ್ದಾನ ಮಾಡಿದ ಸ್ಥಳಕ್ಕೆ ಏರಿಹೋಗೋಣ ಬನ್ನಿ,” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋಗಲಾರಂಭಿಸಿದರು. 41 ಆದರೆ ಮೋಶೆ ಅವರಿಗೆ, “ಸರ್ವೇಶ್ವರನ ಆಜ್ಞೆಯನ್ನು ಏಕೆ ಮೀರುತ್ತೀರಿ? ಇದು ಕೈಗೂಡುವುದಿಲ್ಲ. 42 ಸರ್ವೇಶ್ವರ ನಿಮ್ಮ ಸಂಗಡ ಇಲ್ಲ, ಹತ್ತಬೇಡಿ. ನೀವು ಶತ್ರುಗಳ ಮುಂದೆ ನಿಲ್ಲಲಾರಿರಿ, ಬಿದ್ದು ಸತ್ತುಹೋಗುವಿರಿ. 43 ಅಲ್ಲಿ ಅಮಾಲೇಕ್ಯರು ಹಾಗೂ ಕಾನಾನ್ಯರು ನಿಮಗೆ ಎದುರಾಗುವರು; ನೀವು ಅವರ ಕತ್ತಿಗೆ ತುತ್ತಾಗುವಿರಿ. ನೀವು ಸರ್ವೇಶ್ವರನ ಮಾತನ್ನು ಅನುಸರಿಸದೆ ಪ್ರತಿಭಟಿಸಿದ್ದೀರಿ. ಕತ್ತಿಗೆ ತುತ್ತಾಗುವಿರಿ. ಈ ಕಾರಣ ಅವರು ನಿಮ್ಮೊಂದಿಗೆ ಇರುವುದಿಲ್ಲ,” ಎಂದು ಹೇಳಿದನು. 44 ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತೇಹತ್ತಿದರು. ಸರ್ವೇಶ್ವರನ ಒಡಂಬಡಿಕೆಯಾದ ಮಂಜೂಷವಾಗಲಿ, ಮೋಶೆಯಾಗಲಿ ಪಾಳೆಯನ್ನು ಬಿಟ್ಟು ಹೊರಡಲಿಲ್ಲ. 45 ಆ ಮಲೆನಾಡಿನಲ್ಲಿ ವಾಸವಾಗಿದ್ದ ಅಮಾಲೇಕ್ಯರು ಹಾಗೂ ಕಾನಾನ್ಯರು ಇಳಿದುಬಂದು ಅವರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಬಂದು ಸಂಹರಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India