2 ಪೇತ್ರನು 1 - ಕನ್ನಡ ಸತ್ಯವೇದವು C.L. Bible (BSI)ಪೀಠಿಕೆ 1 ನಮ್ಮ ದೇವರ ಮತ್ತು ಉದ್ಧಾರಕ ಯೇಸುಕ್ರಿಸ್ತರ ಸತ್ಸಂಬಂಧದ ಮೂಲಕ ನಮ್ಮಂತೆಯೇ ಅಮೂಲ್ಯವಾದ ವಿಶ್ವಾಸವನ್ನು ಹೊಂದಿರುವ ಭಕ್ತಾದಿಗಳಿಗೆ - ಯೇಸುಕ್ರಿಸ್ತರ ದಾಸನೂ ಪ್ರೇಷಿತನೂ ಆದ ಸಿಮೋನ ಪೇತ್ರನು ಬರೆಯುವ ಪತ್ರ: 2 ದೇವರ ಮತ್ತು ಪ್ರಭು ಯೇಸುಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಞಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ! ದೇವರಿಂದ ಕರೆ ಮತ್ತು ಆಯ್ಕೆ 3 ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ. 4 ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ. 5 ಈ ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ. 6 ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಭಕ್ತಿಯನ್ನು ಕೂಡಿಸಿರಿ. 7 ಈ ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೋದರ ಸ್ನೇಹಕ್ಕೆ ಪ್ರೀತಿಯನ್ನು ಬೆರೆಸಿರಿ. 8 ಈ ಗುಣಗಳು ನಿಮ್ಮಲ್ಲಿ ಬೆಳೆದು ಸಮೃದ್ಧವಾಗಿದ್ದರೆ, ನಮ್ಮ ಪ್ರಭು ಯೇಸುಕ್ರಿಸ್ತರನ್ನು ಅರಿತು ಬಾಳುವುದರಲ್ಲಿ ಇವು ನಿಮ್ಮನ್ನು ಚೈತನ್ಯಪೂರ್ಣರನ್ನಾಗಿಯೂ ಫಲಪ್ರದರನ್ನಾಗಿಯೂ ಮಾಡುತ್ತವೆ. 9 ಈ ಗುಣಗಳಿಲ್ಲದವನು ಸಂಕುಚಿತ ಮನೋಭಾವನೆಯುಳ್ಳವನು ಹಾಗೂ ಅಂಧನು. ಹಿಂದಿನ ಪಾಪಗಳಿಂದ ತಾನು ಶುದ್ಧಗೊಂಡವನು ಎಂಬುದನ್ನು ಮರೆತುಬಿಟ್ಟವನು. 10 ಸಹೋದರರೇ, ನೀವು ದೇವರಿಂದ ಕರೆಹೊಂದಿದವರು; ದೇವರಿಂದ ಆಯ್ಕೆಯಾದವರು. ಈ ವರದಲ್ಲಿ ದೃಢವಾಗಿರಲು ಮತ್ತಷ್ಟು ಪ್ರಯತ್ನಿಸಿರಿ. ಹೀಗೆ ಮಾಡಿದರೆ, ನೀವೆಂದಿಗೂ ವಿಶ್ವಾಸಭ್ರಷ್ಟರಾಗಲಾರಿರಿ. 11 ನಮ್ಮ ಪ್ರಭು ಹಾಗೂ ಉದ್ಧಾರಕ ಯೇಸುಕ್ರಿಸ್ತರ ಅಮರ ರಾಜ್ಯವನ್ನು ಪ್ರವೇಶಿಸುವ ಭಾಗ್ಯವನ್ನು ದೇವರು ನಿಮಗೆ ಧಾರಾಳವಾಗಿ ಅನುಗ್ರಹಿಸುವರು. 12 ಈ ವಿಷಯಗಳೆಲ್ಲಾ ನಿಮಗೆ ತಿಳಿದೇ ಇವೆ; ನೀವು ಅಂಗೀಕರಿಸಿದ ಸತ್ಯದಲ್ಲಿ ಸ್ಥಿರವಾಗಿಯೂ ಇದ್ದೀರಿ. ಆದರೂ ಇವುಗಳನ್ನು ಪದೇ ಪದೇ ನಿಮ್ಮ ಜ್ಞಾಪಕಕ್ಕೆ ತರಲು ಅಪೇಕ್ಷಿಸುತ್ತೇನೆ. 13 ನಾನು ಈ ದೇಹವೆಂಬ ಗುಡಾರದಲ್ಲಿ ಜೀವಿಸಿರುವ ತನಕ ನಿಮ್ಮನ್ನು ಜ್ಞಾಪಕಪಡಿಸಿ, ಪ್ರೋತ್ಸಾಹಿಸುವುದು ಉಚಿತವೆಂದು ಎಣಿಸಿದ್ದೇನೆ. 14 ನಾನು ಈ ಗುಡಾರವನ್ನು ತ್ಯಜಿಸುವ ಕಾಲವು ಸಮೀಪಿಸಿತೆಂದು ಬಲ್ಲೆ. ನಮ್ಮ ಪ್ರಭು ಯೇಸುಕ್ರಿಸ್ತರೇ ನನಗಿದನ್ನು ಸ್ಪಷ್ಟಪಡಿಸಿದ್ದಾರೆ. 15 ನನ್ನ ಮರಣಾ ನಂತರವೂ ಈ ವಿಷಯಗಳನ್ನು ನೀವು ಯಾವಾಗಲೂ ಜ್ಞಾಪಕಕ್ಕೆ ತಂದುಕೊಳ್ಳಲು ಸಾಧ್ಯವಾಗುವಂತೆ ಈಗಲೇ ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ. ಕ್ರಿಸ್ತಮಹಿಮೆಯನ್ನು ಕಂಡವರ ಸಾಕ್ಷ್ಯ 16 ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ. 17 ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು. 18 ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು. ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. 19 ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ. 20 ಆದರೆ, ಇದನ್ನು ನೀವು ಮುಖ್ಯವಾಗಿ ಜ್ಞಾಪಕದಲ್ಲಿಡಬೇಕು: ಪವಿತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ವೈಯಕ್ತಿಕ ವ್ಯಾಖ್ಯಾನದ ವಿಷಯವಲ್ಲ. 21 ಏಕೆಂದರೆ, ಅದರ ಯಾವ ಪ್ರವಾದನೆಯೂ ಎಂದೂ ಮಾನವ ಸಂಕಲ್ಪದಿಂದ ಬಂದುದಲ್ಲ; 22 ಆ ಮನುಷ್ಯರು ಪವಿತ್ರಾತ್ಮರಿಂದ ಪ್ರೇರಿತರಾಗಿ ದೇವರಿಂದ ಪಡೆದ ವಾಕ್ಯವನ್ನೇ ಮಾತನಾಡಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India