2 ಸಮುಯೇಲ 9 - ಕನ್ನಡ ಸತ್ಯವೇದವು C.L. Bible (BSI)ಯೋನಾತಾನನ ಮಗನಿಗೆ ದಾವೀದನು ತೋರಿಸಿದ ದಯೆ 1 ಒಂದು ದಿನ ದಾವೀದನು, “ಸೌಲನ ಮನೆಯವರಲ್ಲಿ ಯಾರಾದರು ಇನ್ನೂ ಉಳಿದಿದ್ದಾರೋ? ಯೋನಾತಾನನ ಸಲುವಾಗಿ ನಾನು ಅವರಿಗೆ ದಯೆತೋರಿಸಬೇಕೆಂದಿರುತ್ತೇನೆ,” ಎಂದು ವಿಚಾರಿಸಿದನು. 2 ಸೌಲನ ಮನೆಯಲ್ಲಿ ಊಳಿಗನಾಗಿದ್ದ ಚೀಬ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?’ ಎಂದು ಕೇಳಲು ಅವನು, “ನಿಮ್ಮ ಊಳಿಗನಾದ ನಾನು ಚೀಬನೇ,” ಎಂದು ಉತ್ತರಕೊಟ್ಟನು. 3 ಆಗ ಅರಸನು, “ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆ ತೋರಿಸುತ್ತೇನೆ,” ಎಂದನು. ಆಗ ಚೀಬನು, “ಯೋನಾತಾನನಿಗೆ, ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ,” ಎಂದು ಹೇಳಿದನು. 4 ಅರಸನು, “ಎಲ್ಲಿದ್ದಾನೆ?” ಎಂದು ಕೇಳಲು ಅವನು, “ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿರುತ್ತಾನೆ,” ಎಂದು ಉತ್ತರಕೊಟ್ಟನು. 5 ಕೂಡಲೆ ಅರಸನು ದೂತರನ್ನು ಕಳುಹಿಸಿ ಅವನನ್ನು ಲೋದೆಬಾರಿನಲ್ಲಿದ್ದ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಕರೆಯಿಸಿದನು. 6 ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಆ ಮೆಫೀಬೋಶೆತನು ಬಂದು ದಾವೀದನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದಾವೀದನು, “ಮೆಫೀಬೋಶೆತನೇ,” ಎಂದೊಡನೆ ಅವನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ,” ಎಂದನು. 7 ಆಗ ದಾವೀದನು, “ಹೆದರಬೇಡ; ನಿನ್ನ ತಂದೆ ಯೋನಾತಾನನ ನೆನಪಿನಲ್ಲಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜ ಸೌಲನ ಭೂಮಿಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ; ಇದಲ್ಲದೆ ನೀನು ಪ್ರತಿದಿನ ನನ್ನ ಪಂಕ್ತಿಯಲ್ಲೇ ಊಟಮಾಡಬೇಕು,” ಎಂದು ಹೇಳಿದನು. 8 ಮೆಫೀಬೋಶೆತನು ಇದನ್ನು ಕೇಳಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ಸತ್ತ ನಾಯಿಯಂತಿರುವ ನನ್ನನ್ನು ತಾವು ಗಮನಿಸಲು ನಿಮ್ಮ ಗುಲಾಮನಾದ ನಾನು ಅಪಾತ್ರನೇ!” ಎಂದನು. 9 ಅನಂತರ ದಾವೀದನು ಸೌಲನ ಸೇವಕ ಚೀಬನನ್ನು ಕರೆದು ಅವನಿಗೆ, “ನಿನ್ನ ಯಜಮಾನ ಸೌಲನಿಗೂ ಅವನ ಕುಟುಂಬದವರಿಗೂ ಇದ್ದುದ್ದನ್ನೆಲ್ಲಾ ಅವನ ಮೊಮ್ಮಗನಿಗೆ ಕೊಟ್ಟಿರುತ್ತೇನೆ. 10 ನೀನೂ ನಿನ್ನ ಮಕ್ಕಳೂ ಆಳುಗಳೂ ನಿನ್ನ ಯಜಮಾನನ ಮೊಮ್ಮಗನಿಗಾಗಿ ಆ ಭೂಮಿಯನ್ನು ವ್ಯವಸಾಯಮಾಡಿ ಅದರ ಬೆಳೆಯನ್ನು ಇವನ ಮನೆಯವರ ಅಶನಾರ್ಥವಾಗಿ ತಂದುಕೊಡಬೇಕು. ಇವನಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲೇ ಭೋಜನವಾಗುವುದು,” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ ಇಪ್ಪತ್ತು ಮಂದಿ ಆಳುಗಳೂ ಇದ್ದರು. 11 ಚೀಬನು ಅರಸನಿಗೆ, “ಒಡೆಯರಾದ ಅರಸರ ಅಪ್ಪಣೆ ಮೇರೆಗೆ ಸೇವಕನು ನಡೆಯುವನು,” ಎಂದು ಉತ್ತರಕೊಟ್ಟನು. ಈ ಪ್ರಕಾರ ಮೆಫೀಬೋಶೆತನು ರಾಜಪುತ್ರರಂತೆ ಅರಸನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು. 12 ಅವನಿಗೆ ಮೀಕನೆಂಬೊಬ್ಬ ಚಿಕ್ಕ ಮಗನಿದ್ದನು; ಚೀಬನ ಮನೆಯವರೆಲ್ಲರೂ ಅವನ ಸೇವಕರು. 13 ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದುದರಿಂದ ಅವನು ಜೆರುಸಲೇಮಿನಲ್ಲೇ ವಾಸಿಸಿದನು. ಅವನ ಎರಡು ಕಾಲುಗಳೂ ಕುಂಟಾಗಿದ್ದವು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India