Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 26 - ಕನ್ನಡ ಸತ್ಯವೇದವು C.L. Bible (BSI)


ಅಗ್ರಿಪ್ಪನ ಮುಂದೆ ಪೌಲನ ಪ್ರತಿವಾದ

1 ಅಗ್ರಿಪ್ಪನು ಪೌಲನಿಗೆ ಮಾತನಾಡಲು ಅಪ್ಪಣೆಕೊಡುತ್ತಾ, “ಈಗ ನಿನ್ನ ಪರವಾಗಿ ನೀನು ಮಾತನಾಡಬಹುದು,” ಎಂದನು. ಪೌಲನು ಕೈಯೆತ್ತಿ ಹೀಗೆ ವಾದಿಸತೊಡಗಿದನು:

2 “ಅಗ್ರಿಪ್ಪ ರಾಜರೇ, ಯೆಹೂದ್ಯರು ನನ್ನ ಮೇಲೆ ಹೊರಿಸಿರುವ ಎಲ್ಲಾ ಆಪಾದನೆಗಳಿಗೆ ಇಂದು ತಮ್ಮ ಮುಂದೆ ಪ್ರತಿವಾದಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೆಂದೇ ಎಣಿಸುತ್ತೇನೆ.

3 ಏಕೆಂದರೆ, ತಾವು ಯೆಹೂದ್ಯರ ಆಚಾರವಿಚಾರಗಳನ್ನೂ ವಾದವಿವಾದಗಳನ್ನೂ ಚೆನ್ನಾಗಿ ಬಲ್ಲಿರಿ. ಆದುದರಿಂದ ನನ್ನ ಮಾತನ್ನು ತಾಳ್ಮೆಯಿಂದ ಆಲಿಸಬೇಕೆಂದು ವಿನಂತಿಸುತ್ತೇನೆ:

4 ನಾನು ಚಿಕ್ಕಂದಿನಿಂದ ಯಾವ ರೀತಿ ಜೆರುಸಲೇಮಿನಲ್ಲಿಯೇ ನನ್ನ ದೇಶೀಯರೊಡನೆ ಜೀವಿಸಿದೆಯೆಂಬುದು ಎಲ್ಲ ಯೆಹೂದ್ಯರಿಗೆ ತಿಳಿದ ವಿಷಯ.

5 ನಮ್ಮ ಧರ್ಮದ ಅತಿ ಕಟ್ಟುನಿಟ್ಟಾದ ಪಂಥವೆಂದರೆ ಫರಿಸಾಯಪಂಥ. ಅದರ ಅನುಯಾಯಿ ಆಗಿದ್ದೆ ನಾನು. ಇದನ್ನು ಮೊದಲಿನಿಂದ ಅರಿತಿರುವ ಅವರೇ ಮನಸ್ಸುಮಾಡಿದರೆ ಸಾಕ್ಷಿಹೇಳಬಲ್ಲರು.

6 ನಮ್ಮ ಪೂರ್ವಜರಿಗೆ ದೇವರು ಮಾಡಿದ ವಾಗ್ದಾನದಲ್ಲಿ ನಂಬಿಕೆಯಿಟ್ಟುದಕ್ಕಾಗಿಯೇ ನಾನು ಇಂದು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ.

7 ಹನ್ನೆರಡು ಗೋತ್ರಗಳ ನಮ್ಮ ಜನರು, ಹಗಲಿರುಳು ದೇವರನ್ನು ಆರಾಧಿಸುತ್ತಾ, ಆ ವಾಗ್ದಾನ ಈಡೇರಿಯೇ ತೀರುವುದೆಂದು ನಂಬಿದ್ದಾರೆ. ಈ ನಂಬಿಕೆಗಾಗಿಯೇ, ಓ ರಾಜರೇ, ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡಿದ್ದಾರೆ.

8 ಸತ್ತವರನ್ನು ದೇವರು ಪುನರುತ್ಥಾನಗೊಳಿಸುತ್ತಾರೆಂಬುದನ್ನು ನಂಬಲು ಅಸಾಧ್ಯವೆಂದು ಇಲ್ಲಿರುವ ನೀವು ತಾನೇ ಭಾವಿಸುವುದೇಕೆ?

9 “ನನ್ನ ವಿಷಯದಲ್ಲಿ ಹೇಳುವುದಾದರೆ, ಒಮ್ಮೆ ನಾನು ಯೇಸುವಿನ ನಾಮವನ್ನೇ ನಿರ್ಮೂಲಮಾಡಬೇಕೆಂದಿದ್ದೆ; ಅದಕ್ಕೆ ಅಗತ್ಯವಾದುದನ್ನೆಲ್ಲ ಮಾಡುವುದು ನನ್ನ ಕರ್ತವ್ಯ ಎಂದು ಎಣಿಸಿದ್ದೆ.

10 ಅಂತೆಯೇ ಜೆರುಸಲೇಮಿನಲ್ಲೇ ಈ ಕಾರ್ಯವನ್ನು ಆರಂಭಿಸಿದೆ . ಮುಖ್ಯ ಯಾಜಕರಿಂದ ಅಧಿಕಾರ ಪಡೆದು ದೇವಜನರಲ್ಲಿ ಅನೇಕರನ್ನು ನಾನು ಸೆರೆಮನೆಗೆ ತಳ್ಳಿದೆ. ಅವರಿಗೆ ಮರಣದಂಡನೆ ವಿಧಿಸಿದಾಗ ನಾನೂ ಅದನ್ನು ಅನುಮೋದಿಸಿದೆ.

11 ಅನೇಕ ಬಾರಿ ನಾನು ಅವರನ್ನು ಪ್ರಾರ್ಥನಾಮಂದಿರಗಳಲ್ಲೆಲ್ಲಾ ಬಾಧೆಪಡಿಸಿದೆ. ಹೀಗೆ, ವಿಶ್ವಾಸಭ್ರಷ್ಟರಾಗುವಂತೆ ಬಲಾತ್ಕರಿಸಿದೆ. ನನ್ನ ಕೋಪೋದ್ರೇಕಕ್ಕೆ ಎಲ್ಲೆ ಇರಲಿಲ್ಲ. ಹೊರನಾಡಿನ ಊರುಗಳಿಗೂ ಅವರನ್ನು ಬೆನ್ನಟ್ಟಿಹೋಗಿ ಹಿಂಸೆಪಡಿಸಿದೆ.


ಪೌಲನ ಪರಿವರ್ತನೆಯ ಮತ್ತೊಂದು ಕಥನ

12 “ಈ ಉದ್ದೇಶದಿಂದಲೇ ಒಮ್ಮೆ ಮುಖ್ಯಯಾಜಕರಿಂದ ಅಧಿಕಾರವನ್ನು ಹಾಗೂ ಆಯೋಗವನ್ನು ಪಡೆದು, ದಮಸ್ಕಸಿಗೆ ಹೊರಟೆ.

13 ದಾರಿಯಲ್ಲಿ, ನಡು ಮಧ್ಯಾಹ್ನದ ವೇಳೆಯಲ್ಲಿ, ಓ ರಾಜರೇ, ಸೂರ್ಯನಿಗಿಂತಲೂ ಪ್ರಕಾಶಮಾನವಾದ ಬೆಳಕೊಂದು ಆಕಾಶದಿಂದ ಹೊಳೆಯುವುದನ್ನು ಕಂಡೆ. ಅದು ನನ್ನ ಮತ್ತು ಸಹಪ್ರಯಾಣಿಕರ ಸುತ್ತಲೂ ಆವರಿಸಿತು.

14 ನಾವೆಲ್ಲರೂ ನೆಲಕ್ಕೆ ಉರುಳಿದೆವು. ಆಗ, ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ? ಮುಳ್ಳುಗೋಲಿನ ಮೊನೆಯನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ?’ ಎಂಬ ವಾಣಿ ಹಿಬ್ರು ಭಾಷೆಯಲ್ಲಿ ನನಗೆ ಕೇಳಿಸಿತು.

15 ‘ಪ್ರಭೂ ನೀವಾರು?’ ಎಂದು ನಾನು ಕೇಳಿದೆ. ಅದಕ್ಕೆ ಪ್ರಭು, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು.

16 ಎದ್ದು ನಿಂತುಕೋ; ನಿನ್ನನ್ನು ನನ್ನ ದಾಸನನ್ನಾಗಿಯೂ ಸಾಕ್ಷಿಯನ್ನಾಗಿಯೂ ನೇಮಿಸಿಕೊಳ್ಳುವುದಕ್ಕಾಗಿ ನಿನಗೆ ದರ್ಶನವಿತ್ತಿದ್ದೇನೆ. ಈ ದರ್ಶನದಲ್ಲಿ ನನ್ನ ವಿಷಯವಾಗಿ ಕಂಡದ್ದನ್ನು ಮತ್ತು ಮುಂದಿನ ದರ್ಶನಗಳಲ್ಲಿ ನಾನು ನಿನಗೆ ತೋರಿಸಲಿರುವ ವಿಷಯಗಳನ್ನು ಕುರಿತು ಬೇರೆಯವರಿಗೆ ನೀನು ತಿಳಿಸಬೇಕು.

17 ಯೆಹೂದ್ಯರಿಂದಲೂ ಅನ್ಯಜನರಿಂದಲೂ ನಾನು ನಿನ್ನನ್ನು ಕಾಪಾಡುತ್ತೇನೆ. ಇವರ ಬಳಿಗೇ ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ.

18 ನೀನು ಇವರ ಕಣ್ಣುಗಳನ್ನು ತೆರೆಯಬೇಕು; ಅಂಧಕಾರವನ್ನು ಬಿಟ್ಟು ಬೆಳಕಿಗೆ ಬರುವಂತೆ ಮಾಡಬೇಕು; ಸೈತಾನನ ಆಧಿಪತ್ಯವನ್ನು ತ್ಯಜಿಸಿ ದೇವರತ್ತ ತಿರುಗುವಂತೆ ಮಾಡಬೇಕು. ಹೀಗೆ, ಅವರು ನನ್ನಲ್ಲಿಡುವ ವಿಶ್ವಾಸದ ಪ್ರಯುಕ್ತ ಪಾಪವಿಮೋಚನೆಯನ್ನು ಪಡೆಯುವರು; ಆಯ್ಕೆಯಾದವರಿಗಿರುವ ಹಕ್ಕುಬಾಧ್ಯತೆಗಳಲ್ಲಿ ಭಾಗಿಗಳಾಗುವರು,’ ಎಂದು ಹೇಳಿದರು.


ಪೌಲನ ಆಯೋಗ

19 “ಇಂತಿರಲು, ಅಗ್ರಿಪ್ಪ ರಾಜರೇ, ನನಗೆ ಲಭಿಸಿದ ಈ ಸ್ವರ್ಗೀಯ ದರ್ಶನಕ್ಕೆ ಅವಿಧೇಯನಾಗಿ ನಡೆಯಲು ನನ್ನಿಂದಾಗಲಿಲ್ಲ.

20 ದಮಸ್ಕಸ್ ಮೊದಲ್ಗೊಂಡು ಜೆರುಸಲೇಮಿಗೂ ಮತ್ತು ಎಲ್ಲ ಜುದೇಯ ನಾಡಿಗೂ ಹಾಗೂ ಅನ್ಯಧರ್ಮೀಯರಲ್ಲಿಗೂ ಹೋಗಿ, ಜನರು ತಮ್ಮತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೈವಾಭಿಮುಖಿಗಳಾಗಬೇಕೆಂದು ಬೋಧಿಸಿದೆ; ಪಶ್ಚಾತ್ತಾಪ ಸೂಚಕಕಾರ್ಯಗಳನ್ನು ಕೈಗೊಳ್ಳುವಂತೆ ಘೋಷಿಸಿದೆ.

21 ಇದಕ್ಕಾಗಿಯೇ ಯೆಹೂದ್ಯರು ನನ್ನನ್ನು ಮಹಾದೇವಾಲಯದಲ್ಲಿ ಹಿಡಿದು ಕೊಲ್ಲಲು ಪ್ರಯತ್ನಿಸಿದರು.

22 ಆದರೆ, ಇಂದಿನವರೆಗೂ ದೇವರು ನನಗೆ ನೆರವಾಗುತ್ತಾ ಬಂದಿದ್ದಾರೆ. ಎಂದೇ ದೊಡ್ಡವರು ಚಿಕ್ಕವರೆನ್ನದೆ, ಎಲ್ಲರಿಗೂ ಕ್ರಿಸ್ತಯೇಸುವಿನ ಪರವಾಗಿ ಸಾಕ್ಷಿನೀಡುತ್ತಾ ನಿಮ್ಮ ಮುಂದೆ ನಿಂತಿರುತ್ತೇನೆ. ನಾನು ಹೇಳುತ್ತಿರುವುದು, ಪ್ರವಾದಿಗಳು ಮತ್ತು ಮೋಶೆಯು ಮುಂದೆ ಏನು ಸಂಭವಿಸುವುದೆಂದು ಹೇಳಿದ್ದರೋ, ಅದನ್ನೇ ಹೊರತು ಮತ್ತೇನನ್ನೂ ನಾನು ಹೇಳುತ್ತಿಲ್ಲ.

23 ಅದೇನೆಂದರೆ, ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕು; ಸತ್ತು ಪುನರುತ್ಥಾನವಾದವರಲ್ಲಿ ಮೊತ್ತಮೊದಲಿಗನಾಗಿ ಯೆಹೂದ್ಯರಿಗೂ ಅನ್ಯಧರ್ಮೀಯರಿಗೂ ಪರಂಜ್ಯೋತಿಯನ್ನು ಪ್ರಕಟಿಸಬೇಕು,” ಎಂದನು.

24 ಈ ರೀತಿ ಪೌಲನು ತನ್ನ ಪರವಾಗಿ ವಾದಿಸುತ್ತಿದ್ದಾಗ ಫೆಸ್ತನು, “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಗಟ್ಟಿಯಾಗಿ ಕೂಗಿದನು.

25 ಅದಕ್ಕೆ ಪೌಲನು, “ನಾನು ಹುಚ್ಚನಲ್ಲ, ಫೆಸ್ತ ಮಹಾಪ್ರಭೂ, ನಾನು ಆಡುತ್ತಿರುವುದು ತಿಳಿಮನಸ್ಸಿನಿಂದಾಡುವ ಸತ್ಯ.

26 ಅಗ್ರಿಪ್ಪರಾಜರಿಗೆ ಈ ವಿಷಯಗಳು ತಿಳಿದೇ ಇವೆ. ಆದ್ದರಿಂದ ನಾನು ಅವರ ಮುಂದೆ ಧೈರ್ಯದಿಂದ ಮಾತನಾಡುತ್ತಿದ್ದೇನೆ. ನಾನು ಹೇಳಿದವುಗಳಲ್ಲಿ ಒಂದಾದರೂ ಅವರಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ. ಏಕೆಂದರೆ, ಇದು ಯಾವುದೋ ಒಂದು ಅಜ್ಞಾತ ಮೂಲೆಯಲ್ಲಿ ನಡೆದ ಕಾರ್ಯವಲ್ಲ.

27 ಅಗ್ರಿಪ್ಪ ರಾಜರೇ, ತಮಗೆ ಪ್ರವಾದಿಗಳಲ್ಲಿ ನಂಬಿಕೆಯುಂಟೋ? ಉಂಟೆಂದು ನಾನು ಬಲ್ಲೆ,” ಎಂದನು.

28 ಅದಕ್ಕೆ ಅಗ್ರಿಪ್ಪನು, “ಇಷ್ಟು ಅಲ್ಪಕಾಲದಲ್ಲೇ ನನ್ನನ್ನು ಕ್ರೈಸ್ತನನ್ನಾಗಿ ಮಾಡಬೇಕೆಂದು ಇಚ್ಛಿಸುತ್ತೀಯಾ?’ ಎಂದನು.

29 ಪೌಲನು ಪ್ರತ್ಯುತ್ತರವಾಗಿ, “ಅಲ್ಪಕಾಲವಾಗಲಿ, ದೀರ್ಘಕಾಲವಾಗಲಿ, ನೀವು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಎಲ್ಲರೂ ನನ್ನಂತೆಯೇ ಆಗಬೇಕೆಂಬುದೇ ದೇವರಲ್ಲಿ ನಾನು ಮಾಡುವ ಪ್ರಾರ್ಥನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ,” ಎಂದನು.

30 ಅನಂತರ ರಾಜನೂ ರಾಜ್ಯಪಾಲನೂ ಬೆರ್ನಿಸಳೂ ಅವರ ಸಂಗಡ ಕುಳಿತಿದ್ದವರೆಲ್ಲರೂ ಮೇಲಕ್ಕೆದ್ದರು.

31 ಅಲ್ಲಿಂದ ಹೊರಕ್ಕೆ ಹೋಗಿ, “ಮರಣದಂಡನೆಗಾಗಲಿ ಅಥವಾ ಸೆರೆಮನೆವಾಸಕ್ಕಾಗಲಿ ಗುರಿಮಾಡುವಂಥ ಯಾವ ತಪ್ಪನ್ನೂ ಈ ಮನುಷ್ಯ ಮಾಡಿಲ್ಲ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

32 ಅಗ್ರಿಪ್ಪನು ಫೆಸ್ತನಿಗೆ, “ಚಕ್ರವರ್ತಿಗೆ ನೇರವಾಗಿ ಇವನು ಅಪೀಲುಮಾಡಿಕೊಳ್ಳದಿದ್ದರೆ, ಇವನನ್ನು ಬಿಡುಗಡೆಮಾಡಬಹುದಾಗಿತ್ತು,” ಎಂದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು