2 ಸಮುಯೇಲ 4 - ಕನ್ನಡ ಸತ್ಯವೇದವು C.L. Bible (BSI)ಈಷ್ಬೋಶೆತನ ಕೊಲೆ 1 ಅಬ್ನೇರನು ಹೆಬ್ರೋನಿನಲ್ಲಿ ಸತ್ತನೆಂಬ ವರ್ತಮಾನ ಸೌಲನ ಮಗನಾದ ಈಷ್ಬೋಶೆತನಿಗೆ ಮುಟ್ಟಿತು; ಅವನ ಕೈಗಳು ಜೋಲುಬಿದ್ದಂತಾದವು; ಇಸ್ರಯೇಲರೆಲ್ಲರು ಕಳವಳಕ್ಕೆ ಈಡಾದರು. 2 ಸೌಲನ ಮಗನಿಗೆ ಬಾಣ ಹಾಗು ರೇಕಾಬ್ ಎಂಬ ಇಬ್ಬರು ಸೇನಾಪತಿಗಳಿದ್ದರು. ಇವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಈ ಬೇರೋತ್ ಎಂಬುದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ; 3 ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ ಅಂದಿನವರೆಗೂ ಅಲ್ಲೇ ಪ್ರವಾಸಿಗಳಾಗಿ ಇದ್ದರು.) 4 ಸೌಲನ ಮಗ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾದದ್ದು ಹೀಗೆ: ಸೌಲ ಹಾಗು ಯೋನಾತಾನರು ಸತ್ತರೆಂಬ ವರ್ತಮಾನ ಜೆಸ್ರೀಲಿನಿಂದ ಬಂದಾಗ ಐದು ವರ್ಷದವನಾಗಿದ್ದ ಅವನನ್ನು ಅವನ ದಾದಿ ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕಾಲು ಮುರಿದುಕೊಂಡನು. 5 ಈಷ್ಬೋಶೆತನು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಮನೆಯೊಳಗೆ ಮಲಗಿರುವಾಗ ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬ್ ಹಾಗು ಬಾಣ ಎಂಬವರು ಅವನ ಮನೆಯ ಬಳಿಗೆಹೋದರು. 6 ಆಗ ಬಾಗಿಲು ಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಗಡಿಸಿ ನಿದ್ರೆಮಾಡುತ್ತಿರುವುದನ್ನು ಕಂಡು ಅವರು ಗುಟ್ಟಾಗಿ ಒಳಗೆ ಜಾರಿಕೊಂಡರು. 7 ಒಳಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ ಅರಸನನ್ನು ಹೊಡೆದುಕೊಂದರು. ತಲೆಯನ್ನು ತೆಗೆದುಕೊಂಡರು. ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ಪ್ರಯಾಣಮಾಡಿ 8 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು ಆ ತಲೆಯನ್ನು ಅವನಿಗೆ ತೋರಿಸಿದರು; “ಇಗೋ, ನಿಮ್ಮ ಜೀವತೆಗೆಯಬೇಕೆಂದಿದ್ದ ನಿಮ್ಮ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ; ಅರಸರಾದ ನಮ್ಮ ಒಡೆಯರಿಗಾಗಿ ಸರ್ವೇಶ್ವರಸ್ವಾಮಿ ಸೌಲನಿಗೂ ಅವನ ಸಂತಾನಕ್ಕೂ ಈ ಹೊತ್ತು ಸೇಡುತೀರಿಸಿದ್ದಾರೆ,” ಎಂದರು. 9 ದಾವೀದನು ಬೇರೋತಿನ ರಿಮ್ಮೋನನ ಮಕ್ಕಳು ಆದ ಆ ರೇಕಾಬ್ ಹಾಗು ಬಾಣ ಎಂಬವರಿಗೆ, 10 “ಸೌಲನ ಮರಣವಾರ್ತೆಯನ್ನು ತಿಳಿಸುವುದು ಶುಭಕರವೆಂದು ಭಾವಿಸಿ ಬಂದು ನನಗೆ ಹೇಳಿದ ಅವನನ್ನು ಹಿಡಿದು ನಾನು ದಂಡಿಸಿದೆ. ಅವನಿಗೆ ಚಿಕ್ಲಗಿನಲ್ಲಿ ಮರಣ ದಂಡನೆಯೆಂಬ ಬಹುಮಾನವನ್ನು ಸಲ್ಲಿಸಿದೆ, ಎಂಬುದು ನಿಮಗೆ ಗೊತ್ತಿಲ್ಲವೆ? 11 ಮಹಾದುಷ್ಟರಾದ ನೀವು ನೀತಿವಂತನ ಮನೆಹೊಕ್ಕು ಅವನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದ ಮೇಲೆ ಆ ರಕ್ತಾಪರಾಧಕ್ಕಾಗಿ ನಿಮಗೆ ಮುಯ್ಯಿ ತೀರಿಸುವುದು ಎಷ್ಟೋ ಅಗತ್ಯವಾಗಿದೆ. ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದ ಸರ್ವೇಶ್ವರನಾಣೆ, ನಿಮ್ಮನ್ನು ಭೂಲೋಕದಿಂದ ತೆಗೆದೇಬಿಡುವೆನು,” ಎಂದು ಹೇಳಿದನು. 12 ಅಂತೆಯೇ ತನ್ನ ಆಳುಗಳಿಗೆ ಆಜ್ಞಾಪಿಸಿದನು. ಅವರು ಇವರನ್ನು ಕೊಂದು ಕೈಕಾಲುಗಳನ್ನು ಕತ್ತರಿಸಿ ಶವಗಳನ್ನು ಹೆಬ್ರೋನಿನ ಕೆರೆಯ ಬಳಿಯಲ್ಲಿ ನೇತುಹಾಕಿದರು. ಈಷ್ಬೋಶೆತನ ತಲೆಯನ್ನು ಹೆಬ್ರೋನಿನಲ್ಲಿದ್ದ ಇಬ್ನೇರನ ಸಮಾಧಿಯಲ್ಲಿ ಹೂಳಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India