Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 6 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿಗೆ ಬಂದ ಸರ್ವೇಶ್ವರನ ಮಂಜೂಷ
( ೧ ಪೂರ್ವ. 13:1-14 ; 15:15-25 ; 16:6-43 )

1 ಪುನಃ ದಾವೀದನು ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ದೇವರ ಮಂಜೂಷವನ್ನು ತರುವುದಕ್ಕಾಗಿ ಅವರೆಲ್ಲರ ಸಹಿತ ಜುದೇಯ ನಾಡಿನ ಬಾಳಾ ಎಂಬಲ್ಲಿಗೆ ಹೋದನು.

2 ಆ ಮಂಜೂಷವು ದೇವನಾಮದಿಂದ, ಅಂದರೆ ‘ಕೆರೂಬಿಯರ ನಡುವೆ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರ’ ಎಂಬ ನಾಮದಿಂದ ಸುಪ್ರಸಿದ್ಧವಾಗಿತ್ತು.

3 ದೇವರ ಆ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗು ಅಹೀಯೋವನು ಆ ಬಂಡಿಯನ್ನು ನಡೆಸಿದರು.

4 ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲಾದ ಆ ದೇವರ ಮಂಜೂಷದ ಮುಂದೆ ಅಹೀಯೋವನು ನಡೆಯುತ್ತಿದ್ದನು.

5 ದಾವೀದನೂ ಎಲ್ಲ ಇಸ್ರಯೇಲರೂ ಕಿನ್ನರಿ, ಸ್ವರಮಂಡಲ, ತಮಟೆ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು, ಪೂರ್ಣಾವೇಶದಿಂದ ಗೀತೆಗಳನ್ನು ಹಾಡುತ್ತಾ, ಸರ್ವೇಶ್ವರನ ಮುಂದೆ ನರ್ತನ ಮಾಡುತ್ತಾ ಹೋದರು.

6 ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ತಡವರಿಸಿದವು. ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.

7 ಆಗ ಸರ್ವೇಶ್ವರ ಉಜ್ಜನ ಮೇಲೆ ಕೋಪಗೊಂಡರು. ಅಂಥ ಅಗೌರವಕ್ಕಾಗಿ ಅವನನ್ನು ದಂಡಿಸಿದರು. ಅವನು ಅಲ್ಲೇ ದೇವರ ಮಂಜೂಷದ ಬಳಿ ಸತ್ತುಬಿದ್ದನು.

8 ಸರ್ವೇಶ್ವರ ಉಜ್ಜನನ್ನು ಶಿಕ್ಷಿಸಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ ‘ಪೆರೆಚುಜ್ಜಾ’ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.

9 ಆ ದಿನ ದಾವೀದನು ಸರ್ವೇಶ್ವರನಿಗೆ ಭಯಪಟ್ಟನು; ಆ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆಲೋಚಿಸಿದನು.

10 ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.

11 ಸರ್ವೇಶ್ವರನ ಮಂಜೂಷ ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಅವಧಿಯಲ್ಲಿ ಸರ್ವೇಶ್ವರ ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದರು.

12 ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದನಗರಕ್ಕೆ ತಂದನು.

13 ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು.

14 ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು.

15 ಹೀಗೆ ದಾವೀದನು ಹಾಗು ಎಲ್ಲ ಇಸ್ರಯೇಲರೂ ಜಯಕಾರ ಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದರು.

16 ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿ ನೋಡಿ ದಾವೀದನು ಸರ್ವೇಶ್ವರನ ಮುಂದೆ ನಲಿದಾಡುತ್ತಾ ಕುಣಿಯುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲೇ ಅವನನ್ನು ತಿರಸ್ಕರಿಸಿದಳು.

17 ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದನು.

18 ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.

19 ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.

20 ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದಳು. “ಈ ದಿನ ಇಸ್ರಯೇಲರ ಅರಸರು ಎಂಥ ಅಗೌರವದಿಂದ ನಡೆದುಕೊಂಡರು! ಹುಚ್ಚರಲ್ಲಿ ಒಬ್ಬರಂತೆ ತಮ್ಮ ಜನಸಾಮಾನ್ಯರಾದ ದಾಸಿಯರ ಮುಂದೆ ಬೆತ್ತಲೆಯಾಗಿದ್ದರಲ್ಲಾ!” ಎಂದಳು.

21 ಆಗ ದಾವೀದನು ಆಕೆಗೆ, “ನಾನು ಮಾಡಿದ್ದು ಸರ್ವೇಶ್ವರನ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಯೇಲರ ಅರಸನನ್ನಾಗಿ ಮಾಡಿದ ಆ ಸರ್ವೇಶ್ವರನ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.

22 ಇದಕ್ಕಿಂತಲೂ ಹೆಚ್ಚಾದ ತಿರಸ್ಕಾರ ಹೊಂದುವುದಕ್ಕೂ ನನ್ನನ್ನೇ ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ನಾನು ಸಿದ್ಧನು. ನೀನು ಹೇಳಿದ ದಾಸಿಯರಾದರೋ ನನ್ನನ್ನು ಹೇಗೂ ಸನ್ಮಾನಿಸುವರು!” ಎಂದನು.

23 ಸೌಲನ ಮಗಳಾದ ಆ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು