ಅಪೊಸ್ತಲರ ಕೃತ್ಯಗಳು 16 - ಕನ್ನಡ ಸತ್ಯವೇದವು C.L. Bible (BSI)ಪೌಲನೊಡನೆ ತಿಮೊಥೇಯ 1 ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು. 2 ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು. 3 ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿಮಾಡಿಸಿದನು. 4 ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋಧಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು. 5 ಹೀಗೆ ಕ್ರೈಸ್ತಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಮಕೆದೋನಿಯಕ್ಕೆ ಬರಲು ದಿವ್ಯಕರೆ 6 ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು. 7 ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ. 8 ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು. 9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು. 10 ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು. ಫಿಲಿಪ್ಪಿಯಲ್ಲಿ ಲಿಡಿಯಳ ಮನಪರಿವರ್ತನೆ 11 ನಾವು ತ್ರೋವದಲ್ಲಿ ಹಡಗು ಹತ್ತಿ ಸಮೊಥ್ರಕ್ಕೆ ನೇರವಾಗಿ ಪ್ರಯಾಣಮಾಡಿದೆವು. ಮಾರನೆಯ ದಿನ ನೆಯಫೋಲನ್ನು ತಲುಪಿ, 12 ಅಲ್ಲಿಂದ ಮಕೆದೋನಿಯದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ವಸಾಹತು; ಇಲ್ಲಿ ಕೆಲವು ದಿನಗಳನ್ನು ಕಳೆದೆವು. 13 ಪಟ್ಟಣದ ಹೊರಗಿರುವ ನದಿತೀರದ ಬಳಿ ಯೆಹೂದ್ಯರ ಪ್ರಾರ್ಥನಾ ಸ್ಥಳವಿರಬಹುದೆಂದು ಭಾವಿಸಿ ಸಬ್ಬತ್‍ದಿನ ಅಲ್ಲಿಗೆ ಹೋದೆವು. ನಾವು ಕುಳಿತುಕೊಂಡು ಅಲ್ಲಿ ಸೇರಿದ್ದ ಮಹಿಳೆಯರೊಡನೆ ಸಂಭಾಷಿಸಿದೆವು. 14 ನಮ್ಮ ಬೋಧನೆಯನ್ನು ಕೇಳಿದ ಆ ಮಹಿಳೆಯರಲ್ಲಿ ಲಿಡಿಯ ಎಂಬವಳು ಒಬ್ಬಳು. ಈಕೆ ಥುವತೈರ ಎಂಬ ಊರಿನವಳು; ಪಟ್ಟೆಪೀತಾಂಬರಗಳ ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು ತೆರೆದರು. 15 ಅಂತೆಯೇ ತನ್ನ ಮನೆಯವರ ಸಮೇತ ದೀಕ್ಷಾಸ್ನಾನವನ್ನು ಪಡೆದಳು. ಅನಂತರ, “ನಾನು ಪ್ರಭುವಿನ ನಿಜವಾದ ವಿಶ್ವಾಸಿಯೆಂದು ನೀವು ಒಪ್ಪಿಕೊಳ್ಳುವುದಾದರೆ ನನ್ನ ಮನೆಗೆ ಬಂದು ತಂಗಿರಿ,” ಎಂದು ನಮ್ಮನ್ನು ಒತ್ತಾಯಪೂರ್ವಕವಾಗಿ ಆಹ್ವಾನಿಸಿದಳು. ಸೆರೆಮನೆಯಲ್ಲಿ ಪೌಲ ಮತ್ತು ಸೀಲ 16 ಒಂದು ದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗುತ್ತಿದ್ದೆವು. ಗಾರುಡಗಾತಿಯಾದ ಒಬ್ಬ ದಾಸಿ ನಮ್ಮನ್ನು ಎದುರುಗೊಂಡಳು. ಆ ಹುಡುಗಿ ಕಣಿಶಕುನ ಹೇಳಿ ತನ್ನ ಯಜಮಾನನಿಗೆ ತುಂಬಾ ಹಣ ಸಂಪಾದಿಸುತ್ತಿದ್ದಳು. 17 ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಇವರು ಮಹೋನ್ನತ ದೇವರ ಕಿಂಕರರು; ಜೀವೋದ್ಧಾರದ ಮಾರ್ಗವನ್ನು ಇವರು ನಿಮಗೆ ಸಾರುತ್ತಾರೆ,” ಎಂದು ಚೀರುತ್ತಿದ್ದಳು. 18 ಹೀಗೆ ದಿನೇ ದಿನೇ ಮಾಡುತ್ತಿದ್ದಳು. ಇದರಿಂದ ಪೌಲನಿಗೆ ಬಹಳ ಬೇಸರವಾಯಿತು. ಅವಳ ಕಡೆಗೆ ತಿರುಗಿ, ಅವಳನ್ನು ಹಿಡಿದಿದ್ದ ದೆವ್ವಕ್ಕೆ, “ಇವಳನ್ನು ಬಿಟ್ಟು ತೊಲಗು ಎಂದು ಯೇಸುಕ್ರಿಸ್ತರ ನಾಮದಲ್ಲಿ ನಿನಗೆ ಆಜ್ಞಾಪಿಸುತ್ತೇನೆ,” ಎಂದನು. ಆ ಕ್ಷಣವೇ ಅದು ಅವಳನ್ನು ಬಿಟ್ಟುಹೋಯಿತು. 19 ಹಣ ಗಳಿಸುತ್ತಿದ್ದ ಅವಳ ಯಜಮಾನನಿಗೆ ನಿರಾಶೆಯಾಯಿತು. ಅವರು ಪೌಲ ಮತ್ತು ಸೀಲರನ್ನು ಬಂಧಿಸಿ ಸಾರ್ವಜನಿಕ ನ್ಯಾಯಸ್ಥಾನದಲ್ಲಿದ್ದ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. 20 ಅಲ್ಲಿದ್ದ ರೋಮಿನ ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. 21 ಇವರು ಯೆಹೂದ್ಯರು. ರೋಮನರಾದ ನಾವು ಅಂಗೀಕರಿಸಲು ಅಥವಾ ಅನುಸರಿಸಲು ಆಗದಂತಹ ಆಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ,” ಎಂದರು. 22 ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಏಟುಗಳನ್ನು ಕೊಡುವಂತೆ ಆಜ್ಞೆಮಾಡಿದರು. 23 ಅವರನ್ನು ಚೆನ್ನಾಗಿ ಥಳಿಸಿದ ಮೇಲೆ ಸೆರೆಮನೆಯಲ್ಲಿ ಹಾಕಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ಅಪ್ಪಣೆ ವಿಧಿಸಲಾಯಿತು. 24 ಅಂತೆಯೇ, ಆ ಅಧಿಕಾರಿ ಅವರನ್ನು ಸೆರೆಮನೆಯ ಒಳಕೋಣೆಗೆ ತಳ್ಳಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು. 25 ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. 26 ಇದ್ದಕ್ಕಿದ್ದಂತೆ ಭೀಕರ ಭೂಕಂಪ ಉಂಟಾಯಿತು. ಸೆರೆಮನೆಯ ಅಸ್ತಿವಾರವೇ ಕದಲಿತು. ಆ ಕ್ಷಣವೇ ಕದಗಳೆಲ್ಲಾ ತೆರೆದುವು. ಕೈದಿಗಳೆಲ್ಲರ ಬಂಧನಗಳು ಕಳಚಿಬಿದ್ದವು. 27 ಎಚ್ಚೆತ್ತ ಅಧಿಕಾರಿ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದಿರುವುದನ್ನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿರುವರೆಂದು ಭಾವಿಸಿ ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದನು. 28 ಆಗ ಪೌಲನು ಗಟ್ಟಿಯಾಗಿ ಕೂಗುತ್ತಾ, “ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ,” ಎಂದನು. 29 ಸೆರೆಮನೆಯ ಅಧಿಕಾರಿ ದೀಪವನ್ನು ತರಿಸಿ, ಒಳಗೆ ಧಾವಿಸಿ ಬಂದು, ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಪಾದಕ್ಕೆ ಬಿದ್ದನು. 30 ಅನಂತರ ಅವರನ್ನು ಹೊರಗೆ ಕರೆತಂದು, “ಸ್ವಾಮಿಗಳೇ, ಜೀವೋದ್ಧಾರ ಪಡೆಯಲು ನಾನು ಮಾಡಬೇಕಾದುದು ಏನು?” ಎಂದು ವಿಚಾರಿಸಿದನು. 31 “ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು, ನೀನೂ ನಿನ್ನ ಮನೆಯವರೆಲ್ಲರೂ ಜೀವೋದ್ಧಾರವನ್ನು ಹೊಂದುವಿರಿ,” ಎಂದು ಅವರು ಉತ್ತರಕೊಟ್ಟರು. 32 ಅನಂತರ ಪ್ರಭುವಿನ ಸಂದೇಶವನ್ನು ಅವನಿಗೂ ಅವನ ಮನೆಯಲ್ಲಿದ್ದ ಎಲ್ಲರಿಗೂ ಬೋಧಿಸಿದರು. 33 ರಾತ್ರಿಯ ವೇಳೆಯಲ್ಲೇ ಸೆರೆಮನೆಯ ಅಧಿಕಾರಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಅನಂತರ ಅವನೂ ಅವನ ಕುಟುಂಬದವರೂ ದೀಕ್ಷಾಸ್ನಾನವನ್ನು ಪಡೆದರು. 34 ಬಳಿಕ ಪೌಲ ಮತ್ತು ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಬಡಿಸಿದನು. ದೇವರಲ್ಲಿ ವಿಶ್ವಾಸವಿಡುವ ಸದವಕಾಶ ದೊರಕಿದ್ದಕ್ಕಾಗಿ ಅವನೂ ಅವನ ಮನೆಯವರೆಲ್ಲರೂ ಉಲ್ಲಾಸಗೊಂಡರು. 35 ಮಾರನೆಯ ಬೆಳಿಗ್ಗೆ ನ್ಯಾಯಾಧಿಪತಿಗಳು ಜವಾನರ ಮುಖಾಂತರ, “ಈ ವ್ಯಕ್ತಿಗಳನ್ನು ಬಿಟ್ಟುಬಿಡು,” ಎಂದು ಹೇಳಿಕಳುಹಿಸಿದರು. 36 ಸೆರೆಮನೆಯ ಅಧಿಕಾರಿ ಪೌಲನ ಬಳಿಗೆ ಬಂದು, “ನ್ಯಾಯಾಧಿಪತಿಗಳು ನಿಮ್ಮನ್ನು ಬಿಡುಗಡೆಮಾಡುವಂತೆ ಹೇಳಿಕಳುಹಿಸಿದ್ದಾರೆ; ನೀವು ನೆಮ್ಮದಿಯಿಂದ ಹೊರಟುಹೋಗಬಹುದು,” ಎಂದು ವರದಿಮಾಡಿದನು. 37 ಆದರೆ ಪೌಲನು ಅವರಿಗೆ, “ನಮ್ಮನ್ನು ಶಿಕ್ಷೆಗೊಳಪಡಿಸುವಂಥ ಅಪರಾಧವನ್ನೇನೂ ನಾವು ಮಾಡಿಲ್ಲ. ಅಲ್ಲದೆ ನಾವು ರೋಮಿನ ಪೌರರು, ಆದರೂ ನಮ್ಮನ್ನು ಬಹಿರಂಗವಾಗಿ ಛಡಿಗಳಿಂದ ಹೊಡಿಸಿದ್ದಾರೆ. ಸೆರೆಮನೆಗೆ ತಳ್ಳಿದ್ದಾರೆ; ಈಗ ಗೋಪ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೆಯೆ? ಇಲ್ಲ, ಇದು ಸಾಧ್ಯವಿಲ್ಲ. ನ್ಯಾಯಾಧಿಪತಿಗಳೇ ಖುದ್ದಾಗಿ ಇಲ್ಲಿಗೆ ಬಂದು ನಮ್ಮನ್ನು ಬಿಡುಗಡೆ ಮಾಡಲಿ,” ಎಂದನು. 38 ಜವಾನರು ಈ ಮಾತುಗಳನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಅವರು ಪೌಲ ಮತ್ತು ಸೀಲ ರೋಮಿನ ಪೌರರೆಂದು ಕೇಳಿ ಭಯಪಟ್ಟರು. 39 ಆದುದರಿಂದ ಅವರೇ ಬಂದು ಕ್ಷಮೆಕೋರಿ, ಸೆರೆಮನೆಯಿಂದ ಬಿಡುಗಡೆಮಾಡಿ, ನಗರವನ್ನು ಬಿಟ್ಟು ಹೋಗಬೇಕೆಂದು ವಿನಂತಿಸಿದರು. 40 ಪೌಲ ಮತ್ತು ಸೀಲ ಸೆರೆಮನೆಯಿಂದ ಹೊರಟು ಲಿಡಿಯಳ ಮನೆಗೆ ಹೋದರು. ಭಕ್ತವಿಶ್ವಾಸಿಗಳನ್ನು ಸಂಧಿಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಅಲ್ಲಿಂದ ನಿರ್ಗಮಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India