ಅಪೊಸ್ತಲರ ಕೃತ್ಯಗಳು 13 - ಕನ್ನಡ ಸತ್ಯವೇದವು C.L. Bible (BSI)ಬಾರ್ನಬ ಮತ್ತು ಸೌಲರ ನಿಯೋಗ 1 ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯ ಸ್ನೇಹಿತ ಮೆನಹೇನ ಮತ್ತು ಸೌಲ. 2 ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ಮೀಸಲಾಗಿಡಿ,” ಎಂದರು. 3 ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು. ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ 4 ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು. 5 ಅವರು ಸಲಮೀಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು. 6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡುತ್ತಾ ಪಾಫೊಸ್ ಎಂಬ ಊರಿಗೆ ಹೋದರು. ಅಲ್ಲಿ ‘ಬಾರ್‍ಯೇಸು’ ಎಂಬ ಮಂತ್ರವಾದಿಯನ್ನು ಕಂಡರು. 7 ತಾನೊಬ್ಬ ಪ್ರವಾದಿಯೆಂದು ನಟಿಸುತ್ತಿದ್ದ ಯೆಹೂದ್ಯ ಅವನು; ಮಾತ್ರವಲ್ಲ, ಅಲ್ಲಿಯ ರಾಜ್ಯಪಾಲನಾಗಿದ್ದ ಸೆರ್ಗ್ಯಪೌಲನ ಪರಿವಾರಕ್ಕೆ ಸೇರಿದ್ದನು. ಈ ರಾಜ್ಯಪಾಲನೊಬ್ಬ ಜ್ಞಾನಿ. ಇವನು ದೇವರವಾಕ್ಯವನ್ನು ಕೇಳಲಪೇಕ್ಷಿಸಿ ಬಾರ್ನಬ ಮತ್ತು ಸೌಲರನ್ನು ಆಹ್ವಾನಿಸಿದನು. 8 ಆದರೆ ಆ ಮಂತ್ರವಾದಿ (ಗ್ರೀಕ್ ಭಾಷೆಯಲ್ಲಿ ಅವನನ್ನು ‘ಎಲಿಮ’ ಎಂದು ಕರೆಯುತ್ತಿದ್ದರು) ಅವರನ್ನು ವಿರೋಧಿಸಿದನು. ರಾಜ್ಯಪಾಲನು ವಿಶ್ವಾಸಿಯಾಗದಂತೆ ತಡೆಯಲು ಯತ್ನಿಸಿದನು. 9 ಆಗ, ಪೌಲ ಎಂದು ಹೆಸರುಗೊಂಡಿದ್ದ ಸೌಲನು ಪವಿತ್ರಾತ್ಮಭರಿತನಾಗಿ ಆ ಮಂತ್ರವಾದಿಯನ್ನು ದಿಟ್ಟಿಸಿ ನೋಡಿದನು. 10 “ಎಲವೋ ಪಿಶಾಚಿಕೋರನೇ, ಸರ್ವಸನ್ಮಾರ್ಗಕ್ಕೆ ಶತ್ರು ನೀನು; ಎಲ್ಲಾ ತಂತ್ರ ಕುತಂತ್ರಗಳು ನಿನ್ನಲ್ಲಿ ತುಂಬಿವೆ. ಪ್ರಭುವಿನ ಸನ್ಮಾರ್ಗಕ್ಕೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ? ಇಗೋ, ಈಗ ಪ್ರಭುವಿನ ಶಾಪ ನಿನ್ನ ಮೇಲಿದೆ! 11 ನೀನು ಬೆಳಕನ್ನು ಕಾಣದೆ ಕೆಲವು ಕಾಲ ಕುರುಡನಾಗಿರುವೆ,” ಎಂದನು. ಆ ಕ್ಷಣವೇ ಎಲಿಮನ ಕಣ್ಣು ಮಬ್ಬಾಯಿತು; ಕತ್ತಲೆ ಕವಿದಂತಾಯಿತು; ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸಲಾರಂಭಿಸಿದನು. 12 ನಡೆದುದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ವಿಶ್ವಾಸಿಸಿದನು; ಅವರನ್ನು ಕುರಿತ ಬೋಧನೆಯನ್ನು ಕೇಳಿ ವಿಸ್ಮಿತನಾದನು. ಪಿಸಿದಿಯದ ಅಂತಿಯೋಕ್ಯದಲ್ಲಿ ಪೌಲನ ಪ್ರಬೋಧನೆ 13 ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು. 14 ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್‍ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. 15 ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,” ಎಂದು ಕೇಳಿಕೊಂಡರು. 16 ಆಗ ಪೌಲನು ಎದ್ದು ನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು: “ಇಸ್ರಯೇಲ್ ಬಾಂಧವರೇ, ಹಾಗು ನಿಜದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: 17 ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು. 18 ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. 19 ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು. 20 ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು. 21 ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯಾಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಾಲ್ವತ್ತು ವರ್ಷ ಆಳಿದನು. 22 ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. 23 ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. 24 ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದರು. 25 ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು. 26 “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ, ಮತ್ತು ದೇವರಲ್ಲಿ ಭಯಭಕ್ತಿ ಉಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್‍ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು. 28 ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು. 29 ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು. 30 ಆದರೆ ದೇವರು ಅವರನ್ನು ಮರಣದಿಂದ ಪುನರುತ್ಥಾನಗೊಳಿಸಿದರು. 31 ಹೀಗೆ ಪುನರುತ್ಥಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು. 32-33 ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ. ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ.’ 34 “ಯೇಸುವನ್ನು ಸಮಾಧಿಯಲ್ಲೇ ಕೊಳೆತುಹೋಗಲು ಬಿಡದೆ ಮರಣದಿಂದ ಪುನರುತ್ಥಾನಗೊಳಿಸಿದ ದೇವರು ಹೀಗೆಂದಿದ್ದಾರೆ: ‘ನಾನು ದಾವೀದನಿಗೆ ವಾಗ್ದಾನಮಾಡಿದ ಪವಿತ್ರ ಹಾಗೂ ನಿಶ್ಚಿತ ವರಗಳನ್ನು ನಿಮಗೆ ಕೊಡುತ್ತೇನೆ.’ 35 ಇನ್ನೊಂದು ಕೀರ್ತನೆಯಲ್ಲಿ ಹೀಗೆಂದಿದ್ದಾರೆ: ನಿಮ್ಮ ಪರಮ ಪೂಜ್ಯನು ಸಮಾಧಿಯಲ್ಲಿ ಕೊಳೆತುಹೋಗಲು ನೀವು ಬಿಡುವುದಿಲ್ಲ.’ 36 “ದಾವೀದನು ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕೆ ತಲೆಬಾಗಿ ಬಾಳಿದನು; ಸತ್ತಾಗ ಅವನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು. 37 ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುಸ್ವಾಮಿ ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ. 38-39 “ನನ್ನ ಸಹೋದರರೇ, ನಿಮಗಿದು ತಿಳಿದಿರಲಿ: ಪಾಪಕ್ಷಮೆ ಯೇಸುವಿನ ಮುಖಾಂತರವೇ ಸಾಧ್ಯ ಎಂದು ಸಾರಲಾಗುತ್ತಿದೆ. ಮೋಶೆಯ ನಿಯಮಗಳ ಪಾಲನೆಯ ಮೂಲಕ ಪಾಪಗಳಿಂದ ವಿಮೋಚನೆ ಹೊಂದಲು ನಿಮ್ಮಿಂದಾಗಲಿಲ್ಲ; ಆದರೆ ಯೇಸುವನ್ನು ವಿಶ್ವಾಸಿಸುವ ಪ್ರತಿ ಒಬ್ಬನೂ ಅವೆಲ್ಲವುಗಳಿಂದ ವಿಮೋಚನೆ ಪಡೆಯುತ್ತಾನೆ. 40 ಆದುದರಿಂದ ಪ್ರವಾದಿಗಳ ಈ ಮಾತುಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ: 41 ‘ಅವಹೇಳನ ಮಾಡುವವರೇ, ಗಮನಿಸಿರಿ; ದಿಗ್ಭ್ರಮೆಗೊಂಡು ದಿಕ್ಕುಪಾಲಾಗಿರಿ; ನಿಮ್ಮ ಕಾಲದಲ್ಲೇ ನಾನೊಂದು ಮಹತ್ಕಾರ್ಯವನ್ನು ಮಾಡುತ್ತೇನೆ; ಅದನ್ನು ನೀವು ನಂಬಲಾರಿರಿ, ಇನ್ನೊಬ್ಬರು ವಿವರಿಸಿ ಹೇಳಿದರೂ ನಂಬಲಾರಿರಿ’, “ ಎಂದು ಹೇಳಿದನು. 42 ಪೌಲ ಮತ್ತು ಬಾರ್ನಬ ಪ್ರಾರ್ಥನಾಮಂದಿರವನ್ನು ಬಿಟ್ಟುಹೊರಟರು. “ಮುಂದಿನ ಸಬ್ಬತ್‍ದಿನ ಪುನಃ ಬಂದು ಈ ವಿಷಯಗಳ ಬಗ್ಗೆ ಹೆಚ್ಚು ತಿಳಿಸಿರಿ,” ಎಂದು ಜನರು ಕೇಳಿಕೊಂಡರು. 43 ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಈ ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಢವಾಗಿ ಬಾಳುವಂತೆ ಪ್ರೋತ್ಸಾಹಿಸಿದರು. 44 ಮುಂದಿನ ಸಬ್ಬತ್‍ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. 45 ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. 46 ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: “ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. 47 ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ.’ 48 ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. 49 ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. 50 ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು. 51 ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟುಹೋದರು. 52 ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India