ಅಪೊಸ್ತಲರ ಕೃತ್ಯಗಳು 21 - ಕನ್ನಡ ಸತ್ಯವೇದವು C.L. Bible (BSI)ಜೆರುಸಲೇಮಿಗೆ ಪೌಲನ ಅಂತಿಮ ಪಯಣ 1 ನಾವು ಅವರನ್ನು ಬಿಟ್ಟು ಅಗಲಿದ ಮೇಲೆ ನೇರವಾಗಿ ನೌಕಾಯಾನ ಮಾಡಿ ಕೋಸ್‍ದ್ವೀಪಕ್ಕೆ ಬಂದೆವು. ಮರುದಿನ ನಾವು ರೋದ ಎಂಬ ಸ್ಥಳವನ್ನು ತಲುಪಿ ಅಲ್ಲಿಂದ ಪತಾರಕ್ಕೆ ಹೋದೆವು. 2 ಅಲ್ಲಿ ಫೆನಿಷ್ಯಕ್ಕೆ ಹೋಗುವ ಹಡಗನ್ನು ಕಂಡು ಅದನ್ನೇರಿ ಪ್ರಯಾಣ ಮಾಡಿದೆವು. 3 ಸೈಪ್ರಸನ್ನು ಸಮೀಪಿಸಿದಾಗ ಅದನ್ನು ಎಡಕ್ಕೆ ಬಿಟ್ಟು ಸಿರಿಯ ದೇಶದ ಕಡೆಗೆ ಸಾಗಿ, ಟೈರ್ ಎಂಬಲ್ಲಿ ಬಂದು ಇಳಿದೆವು. ಇಲ್ಲಿ ಹಡಗಿನ ಸರಕನ್ನು ಇಳಿಸಬೇಕಾಗಿತ್ತು. 4 ಅಲ್ಲಿಯ ಭಕ್ತಾದಿಗಳನ್ನು ಗುರುತುಹಚ್ಚಿ ಒಂದು ವಾರ ಅವರೊಂದಿಗೆ ಇದ್ದೆವು. ಇವರು ಪವಿತ್ರಾತ್ಮಪ್ರೇರಣೆಯಿಂದ ಜೆರುಸಲೇಮಿಗೆ ಹೋಗಬಾರದೆಂದು ಪೌಲನಿಗೆ ತಿಳಿಸಿದರು. 5 ಆದರೂ, ಆ ದಿನಗಳು ಕಳೆದ ಮೇಲೆ, ಅವರನ್ನು ಬಿಟ್ಟು ನಮ್ಮ ಪ್ರಯಾಣವನ್ನು ಮುಂದುವರಿಸಲು ಅನುವಾದೆವು. ಅವರಾದರೋ, ಮಡದಿ ಮಕ್ಕಳೊಡನೆ ಪಟ್ಟಣ ಬಿಟ್ಟು ಸಮುದ್ರತೀರದವರೆಗೂ ನಮ್ಮೊಡನೆ ಬಂದರು. ಅಲ್ಲಿ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು. 6 ಪರಸ್ಪರ ಬೀಳ್ಕೊಡುಗೆಯಾದ ಬಳಿಕ ಹಡಗನ್ನು ಹತ್ತಿದೆವು. ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು. 7 ಟೈರ್‍ನಿಂದ ಹೊರಟು ಪ್ತೊಲೊಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿ ಭಕ್ತಾದಿಗಳನ್ನು ವಂದಿಸಿ ಅವರೊಡನೆ ಒಂದು ದಿನ ಇದ್ದೆವು. 8 ಮಾರನೆಯ ದಿನ ಅಲ್ಲಿಂದ ಹೊರಟು ಸೆಜರೇಯಕ್ಕೆ ಬಂದೆವು. ಅಲ್ಲಿ ಶುಭಸಂದೇಶ ಪ್ರಚಾರಕ ಫಿಲಿಪ್ಪನ ಮನೆಗೆ ಹೋಗಿ ಅವನೊಡನೆ ತಂಗಿದೆವು. ಜೆರುಸಲೇಮಿನಲ್ಲಿ ಆಯ್ಕೆಯಾದ ಏಳುಮಂದಿಯಲ್ಲಿ ಇವನೂ ಒಬ್ಬನು. 9 ಅವನಿಗೆ ನಾಲ್ಕುಮಂದಿ ಅವಿವಾಹಿತ ಹೆಣ್ಣುಮಕ್ಕಳಿದ್ದರು. ಇವರೂ ದೇವರ ವಾಕ್ಯವನ್ನು ಪ್ರಚಾರಮಾಡುತ್ತಿದ್ದರು. 10 ಅಲ್ಲಿ ನಾವು ಕೆಲವು ದಿನ ಇದ್ದೆವು. ಆಗ ಅಗಬ ಎಂಬ ಪ್ರವಾದಿ ನಮ್ಮನ್ನು ನೋಡಲು ಜುದೇಯದಿಂದ ಬಂದನು. 11 ಅವನು ಪೌಲನ ಸೊಂಟಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳನ್ನು ಬಿಗಿದುಕೊಂಡು, “ಪವಿತ್ರಾತ್ಮ ಹೀಗೆನ್ನುತ್ತಾರೆ: ‘ಈ ಸೊಂಟಪಟ್ಟಿಯು ಯಾರದೋ ಅವನನ್ನು ಜೆರುಸಲೇಮಿನಲ್ಲಿ ಯೆಹೂದ್ಯರು ಹೀಗೆಯೇ ಕಟ್ಟಿ, ಅನ್ಯಧರ್ಮೀಯರ ವಶಕ್ಕೆ ಒಪ್ಪಿಸುವರು,’ “ ಎಂದನು. 12 ಈ ಮಾತುಗಳನ್ನು ಕೇಳಿದ ನಾವೂ ಅಲ್ಲಿದ್ದವರೂ ಪೌಲನನ್ನು ಜೆರುಸಲೇಮಿಗೆ ಹೋಗಬಾರದೆಂದು ಕಳಕಳಿಯಿಂದ ಕೇಳಿಕೊಂಡೆವು. 13 ಅದಕ್ಕೆ ಅವನು ಪ್ರತ್ಯುತ್ತರವಾಗಿ, “ನೀವು ಮಾಡುತ್ತಿರುವುದಾದರೂ ಏನು? ನಿಮ್ಮ ಅಳುವಿನಿಂದ ನನ್ನ ಹೃದಯವನ್ನು ಸೀಳುತ್ತಿರುವಿರಾ? ನಾನು ಜೆರುಸಲೇಮಿನಲ್ಲಿ ಬಂಧಿತನಾಗುವುದಕ್ಕೆ ಮಾತ್ರವಲ್ಲ, ಪ್ರಭು ಯೇಸುವಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು. 14 ಪೌಲನು ಸಮ್ಮತಿಸುವುದಿಲ್ಲವೆಂದು ನಮಗೆ ಸ್ಪಷ್ಟವಾದಾಗ “ಪ್ರಭುವಿನ ಚಿತ್ತದಂತೆ ಆಗಲಿ,” ಎಂದು ಸುಮ್ಮನಾದೆವು. 15 ಕೆಲವು ದಿನಗಳಾದ ಮೇಲೆ ನಾವು ಪ್ರಯಾಣ ಸಿದ್ಧತೆಗಳನ್ನು ಮಾಡಿಕೊಂಡು ಹೊರಟೆವು. 16 ಸೆಜರೇಯ ಪಟ್ಟಣದಿಂದ ಕೆಲವು ಶಿಷ್ಯರು ನಮ್ಮೊಡನೆ ಬಂದರು. ನಾವು ತಂಗಲಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ಅವರು ನಮ್ಮನ್ನು ಕರೆದುಕೊಂಡು ಹೋದರು. ಈ ಮ್ನಾಸೋನನು ಆದಿಶಿಷ್ಯರಲ್ಲಿ ಒಬ್ಬನಾಗಿದ್ದನು. ಕ್ರೈಸ್ತ ಹಿರಿಯರು ಪೌಲನಿಗೆ ಕೊಟ್ಟ ಸಲಹೆ 17 ನಾವು ಜೆರುಸಲೇಮಿಗೆ ಬಂದಾಗ ಅಲ್ಲಿನ ಸಹೋದರರು ನಮ್ಮನ್ನು ಸಂತೋಷದಿಂದ ಸ್ವಾಗತಿಸಿದರು. 18 ಮಾರನೆಯ ದಿನ ಪೌಲನು ನಮ್ಮನ್ನು ಕರೆದುಕೊಂಡು ಯಕೋಬನನ್ನು ನೋಡಲು ಹೋದನು. ಧರ್ಮಸಭೆಯ ಹಿರಿಯರೆಲ್ಲರೂ ಅಲ್ಲಿ ಹಾಜರಿದ್ದರು. 19 ಪೌಲನು ಅವರಿಗೆ ನಮಸ್ಕರಿಸಿ ತನ್ನ ಸೇವೆಯ ಮೂಲಕ ದೇವರು ಯೆಹೂದ್ಯೇತರರ ಮಧ್ಯೆ ಮಾಡಿದ ಮಹತ್ಕಾರ್ಯಗಳನ್ನು ಒಂದೊಂದಾಗಿ ವರದಿಮಾಡಿದನು. 20 ಇದನ್ನು ಕೇಳಿದ ಅವರು ದೇವರನ್ನು ಕೊಂಡಾಡಿದರು. ಅನಂತರ ಅವರು ಪೌಲನಿಗೆ ಹೀಗೆಂದರು: "ಸಹೋದರಾ, ನಿನಗೆ ತಿಳಿದಿರುವಂತೆ ಯೆಹೂದ್ಯರಲ್ಲಿ ಭಕ್ತವಿಶ್ವಾಸಿಗಳಾಗಿರುವವರು ಸಾವಿರಾರು ಮಂದಿ ಇದ್ದಾರೆ; ಅವರೆಲ್ಲರೂ ಯೆಹೂದ್ಯ ಧರ್ಮಶಾಸ್ತ್ರದಲ್ಲಿ ಬಹಳ ಶ್ರದ್ಧೆ ಉಳ್ಳವರು. 21 ನಿನ್ನ ವಿಷಯ ಅವರಿಗೆ ತಿಳಿದುಬಂದಿದೆ. ಅದೇನೆಂದರೆ ನೀನು ಅನ್ಯಧರ್ಮೀಯರ ನಡುವೆ ವಾಸಿಸುತ್ತಿರುವ ಯೆಹೂದ್ಯರೆಲ್ಲರಿಗೆ, ‘ನೀವು ಮೋಶೆಯ ನೇಮನಿಯಮಗಳನ್ನು ಅನುಸರಿಸಬಾರದು, ನಿಮ್ಮ ಮಕ್ಕಳಿಗೆ ಸುನ್ನತಿಯನ್ನು ಮಾಡಿಸಬಾರದು, ಯೆಹೂದ್ಯ ಸಂಪ್ರದಾಯಗಳನ್ನು ಆಚರಿಸಬಾರದು,’ ಎಂದು ಬೋಧಿಸುತ್ತಿರುವಿಯಂತೆ. 22 ನೀನು ಇಲ್ಲಿಗೆ ಬಂದಿರುವುದು ಅವರಿಗೆ ಖಂಡಿತವಾಗಿ ತಿಳಿದೇ ತಿಳಿಯುತ್ತದೆ. ಈಗ ಏನು ಮಾಡೋಣ? 23 ಆದುದರಿಂದ ನಾವು ಹೇಳಿದಂತೆ ಮಾಡು; ನಮ್ಮಲ್ಲಿ ಹರಕೆಹೊತ್ತಿರುವವರು ನಾಲ್ಕುಮಂದಿ ಇದ್ದಾರೆ. 24 ನೀನು ಅವರನ್ನು ಕರೆದುಕೊಂಡು ಹೋಗಿ ಅವರ ಜೊತೆಯಲ್ಲಿ ನೀನೂ ಶುದ್ಧಾಚಾರವಿಧಿಯನ್ನು ಮಾಡಿಸಿಕೊ. ಅವರ ಖರ್ಚುವೆಚ್ಚವನ್ನೆಲ್ಲಾ ನೀನೇ ವಹಿಸಿಕೋ. ಅವರು ಮುಂಡನ ಮಾಡಿಸಿಕೊಳ್ಳಲಿ. ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿಸಿಕೊಂಡಿರುವ ವಿಷಯ ನಿಜವಲ್ಲವೆಂದೂ ನೀನು ಕೂಡ ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯುತ್ತಿರುವೆ ಎಂದೂ ಅವರೆಲ್ಲರಿಗೂ ಮನವರಿಕೆಯಾಗುವುದು. 25 ವಿಶ್ವಾಸಿಗಳಾಗಿರುವ ಯೆಹೂದ್ಯೇತರಿಗಾದರೋ ನಾವೀಗಲೇ ಪತ್ರವನ್ನು ಕಳುಹಿಸಿದ್ದೇವೆ. ಅದರಲ್ಲಿ ಅವರು ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ಸೇವಿಸಬಾರದು, ಅನೈತಿಕತೆಯಿಂದ ದೂರವಿರಬೇಕು, ರಕ್ತವನ್ನಾಗಲೀ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲೀ ತಿನ್ನಬಾರದು, ಎಂದು ತೀರ್ಮಾನಕೊಟ್ಟಿದ್ದೇವೆ,” ಎಂದರು. 26 ಅಂತೆಯೇ ಪೌಲನು ಮಾರನೆಯ ದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ಮಹಾದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು. ಪೌಲನ ಬಂಧನ 27 ಶುದ್ಧಾಚಾರದ ಏಳು ದಿನಗಳ ಅವಧಿ ಮುಗಿಯುತ್ತಿದ್ದಂತೆ ಏಷ್ಯದ ಕೆಲವು ಯೆಹೂದ್ಯರು ಪೌಲನನ್ನು ದೇವಾಲಯದಲ್ಲಿ ಕಂಡರು. ಕೂಡಲೇ ಅವರು ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು. 28 “ಇಸ್ರಯೇಲಿನ ಮಹಾಜನರೇ, ಬೇಗ ಬನ್ನಿ; ನಮ್ಮ ಜನಾಂಗಕ್ಕೂ ನಮ್ಮ ಧರ್ಮಶಾಸ್ತ್ರಕ್ಕೂ ಈ ಮಹಾದೇವಾಲಯಕ್ಕೂ ವಿರುದ್ಧವಾಗಿ ಬೋಧಿಸುವ ವ್ಯಕ್ತಿ ಇವನೇ; ಎಲ್ಲೆಡೆಯಲ್ಲೂ ಎಲ್ಲರಿಗೂ ಇವನು ನಮಗೆ ವಿರುದ್ಧವಾಗಿ ಬೋಧಿಸುತ್ತಾನೆ. ಅಷ್ಟು ಮಾತ್ರವಲ್ಲ. ಈ ಪವಿತ್ರಾಲಯದೊಳಕ್ಕೆ ಅನ್ಯಧರ್ಮೀಯರನ್ನು ಕರೆತಂದು ಇದನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿಕೊಂಡರು. 29 ಎಫೆಸದ ತ್ರೊಫಿಮ ಎಂಬವನು ಪೌಲನ ಸಂಗಡ ಪಟ್ಟಣದಲ್ಲಿ ಇದ್ದುದನ್ನು ಅವರು ನೋಡಿದ್ದರು. ಈಗ ಅವನನ್ನೂ ದೇವಾಲಯದೊಳಕ್ಕೆ ಪೌಲನು ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು. 30 ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ನಾಲ್ಕು ದಿಕ್ಕುಗಳಿಂದಲೂ ಓಡಿಬಂದರು. ಪೌಲನನ್ನು ದೇವಾಲಯದಿಂದ ಹೊರಗೆ ಎಳೆದುಹಾಕಿ ಮಹಾದೇವಾಲಯದ ದ್ವಾರಗಳನ್ನು ಮುಚ್ಚಿದರು. 31 ಜನರ ಗುಂಪು ಪೌಲನನ್ನು ಕೊಲ್ಲಲು ಯತ್ನಿಸುತ್ತಿದ್ದಾಗ ಜೆರುಸಲೇಮಿನಾದ್ಯಂತ ಗಲಭೆಯುಂಟಾಗಿದೆ ಎಂದು ಅಲ್ಲಿನ ರೋಮ್ ಸೈನ್ಯಾಧಿಪತಿಗೆ ವರದಿ ಬಂದಿತು. 32 ಆ ಕ್ಷಣವೇ, ಅವನು ಕೆಲವು ಶತಾಧಿಪತಿಗಳನ್ನೂ ಸೈನಿಕರನ್ನೂ ಕರೆದುಕೊಂಡು ಜನಸಮೂಹವಿದ್ದ ಕಡೆ ಧಾವಿಸಿದನು. ಸೈನಿಕರೊಡನೆ ಬರುತ್ತಿರುವ ಸೈನ್ಯಾಧಿಪತಿಯನ್ನು ಕಂಡು ಜನರು ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು. 33 ಸೈನ್ಯಾಧಿಪತಿ ಹತ್ತಿರಕ್ಕೆ ಬಂದು, ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟುವಂತೆ ಆಜ್ಞಾಪಿಸಿದನು. “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು. 34 ಜನಜಂಗುಳಿಯಲ್ಲಿ ಹಲವರು ಹಲವಿಧವಾಗಿ ಕೂಗಾಡತೊಡಗಿದರು. ಗದ್ದಲ ಹೆಚ್ಚಾಗಿದ್ದುದರಿಂದ ಸೈನ್ಯಾಧಿಪತಿಗೆ ನಿಜಸ್ಥಿತಿಯನ್ನು ತಿಳಿಯಲಾಗಲಿಲ್ಲ. ಆದುದರಿಂದ ಪೌಲನನ್ನು ಕೋಟೆಯೊಳಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದನು. 35 ಪೌಲನನ್ನು ಮೆಟ್ಟಲುಗಳವರೆಗೆ ಕರೆದುಕೊಂಡು ಬರಲಾಯಿತು. ಅನಂತರ ಜನರ ನೂಕುನುಗ್ಗಲಿನ ನಿಮಿತ್ತ ಅವನನ್ನು ಸೈನಿಕರು ಹೊತ್ತುಕೊಂಡು ಹೋಗಬೇಕಾಯಿತು. 36 ಜನರು, “ಅವನನ್ನು ಕೊಲ್ಲಿ, ಕೊಲ್ಲಿ,” ಎಂದು ಆರ್ಭಟಿಸುತ್ತಾ ಬೆನ್ನಟ್ಟಿ ಬರುತ್ತಿದ್ದರು. ಪೌಲನ ಸಮರ್ಥನೆ 37 ಪೌಲನನ್ನು ಕೋಟೆಯೊಳಕ್ಕೆ ಕೊಂಡು ಒಯ್ಯುತ್ತಿದ್ದಾಗ, ಅವನು ಸೈನ್ಯಾಧಿಪತಿಗೆ, “ನಾನು ನಿಮ್ಮೊಡನೆ ಸ್ವಲ್ಪ ಮಾತಾಡಬಹುದೇ?’ ಎಂದನು. ಅದಕ್ಕೆ ಅವನು, “ನಿನಗೆ ಗ್ರೀಕ್‍ಭಾಷೆಯೂ ಗೊತ್ತಿದೆಯಾ? 38 ಹಾಗಾದರೆ ಕೆಲವು ಕಾಲದ ಹಿಂದೆ ಕ್ರಾಂತಿಯೆಬ್ಬಿಸಿ ನಾಲ್ಕು ಸಾವಿರ ಡಕಾಯಿತರನ್ನು ಅಡವಿಗೆ ಕರೆದುಕೊಂಡು ಹೋದ ಈಜಿಪ್ಟಿನವನು ನೀನೇ ಅಲ್ಲವೇ?’ ಎಂದು ಪ್ರಶ್ನಿಸಿದನು. 39 ಪೌಲನು ಪ್ರತ್ಯುತ್ತರವಾಗಿ, “ನಾನು ಯೆಹೂದ್ಯನು, ತಾರ್ಸದವನು, ಸಿಲಿಸಿಯ ಪ್ರಾಂತ್ಯದ ಪ್ರಖ್ಯಾತ ಪಟ್ಟಣದವನು. ಈ ಜನರೊಡನೆ ಮಾತನಾಡಲು ದಯವಿಟ್ಟು ಅವಕಾಶಕೊಡಿ,” ಎಂದು ಭಿನ್ನವಿಸಿದನು. 40 ಸೈನ್ಯಾಧಿಪತಿ ಅಪ್ಪಣೆ ಕೊಡಲು, ಪೌಲನು ಮೆಟ್ಟಲಿನ ಮೇಲೆ ನಿಂತು ಜನರನ್ನು ನೋಡಿ ಮೌನವಾಗಿರುವಂತೆ ಕೈಸನ್ನೆ ಮಾಡಿದನು. ಆಗ ನಿಶ್ಯಬ್ದ ಉಂಟಾಯಿತು. ಅನಂತರ ಅವರನ್ನು ಸಂಬೋಧಿಸಿ ಹಿಬ್ರುಭಾಷೆಯಲ್ಲಿ ಮಾತಾಡುತ್ತಾ ಹೀಗೆಂದನು: |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India