ಅಪೊಸ್ತಲರ ಕೃತ್ಯಗಳು 28 - ಕನ್ನಡ ಸತ್ಯವೇದವು C.L. Bible (BSI)ಮಾಲ್ಟ ದ್ವೀಪದಲ್ಲಿ ಪೌಲನ ಅನುಭವ 1 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ತಿಳಿದು ಬಂದಿತು. 2 ಅಲ್ಲಿಯ ನಿವಾಸಿಗಳು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆ ಹೊಯ್ದು ಚಳಿಯಾಗುತ್ತಿದ್ದುದರಿಂದ ಅವರು ಬೆಂಕಿಮಾಡಿ ನಮ್ಮೆಲ್ಲರನ್ನು ಬರಮಾಡಿಕೊಂಡರು. 3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ತಂದು ಬೆಂಕಿಯ ಮೇಲೆ ಹಾಕುತ್ತಿದ್ದಾಗ ಬೆಂಕಿಯ ಶಾಖಕ್ಕೆ ವಿಷಸರ್ಪವೊಂದು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು. 4 ದ್ವೀಪದ ನಿವಾಸಿಗಳು ಪೌಲನ ಕೈಯಿಂದ ನೇತಾಡುತ್ತಿರುವ ಹಾವನ್ನು ಕಂಡು, “ಇವನೊಬ್ಬ ಕೊಲೆಗಡುಕನೇ ಸರಿ; ಇವನು ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ವಿಧಿ ಇವನನ್ನು ಉಳಿಸಲಿಲ್ಲ,” ಎಂದು ತಮ್ಮಲ್ಲೇ ಮಾತನಾಡಿಕೊಂಡರು. 5 ಆದರೆ ಪೌಲನು ಹಾವನ್ನು ಬೆಂಕಿಗೆ ಒದರಿಬಿಟ್ಟನು. ಅವನಿಗೆ ಯಾವ ಅಪಾಯವೂ ಆಗಲಿಲ್ಲ. 6 ಆ ಜನರು, “ಈಗ ಅವನ ಮೈ ಊದಿಕೊಳ್ಳುತ್ತದೆ; ಈಗಲೇ ಅವನು ಫಕ್ಕನೆ ಸತ್ತುಬೀಳುತ್ತಾನೆ,” ಎಂದು ಕಾದಿದ್ದರು. ಎಷ್ಟುಹೊತ್ತು ಕಾದರೂ ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿದರು. “ಇವನೊಬ್ಬ ದೇವರು,” ಎಂದುಕೊಂಡರು. 7 ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಪಕ್ಕದಲ್ಲೇ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು. 8 ಪೊಪ್ಲಿಯನ ತಂದೆ ಜ್ವರದಿಂದಲೂ ರಕ್ತಬೇಧಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ, ಪ್ರಾರ್ಥನೆ ಮಾಡಿ, ತನ್ನ ಕರಗಳನ್ನು ಅವನ ಮೇಲಿಟ್ಟು, ಅವನನ್ನು ಗುಣಪಡಿಸಿದನು. 9 ಇದಾದ ನಂತರ ದ್ವೀಪದಲ್ಲಿದ್ದ ಮಿಕ್ಕರೋಗಿಗಳೂ ಬಂದು ಪೌಲನಿಂದ ಆರೋಗ್ಯವನ್ನು ಪಡೆದರು. 10 ಅವರೆಲ್ಲರು ನಮ್ಮನ್ನು ಹಲವಾರು ವಿಧದಲ್ಲಿ ಬಹುಮಾನಿಸಿದರು; ಮಾತ್ರವಲ್ಲ, ನಾವು ಅಲ್ಲಿಂದ ನೌಕಾಯಾನವನ್ನು ಮುಂದುವರಿಸಿದಾಗ, ನಮಗೆ ಅವಶ್ಯವಾದುದೆಲ್ಲವನ್ನು ತಂದು ಹಡಗಿನಲ್ಲಿಟ್ಟರು. ಮಾಲ್ಟದಿಂದ ರೋಮಿಗೆ ಪ್ರಯಾಣ 11 ಈಗಾಗಲೇ ಮೂರು ತಿಂಗಳು ಕಳೆದಿದ್ದವು. ಅಲೆಕ್ಸಾಂಡ್ರಿಯಕ್ಕೆ ಸೇರಿದ ‘ಅಶ್ವಿನಿ’ ಎಂಬ ಹಡಗೊಂದು ಚಳಿಗಾಲದ ನಿಮಿತ್ತ ಅಲ್ಲಿ ಲಂಗರುಹಾಕಿತ್ತು. ನಾವು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದೆವು. 12 ಸಿರಾಕೂಸ್ ಎಂಬ ಪಟ್ಟಣವನ್ನು ಸೇರಿ ಅಲ್ಲಿ ಮೂರು ದಿನ ತಂಗಿದೆವು. 13 ಅಲ್ಲಿಂದ ಮುಂದುವರಿದು ರೇಗಿಯ ಪಟ್ಟಣಕ್ಕೆ ಬಂದೆವು. ಮಾರನೆಯ ದಿನ ತೆಂಕಣಗಾಳಿ ಬೀಸತೊಡಗಿತು. ಎರಡೇ ದಿನಗಳಲ್ಲಿ ನಾವು ಪುತೋಲಿ ರೇವನ್ನು ಮುಟ್ಟಿದೆವು. 14 ಅಲ್ಲಿ ಕೆಲವು ಕ್ರೈಸ್ತಭಕ್ತಾದಿಗಳನ್ನು ಕಂಡೆವು. ತಮ್ಮೊಡನೆ ಒಂದು ವಾರ ತಂಗಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ತರುವಾಯ ನಾವು ರೋಮಿಗೆ ಬಂದೆವು. 15 ಅಲ್ಲಿದ್ದ ಕ್ರೈಸ್ತಭಕ್ತಾದಿಗಳು ನಾವು ಬಂದ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ‘ಅಪ್ಪಿಯಾ’ ಮಾರುಕಟ್ಟೆಗೂ ತ್ರಿಛತ್ರದ ಬಳಿಗೂ ಬಂದರು. ಅವರನ್ನು ಕಂಡದ್ದೇ ಪೌಲನಿಗೆ ಪ್ರೋತ್ಸಾಹ ಉಂಟಾಯಿತು. ಅವನು ದೇವರಿಗೆ ಸ್ತೋತ್ರ ಸಲ್ಲಿಸಿದನು. ರೋಮಿನಲ್ಲಿ ಪೌಲ 16 ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು. 17 ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು. 18 ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು. 19 ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ. 20 ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು. 21 ಅದಕ್ಕೆ ಅವರು, “ನಿನ್ನ ವಿಷಯವಾಗಿ ಜುದೇಯದಿಂದ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರು ಯಾರೂ ಏನನ್ನೂ ವರದಿಮಾಡಿಲ್ಲ. ಯಾವ ದೋಷಾರೋಪಣೆಯನ್ನೂ ತಂದಿಲ್ಲ. 22 ಆದರೆ ನೀನು ಅನುಸರಿಸುವ ಪಂಥದ ವಿರುದ್ಧ ಎಲ್ಲೆಲ್ಲೂ ಜನರು ಮಾತನಾಡುತ್ತಿದ್ದಾರೆಂದು ಬಲ್ಲೆವು. ಆದುದರಿಂದ ನಿನ್ನ ಅಭಿಪ್ರಾಯವನ್ನು ನಿನ್ನ ಬಾಯಿಂದಲೇ ಕೇಳಬಯಸುತ್ತೇವೆ,” ಎಂದರು. 23 ಅದಕ್ಕಾಗಿ ಒಂದು ದಿನವನ್ನು ಗೊತ್ತುಮಾಡಿದರು. ಅಂದು ಅವರೆಲ್ಲರು ಪೌಲನು ವಾಸಮಾಡುತ್ತಿದ್ದ ಬಿಡಾರಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದರು. ಪೌಲನು ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ಸಾಮ್ರಾಜ್ಯವನ್ನು ಕುರಿತ ಶುಭಸಂದೇಶವನ್ನು ವಿವರಿಸಿದನು; ಮೋಶೆಯ ಧರ್ಮಶಾಸ್ತ್ರದ ಹಾಗೂ ಪ್ರವಾದಿಗಳ ಗ್ರಂಥಗಳ ಆಧಾರದ ಮೇಲೆ ಯೇಸುಸ್ವಾಮಿಯ ವಿಷಯವಾಗಿ ಅವರನ್ನು ಮನವೊಲಿಸಲು ಪ್ರಯತ್ನಿಸಿದನು. 24 ಅವನು ಹೇಳಿದ್ದು ಕೆಲವರಿಗೆ ಮನದಟ್ಟಾಯಿತು; ಮತ್ತೆ ಕೆಲವರು ನಂಬದೆಹೋದರು. 25 ಹೀಗೆ ಅವರು ತಮ್ಮತಮ್ಮೊಳಗೆ ಭಿನ್ನಾಭಿಪ್ರಾಯವುಳ್ಳವರಾಗಿ ಅಲ್ಲಿಂದ ಹೊರಟುಹೋಗಲಾರಂಭಿಸಿದರು. ಆಗ ಪೌಲನು ಹೀಗೆಂದನು : “ಪವಿತ್ರಾತ್ಮ ಅವರು ಯೆಶಾಯ ಪ್ರವಾದಿಯ ಮುಖಾಂತರ ನಿಮ್ಮ ಪೂರ್ವಜರಿಗೆ ಎಷ್ಟೊಂದು ವಿಹಿತವಾಗಿ ಹೇಳಿದ್ದಾರೆ: 26 ‘ನೀನು ಆ ಜನರ ಬಳಿಗೆ ಹೋಗಿ ಅವರಿಗೆ ಇಂತೆನ್ನು: ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರೀ ಜನರು 27 ಇವರ ಹೃದಯ ಕಲ್ಲಾಗಿದೆ, ಕಿವಿ ಮಂದವಾಗಿದೆ, ಕಣ್ಣು ಮಬ್ಬಾಗಿದೆ. ಇಲ್ಲದಿರೆ ಇವರ ಕಣ್ಣು ಕಾಣುತ್ತಾ, ಕಿವಿ ಕೇಳುತ್ತಾ, ಹೃದಯ ಗ್ರಹಿಸುತ್ತಾ, ನನ್ನತ್ತ ತಿರುಗುತ್ತಿದ್ದರು. ದೇವರಾದ ನಾನಿವರನ್ನು ಸ್ವಸ್ಥಪಡಿಸುತ್ತಿದ್ದೆ.’ 28 ಎಂದೇ ದೇವರಿಂದ ಬಂದಿರುವ ಜೀವ ಉದ್ಧಾರಕ ಸಂದೇಶವನ್ನು ಯೆಹೂದ್ಯೇತರರಿಗೆ ಕಳುಹಿಸಲಾಗಿದೆ. ಅವರು ಅದಕ್ಕೆ ಕಿವಿಗೊಡುವರು. ಇದು ನಿಮಗೆ ತಿಳಿದಿರಲಿ.” 29 ಈ ಮಾತುಗಳನ್ನು ಕೇಳಿ ಆದಮೇಲೆ ಯೆಹೂದ್ಯರು ತಮ್ಮತಮ್ಮೊಳಗೆ ತೀವ್ರವಾಗಿ ಚರ್ಚಿಸುತ್ತಾ ಹೊರಟುಹೋದರು. 30 ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು. 31 ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India