Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

3 ಯೋಹಾನನು 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1 ಯಥಾರ್ಥ ಪ್ರೀತಿಗೆ ಪಾತ್ರನಾದ ಗಾಯನಿಗೆ - ಸಭೆಯ ಹಿರಿಯನಾದ ನಾನು ಬರೆಯುವ ಪತ್ರ:

2 ಪ್ರಿಯನೇ, ಎಲ್ಲಾ ವಿಷಯಗಳಲ್ಲಿ ನಿನಗೆ ಶುಭವನ್ನು ಕೋರುತ್ತೇನೆ; ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಆತ್ಮದ ವಿಷಯದಲ್ಲಿ ನೀನು ಅಭಿವೃದ್ಧಿಗೊಳ್ಳುತ್ತಿರುವೆ ಎಂದು ನಂಬಿದ್ದೇನೆ.

3 ನೀನು ಸತ್ಯದಲ್ಲಿ ನಿಷ್ಠಾವಂತನಾಗಿದ್ದು, ಸನ್ಮಾರ್ಗದಲ್ಲಿ ನಡೆಯುತ್ತಿರುವುದಾಗಿ ಕೆಲವು ಸಹೋದರರು ಇಲ್ಲಿಗೆ ಬಂದು ತಿಳಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ.

4 ನನ್ನ ಪ್ರಿಯಮಕ್ಕಳು ಸತ್ಯಸಂಧರಾಗಿ ನಡೆಯುತ್ತಿದ್ದಾರೆಂದು ಕೇಳುವುದಕ್ಕಿಂತ ಮಿಗಿಲಾದ ಆನಂದ ನನಗಿಲ್ಲ.


ಗಾಯನ ಶ್ಲಾಘನೆ

5 ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು.

6 ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.

7 ಅವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧರ್ಮೀಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು.

8 ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.


ದಿಯೊತ್ರೇಫನ ಖಂಡನೆ

9 ನಾನು ನಿಮ್ಮ ಸಭೆಗೆ ಚಿಕ್ಕ ಪತ್ರವೊಂದನ್ನು ಬರೆದಿದ್ದೇನೆ. ಆದರೆ ಅಲ್ಲಿಯ ಸಭೆಗೆ ಮುಖಂಡನಾಗ ಬಯಸುತ್ತಿರುವ ದಿಯೊತ್ರೇಫನು ನನ್ನ ಮಾತನ್ನು ಗೌರವಿಸುತ್ತಿಲ್ಲ.

10 ನಾನು ಬಂದಾಗ, ಅವನು ಮಾಡುತ್ತಿರುವುದನ್ನೆಲ್ಲಾ ಹೊರಗೆಡಹುತ್ತೇನೆ. ನಮ್ಮ ವಿರುದ್ಧ ಅವನು ಅಪಪ್ರಚಾರ ಮಾಡುತ್ತಾ ಹರಟೆಕೊಚ್ಚುತ್ತಿದ್ದಾನೆ. ಸಾಲದೆಂದು, ಸಹೋದರರನ್ನು ಸ್ವಾಗತಿಸಲು ನಿರಾಕರಿಸುತ್ತಿದ್ದಾನೆ. ಹಾಗೆ ಸ್ವಾಗತಿಸಬಯಸುವವರನ್ನು ನಿರ್ಬಂಧಿಸಿ ಸಭೆಯಿಂದ ಬಹಿಷ್ಕರಿಸುತ್ತಿದ್ದಾನೆ.

11 ಪ್ರಿಯನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೆಯದನ್ನೇ ಅನುಸರಿಸಿ ನಡೆ. ಒಳಿತನ್ನು ಮಾಡುವವನು ದೇವರಿಗೆ ಸೇರಿದವನು. ಕೆಡುಕನ್ನು ಮಾಡುವವನು ದೇವರನ್ನು ಕಾಣದವನು.

12 ದೆಮೇತ್ರಿಯನ ವಿಷಯದಲ್ಲಿ ಎಲ್ಲರೂ ಒಳ್ಳೆಯದನ್ನೇ ಹೇಳುತ್ತಾರೆ. ಸತ್ಯವೂ ಅವನ ಪರವಾಗಿದೆ. ನಾವು ಅವನ ಬಗ್ಗೆ ಸಾಕ್ಷಿ ಹೇಳಬಲ್ಲೆವು. ನಮ್ಮ ಸಾಕ್ಷ್ಯ ಸತ್ಯವೆಂದು ನೀನು ಬಲ್ಲೆ.


ವಂದನೆಗಳು

13 ನಾನು ನಿನಗೆ ತಿಳಿಸಬೇಕಾದುದು ಇನ್ನೂ ಎಷ್ಟೋ ಇದೆ. ಕಾಗದಪತ್ರಗಳ ಮೂಲಕ ತಿಳಿಸಲು ನನಗಿಷ್ಟವಿಲ್ಲ.

14 ಸದ್ಯದಲ್ಲೇ ನಿನ್ನನ್ನು ಕಾಣುವ ನಿರೀಕ್ಷೆ ನನಗಿದೆ. ಆಗ ನಾವು ಮುಖಾಮುಖಿಯಾಗಿ ಮಾತಾಡಬಹುದು.

15 ಶಾಂತಿಸಮಾಧಾನ ನಿನ್ನಲ್ಲಿರಲಿ! ಮಿತ್ರರೆಲ್ಲರೂ ನಿನಗೆ ವಂದನೆ ಹೇಳಿದ್ದಾರೆ. ಅಲ್ಲಿರುವ ಪ್ರತಿಯೊಬ್ಬ ಮಿತ್ರನಿಗೂ ನಮ್ಮ ವಂದನೆಗಳನ್ನು ತಿಳಿಸು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು