Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 14 - ಕನ್ನಡ ಸತ್ಯವೇದವು C.L. Bible (BSI)


ಇಕೋನಿಯದಲ್ಲಿ ಪೌಲ ಮತ್ತು ಬಾರ್ನಬ

1 ಇಕೋನಿಯದಲ್ಲೂ ಪೌಲ ಮತ್ತು ಬಾರ್ನಬ ಯೆಹೂದ್ಯರ ಪ್ರಾರ್ಥನಾಮಂದಿರಕ್ಕೆ ಹೋದರು. ಅವರ ಅಮೋಘ ಬೋಧನೆಯನ್ನು ಕೇಳಿ ಯೆಹೂದ್ಯರು ಮತ್ತು ಗ್ರೀಕರು ಬಹುಸಂಖ್ಯೆಯಲ್ಲಿ ಭಕ್ತವಿಶ್ವಾಸಿಗಳಾದರು.

2 ವಿಶ್ವಾಸಿಸಲೊಲ್ಲದ ಯೆಹೂದ್ಯರಾದರೋ ಅನ್ಯಧರ್ಮೀಯರನ್ನು ಪ್ರಚೋದಿಸಿ ಭಕ್ತರ ವಿರುದ್ಧ ಎತ್ತಿಕಟ್ಟಿದರು.

3 ಪ್ರೇಷಿತರಿಬ್ಬರೂ ಅಲ್ಲಿ ಬಹುಕಾಲವಿದ್ದು ಪ್ರಭುವನ್ನು ಕುರಿತು ಧೈರ್ಯವಾಗಿ ಬೋಧಿಸಿದರು. ಪ್ರಭು ಅವರಿಗೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡುವ ಶಕ್ತಿಯನ್ನು ಕೊಟ್ಟರು. ಈ ಮೂಲಕ ದೇವಾನುಗ್ರಹದ ಬಗ್ಗೆ ಅವರ ಸಂದೇಶ ಸತ್ಯವಾದುದೆಂದು ವ್ಯಕ್ತಪಡಿಸಿದರು.

4 ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರು ಯೆಹೂದ್ಯರ ಪರವಾಗಿಯೂ ಮತ್ತೆ ಕೆಲವರು ಪ್ರೇಷಿತರ ಪರವಾಗಿಯೂ ವಿಂಗಡವಾಗಿ ಹೋದರು.

5 ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಹಾಗೂ ಅವರ ಮೇಲೆ ಕಲ್ಲು ತೂರಲು ಪ್ರಯತ್ನಿಸಿದರು.

6 ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನ ಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು.

7 ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು.


ನರಮಾನವರಿಗೆ ವರಬಲಿಯೇ?

8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದ. ಅವನೊಬ್ಬ ಹುಟ್ಟುಕುಂಟ. ಎಂದೂ ಕಾಲೂರಿ ನಡೆದವನಲ್ಲ.

9 ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ,

10 “ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,” ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು.

11 ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. “ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ,” ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿದರು.

12 ಆ ಜನರು ಬಾರ್ನಬನನ್ನು ‘ಜೆಯುಸ್’ ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನು ‘ಹೆರ್ಮೆ’ ದೇವರೆಂದೂ ಕರೆಯಲಾರಂಭಿಸಿದರು.

13 ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.

14 ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು, ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿಹೇಳಿದರು:

15 “ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು.

16 ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು.

17 ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.”

18 ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.

19 ಆಗ ಅಂತಿಯೋಕ್ಯ ಮತ್ತು ಇಕೋನಿಯದಿಂದ ಕೆಲವು ಯೆಹೂದ್ಯರು ಅಲ್ಲಿಗೆ ಬಂದರು. ಅವರು ಜನಸಮೂಹವನ್ನು ತಮ್ಮಕಡೆ ಒಲಿಸಿಕೊಂಡು ಪೌಲನ ಮೇಲೆ ಕಲ್ಲುಬೀರಿ, ಅವನು ಸತ್ತನೆಂದು ಭಾವಿಸಿ, ಪಟ್ಟಣದಿಂದ ಹೊರಗೆ ಎಳೆದುಹಾಕಿದರು.

20 ಆದರೆ, ಭಕ್ತವಿಶ್ವಾಸಿಗಳು ಬಂದು ಅವನ ಸುತ್ತಲೂ ನೆರೆದಿದ್ದಾಗ ಅವನು ಎದ್ದು ಪಟ್ಟಣವನ್ನು ಪ್ರವೇಶಿಸಿದನು. ಮರುದಿನ ಅವನು ಬಾರ್ನಬನ ಸಂಗಡ ದೆರ್ಬೆಗೆ ಹೊರಟುಹೋದನು.


ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು.

22 ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು.

23 ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು.

24 ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು.

25 ಪೆರ್ಗದಲ್ಲಿ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು.

26 ಅಲ್ಲಿಂದ ನೌಕಾಯಾನಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ.

27 ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.

28 ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು