ಅಪೊಸ್ತಲರ ಕೃತ್ಯಗಳು 19 - ಕನ್ನಡ ಸತ್ಯವೇದವು C.L. Bible (BSI)ಎಫೆಸದಲ್ಲಿ ಧರ್ಮಸಭೆಯ ಸ್ಥಾಪನೆ 1 ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು, 2 “ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?’ ಎಂದು ಕೇಳಿದನು. ಅದಕ್ಕೆ ಅವರು, “ಪವಿತ್ರಾತ್ಮ ಎಂಬವರು ಇದ್ದಾರೆಂದು ನಾವು ಕೇಳಿಯೇ ಇಲ್ಲ,” ಎಂದು ಉತ್ತರಿಸಿದರು. 3 ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?” ಎಂದು ಪೌಲನು ಕೇಳಲು, “ನಾವು ಯೊವಾನ್ನನ ಸ್ನಾನದೀಕ್ಷೆ ಪಡೆದೆವು,” ಎಂದರು. 4 ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು. 5 ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು. 6 ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು. 7 ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು. 8 ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ, ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು. 9 ಆದರೆ ಅವರಲ್ಲಿ ಕೆಲವರು ಹಠಮಾರಿಗಳು; ಅವರು ವಿಶ್ವಾಸವನ್ನು ನಿರಾಕರಿಸಿದ್ದೂ ಅಲ್ಲದೆ ಈ ಹೊಸಮಾರ್ಗವನ್ನು ಸಭೆಯ ಮುಂದೆ ದೂಷಿಸತೊಡಗಿದರು. ಈ ಕಾರಣ ಪೌಲನು ಅವರನ್ನು ಬಿಟ್ಟು ಶಿಷ್ಯರನ್ನು ಕರೆದುಕೊಂಡು ತುರಾನ್ನ ಎಂಬವನ ತರ್ಕಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸುತ್ತಾ ಬಂದನು. 10 ಹೀಗೆ ಎರಡು ವರ್ಷಗಳು ಕಳೆದವು. ಇದರ ಪರಿಣಾಮವಾಗಿ ಏಷ್ಯಾದಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಪ್ರಭುವಿನ ವಾಕ್ಯವನ್ನು ಕೇಳಲು ಅನುಕೂಲವಾಯಿತು. ಎಫೆಸದಲ್ಲಿ ಮಂತ್ರತಂತ್ರಗಳ ಅಂತ್ಯ 11 ದೇವರು ಪೌಲನ ಕೈಯಿಂದ ಅಸಾಧಾರಣ ಅದ್ಭುತಗಳನ್ನು ಮಾಡಿಸುತ್ತಿದ್ದರು. 12 ಅವನು ಬಳಸಿದ ಕರವಸ್ತ್ರಗಳನ್ನೂ ಉಡುವಸ್ತ್ರಗಳನ್ನೂ ಜನರು ತೆಗೆದುಕೊಂಡು ಹೋಗಿ ವ್ಯಾಧಿಸ್ಥರಿಗೆ ಮುಟ್ಟಿಸಿದ್ದೇ, ಅವರ ವ್ಯಾಧಿಗಳು ಗುಣವಾಗುತ್ತಿದ್ದವು; ದೆವ್ವಗಳು ಬಿಟ್ಟುಹೋಗುತ್ತಿದ್ದವು. 13 “ದೆವ್ವಬಿಡಿಸುವವರು” ಎನಿಸಿಕೊಂಡು ಊರೂರು ಸುತ್ತುತ್ತಿದ್ದ ಕೆಲವು ಯೆಹೂದ್ಯರು ಸಹ ಪ್ರಭು ಯೇಸುವಿನ ನಾಮವನ್ನು ಬಳಸಿ ದೆವ್ವಬಿಡಿಸಲು ಯತ್ನಿಸಿದರು. ಇವರು ದೆವ್ವಗಳಿಗೆ, “ಪೌಲನು ಸಾರುತ್ತಿರುವ ಯೇಸುವಿನ ನಾಮದಲ್ಲಿ ನಿಮಗೆ ಆಣೆಯಿಟ್ಟು ಆಜ್ಞಾಪಿಸುತ್ತೇವೆ,” ಎಂದು ಹೇಳುತ್ತಿದ್ದರು. 14 ಮುಖ್ಯಯಾಜಕನಾಗಿದ್ದ ಸ್ಕೇವ ಎಂಬವನ ಏಳು ಮಕ್ಕಳು ಹೀಗೆಯೇ ಮಾಡುತ್ತಿದ್ದರು. 15 ಆದರೆ ಆ ದೆವ್ವ ಅವರಿಗೆ, “ಯೇಸು ನನಗೆ ಗೊತ್ತು, ಪೌಲನನ್ನು ನಾನು ಬಲ್ಲೆ; ಆದರೆ ನೀವು ಯಾರು?” ಎಂದು ಪ್ರಶ್ನಿಸಿತು. 16 ಅಲ್ಲದೆ ದೆವ್ವ ಹಿಡಿದಿದ್ದ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅಪ್ಪಳಿಸಿ, ಅವರೆಲ್ಲರನ್ನೂ ಅಧೀನಪಡಿಸಿದನು. ಅವರು ಗಾಯಗೊಂಡು, ನಗ್ನರಾಗಿ, ಆ ಮನೆಯಿಂದ ಓಡಿಹೋದರು. 17 ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರೂ ಅನ್ಯಧರ್ಮೀಯರೂ ಈ ವಿಷಯವನ್ನು ಕೇಳಿ ಭಯಭೀತರಾದರು. ಪ್ರಭು ಯೇಸುವಿನ ನಾಮವನ್ನು ಸಂಕೀರ್ತಿಸಿದರು. 18 ಭಕ್ತವಿಶ್ವಾಸಿಗಳಾದ ಅನೇಕರು ಮುಂದೆ ಬಂದು ತಮ್ಮ ದುಷ್ಕೃತ್ಯಗಳನ್ನು ಬಹಿರಂಗವಾಗಿ ಒಪ್ಪಿಕೊಂಡು ನಿವೇದಿಸಿದರು. 19 ಮಾಯಮಂತ್ರಮಾಡುತ್ತಿದ್ದ ಅನೇಕರು ತಮ್ಮ ಪುಸ್ತಕಗಳನ್ನು ತೆಗೆದುಕೊಂಡು ಬಂದು ಅವುಗಳನ್ನು ಎಲ್ಲರ ಮುಂದೆ ಸುಟ್ಟುಹಾಕಿದರು. ಆ ಪುಸ್ತಕಗಳ ಬೆಲೆಯನ್ನು ಎಣಿಕೆಮಾಡಿದಾಗ ಅದರ ಮೊತ್ತ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು. 20 ಪ್ರಭುವಿನ ವಾಕ್ಯ ಹೀಗೆ ಹಬ್ಬಿಹರಡಿ ಪ್ರಬಲವಾಯಿತು. ಅರ್ತೆಮೀ ದೇವತೆಯ ಪರವಾಗಿ ದೊಂಬಿ 21 ಈ ಘಟನೆಗಳ ನಂತರ ಪೌಲನು ಮಕೆದೋನಿಯ ಮತ್ತು ಅಖಾಯದ ಮೂಲಕ ಜೆರುಸಲೇಮಿಗೆ ಹೋಗಲು ನಿರ್ಧರಿಸಿಕೊಂಡನು. ಅಲ್ಲಿಗೆ ಹೋದ ಮೇಲೆ ರೋಮ್ ನಗರವನ್ನು ಕೂಡ ನೋಡಬೇಕು ಎಂಬುದು ಅವನ ಉದ್ದೇಶ ಆಗಿತ್ತು. 22 ತನ್ನ ಇಬ್ಬರು ಸಹಾಯಕರಾದ ತಿಮೊಥೇಯ ಮತ್ತು ಎರಾಸ್ತನನ್ನು ಮಕೆದೋನಿಯಕ್ಕೆ ಕಳುಹಿಸಿಬಿಟ್ಟು, ತಾನು ಇನ್ನೂ ಸ್ವಲ್ಪಕಾಲ ಏಷ್ಯದಲ್ಲೇ ಉಳಿದುಕೊಂಡನು. 23 ಅದೇ ಸಮಯಕ್ಕೆ ಎಫೆಸದಲ್ಲಿ ಕ್ರಿಸ್ತಮಾರ್ಗ ಅನ್ವೇಷಣೆಯ ನಿಮಿತ್ತ ತೀವ್ರಗಲಭೆ ಉಂಟಾಯಿತು. 24 ಅಲ್ಲಿ ದೆಮೆತ್ರಿಯ ಎಂಬ ಅಕ್ಕಸಾಲಿಗನಿದ್ದನು. ಇವನು ಅರ್ತೆಮೀ ದೇವತೆಯ ಗುಡಿಗೆ ಬೆಳ್ಳಿಯ ಆಕೃತಿಯನ್ನು ಮಾಡುತ್ತಿದ್ದನು. ಈ ಕಸಬುದಾರರಿಗೆ ಇದು ತುಂಬ ಲಾಭದಾಯಕವಾಗಿತ್ತು. 25 ದೆಮೆತ್ರಿಯನು ಅವರೆಲ್ಲರನ್ನು ಹಾಗೂ ಸಂಬಂಧಪಟ್ಟ ಕಸಬಿನ ಇತರರನ್ನು ಒಟ್ಟುಕೂಡಿಸಿ, “ಮಿತ್ರರೇ, ನಿಮ್ಮ ಸಿರಿಸಂಪತ್ತಿಗೆಲ್ಲಾ ಈ ಕಸಬೇ ಮೂಲಕಾರಣ, ಇದು ನಿಮಗೆ ತಿಳಿದ ವಿಷಯ. 26 ಪೌಲ ಎಂಬವನು ಏನು ಮಾಡುತ್ತಿರುವನೆಂದು ನೀವು ನೋಡಿದ್ದೀರಿ ಹಾಗೂ ಕೇಳಿದ್ದೀರಿ; ಕೈಯಿಂದ ಮಾಡಿದ ಆಕೃತಿಗಳು ದೇವರೇ ಅಲ್ಲವೆಂದು ಇಲ್ಲಿ ಎಫೆಸದಲ್ಲೂ ಹೆಚ್ಚುಕಡಿಮೆ ಇಡೀ ಏಷ್ಯದಲ್ಲೂ ಪ್ರಚಾರಮಾಡುತ್ತಿದ್ದಾನೆ; ಮಾತ್ರವಲ್ಲ, ಅನೇಕ ಜನರನ್ನು ಮನವೊಲಿಸಿ ಮಾರ್ಪಡಿಸಿಬಿಟ್ಟಿದ್ದಾನೆ. 27 ಇದರಿಂದಾಗಿ ನಮ್ಮ ಕಸಬಿಗೇ ಕೆಟ್ಟ ಹೆಸರು ಬರುವ ಅಪಾಯವಿದೆ. ಅಷ್ಟೇ ಏಕೆ, ಅರ್ತೆಮೀ ಮಹಾದೇವಿಯ ಗುಡಿ ಹೇಳಹೆಸರಿಲ್ಲದಂತಾಗುವ ಸಂಭವವಿದೆ. ಇಡೀ ಏಷ್ಯದಲ್ಲೂ ಜಗತ್ತಿನ ಎಲ್ಲೆಲ್ಲೂ ಪೂಜಿಸಲಾಗುವ ಆ ದೇವತೆಯ ವೈಭವ ಅಳಿದುಹೋಗುವ ಅಪಾಯವಿದೆ,” ಎಂದನು. 28 ಈ ಮಾತುಗಳನ್ನು ಕೇಳಿದ ಆ ಜನರು ಕೋಪಾವೇಶದಿಂದ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ!” ಎಂದು ಆರ್ಭಟಿಸಿದರು. 29 ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ಗುಂಪಾಗಿ ಬಂದು ಪೌಲನ ಸಹಪ್ರಯಾಣಿಕರು ಹಾಗೂ ಮಕೆದೋನಿಯದವರು ಆದ ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದರು. ಅವರನ್ನು ಎಳೆದುಕೊಂಡು ಹೋಗಿ ಕ್ರೀಡಾಂಗಣಕ್ಕೆ ಒಟ್ಟಾಗಿ ನುಗ್ಗಿದರು. 30 ಇದನ್ನು ತಿಳಿದ ಪೌಲನು ಜನಸಮೂಹದ ಮುಂದೆಹೋಗಿ ನಿಲ್ಲಬೇಕೆಂದು ಇದ್ದನು. ಆದರೆ ಭಕ್ತಾದಿಗಳು ಅವನನ್ನು ಹೋಗಬಿಡಲಿಲ್ಲ. 31 ಇದೂ ಅಲ್ಲದೆ, ಪೌಲನ ಸ್ನೇಹಿತರಾದ ಕೆಲವು ಸ್ಥಳೀಯ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಹೋಗುವ ಸಾಹಸವನ್ನು ಮಾಡಕೂಡದೆಂದು ವಿನಂತಿಸಿ, ಪೌಲನಿಗೆ ಹೇಳಿಕಳುಹಿಸಿದರು. 32 ಸಭೆಯಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಬೊಬ್ಬೆಹಾಕಿದರೆ, ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗಾಡಲಾರಂಭಿಸಿದರು. ಬಹುಜನರಿಗೆ ತಾವು ಅಲ್ಲಿಗೆ ಬಂದುದರ ಕಾರಣವೇ ತಿಳಿದಿರಲಿಲ್ಲ. 33 ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಸಭೆಯ ಮುಂದಕ್ಕೆ ನೂಕಿದರು. ನೆರೆದಿದ್ದ ಕೆಲವರು ಅವನನ್ನು ಪುಸಲಾಯಿಸಿದರು. ಆಗ ಅಲೆಕ್ಸಾಂಡರನು ಮೌನವಾಗಿರುವಂತೆ ಕೈಸನ್ನೆಮಾಡಿ ಜನರಿಗೆ ಸಮಾಧಾನ ಹೇಳಲು ಪ್ರಯತ್ನಿಸಿದನು. 34 ಆದರೆ ಅವನು ಯೆಹೂದ್ಯನೆಂದು ಗುರುತಿಸಿದ ಕೂಡಲೇ, ಅವರೆಲ್ಲರೂ ಎರಡು ಗಂಟೆಗಳ ಕಾಲ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ,” ಎಂದು ಒಂದೇ ಸಮನೆ ಬೊಬ್ಬೆಹಾಕಿದರು. 35 ಕಟ್ಟಕಡೆಗೆ ಪಟ್ಟಣದ ಅಧಿಕಾರಿ ಒಬ್ಬನು ಜನಸಮೂಹವನ್ನು ಶಾಂತಗೊಳಿಸುತ್ತಾ ಹೀಗೆಂದನು: “ಎಫೆಸದ ಮಹಾಜನರೇ, ಅರ್ತೆಮೀ ಮಹಾದೇವಿಯ ಗುಡಿಯನ್ನು ಹಾಗೂ ಆಕಾಶದಿಂದ ಬಿದ್ದ ಶಿಲೆಯನ್ನು ಎಫೆಸ ಪಟ್ಟಣವು ಎಚ್ಚರಿಕೆಯಿಂದ ಸಂರಕ್ಷಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. 36 ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ; ಆದುದರಿಂದ ನೀವು ಶಾಂತರಾಗಬೇಕು, ದುಡುಕಿ ಏನನ್ನೂ ಮಾಡಬಾರದು. 37 ನೀವು ಎಳೆದು ತಂದಿರುವ ಈ ವ್ಯಕ್ತಿಗಳು ಗುಡಿಕಳ್ಳರೂ ಅಲ್ಲ, ನಮ್ಮ ದೇವತೆಯ ದೂಷಕರೂ ಅಲ್ಲ. 38 ದೆಮೆತ್ರಿಯನಿಗೇ ಆಗಲಿ, ಅವನ ಜೊತೆ ಕೆಲಸಗಾರರಿಗೇ ಆಗಲಿ, ಯಾರ ಮೇಲಾದರೂ ಏನಾದರೂ ಆಪಾದನೆ ಇದ್ದರೆ, ಅದಕ್ಕೆ ನ್ಯಾಯಾಲಯಗಳು ತೆರೆದಿವೆ; ರಾಜ್ಯಪಾಲರಿದ್ದಾರೆ; ಅವರು ಅಲ್ಲಿಗೆ ಹೋಗಿ ದೂರು ಕೊಡಲಿ. 39 ಇದಕ್ಕಿಂತಲೂ ಮಿಗಿಲಾಗಿ ನೀವು ಏನನ್ನಾದರೂ ಅಪೇಕ್ಷಿಸುವುದಾದರೆ, ಅದನ್ನು ಕಾನೂನುಬದ್ಧವಾಗಿ ಸೇರುವ ಸಭೆಯಲ್ಲಿ ತೀರ್ಮಾನಮಾಡಬಹುದು. 40 ಈ ದಿನ ನಡೆದ ಘಟನೆಯನ್ನು ದಂಗೆಯೆಂದು ನಮ್ಮ ಮೇಲೆ ಆಪಾದನೆ ಹೊರಿಸುವ ಆಸ್ಪದವಿದೆ. ಏಕೆಂದರೆ, ಈ ಗಲಭೆಗೆ ಸರಿಯಾದ ಕಾರಣವನ್ನು ಕೊಟ್ಟು ಸಮರ್ಥಿಸಿಕೊಳ್ಳಲು ನಿಮ್ಮಿಂದಾಗದು,” ಎಂದನು. 41 ಈ ಮಾತುಗಳನ್ನು ಹೇಳಿದ ಮೇಲೆ ಅವನು ಕೂಟವನ್ನು ಚದರಿಸಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India