Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಯೋಹಾನನು 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1 ದೇವರಿಂದ ಆಯ್ಕೆಯಾದ ಶ್ರೀಮಾತೆಗೂ ಆಕೆಯ ಮಕ್ಕಳಿಗೂ - ಸಭಾಹಿರಿಯನಾದ ನಾನು ಬರೆಯುವ ಪತ್ರ.

2 ನಮ್ಮಲ್ಲಿ ನೆಲೆಗೊಂಡಿರುವ ಹಾಗೂ ನಮ್ಮಲ್ಲಿ ಶಾಶ್ವತವಾಗಿರುವ ಸತ್ಯದ ಪ್ರಯುಕ್ತ ನಾನು ಮತ್ತು ಸತ್ಯವನ್ನು ಅರಿತಿರುವ ಎಲ್ಲರು ನಿಮ್ಮಲ್ಲಿ ಪ್ರೀತಿಯನ್ನಿಟ್ಟಿದ್ದೇವೆ.

3 ಪಿತನಾದ ದೇವರಿಂದಲೂ ಅವರ ಪುತ್ರ ಯೇಸುಕ್ರಿಸ್ತರಿಂದಲೂ ಕೃಪೆ, ಕರುಣೆ, ಶಾಂತಿ, ಸಮಾಧಾನಗಳು ಸತ್ಯಪೂರ್ವಕವಾಗಿಯೂ ಪ್ರೀತಿಪೂರ್ವಕವಾಗಿಯೂ ನಮ್ಮಲ್ಲಿ ನೆಲೆಸಲಿ!


ಸತ್ಯ ಮತ್ತು ಪ್ರೀತಿ

4 ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.

5 ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.

6 ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತಮೊದಲಿನಿಂದಲೂ ಕೇಳಿರುವ ಆಜ್ಞೆ.

7 ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.

8 ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.

9 ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.

10 ಈ ಉಪದೇಶವನ್ನು ಒಪ್ಪದಿರುವ ಯಾವನಾದರೂ ನಿಮಗೆ ಉಪದೇಶಮಾಡಬಂದರೆ, ಮನೆಯೊಳಗೆ ಸೇರಿಸಬೇಡಿ; ಅವನನ್ನು ಹರಸಲೂಬೇಡಿ.

11 ಏಕೆಂದರೆ, ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.


ಕೊನೆಯ ಮಾತು

12 ನಾನು ನಿಮಗೆ ತಿಳಿಸಬೇಕಾದ ವಿಷಯಗಳು ಬಹಳಷ್ಟಿವೆ. ಆದರೆ ಅವುಗಳನ್ನು ಕಾಗದಪತ್ರಗಳ ಮೂಲಕ ತಿಳಿಸಲು ನನಗೆ ಇಷ್ಟವಿಲ್ಲ. ನಾನೇ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ಮಾತನಾಡುವ ನಿರೀಕ್ಷೆ ಇದೆ. ಹೀಗೆ ಮುಖಾಮುಖಿಯಾಗಿ ಮಾತನಾಡುವುದರಿಂದ ಪೂರ್ಣಸಂತೋಷವೂ ಆಗುತ್ತದೆ.

13 ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ನಮಸ್ಕಾರ ಹೇಳಿದ್ದಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು