ಅಪೊಸ್ತಲರ ಕೃತ್ಯಗಳು 7 - ಕನ್ನಡ ಸತ್ಯವೇದವು C.L. Bible (BSI)ಸ್ತೇಫನನ ವ್ಯಾಖ್ಯಾನ 1 ಪ್ರಧಾನಯಾಜಕನು, “ಇವರು ನಿನ್ನ ವಿರುದ್ಧ ಹೇಳುತ್ತಿರುವುದು ಸತ್ಯವೋ?” ಎಂದು ಸ್ತೇಫನನನ್ನು ಕೇಳಿದನು. 2 ಪ್ರತ್ಯುತ್ತರವಾಗಿ ಅವನು ಹೀಗೆಂದನು: “ಭ್ರಾತೃಗಳೇ, ಪಿತೃಗಳೇ, ಕಿವಿಗೊಡಿ. ನಮ್ಮ ಪಿತಾಮಹ ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪಟೋಮಿಯದಲ್ಲಿ ಇದ್ದನು. ಆಗ ಮಹಿಮಾ ಸ್ವರೂಪರಾದ ದೇವರು ಅವನಿಗೆ ದರ್ಶನವಿತ್ತರು. 3 ‘ನೀನು ನಿನ್ನ ಬಂಧುಬಳಗವನ್ನೂ ತಾಯ್ನಾಡನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೋಗು,’ ಎಂದರು. 4 ಅಂತೆಯೇ ಅವನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ವಾಸಮಾಡಿದನು; ಅವನ ತಂದೆಯ ಮರಣಾನಂತರ ದೇವರು ಅವನನ್ನು ನೀವು ವಾಸಮಾಡುತ್ತಿರುವ ಈ ನಾಡಿಗೆ ಕರೆತಂದರು. 5 ಆಗ ಇಲ್ಲಿ ಕಾಲಿಡುವಷ್ಟು ನೆಲವನ್ನು ಕೂಡ ದೇವರು ಅವನಿಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ. ಸ್ವಂತ ಸೊತ್ತಾಗಿ ಅವನಿಗೂ ಅವನ ಬಳಿಕ ಅವನ ಸಂತತಿಗೂ ಕೊಡುವುದಾಗಿ ವಾಗ್ದಾನಮಾಡಿದರಷ್ಟೆ. ಆಗ ಅಬ್ರಹಾಮನಿಗೆ ಮಕ್ಕಳೇ ಇರಲಿಲ್ಲ. 6 ಇದಲ್ಲದೆ ದೇವರು ಅಬ್ರಹಾಮನಿಗೆ, ‘ನಿನ್ನ ಸಂತತಿಯವರು ಅನ್ಯದೇಶದಲ್ಲಿ ಗುಲಾಮರಾಗುವರು; ನಾನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಒಳಗಾಗುವರು. 7 ಅವರಿಂದ ಗುಲಾಮಗಿರಿಯನ್ನು ಪಡೆಯುವ ಜನಾಂಗಕ್ಕೆ ನಾನು ದಂಡನೆ ವಿಧಿಸುವೆನು. ಅನಂತರ ಅವರು ಅಲ್ಲಿಂದ ಹೊರಬಂದು ನನ್ನನ್ನು ಈ ಸ್ಥಳದಲ್ಲೇ ಆರಾಧಿಸುವರು,’ ಎಂದರು. 8 ಆಮೇಲೆ ದೇವರು ಅಬ್ರಹಾಮನೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಆ ಒಡಂಬಡಿಕೆಯ ಚಿಹ್ನೆಯನ್ನಾಗಿ ಸುನ್ನತಿಯನ್ನು ವಿಧಿಸಿದರು.ಅದರಂತೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಹುಟ್ಟಿದ ಎಂಟನೆಯ ದಿನ ಸುನ್ನತಿಯನ್ನು ಮಾಡಿದನು. ಇಸಾಕನು ತನ್ನ ಮಗ ಯಕೋಬನಿಗೂ, ಯಕೋಬನು ತನ್ನ ಹನ್ನೆರಡು ಮಕ್ಕಳಾದ ನಮ್ಮ ಪಿತಾಮಹರಿಗೂ ಹಾಗೆಯೇ ಮಾಡಿದನು. 9 “ಈ ಪಿತಾಮಹರು ಜೋಸೆಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗೆ ಇದ್ದು, 10 ಎಲ್ಲಾ ಆಪತ್ತು ವಿಪತ್ತುಗಳಿಂದ ಅವನನ್ನು ಪಾರುಮಾಡಿದರು. ಅವನು ಈಜಿಪ್ಟಿನ ಅರಸ ಫರೋಹನ ಆಸ್ಥಾನಕ್ಕೆ ಬಂದಾಗ ದೇವರು ಅವನಿಗೆ ಜ್ಞಾನಸಂಪನ್ನತೆಯನ್ನಿತ್ತು ಅರಸನ ಮೆಚ್ಚುಗೆಗೆ ಪಾತ್ರನಾಗುವಂತೆ ಅನುಗ್ರಹಿಸಿದರು. ಫರೋಹನು ಅವನನ್ನು ರಾಜ್ಯಪಾಲನನ್ನಾಗಿಯೂ ಅರಮನೆಯ ಮೇಲ್ವಿಚಾರಕನನ್ನಾಗಿಯೂ ನೇಮಿಸಿದನು. 11 ಈಜಿಪ್ಟ್ ಹಾಗೂ ಕಾನಾನ್ ದೇಶಗಳಲ್ಲಿ ಕ್ಷಾಮ ತಲೆದೋರಿದಾಗ ಜನರು ಕಷ್ಟಸಂಕಟಗಳಿಗೆ ಒಳಗಾದರು. ನಮ್ಮ ಪೂರ್ವಜರು ಆಹಾರವಿಲ್ಲದೆ ಅವಸ್ಥೆಪಟ್ಟರು. 12 ಈಜಿಪ್ಟ್ ದೇಶದಲ್ಲಿ ಧಾನ್ಯ ಇರುವುದೆಂದು ಅರಿತು ಯಕೋಬನು, ಮೊದಲ ಬಾರಿಗೆ ತನ್ನ ಪುತ್ರರನ್ನು ಅಲ್ಲಿಗೆ ಕಳುಹಿಸಿದನು. 13 ಎರಡನೆಯ ಬಾರಿ ಅವರು ಬಂದಾಗ ಜೋಸೆಫನು ತನ್ನ ಗುರುತನ್ನು ಸಹೋದರರಿಗೆ ತಿಳಿಸಿದನು. ಆಗ ಫರೋಹನಿಗೆ ಜೋಸೆಫನ ವಂಶದ ಪರಿಚಯವಾಯಿತು. 14 ಅನಂತರ ತನ್ನ ತಂದೆ ಯಕೋಬನೂ ಅವನ ಬಂಧುಬಳಗದವರೂ ಈಜಿಪ್ಟಿಗೆ ಬರುವಂತೆ ಜೋಸೆಫನು ಹೇಳಿಕಳುಹಿಸಿದನು. 15 ಇವರ ಒಟ್ಟು ಸಂಖ್ಯೆ ಎಪ್ಪತ್ತೈದು. ಯಕೋಬನು ಈಜಿಪ್ಟಿಗೆ ಹೋದನು. ಅವನೂ ನಮ್ಮ ಪಿತಾಮಹರೂ ಅಲ್ಲೇ ನಿಧನರಾದರು. 16 ಅವರ ಅವಶೇಷಗಳನ್ನು ಮರಳಿ ಶೇಕೆಮಿಗೆ ಕೊಂಡೊಯ್ಯಲಾಯಿತು. ಅಲ್ಲಿ ಹಾಮೋರ್ ಎಂಬವನ ಮಕ್ಕಳಿಂದ ಅಬ್ರಹಾಮನು ಕ್ರಯಕ್ಕೆ ಕೊಂಡುಕೊಂಡಿದ್ದ ಸಮಾಧಿಯಲ್ಲಿ ಹೂಳಿದರು. 17 “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವ ಕಾಲವು ಸಮೀಪಿಸಿತು. ಈಗಾಗಲೇ ಈಜಿಪ್ಟ್ ದೇಶದಲ್ಲಿ ನಮ್ಮ ಜನರ ಸಂಖ್ಯೆ ಅಧಿಕವಾಗಿ ಬೆಳೆದಿತ್ತು. 18 ಕಡೆಗೆ ಜೋಸೆಫನನ್ನೇ ಅರಿಯದ ಬೇರೊಬ್ಬ ಅರಸ ರಾಜ್ಯವಾಳಲಾರಂಭಿಸಿದನು. 19 ಅವನು ನಮ್ಮ ಜನರೊಡನೆ ಕುಯುಕ್ತಿಯಿಂದ ನಡೆದುಕೊಂಡನು. ಅವರ ಹಸುಳೆಗಳನ್ನು ನಿರ್ನಾಮಮಾಡಲು ಅವುಗಳನ್ನು ಹೊರಗೆ ಹಾಕಬೇಕೆಂದು ಬಲಾತ್ಕಾರಮಾಡಿದನು. 20 ಸುರಸುಂದರನಾದ ಮೋಶೆ ಜನಿಸಿದ್ದು ಈ ಸಂದರ್ಭದಲ್ಲೇ. ಅವನು ಮೂರು ತಿಂಗಳವರೆಗೆ ಮನೆಯಲ್ಲೇ ಬೆಳೆದನು. 21 ಅನಂತರ ಅವನನ್ನು ಮನೆಯಿಂದ ದೂರವಿಟ್ಟಿದ್ದಾಗ, ಫರೋಹನ ಮಗಳು ಅವನನ್ನು ತನ್ನ ಪಾಲನೆಗೆ ತೆಗೆದುಕೊಂಡು ಸ್ವಂತ ಮಗನಂತೆ ಸಾಕಿದಳು. 22 ಅವನು ಈಜಿಪ್ಟರ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ನಡೆಯಲ್ಲೂ ನುಡಿಯಲ್ಲೂ ಸಮರ್ಥನಾದನು. 23 “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು. 24 ಆಗ ಅವರಲ್ಲಿ ಒಬ್ಬನು ಈಜಿಪ್ಟಿನವನಿಂದ ಅನ್ಯಾಯವಾಗಿ ಹಿಂಸೆಪಡುತ್ತಿರುವುದನ್ನು ಕಂಡನು. ಅವನ ಸಹಾಯಕ್ಕೆ ಹೋಗಿ ಈಜಿಪ್ಟಿನವನನ್ನು ಕೊಂದು ಸೇಡುತೀರಿಸಿದನು. 25 ಸ್ವಜನರ ಬಿಡುಗಡೆಗೆ ದೇವರು ತನ್ನನ್ನು ನೇಮಿಸಿರುವರು; ತನ್ನ ಸ್ವಂತಜನರು ಇದನ್ನು ಅರ್ಥಮಾಡಿಕೊಳ್ಳುವರು ಎಂದು ಮೋಶೆ ಭಾವಿಸಿದ್ದನು. ಆದರೆ, ಅವರು ಅರ್ಥಮಾಡಿಕೊಳ್ಳಲಿಲ್ಲ. 26 ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನ ಪಡಿಸಲು ಯತ್ನಿಸಿದನು. 27 ಆಗ ಆಕ್ರಮಣ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ನ್ಯಾಯತೀರಿಸಲು ನಿನಗೆ ಅಧಿಕಾರವನ್ನು ಕೊಟ್ಟವರು ಯಾರು? 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಪ್ರಶ್ನಿಸಿದನು. 29 ಇದನ್ನು ಕೇಳಿದ್ದೇ ಮೋಶೆ ಅಲ್ಲಿಂದ ಪಲಾಯನಮಾಡಿ ಮಿದ್ಯಾನರ ನಾಡಿನಲ್ಲಿ ಆಶ್ರಯ ಪಡೆದನು. ಅಲ್ಲಿರುವಾಗ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. 30 “ನಾಲ್ವತ್ತು ವರ್ಷಗಳಾದ ಮೇಲೆ ಒಂದು ದಿನ ಸೀನಾಯಿ ಬೆಟ್ಟದ ಮರಳುಗಾಡಿನಲ್ಲಿ ಉರಿಯುತ್ತಿದ್ದ ಪೊದೆಯೊಂದನ್ನು ಮೋಶೆ ಕಂಡನು. ಅದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು. 31 ಇದನ್ನು ಕಂಡ ಮೋಶೆ ವಿಸ್ಮಿತನಾದನು. ಅದನ್ನು ಚೆನ್ನಾಗಿ ನೋಡಲೆಂದು ಹತ್ತಿರಕ್ಕೆ ಬಂದಾಗ, 32 ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು. 33 ಸರ್ವೇಶ್ವರ ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ದೂರವಿಡು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು. 34 ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು. 35 “ ‘ನಮ್ಮ ನ್ಯಾಯತೀರಿಸುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?’ ಎಂದು ಇಸ್ರಯೇಲರಿಂದ ತಿರಸ್ಕೃತನಾದವನೇ ಆ ಮೋಶೆ. ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡ ತಮ್ಮ ದೂತನ ಮೂಲಕ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ನೇಮಿಸಿದ್ದು ಇವನನ್ನೇ. 36 ಈಜಿಪ್ಟಿನಲ್ಲೂ ಕೆಂಪುಸಮುದ್ರದಲ್ಲೂ ನಲವತ್ತು ವರ್ಷಕಾಲ ಮರಳು ಬೆಂಗಾಡಿನಲ್ಲೂ ಅದ್ಭುತಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಿ ಇಸ್ರಯೇಲರನ್ನು ಬಿಡುಗಡೆಮಾಡಿದವನು ಇವನೇ. 37 ‘ದೇವರು ನನ್ನನ್ನು ಕಳುಹಿಸಿದಂತೆ, ನಿಮ್ಮ ಜನಾಂಗದಿಂದಲೇ ಒಬ್ಬ ಪ್ರವಾದಿಯನ್ನು ಕಳುಹಿಸುವರು’ ಎಂದು ಇಸ್ರಯೇಲರಿಗೆ ತಿಳಿಸಿದವನು ಈ ಮೋಶೆಯೇ. 38 ಇಸ್ರಯೇಲರು ಮರಳುಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ. 39 “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು. 40 ಅವರು ಆರೋನನಿಗೆ, ‘ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು. ನಮಗೆ ಮುಂದಾಳಾಗಿ ಹೋಗಲು ಕೆಲವು ದೇವರುಗಳ ವಿಗ್ರಹಗಳನ್ನು ಮಾಡಿಕೊಡು,’ ಎಂದರು. 41 ಮಾತ್ರವಲ್ಲ, ಹೋರಿಕರುವಿನ ಆಕಾರದ ವಿಗ್ರಹವೊಂದನ್ನು ಮಾಡಿ ಅದಕ್ಕೆ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಿಗಾಗಿ ಮೆರೆದಾಡಿದರು. 42 ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ. 43 ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ. 44 “ದೇವಪ್ರಸನ್ನತೆಯ ಗುಡಾರವು ನಮ್ಮ ಪೂರ್ವಜರ ಬಳಿ ಮರಳುಗಾಡಿನಲ್ಲಿತ್ತು. ಮೋಶೆಯೊಡನೆ ಮಾತನಾಡಿದ ದೇವರು ಅವನಿಗಿತ್ತ ಆಜ್ಞೆಯಂತೆ ಹಾಗೂ ತೋರಿಸಿದ ಆಕಾರದಂತೆ ಅದನ್ನು ನಿರ್ಮಿಸಲಾಗಿತ್ತು. 45 ಅನಂತರ ಬಂದ ನಮ್ಮ ಪಿತೃಗಳು ಅದನ್ನು ಸ್ವಾಸ್ತ್ಯವಾಗಿ ಪಡೆದರು. ದೇವರು ಅನ್ಯಜನಾಂಗಗಳನ್ನು ಓಡಿಸಿ ಸ್ವಾಧೀನಮಾಡಿಕೊಟ್ಟ ನಾಡಿಗೆ, ಅವರು ಯೆಹೋಶುವನ ಮುಖಂಡತ್ವದಲ್ಲಿ ಹೋದಾಗ, ಆ ಗುಡಾರವನ್ನೂ ತೆಗೆದುಕೊಂಡು ಹೋದರು. ದಾವೀದನ ಕಾಲದವರೆಗೂ ಅದು ಅಲ್ಲೇ ಇತ್ತು. 46 ದೈವಾನುಗ್ರಹಕ್ಕೆ ಪಾತ್ರನಾದ ದಾವೀದನು ಯಕೋಬನ ದೇವರಿಗೆ ಆಲಯವೊಂದನ್ನು ಕಟ್ಟಲು ಅಪ್ಪಣೆಯಾಗಬೇಕೆಂದು ಬೇಡಿಕೊಂಡನು. 47 ಸಾಕ್ಷಾತ್ ಆ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. 48 ಆದರೆ ಪರಾತ್ಪರ ದೇವರು ಮಾನವ ನಿರ್ಮಿತ ಆಲಯಗಳಲ್ಲಿ ಮನೆಮಾಡುವುದಿಲ್ಲ. 49 ಸ್ವರ್ಗವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದಪೀಠ. ಇಂತಿರಲು, ನನ್ನಂಥವನಿಗೆ ಎಂಥ ಆಲಯವನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವಾದರೂ ಯಾವುದು? 50 ಇವೆಲ್ಲವನ್ನೂ ನಿರ್ಮಿಸಿದವನು ನಾನೇ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಸರ್ವೇಶ್ವರ, ಪ್ರವಾದಿಯ ಪ್ರವಚನವೊಂದರಲ್ಲಿ.” 51 ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು’ ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ. 52 ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ. 53 ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು. ಹುತಾತ್ಮನಾದ ಸ್ತೇಫನ 54 ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. 55 ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, 56 “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು. 57 ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. 58 ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. 59 ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು. 60 ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India