ಅಪೊಸ್ತಲರ ಕೃತ್ಯಗಳು 9 - ಕನ್ನಡ ಸತ್ಯವೇದವು C.L. Bible (BSI)ಪೌಲನಾಗಿ ಮಾರ್ಪಟ್ಟ ಸೌಲ ( ಪ್ರೇ. ಕಾ. 22:6-16 ; 26:12-18 ) 1 ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು. 2 ಈ ಹೊಸ ಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು. 3 ಅವನು ಅಲ್ಲಿಂದ ಪ್ರಯಾಣಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸಿತು. 4 ಅವನು ನೆಲಕ್ಕುರುಳಿದನು. “ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿ ಅವನಿಗೆ ಕೇಳಿಸಿತು. 5 ಆಗ ಅವನು, “ಪ್ರಭೂ, ನೀವಾರು?” ಎಂದನು. “ನೀನು ಹಿಂಸೆಪಡಿಸುತ್ತ ಇರುವ ಯೇಸುವೇ ನಾನು. 6 ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ನಿನಗೆ ಅಲ್ಲಿ ತಿಳಿಸಲಾಗುವುದು,” ಎಂದು ಆ ವಾಣಿ ಹೇಳಿತು. 7 ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ ವಾಣಿ ಕೇಳಿಸಿತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ಧರಾದರು. 8 ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನೂ ಕಾಣಿಸಲಿಲ್ಲ. ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. 9 ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ. 10 ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು, “ಅನನೀಯಾ” ಎಂದು ಕರೆಯಲು ಅವನು, “ಸ್ವಾಮೀ, ಅಪ್ಪಣೆಯಾಗಲಿ,” ಎಂದನು. 11 ಪ್ರಭು ಅವನಿಗೆ, “ನೀನೆದ್ದು ‘ನೇರಬೀದಿ’ ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ. 12 ಅಲ್ಲದೆ ಅನನೀಯ ಎಂಬವನು ತನ್ನ ಬಳಿಗೆ ಬಂದು ತಾನು ಮರಳಿ ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ,” ಎಂದರು. 13 ಅನನೀಯ ಪ್ರತ್ಯುತ್ತರವಾಗಿ, “ಪ್ರಭೂ, ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡುಮಾಡಿದ್ದಾನೆಂಬುದನ್ನು ಅನೇಕರ ಬಾಯಿಂದ ಕೇಳಿದ್ದೇನೆ. 14 ಅಷ್ಟುಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ,” ಎಂದನು. 15 ಪ್ರಭು ಅವನಿಗೆ, “ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ ಅವನು. 16 ಅವನು ನನ್ನ ನಾಮದ ನಿಮಿತ್ತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ,” ಎಂದರು. 17 ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪಮಾಡಿ, “ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊಂಡ ಯೇಸುಸ್ವಾಮಿಯೇ, ನೀನು ದೃಷ್ಟಿಯನ್ನು ಮರಳಿ ಪಡೆಯುವಂತೆಯೂ ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದನು. 18 ಆ ಕ್ಷಣವೇ ಸೌಲನ ಕಣ್ಣುಗಳಿಂದ ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣು ಕಾಣತೊಡಗಿತು. ಎದ್ದು ದೀಕ್ಷಾಸ್ನಾನವನ್ನು ಪಡೆದನು. 19 ತರುವಾಯ ಊಟಮಾಡಿದ ಮೇಲೆ ಅವನಿಗೆ ತ್ರಾಣ ಬಂದಿತು. ಸೌಲನು ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು. ದಮಸ್ಕಸಿನಲ್ಲಿ ಸೌಲನ ವಾದ 20 ಅನಂತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ‘ದೇವರ ಪುತ್ರ’ ಎಂದು ಬೋಧಿಸಲು ಆರಂಭಿಸಿದನು. 21 ಅವನ ಬೋಧನೆಯನ್ನು ಕೇಳಿದವರೆಲ್ಲರೂ ಚಕಿತರಾದರು. “ಜೆರುಸಲೇಮಿನಲ್ಲಿ ಯೇಸುವಿನ ನಾಮಸ್ಮರಣೆ ಮಾಡುತ್ತಿದ್ದವರನ್ನು ಬಲಿಹಾಕುತ್ತಿದ್ದವನು ಇವನೇ ಅಲ್ಲವೇ? ಅಂಥವರನ್ನು ಬಂಧಿಸಿ ಮುಖ್ಯಯಾಜಕರ ಬಳಿಗೆ ಎಳೆದೊಯ್ಯುವ ಉದ್ದೇಶದಿಂದಲೇ ಅಲ್ಲವೆ ಇವನು ಇಲ್ಲಿಗೆ ಬಂದಿರುವುದು?” ಎಂದು ಪ್ರಶ್ನಿಸತೊಡಗಿದರು. 22 ಸೌಲನಾದರೋ ಮತ್ತಷ್ಟು ಸಾಮರ್ಥ್ಯದಿಂದ ಪ್ರಭು ಯೇಸುವೇ ಲೋಕೋದ್ಧಾರಕನೆಂದು ರುಜುವಾತುಪಡಿಸಿ ದಮಸ್ಕಸಿನ ಯೆಹೂದ್ಯರ ಬಾಯಿಮುಚ್ಚಿಸಿದನು. 23 ಕೆಲವು ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಒಳಸಂಚು ಮಾಡಿದರು. 24 ಅದು ಸೌಲನಿಗೆ ತಿಳಿದುಬಂದಿತು. ಅವರು ಅವನನ್ನು ಕೊಲ್ಲಲು ಹಗಲಿರುಳು ಪಟ್ಟಣದ ದ್ವಾರಗಳನ್ನು ಕಾಯುತ್ತಿದ್ದರು. 25 ಒಂದು ರಾತ್ರಿ ಸೌಲನ ಶಿಷ್ಯರು ಅವನನ್ನು ಕರೆದುಕೊಂಡು ಹೋಗಿ ಗೂಡೆಯೊಂದರಲ್ಲಿ ಕೂರಿಸಿ ಗೋಡೆಯ ಮೇಲಿಂದ ಕೆಳಕ್ಕೆ ಇಳಿಸಿದರು. ಜೆರುಸಲೇಮಿನಲ್ಲಿ ಸೌಲ 26 ಸೌಲನು ಜೆರುಸಲೇಮಿಗೆ ಬಂದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆಂದು ನಂಬದೆ ಅವನಿಗೆ ಭಯಪಟ್ಟರು. 27 ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊಂಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದ್ದನ್ನೂ ಅವರು ಅವನೊಂದಿಗೆ ಮಾತನಾಡಿದ್ದನ್ನೂ ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿಂದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು. 28 ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು. 29 ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸಂಭಾಷಿಸುತ್ತಾ ಅವರ ವಿರುದ್ಧ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವಣಿಸಿದರು. 30 ಇದನ್ನು ಅರಿತುಕೊಂಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತಂದು ಅಲ್ಲಿಂದ ತಾರ್ಸಕ್ಕೆ ಕಳುಹಿಸಿಬಿಟ್ಟರು. 31 ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು. ಲುದ್ದ ಮತ್ತು ಜೊಪ್ಪದಲ್ಲಿ ಪೇತ್ರ 32 ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. 33 ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು. 34 ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು. ಆ ಕ್ಷಣವೇ ಅವನು ಎದ್ದನು. 35 ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. 36 ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. 37 ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು. 38 ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. 39 ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. 40 ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. 41 ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು. 42 ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು. 43 ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ಕಳೆದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India