ಅಪೊಸ್ತಲರ ಕೃತ್ಯಗಳು 18 - ಕನ್ನಡ ಸತ್ಯವೇದವು C.L. Bible (BSI)ಕೊರಿಂಥದಲ್ಲಿ ಧರ್ಮಸಭೆಯ ಸ್ಥಾಪನೆ 1 ಇದಾದ ಮೇಲೆ ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು. 2 ಪೊಂತ ಎಂಬ ಊರಿನ ಅಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್‍ನಗರವನ್ನು ಬಿಟ್ಟುಹೋಗಬೇಕೆಂದು ಆಜ್ಞಾಪಿಸಿದ್ದರಿಂದ, ಈ ಅಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. 3 ಅವರು ತನ್ನಂತೆಯೇ ಗುಡಾರಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸಮಾಡುತ್ತಾ ಬಂದನು. 4 ಪ್ರತಿ ಸಬ್ಬತ್‍ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು. 5 ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೆಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು. 6 ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, “ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾಧ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ,” ಎಂದನು. 7 ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾಮಂದಿರದ ಪಕ್ಕದಲ್ಲೇ ಇತ್ತು. 8 ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು. 9 ಒಂದು ರಾತ್ರಿ ಪೌಲನಿಗೆ ಪ್ರಭು ದರ್ಶನ ಇತ್ತು, “ಭಯಪಡಬೇಡ, ಬೋಧನೆ ಮಾಡುವುದನ್ನು ಮುಂದುವರಿಸು, 10 ನಾನು ನಿನ್ನೊಡನೆ ಇದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ಹಾನಿಮಾಡುವುದಿಲ್ಲ. ಪಟ್ಟಣದ ಅನೇಕ ಜನರು ನನ್ನ ಪರವಾಗಿದ್ದಾರೆ,” ಎಂದರು. 11 ಅಂತೆಯೇ ಪೌಲನು ಒಂದೂವರೆ ವರ್ಷಕಾಲ ಅಲ್ಲಿದ್ದು ದೇವರವಾಕ್ಯವನ್ನು ಜನರಿಗೆ ಬೋಧಿಸಿದನು. ರಾಜ್ಯಪಾಲ ಗಲ್ಲಿಯೋನ ಮುಂದೆ ಪೌಲ 12 ಗಲ್ಲಿಯೋ ಎಂಬವನು ಅಖಾಯದಲ್ಲಿ ರಾಜ್ಯಪಾಲನಾಗಿದ್ದಾಗ, ಯೆಹೂದ್ಯರು ಪೌಲನ ವಿರುದ್ಧ ಒಟ್ಟುಗೂಡಿ ಅವನನ್ನು ಬಂಧಿಸಿ ನ್ಯಾಯಸ್ಥಾನಕ್ಕೆ ಕೊಂಡೊಯ್ದರು. 13 “ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ದೇವರನ್ನು ಆರಾಧಿಸುವಂತೆ ಈ ಮನುಷ್ಯ ಜನರನ್ನು ಪ್ರೇರೇಪಿಸುತ್ತಾ ಇದ್ದಾನೆ,” ಎಂದು ಅಲ್ಲಿ ದೂರಿತ್ತರು. 14 ಪೌಲನು ಮಾತನಾಡಬೇಕೆಂದಿರುವಾಗ, ಗಲ್ಲಿಯೋ ಯೆಹೂದ್ಯರನ್ನು ಸಂಬೋಧಿಸಿ, “ಯೆಹೂದ್ಯರೇ, ಅನ್ಯಾಯವಾಗಲಿ, ಅಕ್ರಮವಾಗಲಿ ನಡೆದಿದ್ದ ಪಕ್ಷದಲ್ಲಿ, ನಿಮ್ಮ ಅಪಾದನೆಗಳನ್ನು ತಾಳ್ಮೆಯಿಂದ ಕೇಳಬೇಕಾದುದು ಸರಿಯಷ್ಟೆ. 15 ಆದರೆ ಇದು ನಾಮನೇಮಗಳಿಗೆ ಹಾಗು ನಿಮ್ಮ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದನ್ನು ನಿಮ್ಮನಿಮ್ಮಲ್ಲೇ ಇತ್ಯರ್ಥಮಾಡಿಕೊಳ್ಳಿ. ಇಂಥ ವಿಷಯಗಳನ್ನು ವಿಚಾರಣೆಮಾಡಲು ನನಗೆ ಮನಸ್ಸಿಲ್ಲ,” ಎಂದು ಹೇಳಿ 16 ಅವರನ್ನು ನ್ಯಾಯಸ್ಥಾನದಿಂದ ಹೊರಗಟ್ಟಿದನು. 17 ಆಗ ಅವರೆಲ್ಲರೂ ಪ್ರಾರ್ಥನಾಮಂದಿರದ ಅಧ್ಯಕ್ಷ ಸೋಸ್ಥೆನನನ್ನು ಬಂಧಿಸಿ, ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋ ಇದೊಂದನ್ನೂ ಲಕ್ಷಿಸಲಿಲ್ಲ. ಅಂತಿಯೋಕ್ಯಕ್ಕೆ ಮರುಪ್ರಯಾಣ 18 ಇದಾದ ಮೇಲೆ ಪೌಲನು ಕೊರಿಂಥದಲ್ಲಿ ಅನೇಕ ದಿನ ಇದ್ದನು. ಅನಂತರ ಭಕ್ತವಿಶ್ವಾಸಿಗಳನ್ನು ಬೀಳ್ಕೊಟ್ಟು ಅಕ್ವಿಲ ಮತ್ತು ಪ್ರಿಸ್ಸಿಲರೊಡನೆ ಸಿರಿಯಕ್ಕೆ ನೌಕಾಯಾನ ಹೊರಟನು. ತಾನು ಮಾಡಿದ್ದ ಹರಕೆಯ ಪ್ರಕಾರ ಕೆಂಖ್ರೆಯೆಂಬ ಸ್ಥಳದಲ್ಲಿ ಮುಂಡನ ಮಾಡಿಸಿಕೊಂಡನು. 19 ಎಫೆಸ ನಗರಕ್ಕೆ ಬಂದು ಸೇರಿದಾಗ ಪೌಲನು ತನ್ನ ಸಂಗಡಿಗರನ್ನು ಅಲ್ಲೇ ಬಿಟ್ಟು ಪ್ರಾರ್ಥನಾ ಮಂದಿರಕ್ಕೆ ಹೋಗಿ ಅಲ್ಲಿ ಯೆಹೂದ್ಯರೊಡನೆ ತರ್ಕಮಾಡತೊಡಗಿದನು. 20 ಆ ಯೆಹೂದ್ಯರು ತಮ್ಮೊಡನೆ ಇನ್ನೂ ಸ್ವಲ್ಪಕಾಲವಿರಬೇಕೆಂದು ಅವನನ್ನು ವಿನಂತಿಸಿದರು. ಆದರೆ ಪೌಲನು ಒಪ್ಪಿಕೊಳ್ಳಲಿಲ್ಲ. 21 ಅವರನ್ನು ಬೀಳ್ಕೊಡುತ್ತಾ, “ದೇವರ ಚಿತ್ತವಾದರೆ ನಾನು ನಿಮ್ಮಲ್ಲಿಗೆ ಮರಳಿ ಬರುತ್ತೇನೆ,” ಎಂದು ಹೇಳಿ ಎಫೆಸದಿಂದ ಸಮುದ್ರ ಪ್ರಯಾಣಮಾಡಿದನು. 22 ಅವನು ಸೆಜರೇಯವನ್ನು ಸೇರಿದನು. ಅಲ್ಲಿಂದ ಜೆರುಸಲೇಮಿಗೆ ಹೋಗಿ ಧರ್ಮಸಭೆಯನ್ನು ಸಂಧಿಸಿ ಅಂತಿಯೋಕ್ಯಕ್ಕೆ ಬಂದನು. 23 ಅಲ್ಲಿ ಕೆಲಕಾಲವಿದ್ದು ಪುನಃ ಹೊರಟು ಗಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಢಪಡಿಸಿದನು. ವಿಶ್ವಾಸಿಗಳಿಗೆ ಅಪೊಲ್ಲೋಸನ ಬೆಂಬಲ 24 ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು. 25 ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು. 26 ಇವನು ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು. 27 ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು. 28 ಹೇಗೆಂದರೆ, ಪವಿತ್ರಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India