Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 27 - ಕನ್ನಡ ಸತ್ಯವೇದವು C.L. Bible (BSI)


ರೋಮಿಗೆ ಪೌಲನ ಪ್ರಯಾಣ

1 ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾದಮೇಲೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ‘ಔಗುಸ್ತದಳ’ ಎಂಬ ರೋಮಿನ ದಳಕ್ಕೆ ಸೇರಿದ ಜೂಲಿಯಸ್ ಎಂಬ ಶತಾಧಿಪತಿಯ ವಶಕ್ಕೆ ಒಪ್ಪಿಸಲಾಯಿತು.

2 ಆಗ ಅದ್ರಮಿತಿಯದಿಂದ ಬಂದು ಏಷ್ಯಾ ಪ್ರಾಂತ್ಯದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ಹಡಗನ್ನು ಹತ್ತಿ ನಾವು ಪ್ರಯಾಣ ಬೆಳೆಸಿದೆವು. ಥೆಸಲೋನಿಕದಿಂದ ಬಂದ ಮಕೆದೋನಿಯದ ಅರಿಸ್ತಾರ್ಕ ನಮ್ಮ ಸಂಗಡ ಇದ್ದನು.

3 ಮಾರನೆಯ ದಿನ ನಾವು ಸಿದೋನಿಗೆ ಆಗಮಿಸಿದೆವು. ಪೌಲನು ತನ್ನ ಗೆಳೆಯರನ್ನು ಸಂದರ್ಶಿಸುವುದಕ್ಕೂ ಅವರಿಂದ ತನಗೆ ಅಗತ್ಯವಿದ್ದುದನ್ನು ಪಡೆಯುವುದಕ್ಕೂ ಜೂಲಿಯಸನು ಆದರದಿಂದ ಅನುಮತಿಯನ್ನು ಕೊಟ್ಟನು.

4 ನಾವು ಅಲ್ಲಿಂದ ಹೊರಟೆವು. ಎದುರುಗಾಳಿ ಬೀಸುತ್ತಿತ್ತು. ಆದುದರಿಂದ ಸೈಪ್ರಸ್ ದ್ವೀಪದ ಮರೆಗೆ ಸಾಗಿದೆವು.

5 ಸಿಲಿಸಿಯಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಸಿಯ ಪ್ರಾಂತ್ಯದಲ್ಲಿರುವ ‘ಮುರ’ ಎಂಬ ಊರಿಗೆ ಬಂದೆವು.

6 ಅಲ್ಲಿ, ಅಲೆಕ್ಸಾಂಡ್ರಿಯದಿಂದ ಬಂದು ಇಟಲಿಗೆ ಹೋಗುತ್ತಿದ್ದ ಹಡಗನ್ನು ಕಂಡು ಶತಾಧಿಪತಿ ನಮ್ಮನ್ನು ಅದಕ್ಕೆ ಹತ್ತಿಸಿದನು.

7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ಪ್ರಯಾಣಮಾಡಿದೆವು. ಅತಿ ಕಷ್ಟದಿಂದ ‘ಸ್ನೀಡ’ ಎಂಬ ಊರಿಗೆ ಎದುರಾಗಿ ಬಂದೆವು. ಆ ದಿಸೆಯಲ್ಲಿ ಪ್ರಯಾಣಮಾಡಲು ಎದುರುಗಾಳಿ ನಮ್ಮನ್ನು ಬಿಡಲಿಲ್ಲ. ಆದ್ದರಿಂದ ನಾವು ಸಾಲ್ಮೋನೆ ಭೂಶಿರವನ್ನು ದಾಟಿ, ಕ್ರೇಟ್ ದ್ವೀಪದ ಮರೆಯನ್ನು ಸೇರಿದೆವು.

8 ಆ ದ್ವೀಪದ ಕರಾವಳಿಯಲ್ಲೇ ಪ್ರಯಾಸದಿಂದ ಸಾಗುತ್ತಾ, ಲಸಾಯ ಊರಿನ ಸಮೀಪದಲ್ಲಿರುವ ‘ಸುಗಮ ರೇವು’ ಎಂಬ ಸ್ಥಳವನ್ನು ಸೇರಿದೆವು.

9 ಇಷ್ಟರಲ್ಲಿ ಬಹಳ ದಿನಗಳು ಕಳೆದಿದ್ದವು. ಉಪವಾಸದ ಮಹಾದಿನವೂ ಕಳೆದಿತ್ತು. ಈ ಕಾಲದಲ್ಲಿ ಸಮುದ್ರದಲ್ಲಿ ಮುಂದುವರಿಸುವುದು ಅಪಾಯಕರವಾಗಿತ್ತು.

10 ಆದುದರಿಂದ ಪೌಲನು, “ಮಿತ್ರರೇ, ಇಲ್ಲಿಂದ ಮುಂದಕ್ಕೆ ಪ್ರಯಾಣ ಅಪಾಯಕರವಾಗಿರುವಂತೆ ತೋರುತ್ತದೆ. ಹಡಗು ಮತ್ತು ಅದರಲ್ಲಿರುವ ಸರಕುಸಾಮಗ್ರಿಗಳಿಗೆ ಮಾತ್ರವಲ್ಲ, ನಮ್ಮ ಪ್ರಾಣಕ್ಕೂ ಕಷ್ಟನಷ್ಟ ಸಂಭವಿಸಲಿದೆ,” ಎಂದು ಎಚ್ಚರಿಸಿದನು.

11 ಆದರೆ ಶತಾಧಿಪತಿ ಪೌಲನನ್ನು ನಂಬದೆ, ನೌಕೆಯ ನಾಯಕನ ಹಾಗೂ ಅದರ ಯಜಮಾನನ ಮಾತುಗಳಿಗೆ ಕಿವಿಗೊಟ್ಟನು.

12 ಅಲ್ಲದೆ ಚಳಿಗಾಲವನ್ನು ಕಳೆಯಲು ಆ ಬಂದರು ಹಿತಕರವಾಗಿರಲಿಲ್ಲ. ಆದ್ದರಿಂದ ಅಲ್ಲಿಂದ ಹೊರಟು, ಸಾಧ್ಯವಾದರೆ, ಫೆನಿಕ್ಸ್ ಎಂಬ ಊರನ್ನು ಸೇರಿ, ಅಲ್ಲೇ ಚಳಿಗಾಲವನ್ನು ಕಳೆಯಬಹುದೆಂದು ಹೆಚ್ಚುಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಫೆನಿಕ್ಸ್, ಕ್ರೇಟ್ ದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ.


ಭೀಕರ ಚಂಡಮಾರುತ

13 ದಕ್ಷಿಣದಿಂದ ತೆಳುಗಾಳಿ ಬೀಸಲಾರಂಭಿಸಿತು. ಪ್ರಯಾಣಿಕರು ತಮ್ಮ ಉದ್ದೇಶ ಕೈಗೂಡಿತೆಂದು ಭಾವಿಸಿದರು. ಅವರು ಹಡಗಿನ ಲಂಗರುಗಳನ್ನು ಎತ್ತಿ, ಕ್ರೇಟ್ ದ್ವೀಪವನ್ನು ಅನುಸರಿಸುತ್ತಾ, ತೀರದ ಮಗ್ಗುಲಲ್ಲೇ ಪ್ರಯಾಣ ಹೊರಟರು.

14 ಆದರೆ ಸ್ವಲ್ಪದರಲ್ಲೇ ‘ಈಶಾನ್ಯ ಮಾರುತ’ ಎಂಬ ಪ್ರಚಂಡಗಾಳಿ ದ್ವೀಪದಿಂದ ಬೀಸತೊಡಗಿತು.

15 ಅದರ ಹೊಡೆತಕ್ಕೆ ಹಡಗು ಸಿಕ್ಕಿಕೊಂಡಿತು. ಅದಕ್ಕೆ ಎದುರಾಗಿ ಚಲಿಸಲು ಅಸಾಧ್ಯವಾಗಿ ಗಾಳಿಬೀಸಿದ ಕಡೆಯೇ ಹಡಗನ್ನು ತೇಲಬಿಟ್ಟೆವು.

16 ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು.

17 ಹಡಗಿನವರು ಅದನ್ನು ಮೇಲಕ್ಕೆ ಎಳೆದು ಹಗ್ಗಗಳಿಂದ ಹಡಗಿನ ಅಡಿಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಅನಂತರ ‘ಸುರ್ತಿಸ್’ ಎಂಬ ಉಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.

18 ಚಂಡಮಾರುತ ನಮ್ಮನ್ನು ಒಂದೇಸಮನೆ ಹೊಯ್ದಾಡಿಸುತ್ತಿದ್ದುದರಿಂದ ಮಾರನೆಯ ದಿನ ಸರಕುಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.

19 ಮೂರನೆಯ ದಿನ ಅವರು ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.

20 ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಗಾಳಿ ತೀವ್ರವಾಗಿತ್ತು. ಕಟ್ಟಕಡೆಗೆ ನಾವು ಬದುಕುವ ಆಶೆಯನ್ನೇ ತೊರೆಯಬೇಕಾಯಿತು.

21 ಬಹಳ ದಿನಗಳವರೆಗೆ ಅವರು ಊಟವಿಲ್ಲದೆ ಇದ್ದರು. ಆಗ ಪೌಲನು ಎದ್ದುನಿಂತು, “ಗೆಳೆಯರೇ, ನೀವು ನನ್ನ ಮಾತನ್ನು ಕೇಳಬೇಕಿತ್ತು. ಕ್ರೇಟ್ ದ್ವೀಪದಿಂದ ಮುಂದಕ್ಕೆ ಪ್ರಯಾಣ ಮಾಡಬಾರದಿತ್ತು. ಆಗ ಇಷ್ಟೆಲ್ಲಾ ಕಷ್ಟನಷ್ಟವನ್ನು ತಡೆಯಬಹುದಿತ್ತು.

22 ಈಗಲಾದರೂ ಧೈರ್ಯದಿಂದಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಹಡಗು ನಾಶವಾಗುವುದೇ ಹೊರತು, ನಿಮ್ಮಲ್ಲಿ ಯಾರಿಗೂ ಪ್ರಾಣಹಾನಿ ಆಗಲಾರದು.

23 ನಾನು ಯಾವ ದೇವರ ಭಕ್ತನಾಗಿದ್ದೇನೋ, ಯಾವ ದೇವರನ್ನು ಆರಾಧಿಸುತ್ತೇನೋ ಆ ದೇವರ ದೂತನು ನಿನ್ನೆ ರಾತ್ರಿ ದರ್ಶನವಿತ್ತನು:

24 ‘ಪೌಲನೇ, ಭಯಪಡಬೇಡ. ನೀನು ಚಕ್ರವರ್ತಿಯ ಸಮ್ಮುಖದಲ್ಲಿ ನಿಲ್ಲಲೇಬೇಕಾಗಿದೆ; ಇಗೋ, ನಿನ್ನ ಸಂಗಡ ಪ್ರಯಾಣಮಾಡುವ ಎಲ್ಲರ ಪ್ರಾಣಗಳನ್ನು ದೇವರು ನಿನ್ನ ನಿಮಿತ್ತ ಉಳಿಸಿದ್ದಾರೆ,’ ಎಂದು ಅಭಯವಿತ್ತನು.

25 ಆದುದರಿಂದ ಗೆಳೆಯರೇ, ಧೈರ್ಯದಿಂದಿರಿ. ನನಗೆ ದೇವರಲ್ಲಿ ವಿಶ್ವಾಸವಿದೆ; ನನಗೆ ತಿಳಿಸಿದಂತೆಯೇ ಎಲ್ಲವೂ ನಡೆದೇ ತೀರುವುದು.

26 ನಾವೆಲ್ಲರೂ ಒಂದು ದ್ವೀಪವನ್ನು ತಲುಪಲಿದ್ದೇವೆ,” ಎಂದನು.

27 ಅದು ಹದಿನಾಲ್ಕನೆಯ ರಾತ್ರಿ. ಬಿರುಗಾಳಿ ನಮ್ಮನ್ನು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡಿಸುತ್ತಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ನಾವೊಂದು ಭೂಮಿಯನ್ನು ಸಮೀಪಿಸುತ್ತಿರುವ ಹಾಗೆ ನಾವಿಕರಿಗೆ ಕಂಡುಬಂದಿತು.

28 ನೀರಿನ ಆಳವನ್ನು ಪರೀಕ್ಷಿಸಿದಾಗ ಅದು ನಾಲ್ವತ್ತು ಮೀಟರು ಇರುವುದಾಗಿ ತಿಳಿಯಿತು. ಇನ್ನೂ ಸ್ವಲ್ಪ ಮುಂದಕ್ಕೆ ಸಾಗಿ ಮತ್ತೆ ಆಳ ನೋಡಿದಾಗ ಮೂವತ್ತು ಮೀಟರು ಎಂದು ತಿಳಿಯಿತು.

29 ನಮ್ಮ ಹಡಗು ಕಲ್ಲುಬಂಡೆಗಳನ್ನು ತಾಕಬಹುದೆಂಬ ದಿಗಿಲು ಉಂಟಾಯಿತು. ಆದುದರಿಂದ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ ಬೆಳಗಾಗಲೆಂದು ಹಾರೈಸಿಕೊಂಡಿದ್ದರು.

30 ಅನಂತರ ನಾವಿಕರು ಹಡಗಿನ ಮುಂಭಾಗದಲ್ಲಿ ಕೆಲವು ಲಂಗರುಗಳನ್ನು ಹಾಕುವಂತೆ ನಟಿಸಿ, ದೋಣಿಯನ್ನು ನೀರಿಗಿಳಿಸಿ, ಹಡಗನ್ನು ಬಿಟ್ಟು ಪಲಾಯನ ಮಾಡಬೇಕೆಂದಿದ್ದರು.

31 ಆಗ ಪೌಲನು ಶತಾಧಿಪತಿಯನ್ನು ಮತ್ತು ಸೈನಿಕರನ್ನು ಉದ್ದೇಶಿಸಿ, “ಈ ನಾವಿಕರು ಹಡಗಿನಲ್ಲೇ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯದು,” ಎಂದು ಎಚ್ಚರಿಸಿದನು.

32 ಕೂಡಲೇ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.

33 “ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರನ್ನು ಕುರಿತು ಇಂತೆಂದನು: “ನೀವೆಲ್ಲರು ಚಿಂತೆಯಿಂದ ಹದಿನಾಲ್ಕು ದಿನಗಳವರೆಗೆ ಏನನ್ನೂ ತಿನ್ನದೆ ಇದ್ದೀರಿ;

34 ನಿಮ್ಮ ಪ್ರಾಣ ಉಳಿಸಿಕೊಳ್ಳಲು ಸ್ವಲ್ಪ ಆಹಾರವನ್ನಾದರೂ ತೆಗೆದುಕೊಳ್ಳಿ; ನಿಮ್ಮ ತಲೆಗೂದಲೊಂದೂ ಕೊಂಕಾಗದು,” ಎಂದು ಹೇಳಿ ಊಟಮಾಡುವಂತೆ ಪ್ರೋತ್ಸಾಹಿಸಿದನು.

35 ಹೀಗೆ ಹೇಳಿದ ಮೇಲೆ ಪೌಲನು ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಅದನ್ನು ಮುರಿದು ತಿನ್ನಲಾರಂಭಿಸಿದನು.

36 ಆಗ ಅವರೆಲ್ಲರೂ ಧೈರ್ಯತಂದುಕೊಂಡು ಆಹಾರವನ್ನು ಸೇವಿಸಿದರು.

37 ಹಡಗಿನಲ್ಲಿ ನಾವು ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು.

38 ಪ್ರತಿಯೊಬ್ಬನೂ ಸಾಕಷ್ಟು ತಿಂದ ಮೇಲೆ ಗೋದಿಯನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದರು.


ನೌಕೆಯ ವಿನಾಶ

39 ಬೆಳಗಾದ ಮೇಲೆ, ದಡವಿರುವ ಕೊಲ್ಲಿಯೊಂದು ನಾವಿಕರಿಗೆ ಕಾಣಿಸಿತು. ಅದು ಯಾವ ತೀರವೆಂದು ಗುರುತು ಹಚ್ಚಲು ಅವರಿಂದಾಗಲಿಲ್ಲ. ಆದರೂ ಹಡಗನ್ನು ಸಾಧ್ಯವಾದರೆ ಆ ದಡಕ್ಕೆ ಮುಟ್ಟಿಸಬೇಕೆಂದು ಯೋಚಿಸಿದರು.

40 ಎಂದೇ ಹಗ್ಗಗಳನ್ನು ಕತ್ತರಿಸಿ ಲಂಗರುಗಳನ್ನು ಸಮುದ್ರದಲ್ಲೇ ಮುಳುಗಲೆಂದು ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಲಾದ ಹಗ್ಗಗಳನ್ನು ಬಿಚ್ಚಿದರು. ಅನಂತರ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ಚಲಿಸಬಿಟ್ಟರು.

41 ಆದರೆ ಮಧ್ಯದಲ್ಲಿ ಹಡಗು ಮರಳು ದಿಬ್ಬಕ್ಕೆ ಢಿಕ್ಕಿಹೊಡೆದು ನೆಲ ಹತ್ತಿತ್ತು. ಹಡಗಿನ ಮುಂಭಾಗ ದಿಣ್ಣೆಗೆ ಸಿಲುಕಿ ಅಲ್ಲಾಡದೆ ನಿಂತಿತು; ಹಿಂಭಾಗ ಹುಚ್ಚು ಅಲೆಗಳ ಹೊಡೆತಕ್ಕೆ ಸಿಕ್ಕಿ ತುಂಡುತುಂಡಾಯಿತು.

42 ಕೈದಿಗಳಲ್ಲಿ ಯಾರೂ ಈಜಿ ತಲೆತಪ್ಪಿಸಿಕೊಳ್ಳದಂತೆ ಅವರನ್ನು ಕೊಲ್ಲಬೇಕೆಂದು ಸೈನಿಕರು ಆಲೋಚನೆ ಮಾಡಿದರು.

43 ಆದರೆ ಪೌಲನನ್ನು ಕಾಪಾಡಬೇಕೆಂದಿದ್ದ ಶತಾಧಿಪತಿ ಹಾಗೆ ಮಾಡುವುದನ್ನು ತಡೆದನು. ಪ್ರತಿಯಾಗಿ ಈಜು ಬಲ್ಲವರು ಮೊದಲು ಹಡಗಿನಿಂದ ಧುಮುಕಿ ಈಜಿಕೊಂಡು ಹೋಗಬೇಕು ಎಂತಲೂ,

44 ಮಿಕ್ಕವರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ದಡಸೇರಬೇಕೆಂತಲೂ ಆಜ್ಞೆಮಾಡಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡವನ್ನು ಸೇರಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು