Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 13 - ಕನ್ನಡ ಸತ್ಯವೇದವು C.L. Bible (BSI)


ಕಾನಾನ್ ನಾಡಿಗೆ ಬೇಹುಗಾರರು
( ಧರ್ಮೋ. 1:19-33 )

1 ಸರ್ವೇಶ್ವರ ಸ್ವಾಮಿ ಮೋಶೆಗೆ:

2 “ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು,” ಎಂದು ಆಜ್ಞಾಪಿಸಿದರು.

3 ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಮರುಭೂಮಿಯಿಂದ ಇಸ್ರಯೇಲರ ಮುಖ್ಯಸ್ಥರನ್ನು ಕಳಿಸಿದನು.

4 ಆ ಮುಖ್ಯಸ್ಥರ ಹೆಸರುಗಳು ಇವು - ರೂಬೇನ್ ಕುಲದ ಜಕ್ಕೂರನ ಮಗ ಶಮ್ಮೂವ

5 ಸಿಮೆಯೋನ್ ಕುಲದ ಹೋರಿಯ ಮಗನದ ಶಾಫಾಟ್

6 ಯೆಹೂದ ಕುಲದ ಯೆಫುನ್ನೆಯ ಮಗನಾದ ಕಾಲೇಬ

7 ಇಸ್ಸಾಕಾರ್ ಕುಲದ ಜೋಸೆಫನ ಮಗ ಇಗಾಲ್

8 ಎಫ್ರಾಯೀಮ್ ಕುಲದ ನೂನನ ಮಗ ಹೋಶೇಯ

9 ಬೆನ್ಯಾಮೀನ್ ಕುಲದ ರಾಫೂವನ ಮಗ ಪಲ್ಟೀ

10 ಜೆಬುಲೂನ್ ಕುಲದ ಸೋದಿಯ ಮಗ ಗದ್ದೀಯೇಲ್

11 ಜೋಸೆಫ್ ಅಂದರೆ ಮನಸ್ಸೆ ಕುಲದ ಸೂಸೀಯ ಮಗ ಗದ್ದೀ

12 ದಾನ್ ಕುಲದ ಗೆಮಲ್ಲೀಯನ ಮಗ ಅಮ್ಮೀಯೇಲ್

13 ಅಶೇರ್ ಕುಲದ ಮಿಕಾಯೇಲನ ಮಗ ಸೆತೂರ್

14 ನಫ್ತಾಲಿ ಕುಲದ ವಾಪೆಸೀಯನ ಮಗ ನಹಬೀ

15 ಗಾದ್ ಕುಲದ ಮಾಕಿಯನ ಮಗ ಗೆಯೂವೇಲ್

16 ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆ ಕಳಿಸಿದ್ದ ವ್ಯಕ್ತಿಗಳ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ‘ಯೆಹೋಶುವ’ ಎಂದು ಹೆಸರಿಟ್ಟನು.

17 ಕಾನಾನ್ ನಾಡನ್ನು ಸಂಚರಿಸಿ ನೋಡಿ ಬರುವುದಕ್ಕೆ ಅವರನ್ನು ಕಳಿಸುವಾಗ ಮೋಶೆ ಹೀಗೆಂದು ಸಂಬೋಧಿಸಿದನು: “ನೀವು ನೆಗೆಬಾ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ.

18 ಆ ನಾಡು ಹೇಗಿದೆ, ಅಲ್ಲಿನ ನಿವಾಸಿಗಳು ಬಲಿಷ್ಠರೋ ಬಲಹೀನರೋ, ಅವರ ಸಂಖ್ಯೆ ದೊಡ್ಡದೋ ಚಿಕ್ಕದೋ

19 ಅವರ ವಾಸಸ್ಥಳ ಒಳ್ಳೆಯದೋ ಕೆಟ್ಟದೋ, ಅವು ಪಾಳೆಯಗಳೋ ಕೋಟೆಗಳೋ

20 ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷೆಯ ಪ್ರಥಮ ಫಲಕಾಲವಾಗಿತ್ತು.

21 ಅವರು ಬೆಟ್ಟವನ್ನು ಹತ್ತಿ ಚಿನ್ ಮರುಭೂಮಿಯಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನವರೆಗೆ ಆ ನಾಡನ್ನು ಸಂಚರಿಸಿ ನೋಡಿದರು.

22 ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೆ ಕಟ್ಟಲ್ಪಟ್ಟಿತ್ತು)

23 ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಿ ಹಣ್ಣಿನ ಗೊಂಚಲಿದ್ದ ಒಂದು ಕೊಂಬೆಯನ್ನು ಕೊಯ್ದರು. ಅದನ್ನು ಅಡ್ಡದಂಡಿಗೆಯಲ್ಲಿ ಇಬ್ಬರು ಹೊತ್ತು ತಂದರು. ಕೆಲವು ದಾಳಿಂಬೆ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನು ತಂದರು.

24 ಇಸ್ರಯೇಲರು ಅಲ್ಲಿಯೇ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ‘ಎಷ್ಕೋಲ್’ ಎಂದು ಹೆಸರಾಯಿತು.


ಬೇಹುಗಾರರು ಮಾಡಿದ ವರದಿ

25 ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದಿರುಗಿ ಬಂದರು.

26 ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು.

27 ಮೋಶೆಗೆ, “ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು-ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲುಗಳು ಇಂಥವು.

28 ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು.

29 ದಕ್ಷಿಣ ಪ್ರಾಂತದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು.

30 ಮೋಶೆಗೆ ವಿರುದ್ಧ ಗುಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, “ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ,” ಎಂದನು.

31 ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು.

32 ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. “ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು.

33 ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು