ಮುನ್ನುಡಿ
ಅಬ್ರಹಾಮನಂಥ ಪಿತಾಮಹರ, ಮೋಶೆಯಂಥ ಮುಖಂಡರ, ಸಮುವೇಲನಂಥ ನ್ಯಾಯಸ್ಥಾಪಕರ ಮುಂದಾಳತ್ವದ ಅನುಭವ ಆದಮೇಲೆ ಇಸ್ರಯೇಲರಿಗೆ ದಾವೀದನಂಥ ಅರಸನ ಆಳ್ವಿಕೆಯ ಅನುಭವ ಹೇಗಾಯಿತೆಂಬುದನ್ನು ಈ ಭಾಗದಲ್ಲಿ ಕಾಣಬಹುದು. ದಾವೀದನು ಮೊದಲು ದಕ್ಷಿಣಭಾಗವಾದ ಯೆಹೂದ ಪ್ರಾಂತ್ಯಕ್ಕೆ ಅರಸನಾಗುತ್ತಾನೆ. ಕ್ರಮೇಣ ತನ್ನ ರಾಜ್ಯವನ್ನು ಉತ್ತರಭಾಗಕ್ಕೂ ವಿಸ್ತರಿಸಿ ಇಡೀ ಇಸ್ರಯೇಲ್ ನಾಡಿಗೆ ಅರಸನಾಗುತ್ತಾನೆ. ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ಅವನು ಎದುರಿಸಬೇಕಾಗುತ್ತದೆ. ದೇವರಲ್ಲಿ ಆತನಿಗೆ ಅಪಾರ ನಂಬಿಕೆಯಿತ್ತು; ಸಮಸ್ತ ಇಸ್ರಯೇಲರನ್ನು ಒಲಿಸಿಕೊಳ್ಳುವ ಶಕ್ತಿಯಿತ್ತು.
ಆದರೂ ಕೆಲವು ಸಂದರ್ಭಗಳಲ್ಲಿ ತನ್ನ ದುರಿಚ್ಛೆಗಳನ್ನೂ ದುರುದ್ದೇಶಗಳನ್ನೂ ಈಡೇರಿಸಿಕೊಳ್ಳಲು ದೊಡ್ಡ ದೊಡ್ಡ ತಪ್ಪುಗಳನ್ನು ಮಾಡುತ್ತಾನೆ; ಪಾಪಕಟ್ಟಿಕೊಳ್ಳುತ್ತಾನೆ. ಆದರೆ ನಾತಾನನಂಥ ಪ್ರವಾದಿಗಳು ಅವನ ತಪ್ಪುಗಳನ್ನು ಎತ್ತಿ ತೋರಿಸಿದಾಗ ಒಪ್ಪಿಕೊಳ್ಳುತ್ತಾನೆ, ಪಶ್ಚಾತ್ತಾಪಪಡುತ್ತಾನೆ, ದೇವರು ಕೊಡುವ ದಂಡನೆಗೆ ತಲೆಬಾಗುತ್ತಾನೆ.
ಇಸ್ರಯೇಲರು ಅವನು ಗಳಿಸಿದ ಜಯವಿಜಯಗಳಿಗೆ ಮಾರುಹೋಗುತ್ತಾರೆ. ಅದಕ್ಕೂ ಮಿಗಿಲಾಗಿ ಅವನ ಸದ್ಗುಣಗಳನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತಾರೆ. ಆತನ ಬಗ್ಗೆ ಅವರಿಗಿದ್ದ ಅಭಿಮಾನ ಅಷ್ಟಿಷ್ಟಲ್ಲ. ಅರಸ ಎಂದರೆ ದಾವೀದನಂತಿರಬೇಕು! ನಾಡಿನ ಎಲ್ಲ ಇಕ್ಕಟ್ಟು ಬಿಕ್ಕಟ್ಟುಗಳಲ್ಲಿ, “ದಾವೀದನ ಕುಲಪುತ್ರ” ಅರಸನಾಗಿ ಬಂದು ನಮ್ಮನ್ನು ಉದ್ಧರಿಸಲಿ ಎಂದು ಹಂಬಲಿಸುತ್ತಿದ್ದರು. ಯೆಹೂದ್ಯರು, ಯೇಸುಸ್ವಾಮಿಯ ಕಾಲದಲ್ಲಿ ಕೂಡ.
ಪರಿವಿಡಿ
ದಾವೀದನು ಜುದೇಯ ಪ್ರಾಂತ್ಯಕ್ಕೆ ಅರಸ 1:1—4:12
ದಾವೀದನು ಇಡೀ ಇಸ್ರಯೇಲಿಗೆ ಅರಸ 5:1—24:25
ಅರಸನ ಮೊದಲ ವರ್ಷಗಳು 5:1—10:19
ದಾವೀದನು ಮತ್ತು ಬತ್ಷೆಬೆ 11:1—12:25
ಕದನ ಕಲಹಗಳು 12:26—20:26
ಅರಸನ ಮುಂದಿನ ವರ್ಷಗಳು 21:1—24:25