Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 17 - ಕನ್ನಡ ಸತ್ಯವೇದವು C.L. Bible (BSI)


ಥೆಸಲೋನಿಕದಲ್ಲಿ ದೊಂಬಿ

1 ಪೌಲ ಮತ್ತು ಸೀಲ ಆಂಫಿಪೊಲಿ ಹಾಗೂ ಅಪೊಲೋನಿಯ ಮಾರ್ಗವಾಗಿ ಪ್ರಯಾಣಮಾಡಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಪ್ರಾರ್ಥನಾಮಂದಿರ ಒಂದಿತ್ತು.

2 ಪೌಲನು ವಾಡಿಕೆಯ ಪ್ರಕಾರ ಪ್ರಾರ್ಥನಾಮಂದಿರಕ್ಕೆ ಹೋದನು. ಮೂರು ಸಬ್ಬತ್‍ದಿನ ಪವಿತ್ರಗ್ರಂಥವನ್ನು ಉಲ್ಲೇಖಿಸಿ, ಅಲ್ಲಿದ್ದವರೊಡನೆ ಚರ್ಚೆಮಾಡಿದನು.

3 ಪವಿತ್ರಗ್ರಂಥದ ಪ್ರಕಾರ ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕಾಗಿತ್ತೆಂದೂ ಮರಣಹೊಂದಿ ಪುನರುತ್ಥಾನ ಹೊಂದಬೇಕಾಗಿತ್ತೆಂದೂ ಪ್ರತಿಪಾದಿಸಿದನು. ‘ನಾನು ನಿಮಗೆ ಸಾರುತ್ತಿರುವ ಯೇಸುಸ್ವಾಮಿಯೇ ಆ ಉದ್ಧಾರಕ’ ಎಂದು ಸ್ಪಷ್ಟಪಡಿಸಿದನು.

4 ಇದು ಸತ್ಯವೆಂದು ಮನವರಿಕೆ ಆದ ಕೆಲವರು ಪೌಲ ಮತ್ತು ಸೀಲರನ್ನು ಸೇರಿಕೊಂಡರು. ಅಂತೆಯೇ ದೈವಭಕ್ತರಾಗಿದ್ದ ಗ್ರೀಕರ ದೊಡ್ಡ ಗುಂಪೂ ಅನೇಕ ಕುಲೀನ ಸ್ತ್ರೀಯರೂ ಅವರನ್ನು ಸೇರಿಕೊಂಡರು.

5 ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಪುಂಡಪೋಕರಿಗಳನ್ನು ಎತ್ತಿಕಟ್ಟಿ, ಒಂದು ಗುಂಪನ್ನು ಕೂಡಿಸಿದರು. ಪಟ್ಟಣದಲ್ಲೆಲ್ಲಾ ದೊಂಬಿ ಎಬ್ಬಿಸಿದರು. ಪೌಲ ಮತ್ತು ಸೀಲರನ್ನು ಜನರ ಮುಂದೆ ಎಳೆದುತರುವ ಉದ್ದೇಶದಿಂದ ಅವರನ್ನು ಹುಡುಕುತ್ತಾ ಯಾಸೋನ ಎಂಬವನ ಮನೆಯನ್ನು ಮುತ್ತಿದರು.

6 ಅವರನ್ನು ಅಲ್ಲಿ ಕಾಣದಿರಲು ಯಾಸೋನನನ್ನೂ ಕೆಲವು ಭಕ್ತವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುತಂದು, “ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಎಬ್ಬಿಸಿದ ಆ ವ್ಯಕ್ತಿಗಳು ಈಗ ನಮ್ಮ ನಗರಕ್ಕೂ ಬಂದಿದ್ದಾರೆ.

7 ಈ ಯಾಸೋನನು ಅವರಿಗೆ ಆಶ್ರಯಕೊಟ್ಟಿದ್ದಾನೆ. ಅವರು ‘ಯೇಸು’ ಎಂಬ ಇನ್ನೊಬ್ಬ ಅರಸನಿದ್ದಾನೆಂದು ಹೇಳುತ್ತಾ ಚಕ್ರವರ್ತಿಯ ಆಜ್ಞೆಗಳನ್ನು ಉಲ್ಲಂಘಿಸುತ್ತಿದ್ದಾರೆ,” ಎಂದು ಗುಲ್ಲೆಬ್ಬಿಸಿದರು.

8 ನಗರದ ನಿವಾಸಿಗಳೂ ಅಧಿಕಾರಿಗಳೂ ಇದನ್ನು ಕೇಳಿ ಉದ್ರಿಕ್ತರಾದರು;

9 ಯಾಸೋನ ಮತ್ತಿತರ ಸಂಗಡಿಗರಿಂದ ಜಾಮೀನು ಪಡೆದು ಅವರನ್ನು ಬಿಡುಗಡೆಮಾಡಿದರು.


ಬೆರೋಯದಲ್ಲೂ ಗಲಭೆ

10 ಭಕ್ತವಿಶ್ವಾಸಿಗಳು ಪೌಲ ಮತ್ತು ಸೀಲರನ್ನು ರಾತ್ರೋರಾತ್ರಿಯಲ್ಲೇ ಬೆರೋಯ ಎಂಬ ಊರಿಗೆ ಕಳುಹಿಸಿಬಿಟ್ಟರು. ಇವರು ಆ ಊರನ್ನು ತಲುಪಿದ್ದೇ, ಯೆಹೂದ್ಯರ ಪ್ರಾರ್ಥನಾಮಂದಿರಕ್ಕೆ ಹೋದರು.

11 ಅಲ್ಲಿನ ಯೆಹೂದ್ಯರು ಥೆಸಲೋನಿಕದ ಜನರಿಗಿಂತ ವಿಶಾಲ ಮನೋಭಾವವುಳ್ಳವರು; ಶುಭಸಂದೇಶವನ್ನು ಅತ್ಯಾಸಕ್ತಿಯಿಂದ ಸ್ವಾಗತಿಸಿದರು. ಅದು ಪವಿತ್ರಗ್ರಂಥಕ್ಕೆ ಅನುಗುಣವಾಗಿದೆಯೇ ಎಂದು ತಿಳಿದುಕೊಳ್ಳಲು ಪ್ರತಿದಿನವೂ ಅಧ್ಯಯನ ಮಾಡತೊಡಗಿದರು.

12 ಅವರಲ್ಲಿ ಅನೇಕರು ವಿಶ್ವಾಸಿಗಳಾದರು. ಅನೇಕ ಗ್ರೀಕ್ ಕುಲೀನ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳಾದರು.

13 ಪೌಲನು ಬೆರೋಯದಲ್ಲೂ ದೇವರ ವಾಕ್ಯವನ್ನು ಸಾರುತ್ತಿದ್ದಾನೆಂಬ ವರ್ತಮಾನವು ಥೆಸಲೋನಿಕದ ಯೆಹೂದ್ಯರಿಗೆ ತಿಳಿದುಬಂತು. ಅವರು ಅಲ್ಲಿಗೂ ಬಂದು ಜನಸಮೂಹವನ್ನು ಪ್ರಚೋದಿಸಿ ಗಲಭೆಯೆಬ್ಬಿಸಿದರು.

14 ಕೂಡಲೇ ಭಕ್ತವಿಶ್ವಾಸಿಗಳು ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೇಯ ಬೆರೋಯದಲ್ಲೇ ಉಳಿದುಕೊಂಡರು.

15 ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದುಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು.


ಅಜ್ಞಾತ ದೇವರನ್ನು ಕುರಿತು ಅಥೆನ್ಸಿನಲ್ಲಿ ಬೋಧನೆ

16 ಅಥೆನ್ಸಿನಲ್ಲಿ ಪೌಲನು, ಸೀಲ ಮತ್ತು ತಿಮೊಥೇಯರನ್ನು ಎದುರುನೋಡುತ್ತಿದ್ದನು. ಆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ವಿಗ್ರಹಗಳಿರುವುದನ್ನು ಕಂಡು, ಅವನ ಮನಸ್ಸು ಕುದಿಯಿತು.

17 ಆದುದರಿಂದ ಅವನು ಪ್ರಾರ್ಥನಾಮಂದಿರಕ್ಕೆ ಹೋಗಿ ಯೆಹೂದ್ಯರೊಡನೆ ಮತ್ತು ಯೆಹೂದ್ಯಮತಾವಲಂಬಿಗಳೊಡನೆ ಚರ್ಚಿಸತೊಡಗಿದನು. ಸಾರ್ವಜನಿಕ ಚೌಕದ ಬಳಿ, ಕಂಡಕಂಡವರೊಡನೆ ಪ್ರತಿದಿನವೂ ತರ್ಕಮಾಡಿದನು.

18 ಕೆಲವು ಎಪಿಕೂರಿಯ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರೂ ಕೂಡ ಅವನೊಡನೆ ವಾದಿಸಿದರು. ಕೆಲವರು “ಈ ಬಾಯಿಬಡುಕ ಹೇಳುವುದಾದರೂ ಏನು?” ಎಂದರು. ಪೌಲನು ಯೇಸುಸ್ವಾಮಿಯ ವಿಷಯವಾಗಿಯೂ ಪುನರುತ್ಥಾನದ ವಿಷಯವಾಗಿಯೂ ಬೋಧಿಸುತ್ತಿದ್ದುದರಿಂದ ಮತ್ತೆ ಕೆಲವರು ‘ಇವನು ವಿದೇಶೀಯ ದೇವರುಗಳ ಬಗ್ಗೆ ಮಾತನಾಡುವಂತೆ ಕಾಣುತ್ತದೆ,’ ಎಂದರು.

19 ಅವರು ಪೌಲನನ್ನು ಅರಿಯೊಪಾಗ ಎಂಬ ಸ್ಥಳಕ್ಕೆ ಕರೆತಂದು, “ನೀನು ಸಾರುತ್ತಿರುವ ನೂತನ ತತ್ವವನ್ನು ನಾವು ತಿಳಿದುಕೊಳ್ಳಬಹುದೇ?

20 ನೀನು ಹೇಳುತ್ತಿರುವ ಕೆಲವು ಸಂಗತಿಗಳು ನಮಗೆ ವಿಚಿತ್ರವಾಗಿ ತೋರುತ್ತವೆ. ಆದ್ದರಿಂದ ಅವುಗಳ ಅರ್ಥವೇನೆಂದು ತಿಳಿಯಬಯಸುತ್ತೇವೆ,” ಎಂದರು. (

21 ಅಥೆನ್ಸಿನ ನಿವಾಸಿಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ವಿದೇಶೀಯರು ಅತ್ಯಾಧುನಿಕ ವಿದ್ಯಮಾನಗಳನ್ನು ಕುರಿತು ಮಾತನಾಡುವುದರಲ್ಲೂ ಕೇಳಿತಿಳಿಯುವುದರಲ್ಲೂ ಸಮಯ ಕಳೆಯುತ್ತಿದ್ದರು).

22 ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ.

23 ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ ‘ಅಜ್ಞಾತ ದೇವರಿಗೆ’ ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ.

24 ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು; ಮಾನವನು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ.

25 ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ.

26 ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.

27 ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು. ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ.

28 ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ’; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, ‘ನಾವು ನಿಜವಾಗಿ ದೇವರ ಮಕ್ಕಳು.’

29 “ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು.

30 ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ.

31 ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.”

32 ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.

33 ಹೀಗೆ ಪೌಲನು ಆ ಸಭೆಯಿಂದ ನಿರ್ಗಮಿಸಿದನು.

34 ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ ಅರಿಯೊಪಾಗದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು