Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 22 - ಕನ್ನಡ ಸತ್ಯವೇದವು C.L. Bible (BSI)


ಪೌಲನ ಆತ್ಮಕಥನ

1 “ಭ್ರಾತೃಗಳೇ, ಪಿತೃಗಳೇ, ಈಗ ನಾನು ಮಾಡಹೋಗುವ ನನ್ನ ಸಮರ್ಥನೆಗೆ ಕಿವಿಗೊಡಿ.”

2 ಪೌಲನು ಹೀಗೆ ತಮ್ಮನ್ನು ಸಂಬೋಧಿಸಿ ಹಿಬ್ರು ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದ್ದೇ ಅಲ್ಲಿದ್ದ ಜನರು ಇನ್ನೂ ನಿಶ್ಯಬ್ಧರಾದರು. ಅವನು ಮುಂದುವರಿಯುತ್ತಾ ಇಂತೆಂದನು:

3 “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ.

4 ಕ್ರಿಸ್ತಮಾರ್ಗವನ್ನು ಅನುಸರಿಸುವವರನ್ನು ಸ್ತ್ರೀ ಪುರುಷರೆನ್ನದೆ, ಬಂಧಿಸಿ ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣಪರಿಯಂತರ ಪೀಡಿಸಿ ಹಿಂಸಿಸಿದೆ.

5 ಇದಕ್ಕೆ ಪ್ರಧಾನಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.

6 “ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸಮೀಪಿಸಿದೆ. ಆಗ ಸುಮಾರು ನಡುಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾಬೆಳಕೊಂದು ನನ್ನ ಸುತ್ತಲೂ ಮಿಂಚಿತು.

7 ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು.

8 ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು.

9 ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು. ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ.

10 ‘ನಾನೇನು ಮಾಡಬೇಕು ಪ್ರಭೂ,?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು.

11 ಬೆಳಕಿನ ಪ್ರಕಾಶದ ನಿಮಿತ್ತ ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈಹಿಡಿದು ನಡೆಸಿಕೊಂಡು ಹೋದರು.

12 “ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು.

13 ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿಪಡೆದು ಅವನನ್ನು ನೋಡಿದೆ.

14 ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ.

15 ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು.

16 ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.


ಅನ್ಯಧರ್ಮೀಯರಿಗೆ ಪ್ರಬೋಧಿಸಲು ಪೌಲನಿಗೆ ಆಹ್ವಾನ

17 “ನಾನು ಜೆರುಸಲೇಮಿಗೆ ಹಿಂದಿರುಗಿ ಒಂದು ದಿನ ಮಹಾದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಾ ಧ್ಯಾನಪರವಶನಾದೆ.

18 ಆಗ ಪ್ರಭುವೇ ನನಗೆ ದರ್ಶನವಿತ್ತು, ‘ತಡಮಾಡದೆ ನೀನು ಜೆರುಸಲೇಮಿನಿಂದ ಹೊರಟುಹೋಗು. ನನ್ನ ಬಗ್ಗೆ ನೀನು ಕೊಡುವ ಸಾಕ್ಷಿಯನ್ನು ಇಲ್ಲಿಯ ಜನರು ಸ್ವೀಕರಿಸುವುದಿಲ್ಲ,’ ಎಂದರು.

19 ಅದಕ್ಕೆ ಪ್ರತ್ಯುತ್ತರವಾಗಿ ನಾನು, ‘ಪ್ರಭೂ, ನಿಮ್ಮಲ್ಲಿ ವಿಶ್ವಾಸವಿಟ್ಟವರನ್ನು ನಾನು ಸೆರೆಹಿಡಿದೆ; ಪ್ರಾರ್ಥನಾಮಂದಿರಗಳಿಗೆ ಹೋಗಿ ಅವರನ್ನು ಚಾವಟಿಯಿಂದ ಹೊಡೆದೆ.

20 ನಿಮ್ಮ ಸಾಕ್ಷಿಯಾದ ಸ್ತೇಫನನ ಹತ್ಯೆ ನಡೆದಾಗ ನಾನೂ ಸಮ್ಮತಿಸಿ ಅಲ್ಲೇ ಇದ್ದೆ. ಅವನನ್ನು ಕೊಲೆಮಾಡುತ್ತಿದ್ದವರ ಬಟ್ಟೆಬರೆಗಳಿಗೆ ನಾನೇ ಕಾವಲು ನಿಂತೆ. ಇದೆಲ್ಲ ಅವರಿಗೆ ಚೆನ್ನಾಗಿ ಗೊತ್ತಿದೆ,’ ಎಂದೆ. ಅದಕ್ಕೆ ಪ್ರಭು,

21 ‘ಹೋಗು ನಾನು ನಿನ್ನನ್ನು ದೂರದಲ್ಲಿರುವ ಅನ್ಯಧರ್ಮೀಯರ ಬಳಿಗೆ ಕಳುಹಿಸುತ್ತೇನೆ,’ ಎಂದರು.

22 ಇಲ್ಲಿಯವರೆಗೆ ಪೌಲನು ಹೇಳುತ್ತಿದ್ದನ್ನು ಜನರು ಕಿವಿಗೊಟ್ಟು ಕೇಳುತ್ತಿದ್ದರು. ಆಮೇಲೆ ಅವರು, “ಇವನು ಈ ಲೋಕದಿಂದಲೇ ತೊಲಗಬೇಕು; ಇಂಥವನು ಜೀವದಿಂದ ಇರಬಾರದು,” ಎಂದು ಗಟ್ಟಿಯಾಗಿ ಕೂಗಾಡಲಾರಂಭಿಸಿದರು.

23 ಹೀಗೆ ಚೀರುತ್ತಾ, ತಮ್ಮ ವಸ್ತ್ರಗಳನ್ನು ಬೀಸುತ್ತಾ, ಮಣ್ಣನ್ನು ಬಾಚಿ ತೂರಲಾರಂಭಿಸಿದರು.

24 ಜನರು ಯಾವ ಕಾರಣದಿಂದ ಅವನ ವಿರುದ್ಧ ಹೀಗೆ ಮಾಡುತ್ತಿದ್ದಾರೆಂದು ಅರಿತುಕೊಳ್ಳಲು ಸಹಸ್ರಾಧಿಪತಿ ಪೌಲನನ್ನು ಕೋಟೆ ಒಳಕ್ಕೆಕೊಂಡೊಯ್ದು, ಚಾವಟಿಯಿಂದ ಹೊಡೆದು ವಿಚಾರಿಸುವಂತೆ ಆಜ್ಞಾಪಿಸಿದನು.

25 ಹೊಡೆಯುವುದಕ್ಕಾಗಿ ಅವನನ್ನು ಬಾರುಗಳಿಂದ ಕಟ್ಟುತ್ತಿದ್ದಾಗ ಪೌಲನು, ಹತ್ತಿರವೇ ನಿಂತಿದ್ದ ಶತಾಧಿಪತಿಯನ್ನು ನೋಡಿ, “ರೋಮಿನ ಪೌರನನ್ನು ಚಾವಟಿಯಿಂದ ಹೊಡೆಯುವುದು, ಅದೂ ವಿಚಾರಣೆಮಾಡದೆ ಹೊಡೆಯಿಸುವುದು, ನ್ಯಾಯಸಮ್ಮತವೋ?” ಎಂದು ಕೇಳಿದನು.

26 ಇದನ್ನು ಕೇಳಿದ್ದೇ, ಶತಾಧಿಪತಿಯು ಸೈನ್ಯಾಧಿಪತಿಯ ಬಳಿಗೆ ಬಂದು, “ನೀವು ಮಾಡಿಸುತ್ತಿರುವುದಾದರೂ ಏನು? ಆ ಮನುಷ್ಯ ರೋಮಿನ ಪೌರನು,” ಎಂದು ತಿಳಿಸಿದನು.

27 ಆಗ ಸಹಸ್ರಾಧಿಪತಿ ಪೌಲನ ಬಳಿಗೆ ಬಂದು, “ನೀನು ರೋಮಿನ ಪೌರನೋ?’ ಎಂದು ಕೇಳಿದನು.

28 ಅದಕ್ಕೆ ಪೌಲನು, “ಹೌದು,” ಎಂದನು. “ನಾನು ರೋಮಿನ ಪೌರನಾಗುವ ಹಕ್ಕನ್ನು ಬಹಳ ಹಣತೆತ್ತು ಪಡೆಯಬೇಕಾಯಿತು,” ಎಂದು ಸಹಸ್ರಾಧಿಪತಿ ಹೇಳಿದಾಗ, ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪೌರನು,” ಎಂದು ಉತ್ತರಿಸಿದನು.

29 ಪೌಲನನ್ನು ಪ್ರಶ್ನಿಸಲು ಬಂದಿದ್ದವರು ಆ ಕ್ಷಣವೇ ಅವನನ್ನು ಬಿಟ್ಟು ಅಗಲಿದರು. ರೋಮಿನ ಪೌರನೊಬ್ಬನನ್ನು ಬಂಧಿಸಿದುದು ಮನವರಿಕೆಯಾದಾಗ ಸಹಸ್ರಾಧಿಪತಿಗೂ ಭಯವಾಯಿತು.


ನ್ಯಾಯಸಭೆಯ ಮುಂದೆ ಪೌಲ

30 ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು