ಅಪೊಸ್ತಲರ ಕೃತ್ಯಗಳು 24 - ಕನ್ನಡ ಸತ್ಯವೇದವು C.L. Bible (BSI)ಪೌಲನ ಮೇಲೆ ಯೆಹೂದ್ಯರ ದೋಷಾರೋಪಣೆ 1 ಐದು ದಿನಗಳ ನಂತರ ಪ್ರಧಾನಯಾಜಕ ಅನನೀಯನು, ಕೆಲವು ಪ್ರಮುಖರನ್ನೂ ತೆರ್ತುಲ್ಲ ಎಂಬ ವಕೀಲನನ್ನೂ ಕರೆದುಕೊಂಡು ಬಂದನು. ಅವರು ರಾಜ್ಯಪಾಲ ಫೆಲಿಕ್ಸನ ಸನ್ನಿಧಾನದಲ್ಲಿ ಪೌಲನ ವಿರುದ್ಧ ದೂರಿತ್ತರು. 2 ಪೌಲನನ್ನು ಕರೆದುತಂದು ನಿಲ್ಲಿಸಿದಾಗ ತೆರ್ತುಲ್ಲನು ಅವನ ವಿರುದ್ಧ ಹೀಗೆಂದು ವಾದಿಸಲಾರಂಭಿಸಿದನು: “ಮಹಾಪ್ರಭುವೇ, ನಿಮ್ಮ ಮುಖಂಡತ್ವದಲ್ಲಿ ನಾವು ಶಾಂತಿ ಸೌಭಾಗ್ಯವನ್ನು ಸವಿಯುತ್ತಿದ್ದೇವೆ. ದೇಶ ಪ್ರಗತಿಗಾಗಿ ಆಗುತ್ತಿರುವ ಸುಧಾರಣೆಗಳಿಗೆ ತಮ್ಮ ಪರಾಮರಿಕೆಯೇ ಕಾರಣ. 3 ಇದನ್ನು ನಾವು ಎಲ್ಲೆಲ್ಲೂ ಯಾವಾಗಲೂ ಪೂರ್ಣ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇವೆ. 4 ನಾನು ತಮ್ಮ ಸಮಯವನ್ನು ವ್ಯರ್ಥಮಾಡಲು ಇಚ್ಛಿಸುವುದಿಲ್ಲ. ಸಂಕ್ಷಿಪ್ತವಾಗಿ ನಾನು ತಮ್ಮ ಮುಂದಿಡುವ ಈ ವಾದವನ್ನು ದಯೆಯಿಂದ ಆಲಿಸಬೇಕೆಂದು ವಿಜ್ಞಾಪಿಸುತ್ತೇನೆ. 5 ಈ ವ್ಯಕ್ತಿ ಒಂದು ದೊಡ್ಡ ಪೀಡೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಕಲಹವೆಬ್ಬಿಸುತ್ತಾನೆ. ಅಲ್ಲದೆ, ‘ನಜರೇನ’ ಎಂಬ ಕುಪ್ರಸಿದ್ಧ ಪಂಥದ ಒಬ್ಬ ಮುಖಂಡನೂ ಆಗಿದ್ದಾನೆ. 6 ಇವನು ಮಹಾದೇವಾಲಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ನಾವು ಇವನನ್ನು ಬಂಧಿಸಿದೆವು. ನಮ್ಮ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ಇವನನ್ನು ವಿಚಾರಣೆಗೆ ಒಳಪಡಿಸಬೇಕೆಂದಿದ್ದೆವು. 7 ಆದರೆ, ಸಹಸ್ರಾಧಿಪತಿ ಲೂಸಿಯನು ಮಧ್ಯೆಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡನು. 8 ಹಾಗೂ ಇವನ ಮೇಲೆ ತಪ್ಪುಹೊರಿಸುವವರು ತಮ್ಮ ಮುಂದೆ ಬರಬೇಕೆಂದು ಆಜ್ಞೆಯಿತ್ತನು; ತಾವೇ ಕೇಳಿನೋಡಿ; ನಾವು ಇವನ ವಿರುದ್ಧ ತಂದಿರುವ ದೂರುಗಳೆಲ್ಲಾ ಸತ್ಯವಾದುವು ಎಂದು ಇವನಿಂದಲೇ ತಮಗೆ ವ್ಯಕ್ತ ಆಗುವುದು,” ಎಂದನು. 9 ಯೆಹೂದ್ಯರೂ ವಕೀಲನಿಗೆ ಬೆಂಬಲವಾಗಿ ಅವನು ಹೇಳಿದ್ದೆಲ್ಲಾ ಸತ್ಯವೆಂದು ಸಾಧಿಸಿದರು. ಫೆಲಿಕ್ಸನ ಸಮ್ಮುಖದಲ್ಲಿ ಪೌಲನ ಪ್ರತಿವಾದ 10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ ಮಾತನಾಡುವಂತೆ ಅಪ್ಪಣೆ ಮಾಡಿದನು. ಆಗ ಪೌಲನು ಹೀಗೆಂದನು: “ತಾವು ಅನೇಕ ವರ್ಷಗಳಿಂದ ಈ ನಾಡಿನ ನ್ಯಾಯಾಧೀಶರಾಗಿದ್ದೀರಿ. ಅದನ್ನು ಅರಿತು ನಿರ್ಭಯನಾಗಿ ಪ್ರತಿವಾದವನ್ನು ತಮ್ಮ ಮುಂದಿಡುತ್ತೇನೆ. 11 ನಾನು ಜೆರುಸಲೇಮಿಗೆ ದೈವಾರಾಧನೆಗೆಂದು ಹೋಗಿ ಇಲ್ಲಿಗೆ ಹನ್ನೆರಡು ದಿನಗಳಿಗಿಂತ ಹೆಚ್ಚಾಗಿಲ್ಲ. ಇದನ್ನು ತಾವೇ ವಿಚಾರಿಸಿ ತಿಳಿದುಕೊಳ್ಳಬಹುದು. 12 ನಾನು ದೇವಾಲಯದಲ್ಲಾಗಲಿ, ಪ್ರಾರ್ಥನಾಮಂದಿರದಲ್ಲಾಗಲಿ, ಪಟ್ಟಣದಲ್ಲಾಗಲಿ, ಯಾವ ವಾದವಿವಾದ ನಡೆಸಿದ್ದನ್ನು ಅಥವಾ ಜನರನ್ನು ಪ್ರಚೋದಿಸಿದ್ದನ್ನು ಇವರಾರೂ ಕಂಡಿಲ್ಲ. 13 ಇವರು ಈಗ ನನ್ನ ಮೇಲೆ ಹೊರಿಸುವ ಆಪಾದನೆಗಳನ್ನು ತಮ್ಮ ಮುಂದೆ ಸಮರ್ಥಿಸಲು ಇವರಿಂದಾಗದು. 14 ಇಷ್ಟನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ: ಇವರು ಕುಪ್ರಸಿದ್ಧವೆಂದು ನಿಂದಿಸುವ ಮಾರ್ಗವನ್ನು ಅನುಸರಿಸುವವನು ನಾನು. ಆ ಮಾರ್ಗದ ಪ್ರಕಾರ ನಮ್ಮ ಪೂರ್ವಜರ ದೇವರನ್ನು ಆರಾಧಿಸುತ್ತೇನೆ. ಧರ್ಮಶಾಸ್ತ್ರದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಬರೆದಿರುವುದನ್ನೆಲ್ಲ ನಂಬುತ್ತೇನೆ. 15 ಮಾನವರು ಸಜ್ಜನರಾಗಿರಲಿ, ದುರ್ಜನರಾಗಿರಲಿ, ಪುನರುತ್ಥಾನ ಹೊಂದುವರೆಂದು ಇವರಂತೆಯೇ ನಾನು ದೇವರಲ್ಲಿ ನಂಬಿಕೆಯುಳ್ಳವನಾಗಿದ್ದೇನೆ. 16 ಅಂತೆಯೇ, ದೇವರ ಹಾಗೂ ಮಾನವರ ಮುಂದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ಬಾಳಲು ಪ್ರಯತ್ನಿಸುತ್ತಿದ್ದೇನೆ. 17 ಹಲವಾರು ವರ್ಷಗಳಿಂದ ದೂರವಿದ್ದ ನಾನು, ಈಗ ನನ್ನ ಸ್ವದೇಶಿಯರಿಗೆ ದಾನಧರ್ಮ ತರಲೂ ಕಾಣಿಕೆಯನ್ನು ಅರ್ಪಿಸಲೂ ಜೆರುಸಲೇಮಿಗೆ ಬಂದೆ. 18 ಶುದ್ಧಾಚಾರದ ವಿಧಿಯನ್ನು ಮುಗಿಸಿಕೊಂಡು, ನನ್ನೀ ಕಾರ್ಯದಲ್ಲಿ ನಿರತನಾಗಿದ್ದಾಗ ಇವರು ನನ್ನನ್ನು ಮಹಾದೇವಾಲಯದಲ್ಲಿ ಕಂಡರು. ಆಗ ನನ್ನೊಂದಿಗೆ ಜನರ ಗುಂಪೇನೂ ಇರಲಿಲ್ಲ; ಯಾವ ಗಲಭೆಗೂ ಅವಕಾಶವಿರಲಿಲ್ಲ. 19 ಆದರೆ, ಏಷ್ಯಾದಿಂದ ಬಂದಿದ್ದ ಯೆಹೂದ್ಯರು ಕೆಲವರು ಅಲ್ಲಿದ್ದರು. ನನ್ನ ಮೇಲೆ ಯಾವುದಾದರೂ ಆಪಾದನೆಯನ್ನು ಹೊರಿಸಬೇಕೆಂದಿದ್ದರೆ, ಅವರೇ ಇಲ್ಲಿ ತಮ್ಮ ಮುಂದೆ ಹಾಜರಿರಬೇಕಾಗಿತ್ತು. 20 ಅಥವಾ, ನಾನು ನ್ಯಾಯಸಭೆಯ ಮುಂದೆ ನಿಂತಿದ್ದಾಗ ನನ್ನಲ್ಲಿ ಯಾವ ಅಪರಾಧಗಳು ಕಂಡುಬಂದವೆಂದು, ಈ ಜನರೇ ಹೇಳಲಿ. 21 ‘ಸತ್ತವರು ಪುನರುತ್ಥಾನ ಹೊಂದುತ್ತಾರೆ, ಎಂಬ ವಿಷಯಕ್ಕಾಗಿ ನಾನು ಇಂದು ನಿಮ್ಮ ಮುಂದೆ ವಿಚಾರಣೆಗೆ ಗುರಿಯಾಗಿದ್ದೇನೆ’ ಎಂದು ನಾನು ಆ ಸಭೆಯ ಮುಂದೆ ಕೂಗಿ ಹೇಳಿದ್ದನ್ನು ಬಿಟ್ಟರೆ, ಬೇರೆ ಏನನ್ನು ನನ್ನಲ್ಲಿ ಕಂಡರೆಂದು ಇವರೇ ಹೇಳಲಿ,” ಎಂದನು. 22 ಕ್ರಿಸ್ತಮಾರ್ಗದ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದ ಫೆಲಿಕ್ಸನು, “ಸಹಾಸ್ರಾಧಿಪತಿ ಲೂಸಿಯನು ಬಂದ ಮೇಲೆ ನಾನು ಈ ವ್ಯಾಜ್ಯವನ್ನು ತೀರ್ಮಾನಿಸುತ್ತೇನೆ,” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದನು. 23 ಅನಂತರ ಪೌಲನನ್ನು ಕಾವಲಿನಲ್ಲಿ ಇಡಬೇಕೆಂದೂ ಆದರೆ ಕಟ್ಟುನಿಟ್ಟು ಬೇಕಿಲ್ಲವೆಂದೂ ಅವನಿಗೆ ಸಂಬಂಧಪಟ್ಟವರು ಅವನಿಗೆ ಉಪಚಾರ ಮಾಡುವುದನ್ನು ತಡೆಯಬಾರದೆಂದೂ ಶತಾಧಿಪತಿಗೆ ಆಜ್ಞೆಮಾಡಿದನು. 24 ಕೆಲವು ದಿನಗಳ ನಂತರ ಫೆಲಿಕ್ಸನು ಯೆಹೂದ್ಯಳಾದ ತನ್ನ ಪತ್ನಿ ದ್ರುಸಿಲ್ಲಳೊಂದಿಗೆ ಬಂದು ಪೌಲನನ್ನು ತನ್ನ ಬಳಿಗೆ ಕರೆಯಿಸಿದನು. ಕ್ರಿಸ್ತಯೇಸುವನ್ನು ವಿಶ್ವಾಸಿಸುವ ಬಗ್ಗೆ ಪೌಲನಾಡಿದ ಮಾತುಗಳನ್ನು ಆಲೈಸಿದನು. 25 ಆದರೆ ನೀತಿನಿಯಮ, ಇಂದ್ರಿಯನಿಗ್ರಹ, ಬರಲಿರುವ ದೈವತೀರ್ಪಿನ ದಿನ ಇವುಗಳನ್ನು ಪ್ರಸ್ತಾಪಿಸಿದಾಗ ಫೆಲಿಕ್ಸನು ದಿಗಿಲುಗೊಂಡನು. “ಸದ್ಯಕ್ಕೆ, ನೀನು ಹೋಗಬಹುದು; ಸಮಯ ಒದಗಿದಾಗ ನಿನ್ನನ್ನು ಕರೆಯಿಸುತ್ತೇನೆ,” ಎಂದನು 26 ಇದಲ್ಲದೆ, ಪೌಲನು ತನಗೆ ಹಣವನ್ನು ಕೊಡಬಹುದೆಂಬ ನಿರೀಕ್ಷೆ ಅವನದಾಗಿತ್ತು. ಈ ಕಾರಣದಿಂದಲೇ ಅವನನ್ನು ಪದೇ ಪದೇ ಕರೆಯಿಸಿ, ಅವನೊಡನೆ ಮಾತುಕತೆ ನಡೆಸುತ್ತಿದ್ದನು. 27 ಹೀಗೆ ಎರಡು ವರ್ಷಗಳು ಕಳೆದವು. ಪೊರ್ಸಿಯ ಫೆಸ್ತ ಎಂಬವನು ಫೆಲಿಕ್ಸನ ಸ್ಥಾನದಲ್ಲಿ ರಾಜ್ಯಪಾಲನಾಗಿ ಬಂದನು. ಫೆಲಿಕ್ಸನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಿಕೊಳ್ಳುವ ಸಲುವಾಗಿ ಪೌಲನನ್ನು ಸೆರೆಮನೆಯಲ್ಲೇ ಬಿಟ್ಟುಹೋದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India