Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 10 - ಕನ್ನಡ ಸತ್ಯವೇದವು C.L. Bible (BSI)


ಪೇತ್ರ ಮತ್ತು ಕೊರ್ನೇಲಿಯ

1 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ಅವನು ‘ಇಟಲಿಯ ದಳ’ದಲ್ಲಿ ಒಬ್ಬ ಶತಾಧಿಪತಿ.

2 ಅವನೂ ಅವನ ಕುಟುಂಬವೂ ದೇವರಲ್ಲಿ ಭಯಭಕ್ತಿಯಿಂದ ಜೀವಿಸುತ್ತಿದ್ದರು. ಯೆಹೂದ್ಯರಿಗೆ ಅವನು - ಧಾರಾಳವಾಗಿ ದಾನಧರ್ಮಮಾಡುತ್ತಿದ್ದನು. ದೇವರಿಗೆ ತಪ್ಪದೆ ಪ್ರಾರ್ಥನೆ ಸಲ್ಲಿಸುತ್ತಿದ್ದನು.

3 ಅದೊಂದು ಮಧ್ಯಾಹ್ನ, ಸುಮಾರು ಮೂರು ಗಂಟೆಯ ಸಮಯ, ಅವನಿಗೊಂದು ದಿವ್ಯದರ್ಶನವಾಯಿತು: ದೇವದೂತನೊಬ್ಬನು ತನ್ನ ಮನೆಯೊಳಗೆ ಬಂದು, “ಕೊರ್ನೇಲಿಯಾ,” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು.

4 ಕೊರ್ನೇಲಿಯನು ಭಯದಿಂದ ದೇವದೂತನನ್ನು ದಿಟ್ಟಿಸಿನೋಡುತ್ತಾ, “ಏನು ಸ್ವಾಮಿ?” ಎಂದನು. ಅದಕ್ಕೆ ದೇವದೂತನು, “ನಿನ್ನ ಪ್ರಾರ್ಥನೆ ಮತ್ತು ದಾನಧರ್ಮ ದೇವರನ್ನು ಮುಟ್ಟಿವೆ. ಅವರು ನಿನ್ನನ್ನು ಮೆಚ್ಚಿದ್ದಾರೆ; ನಿನ್ನ ಕೋರಿಕೆಗಳನ್ನು ಈಡೇರಿಸಲಿದ್ದಾರೆ.

5 ನೀನು ಈಗಲೇ ಜೊಪ್ಪಕ್ಕೆ ಆಳುಗಳನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.

6 ಅವನು, ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದು ಹೇಳಿ ದೂತನು ಅದೃಶ್ಯನಾದನು.

7 ಕೂಡಲೇ ಕೊರ್ನೇಲಿಯನು ತನ್ನ ಇಬ್ಬರು ಪರಿಚಾರಕರನ್ನೂ ತನ್ನ ಪಹರೆಯವರಲ್ಲಿ ಧರ್ಮನಿಷ್ಠನಾಗಿದ್ದ ಒಬ್ಬ ಸೈನಿಕನನ್ನೂ ಕರೆದು,

8 ನಡೆದುದೆಲ್ಲವನ್ನೂ ತಿಳಿಸಿ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.

9 ಮಾರನೆಯ ದಿನ ಅವರು ಪ್ರಯಾಣ ಮಾಡಿ ಜೊಪ್ಪವನ್ನು ಸಮೀಪಿಸಿದಾಗ ಮಧ್ಯಾಹ್ನ ಸಮಯ. ಆಗತಾನೇ ಪೇತ್ರನು ಪ್ರಾರ್ಥನೆ ಮಾಡಲು ಮಾಳಿಗೆಯ ಮೇಲಕ್ಕೆ ಹೋದನು.

10 ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕು ಎನಿಸಿತು. ಊಟ ಸಿದ್ಧವಾಗುತ್ತಿದ್ದಂತೆ, ಪೇತ್ರನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡನು.

11 ಸ್ವರ್ಗದ ಬಾಗಿಲು ತೆರೆಯಿತು. ದೊಡ್ಡ ದುಪ್ಪಟಿಯಂತಹ ವಸ್ತುವೊಂದು ಇಳಿದು ಬರುತ್ತಿತ್ತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಭೂಮಿಯ ಮೇಲೆ ಅದನ್ನು ಇಳಿಯಬಿಡಲಾಗಿತ್ತು.

12 ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.

13 ಅಲ್ಲದೆ, “ಪೇತ್ರಾ, ಏಳು, ಕೊಯ್ದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.

14 ಪೇತ್ರನು, “ಇದು ಬೇಡವೆ ಬೇಡ ಸ್ವಾಮಿ, ಅಶುದ್ಧ ಹಾಗೂ ನಿಷಿದ್ಧ ಆದುದನ್ನು ನಾನೆಂದೂ ತಿಂದವನಲ್ಲ,” ಎಂದನು.

15 ಅದಕ್ಕೆ ಮತ್ತೊಮ್ಮೆ ಆ ವಾಣಿ ಅವನಿಗೆ, “ದೇವರೇ ಶುದ್ಧೀಕರಿಸಿರುವ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.

16 ಹೀಗೆ ಮೂರು ಸಾರಿ ನಡೆದ ಮೇಲೆ ಆ ವಸ್ತುವನ್ನು ಸ್ವರ್ಗಕ್ಕೆ ಎತ್ತಿಕೊಳ್ಳಲಾಯಿತು.

17 ಇತ್ತ ಪೇತ್ರನು ತಾನು ಕಂಡ ದರ್ಶನದ ಅರ್ಥವೇನಿರಬಹುದೆಂದು ತಬ್ಬಿಬ್ಬಾದನು. ಅಷ್ಟರಲ್ಲಿ ಕೊರ್ನೇಲಿಯನು ಕಳುಹಿಸಿದ್ದ ಆಳುಗಳು ಸಿಮೋನನ ಮನೆಯನ್ನು ವಿಚಾರಿಸಿ ಕಂಡುಹಿಡಿದರು. ಹೊರಬಾಗಿಲ ಬಳಿ ನಿಂತುಕೊಂಡು,

18 “ಪೇತ್ರನೆಂದು ಕರೆಯಲಾಗುವ ಸಿಮೋನ ಎಂಬವರು ಇಲ್ಲಿ ತಂಗಿರುವರೇ?” ಎಂದು ಕೂಗಿ ಕೇಳಿದರು.

19 ಪೇತ್ರನು ತನ್ನ ದರ್ಶನವನ್ನು ಕುರಿತು ಇನ್ನೂ ಆಲೋಚಿಸುತ್ತಿರುವಾಗ ಪವಿತ್ರಾತ್ಮ ಅವರು, “ಇಗೋ, ಮೂರು ಜನರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ,

20 ಸಿದ್ಧವಾಗಿ ಕೆಳಕ್ಕೆಹೋಗು. ನಾನೇ ಅವರನ್ನು ಕಳುಹಿಸಿರುವುದರಿಂದ ಸಂಕೋಚಪಡದೆ ಅವರೊಡನೆ ಹೋಗು,” ಎಂದರು.

21 ಪೇತ್ರನು ಕೆಳಕ್ಕೆ ಹೋಗಿ ಆ ಜನರನ್ನು ನೋಡಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ. ನೀವು ಬಂದ ಕಾರಣವೇನು?” ಎಂದು ವಿಚಾರಿಸಿದನು.

22 “ಶತಾಧಿಪತಿ ಕೊರ್ನೇಲಿಯ ನಮ್ಮನ್ನು ಕಳುಹಿಸಿದರು. ಅವರೊಬ್ಬ ಸತ್ಪುರುಷರು, ದೈವಭಕ್ತರು, ಯೆಹೂದ್ಯ ಜನತೆಯಿಂದ ಗೌರವಾನ್ವಿತರು. ನಿಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ, ನೀವು ಹೇಳುವುದನ್ನು ಕೇಳಬೇಕೆಂದು ದೇವದೂತನಿಂದ ಆದೇಶಪಡೆದಿದ್ದಾರೆ,” ಎಂದರು.

23 ಪೇತ್ರನು ಅವರನ್ನು ಒಳಕ್ಕೆ ಬರಮಾಡಿಕೊಂಡು ಉಪಚರಿಸಿ, ರಾತ್ರಿ ಅಲ್ಲೇ ತಂಗುವಂತೆ ಮಾಡಿದನು. ಮಾರನೆಯ ದಿನ ಪೇತ್ರನು ಅವರೊಡನೆ ಹೋದನು. ಜೊತೆಯಲ್ಲಿ ಜೊಪ್ಪದ ಕೆಲವು ಸಹೋದರರೂ ಹೋದರು.

24 ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆ ಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು.

25 ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿಯನು ಅವನನ್ನು ಎದುರುಗೊಂಡು, ಪಾದಕ್ಕೆರಗಿ, ಸಾಷ್ಟಾಂಗ ನಮಸ್ಕಾರಮಾಡಿದನು.

26 ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದು ನಿಲ್ಲು, ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.

27 ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು.

28 ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆ. ಆದರೆ, ನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ.

29 ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆ. ಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.

30 ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು.

31 ಅವನು, “ಕೊರ್ನೇಲಿಯಾ, ದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆ; ನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ.

32 ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊ. ಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು.

33 ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.


ಅನ್ಯಧರ್ಮೀಯರಿಗೂ ಆಹ್ವಾನ

34 ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಮನದಟ್ಟಾಗಿದೆ.

35 ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

36 ಸಮಸ್ತ ಮಾನವಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿದಿದೆ.

37 ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು.

38 ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿ ಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು.

39 ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊಂದರು.

40 ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು.

41 ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟಮಾಡಿದವರು ನಾವು.

42 ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ.

43 ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”


ಅನ್ಯಧರ್ಮದವರಿಗೂ ಪವಿತ್ರಾತ್ಮಧಾರೆ

44 ಪೇತ್ರನು ಮಾತನಾಡುತ್ತಿದ್ದಂತೆ ಅವನ ಉಪದೇಶವನ್ನು ಕೇಳುತ್ತಿದ್ದ ಎಲ್ಲರ ಮೇಲೆ ಪವಿತ್ರಾತ್ಮ ಇಳಿದುಬಂದರು.

45-46 ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು. ಜೊಪ್ಪದಿಂದ ಪೇತ್ರನೊಡನೆ ಬಂದಿದ್ದ ಯೆಹೂದ್ಯ ಭಕ್ತವಿಶ್ವಾಸಿಗಳು ಇದನ್ನು ಕಂಡು, ದೇವರು ಅನ್ಯಧರ್ಮದವರ ಮೇಲೂ ಪವಿತ್ರಾತ್ಮಧಾರೆ ಎರೆಯುತ್ತಿದ್ದಾರಲ್ಲಾ ಎಂದು ವಿಸ್ಮಿತರಾದರು. ಆಗ ಪೇತ್ರನು,

47 “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?’ ಎಂದನು.

48 ಅನಂತರ ಅವರಿಗೆ ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಆಜ್ಞಾಪಿಸಿದನು. ಅದಾದ ಬಳಿಕ ತಮ್ಮೊಡನೆ ಕೆಲವು ದಿನ ಇರಬೇಕೆಂದು ಪೇತ್ರನನ್ನು ಆ ಜನರು ಕೇಳಿಕೊಂಡರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು