Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 12 - ಕನ್ನಡ ಸತ್ಯವೇದವು C.L. Bible (BSI)


ಮಿರ್ಯಾಮಳಿಗೆ ತೊನ್ನು ಶಿಕ್ಷೆ

1 ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು.

2 “ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?’ ಎಂದು ಹೇಳತೊಡಗಿದರು.

3 ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧುಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು.

4 ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, “ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು,” ಎಂದು ಆಜ್ಞಾಪಿಸಿದರು.

5 ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು.

6 ಅವರು ಸಮೀಪಿಸಿದಾಗ, “ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ.

7 ನನ್ನ ದಾಸನಾದ ಮೋಶೆ ಅಂಥವನಲ್ಲ ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ.

8 ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ, ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ ಸರ್ವೇಶ್ವರನ ಸ್ವರೂಪವನ್ನೆ ಕಂಡವನಾತ! ಇಂತಿರಲು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? ಎಂದು ಹೇಳಿ ಕೋಪದಿಂದ ಹೊರಟುಹೋದರು.

9-10 ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡನು.

11 ಆಗ ಆರೋನನು ಮೋಶೆಗೆ, “ಅಯ್ಯಾ, ನಾವು ಮೂರ್ಖರಾಗಿ ನಡೆದು ಪಾಪಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ,” ಇದು ನನ್ನ ವಿನಂತಿ.

12 ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ,” ಎಂದು ಕೇಳಿಕೊಂಡನು.

13 ಆಗ ಮೋಶೆ ಸರ್ವೇಶ್ವರನಿಗೆ, “ಹೇ ದೇವಾ, ಆಕೆಯನ್ನು ಗುಣಪಡಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಮೊರೆಯಿಟ್ಟನು.

14 ಅದಕ್ಕೆ ಸರ್ವೇಶ್ವರ, “ಅವಳ ತಂದೆ ಅವಳ ಮುಖದ ಮೇಲೆ ಉಗುಳಿದ್ದರೆ ಏಳು ದಿವಸ ಅವಳು ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೆ? ಅಂತೆಯೇ ಅವಳು ಏಳು ದಿವಸ ಪಾಳೆಯದಿಂದ ಹೊರಗಿರಲಿ. ಅನಂತರ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟರು.

15 ಹೀಗೆ ಮಿರ್ಯಾಮಳು ಏಳು ದಿವಸ ಪಾಳೆಯದ ಹೊರಗೆ ಇರಬೇಕಾಯಿತು. ಅವಳನ್ನು ಮರಳಿ ಸೇರಿಸಿಕೊಳ್ಳುವವರೆಗೆ ಇಸ್ರಯೇಲರು ಪ್ರಯಾಣ ಮಾಡಲಿಲ್ಲ.

16 ಅನಂತರ ಅವರು ಹಚೆರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು