Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 12 - ಕನ್ನಡ ಸತ್ಯವೇದವು C.L. Bible (BSI)


ಕ್ರೈಸ್ತಸಭೆಗೆ ಕಠಿಣ ಹಿಂಸೆ

1 ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು.

2 ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.

3 ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು).

4 ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು.

5 ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.


ಸೆರೆಮನೆಯಿಂದ ಕಣ್ಮರೆಯಾದ ಪೇತ್ರ

6 ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು.

7 ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು.

8 ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು.

9 ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು.

10 ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು.

11 ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

12 ಹೀಗೆ ತನ್ನ ಪರಿಸ್ಥಿತಿಯನ್ನು ಅರಿತ ಬಳಿಕ ಪೇತ್ರನು ಮರಿಯ ಎಂಬುವಳ ಮನೆಗೆ ಹೋದನು. ಈಕೆ ‘ಮಾರ್ಕ’ ಎಂದು ಹೆರಸರುಗೊಂಡಿದ್ದ ಯೊವಾನ್ನನ ತಾಯಿ. ಆ ಮನೆಯಲ್ಲಿ ಹಲವಾರು ಜನರು ಸೇರಿ ಪ್ರಾರ್ಥನೆ ಮಾಡುತ್ತಿದ್ದರು.

13 ಪೇತ್ರನು ಹೊರಬಾಗಿಲನ್ನು ತಟ್ಟಿದನು. ರೋದ ಎಂಬ ಸೇವಕಿ ವಿಚಾರಿಸಲು ಬಂದಳು.

14 ಆಕೆ ಪೇತ್ರನ ಸ್ವರವನ್ನು ಗುರುತು ಹಚ್ಚಿದ್ದೇ ಆನಂದಪರವಶಳಾಗಿ ಬಾಗಿಲನ್ನು ಸಹ ತೆರೆಯದೆ ಒಳಕ್ಕೆ ಓಡಿದಳು. ಪೇತ್ರನು ಬಾಗಿಲ ಹೊರಗೆ ನಿಂತಿದ್ದಾನೆಂದು ಒಳಗಿದ್ದವರಿಗೆ ತಿಳಿಸಿದಳು.

15 ಅವರು, “ನಿನಗೇನು ಹುಚ್ಚೇ?’ ಎಂದು ಉದ್ಗರಿಸಿದರು. ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿ ಹೇಳಿದಳು. “ಹಾಗಾದರೆ ಅದು ಅವನ ದೂತನಿರಬೇಕು,” ಎಂದುಕೊಂಡರು.

16 ಇತ್ತ ಪೇತ್ರನು ಬಾಗಿಲು ತಟ್ಟುತ್ತಲೇ ಇದ್ದನು. ಕೊನೆಗೆ ಅವರು ಬಂದು ಬಾಗಿಲನ್ನು ತೆರೆದರು. ಪೇತ್ರನನ್ನು ಕಂಡು ಸ್ತಬ್ಧರಾದರು.

17 ಪೇತ್ರನು ನಿಶ್ಯಬ್ದರಾಗಿರುವಂತೆ ಅವರಿಗೆ ಕೈಸನ್ನೆ ಮಾಡಿದನು. ಪ್ರಭು ತನ್ನನ್ನು ಹೇಗೆ ಸೆರೆಮನೆಯಿಂದ ಹೊರಗೆ ಕರೆತಂದರೆಂದು ವಿವರಿಸಿದನು. ಈ ವಿಷಯವನ್ನು ಯಕೋಬನಿಗೂ ಇತರ ಸಹೋದರರಿಗೂ ತಿಳಿಸಲು ಹೇಳಿ ಅಲ್ಲಿಂದ ಹೊರಟು ಬೇರೆ ಸ್ಥಳಕ್ಕೆ ಹೋದನು.

18 ಬೆಳಗಾದಾಗ ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು.

19 ಅವನನ್ನು ಹುಡುಕಿತರುವಂತೆ ಹೆರೋದನು ಆಜ್ಞಾಪಿಸಿದನು. ಆದರೆ ಅವನನ್ನು ಕಂಡುಹಿಡಿಯಲು ಅವರಿಂದಾಗಲಿಲ್ಲ. ಆದುದರಿಂದ ಪಹರೆಯವರನ್ನೇ ವಿಚಾರಣೆಗೆ ಗುರಿಮಾಡಿ ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಇದಾದ ಬಳಿಕ ಹೆರೋದನು ಜುದೇಯದಿಂದ ಹೊರಟು ಕೊಂಚಕಾಲ ಸೆಜರೇಯದಲ್ಲಿ ಇದ್ದನು.


ಹೆರೋದನ ದುರ್ಮರಣ

20 ಹೆರೋದನು ಟೈರ್ ಮತ್ತು ಸಿದೋನಿನ ಜನರ ಮೇಲೆ ಕಡುಕೋಪಗೊಂಡಿದ್ದನು. ಅವರೆಲ್ಲರೂ ಒಟ್ಟಾಗಿ ಅವನನ್ನು ಸಂದರ್ಶಿಸಲು ಹೋದರು. ಮೊದಲು ಅರಮನೆಯ ಮೇಲ್ವಿಚಾರಕನಾದ ಬ್ಲಾಸ್ತನ ಮನಸ್ಸನ್ನು ತಮ್ಮ ಕಡೆ ಒಲಿಸಿಕೊಂಡರು. ಅನಂತರ ಅವರು ಹೆರೋದನೊಡನೆ ಸಂಧಾನಮಾಡಿಕೊಳ್ಳಲು ಯತ್ನಿಸಿದರು. ಏಕೆಂದರೆ, ಅವರು ದವಸಧಾನ್ಯಗಳಿಗಾಗಿ ಹೆರೋದನ ನಾಡನ್ನು ಅವಲಂಬಿಸಬೇಕಾಗಿತ್ತು.

21 ನಿಯಮಿತ ದಿನದಂದು ಹೆರೋದನು ರಾಜಪೋಷಾಕನ್ನು ಧರಿಸಿಕೊಂಡು ಜನರನ್ನುದ್ದೇಶಿಸಿ ಭಾಷಣಮಾಡಿದನು.

22 “ಮಾತನಾಡುತ್ತಿರುವವನು ಮಾನವನಲ್ಲ, ದೇವರೇ!” ಎಂದು ಜನರು ಘೋಷಣೆ ಮಾಡಿದರು.

23 ಆದರೆ ಹೆರೋದನು ದೇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಆದುದರಿಂದ ದೇವದೂತನು ಆ ಕ್ಷಣವೇ ಅವನನ್ನು ಸಂಹರಿಸಿದನು. ಅವನು ಹುಳಹುಪ್ಪಟೆಗಳಿಗೆ ಆಹಾರವಾದನು.

24 ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು.

25 ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ. ಎಂಬ ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು