ಅಪೊಸ್ತಲರ ಕೃತ್ಯಗಳು 11 - ಕನ್ನಡ ಸತ್ಯವೇದವು C.L. Bible (BSI)ಸುನ್ನತಿವಾದಿಗಳಿಗೆ ಪೇತ್ರನಿತ್ತ ಸಮಾಧಾನ 1 ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. 2 ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, 3 “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು. 4 ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು: 5 “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. 6 ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. 7 ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು. 8 ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ಧ ಹಾಗು ಅಸ್ಪೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ. 9 ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧಿಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು. 10 ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. 11 ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂರುಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. 12 ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. 13 ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. 14 ಅವನು ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನು” ಎಂದು ನಮಗೆ ಹೇಳಿದನು. 15 ನಾನು ಉಪದೇಶಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದುಬಂದರು. 16 ಆಗ ನನಗೆ, ‘ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. 17 ನಾನುಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು. 18 ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು, ಮಾತ್ರವಲ್ಲ, ‘ಅನ್ಯಧರ್ಮದವರೂ ಪಶ್ಚಾತ್ತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವಸ್ತುತಿ ಮಾಡಿದರು. ‘ಕ್ರೈಸ್ತರು’ ಎಂಬ ಹೆಸರಿನ ಉಗಮ 19 ಸ್ತೇಫನನು ಕೊಲೆಯಾದ ಮೊದಲ್ಗೊಂಡು ಉಂಟಾದ ಹಿಂಸಾಚಾರದ ನಿಮಿತ್ತ ಭಕ್ತಾದಿಗಳು ಚದರಿಹೋದರು. ಅವರಲ್ಲಿ ಕೆಲವರು ಫೆನಿಷ್ಯ, ಸೈಪ್ರಸ್, ಅಂತಿಯೋಕ್ಯದವರೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಆದರೆ ಇದನ್ನು ಸಾರಿದ್ದು ಯೆಹೂದ್ಯರಿಗೆ ಮಾತ್ರ. 20 ಸೈಪ್ರಸ್ ಮತ್ತು ಸಿರೇನಿನ ಕೆಲವು ಭಕ್ತರಾದರೋ ಅಂತಿಯೋಕ್ಯಕ್ಕೆ ಹೋಗಿ ಪ್ರಭು ಯೇಸುವಿನ ಶುಭಸಂದೇಶವನ್ನು ಗ್ರೀಕರಿಗೂ ಸಾರಿದರು. 21 ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು. 22 ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು. 23 ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು. 24 ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು. 25 ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು. 26 ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು - ಅಂತಿಯೋಕ್ಯದಲ್ಲೇ. 27 ಆ ದಿನಗಳಲ್ಲಿ ಕೆಲವು ಪ್ರವಾದಿಗಳು ಜೆರುಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು. 28 ಅವರಲ್ಲಿ ಅಗಬ ಎಂಬವನು ಒಬ್ಬನು. ಇವನು ಪವಿತ್ರಾತ್ಮ ಪ್ರೇರಿತನಾಗಿ ಜಗತ್ತಿನಲ್ಲೆಲ್ಲಾ ಭೀಕರ ಕ್ಷಾಮ ಬರಲಿದೆಯೆಂದು ಮುಂತಿಳಿಸಿದನು. (ಇದು ಬಂದೊದಗಿದುದು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ) 29 ಆಗ ಭಕ್ತರಲ್ಲಿ ಪ್ರತಿಯೊಬ್ಬರು ತಮ್ಮ ಶಕ್ತಿಗನುಸಾರ ಜುದೇಯದಲ್ಲಿ ವಾಸಿಸುತ್ತಿದ್ದ ಭಕ್ತಾದಿಗಳಿಗೆ ನೆರವು ನೀಡಲು ನಿರ್ಧರಿಸಿದರು. 30 ಅಂತೆಯೇ ತಮ್ಮ ಸಹಾಯವನ್ನು ಬಾರ್ನಬ ಮತ್ತು ಸೌಲ ಇವರ ಮುಖಾಂತರ ಅಲ್ಲಿನ ಸಭಾಪ್ರಮುಖರಿಗೆ ಕಳುಹಿಸಿಕೊಟ್ಟರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India