ಅಪೊಸ್ತಲರ ಕೃತ್ಯಗಳು 20 - ಕನ್ನಡ ಸತ್ಯವೇದವು C.L. Bible (BSI)ಎಫೆಸದಿಂದ ಪೌಲನ ನಿರ್ಗಮನ 1 ಕೋಲಾಹಲವು ಅಡಗಿದ ಮೇಲೆ ಪೌಲನು ಭಕ್ತವಿಶ್ವಾಸಿಗಳನ್ನು ಬರಮಾಡಿಕೊಂಡು ಪ್ರೋತ್ಸಾಹದ ಮಾತುಗಳನ್ನಾಡಿ ಅವರನ್ನು ಬೀಳ್ಕೊಟ್ಟು ಮಕೆದೋನಿಯಕ್ಕೆ ಹೋದನು. 2 ಆ ಪ್ರದೇಶದಲ್ಲಿ ಸಂಚಾರಮಾಡಿ ಭಕ್ತಾದಿಗಳನ್ನು ಹಲವಾರು ವಿಧದಲ್ಲಿ ಪ್ರೋತ್ಸಾಹಿಸಿದನು. ಅನಂತರ ಅಲ್ಲಿಂದ ಅಖಾಯಕ್ಕೆ ಬಂದನು. 3 ಇಲ್ಲಿ ಅವನು ಮೂರು ತಿಂಗಳು ಕಳೆದನು. ಬಳಿಕ ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗುತ್ತಿದ್ದಾಗ , ಯೆಹೂದ್ಯರು ಅವನ ವಿರುದ್ಧ ಒಳಸಂಚು ಮಾಡುತ್ತಿರುವುದಾಗಿ ತಿಳಿದುಬಂದಿತು. ಆದುದರಿಂದ ಅವನು ಮಕೆದೋನಿಯದ ಮಾರ್ಗವಾಗಿ ಹಿಂದಿರುಗಲು ನಿರ್ಧರಿಸಿದನು. 4 ಬೆರೋಯ ಪಟ್ಟಣದ ಪುರನ ಮಗ ಸೋಪತ್ರನು ಅವನೊಡನೆ ಹೋದನು. ಅಂತೆಯೇ ಥೆಸಲೋನಿಕದ ಅರಿಸ್ತಾರ್ಕ ಹಾಗು ಸೆಕುಂದ, ದೆರ್ಬೆ ಪಟ್ಟಣದ ಗಾಯ, ಏಷ್ಯದ ತುಖಿಕ ಹಾಗು ತಿಮೊಥೇಯ ಅವನೊಡನೆ ಹೊರಟರು. 5 ಇವರು ಮುಂಚಿತವಾಗಿ ಹೋಗಿ ತ್ರೋವದಲ್ಲಿ ನಮಗಾಗಿ ಕಾದಿದ್ದರು. 6 ನಾವು ಹುಳಿರಹಿತ ರೊಟ್ಟಿಯ ಹಬ್ಬದ ನಂತರ ಫಿಲಿಪ್ಪಿಯಿಂದ ನೌಕಾಯಾನ ಹೊರಟೆವು. ಐದು ದಿನಗಳ ನಂತರ ತ್ರೋವದಲ್ಲಿ ಅವರನ್ನು ಸೇರಿ, ಅಲ್ಲಿ ಏಳುದಿನ ತಂಗಿದೆವು. ಯುತಿಕನಿಗೆ ಜೀವದಾನ 7 ವಾರದ ಮೊದಲನೆಯ ದಿನ ‘ರೊಟ್ಟಿ ಮುರಿಯುವ’ ಸಹಭೋಜನಕ್ಕೆ ನಾವು ಜೊತೆಕೂಡಿದ್ದೆವು. ಪೌಲನು ಮಾರನೆಯ ದಿನ ಅವರನ್ನು ಬಿಟ್ಟುಹೊರಡಬೇಕಾದ್ದರಿಂದ ಉಪನ್ಯಾಸ ಮಾಡಲಾರಂಭಿಸಿ, ಮಧ್ಯರಾತ್ರಿಯವರೆಗೂ ಮುಂದುವರೆಸಿದನು. 8 ನಾವು ಸಭೆಸೇರಿದ್ದ ಮೇಲಂತಸ್ತಿನ ಕೊಠಡಿಯಲ್ಲಿ ಅನೇಕ ದೀಪಗಳು ಉರಿಯುತ್ತಿದ್ದವು. 9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ದೀರ್ಘಕಾಲ ಮಾತನಾಡುತ್ತಲೇ ಇದ್ದುದರಿಂದ ಯುತಿಕನಿಗೆ ಗಾಢನಿದ್ರೆ ಹತ್ತಿತು; ತೂಕಡಿಕೆ ಹೆಚ್ಚಾಗಿ ಅವನು ಮೂರನೆಯ ಅಂತಸ್ತಿನಿಂದ ನೆಲಕ್ಕೆ ಬಿದ್ದುಬಿಟ್ಟನು. ಅವನನ್ನು ಎತ್ತಿ ನೋಡುವಾಗ ಅವನು ಸತ್ತಿದ್ದನು. 10 ಆದರೆ ಪೌಲನು ಕೆಳಗೆ ಇಳಿದುಹೋಗಿ ಅವನ ಮೇಲೆ ಬಾಗಿ, ಅವನನ್ನು ತಬ್ಬಿಕೊಂಡು, “ಚಿಂತಿಸಬೇಡಿ, ಇವನಲ್ಲಿ ಇನ್ನೂ ಜೀವವಿದೆ,” ಎಂದನು. 11 ಅನಂತರ ಪೌಲನು ಮೇಲಂತಸ್ತಿಗೆ ಹಿಂದಿರುಗಿ, ರೊಟ್ಟಿಯನ್ನು ಮುರಿದು ಸಹಭೋಜನ ಮಾಡಿದನು. ಮುಂಜಾವದವರೆಗೂ ಅವರೊಡನೆ ಮಾತನಾಡಿ ಅಲ್ಲಿಂದ ಹೊರಟುಹೋದನು. 12 ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡುಹೋದರು. ಅವರಿಗಾದ ಸಾಂತ್ವನ ಅಷ್ಟಿಷ್ಟಲ್ಲ! ಮಿಲೇತಕ್ಕೆ ಪೌಲನ ಪ್ರಯಾಣ 13 ಪೌಲನು ನಮಗಿತ್ತ ಸೂಚನೆಯ ಪ್ರಕಾರ ನಾವು ಹಡಗುಹತ್ತಿ ಅಸ್ಸೊಸಿ ಎಂಬ ಊರಿಗೆ ಮುಂಚಿತವಾಗಿ ಪ್ರಯಾಣಮಾಡಿದೆವು. ತಾನು ಅಲ್ಲಿಗೆ ಭೂಮಾರ್ಗವಾಗಿ ಬರುವುದಾಗಿಯೂ ಅಲ್ಲಿ ತನ್ನನ್ನು ಹಡಗಿಗೆ ಏರಿಸಿಕೊಳ್ಳಬೇಕೆಂದೂ ಪೌಲನು ತಿಳಿಸಿದ್ದನು. 14 ಅಂತೆಯೇ ಅಸ್ಸೊಸಿಯಲ್ಲಿ ಅವನನ್ನು ಭೇಟಿಯಾಗಿ ಹಡಗಿಗೆ ಏರಿಸಿಕೊಂಡು ಮಿತಿಲೇನಿಗೆ ಬಂದೆವು. 15 ಅಲ್ಲಿಂದ ನೌಕಾಯಾನ ಮಾಡಿ ಮರುದಿನ ಖಿಯೋಸ ದ್ವೀಪವನ್ನು ಸಮೀಪಿಸಿ ಮಾರನೆಯ ದಿನ ಸಾಮೋಸನ್ನು ತಲುಪಿದೆವು. ಅದರ ಮಾರನೆಯ ದಿನ ಮಿಲೇತನ್ನು ಸೇರಿದೆವು. 16 ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂಬ ಆತುರ ಪೌಲನಿಗೆ ಇದ್ದುದರಿಂದ, ಏಷ್ಯದಲ್ಲಿ ಕಾಲ ವಿಳಂಬಮಾಡಲು ಮನಸ್ಸಿಲ್ಲದೆ, ಎಫೆಸವನ್ನು ದಾಟಿ ಹೋಗಬೇಕೆಂದು ಅವನು ತೀರ್ಮಾನಿಸಿದನು. ಎಫೆಸದ ಹಿರಿಯರಿಗೆ ಕೊನೆಯ ಬುದ್ಧಿಮಾತು 17 ಪೌಲನು ಮಿಲೇತದಿಂದ ಎಫೆಸಕ್ಕೆ ಸಮಾಚಾರ ಕಳುಹಿಸಿ, ಅಲ್ಲಿನ ಧರ್ಮಸಭೆಯ ಪ್ರಮುಖರನ್ನು ಬರಮಾಡಿಕೊಂಡನು. 18 ಬಂದಮೇಲೆ ಅವರಿಗೆ ಹೀಗೆಂದನು : “ನಾನು ಏಷ್ಯಪ್ರಾಂತ್ಯದಲ್ಲಿ ಕಾಲಿಟ್ಟ ದಿನ ಮೊದಲ್ಗೊಂಡು ಇಂದಿನವರೆಗೆ ನಿಮ್ಮ ಮಧ್ಯೆ ಹೇಗೆ ಬಾಳಿದೆನೆಂದು ನಿಮಗೆ ತಿಳಿದಿದೆ. 19 ಯೆಹೂದ್ಯರ ಕುತಂತ್ರಗಳಿಂದ ನನಗೆ ಬಂದೊದಗಿದ ಸಂಕಷ್ಟಗಳಲ್ಲಿ ನಾನು ಅತಿ ನಮ್ರತೆಯಿಂದಲೂ ಕಣ್ಣೀರಿಡುತ್ತಲೂ ಪ್ರಭುವಿನ ಸೇವೆಮಾಡಿಕೊಂಡು ಬಂದೆನು. 20 ನಿಮಗೆ ಹಿತಕರವಾದುದೆಲ್ಲವನ್ನು ಬಹಿರಂಗದಲ್ಲೂ ಮನೆಗಳಲ್ಲೂ ಹಿಂಜರಿಯದೆ ಬೋಧಿಸಿದ್ದೇನೆ ಹಾಗೂ ಕಲಿಸಿದ್ದೇನೆ. 21 ಪಾಪಕ್ಕೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಬೇಕು, ನಮ್ಮ ಪ್ರಭು ಯೇಸುವಿನಲ್ಲಿ ವಿಶ್ವಾಸವಿಡಬೇಕು, ಎಂದು ಯೆಹೂದ್ಯರಿಗೂ ಗ್ರೀಕರಿಗೂ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿದ್ದೇನೆ. 22 ಈಗಲಾದರೋ, ಪವಿತ್ರಾತ್ಮ ಪರವಶನಾಗಿ ನಾನು ಜೆರುಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೇನು ಸಂಭವಿಸುವುದೋ ತಿಳಿಯದು. 23 ಸೆರೆಮನೆ ಹಾಗೂ ಸಂಕಷ್ಟಗಳು ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ಪ್ರತಿಯೊಂದು ಪಟ್ಟಣದಲ್ಲೂ ಕೊಟ್ಟ ಎಚ್ಚರಿಕೆ ಮಾತ್ರ ಸ್ಪಷ್ಟವಾಗಿದೆ. ನನಗಾದರೋ, ನನ್ನ ಪ್ರಾಣವು ತೃಣಕ್ಕೆ ಸಮಾನ. 24 ಪ್ರಭು ಯೇಸು ನನಗೆ ವಿಧಿಸಿದ ಆಯೋಗವನ್ನು, ಅಂದರೆ ದೈವಾನುಗ್ರಹ ಕುರಿತಾದ ಶುಭಸಂದೇಶವನ್ನು ಸಾಕ್ಷ್ಯಪೂರ್ವಕವಾಗಿ ಸಾರುವ ಆಯೋಗವನ್ನು, ಪೂರೈಸುತ್ತಾ ನನ್ನ ಬಾಳಿನ ಗುರಿಯನ್ನು ಮುಟ್ಟುವೆನಾದರೆ, ನನಗೆ ಅಷ್ಟೇ ಸಾಕಾಗಿದೆ. 25 ಇಗೋ, ಇಷ್ಟು ದಿನ ದೇವರ ಸಾಮ್ರಾಜ್ಯವನ್ನು ಪ್ರಕಟಿಸುತ್ತಾ ನಿಮ್ಮ ಮಧ್ಯೆ ಸಂಚರಿಸಿದ ನನ್ನ ಮುಖವನ್ನು ಇನ್ನು ಮುಂದೆ ನೀವು ಯಾರೂ ಕಾಣಲಾರಿರಿ ಎಂದು ನಾನು ಬಲ್ಲೆ. 26 ಇಂತಿರಲು ನಾನು ನಿಮಗೆ ಸಾರಿ ಹೇಳುವುದೇನೆಂದರೆ - “ನಿಮ್ಮಲ್ಲಿ ಯಾರಾದರು ನಾಶವಾದರೆ, ಅದಕ್ಕೆ ನಾನು ಹೊಣೆಯಲ್ಲ. 27 ಏಕೆಂದರೆ, ದೈವಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ. 28 ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ. 29 ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿಮಾಡದೆ ಬಿಡವು. 30 ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು. 31 ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. 32 “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. 33 ನಾನು ಯಾರ ಬೆಳ್ಳಿಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. 34 ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. 35 ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.” 36 ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. 37 ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. 38 ‘ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India