Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 3 - ಕನ್ನಡ ಸತ್ಯವೇದವು C.L. Bible (BSI)

1 ಸೊಲೊಮೋನನು ಜೆರುಸಲೇಮ್ ಪಟ್ಟಣದಲ್ಲಿ ತನ್ನ ತಂದೆ ದಾವೀದನಿಗೆ ದೇವದರ್ಶನ ಉಂಟಾದ ಮೋರೀಯಾ ಗುಡ್ಡದಲ್ಲಿ, ಸರ್ವೇಶ್ವರನ ಆಲಯವನ್ನು ಕಟ್ಟಿಸ ತೊಡಗಿದನು. ಈ ಮೊದಲು, ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು, ದಾವೀದನು ಇದಕ್ಕಾಗಿ ಸಿದ್ಧಮಾಡಿದ್ದನು.

2 ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು.

3 ಅವನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದ ಇಪ್ಪತ್ತೇಳು ಮೀಟರ್ ಹಾಗೂ ಅಗಲ ಒಂಬತ್ತು ಮೀಟರ್.

4 ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್, ಎತ್ತರ ಇಪ್ಪತ್ತನಾಲ್ಕು ಮೀಟರ್, ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.

5 ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದಲೂ ಆ ಹಲಗೆಗಳನ್ನು ತೋರಣ, ಖರ್ಜೂರಗಳ ಚಿತ್ರಗಳುಳ್ಳ ಚೊಕ್ಕ ಬಂಗಾರದ ತಗಡಿನಿಂದಲೂ ಹೊದಿಸಿ, ಅದನ್ನು ರತ್ನಗಳಿಂದ ಅಲಂಕರಿಸಿದನು.

6 ಆ ಬಂಗಾರ ಪರ್ವಯಿಮ್ ದೇಶದ್ದು.

7 ಹೀಗೆ ಆಲಯದಲ್ಲಿನ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನು ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.

8 ಇದಲ್ಲದೆ, ಅವನು ‘ಮಹಾಪರಿಶುದ್ಧ ಸ್ಥಳವನ್ನು’ ಮಾಡಿಸಿದನು.ಅದರ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್; ಅದರ ಅಗಲ ಒಂಬತ್ತು ಮೀಟರ್. ಅದನ್ನು ಸುಮಾರು 20 ಮೆಟ್ರಿಕ್ ಟನ್ ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು.

9 ಬಂಗಾರದ ಮೊಳೆಗಳ ತೂಕ 570 ಕಿಲೋಗ್ರಾಂ. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.

10 ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿಟ್ಟು ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.

11 ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಒಂಬತ್ತು ಮೀಟರ್ ಉದ್ದವಿದ್ದವು. (ಮೊದಲನೆಯ ಕೆರೂಬಿಯ) ಒಂದು ರೆಕ್ಕೆ 2:2 ಮೀಟರ್ ಉದ್ದವಾಗಿದ್ದು ಮನೆಯ ಗೋಡೆಗೆ ತಗಲುತ್ತಿತ್ತು. 2:2 ಮೀಟರ್ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗಲುತ್ತಿತ್ತು.

12 ಅದರಂತೆಯೇ ಎರಡನೆಯ ಕೆರೂಬಿಯ 2:2 ಮೀಟರ್ ಉದ್ದವಾದ ಒಂದು ರೆಕ್ಕೆ ಮನೆಯ ಗೋಡೆಗೂ ಇನ್ನೊಂದು ರೆಕ್ಕೆ ಮೊದಲನೆಯ ಕೆರೂಬಿಯ ರೆಕ್ಕೆಗೂ ತಗಲುತ್ತಿದ್ದವು.

13 ಈ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಒಂಬತ್ತು ಮೀಟರ್ ಉದ್ದಕ್ಕೆ ಚಾಚಿ ಕಾಲೂರಿ ನಿಂತುಕೊಂಡು ಪರಿಶುದ್ಧ ಸ್ಥಳದ ಕಡೆಗೆ ಮುಖ ಮಾಡಿದ್ದವು.

14 ಸೊಲೊಮೋನನು ಪರದೆಯನ್ನು ನೀಲಿ, ಊದಾ, ಕೆಂಪು ವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.


ಎರಡು ಕಂಚಿನ ಸ್ತಂಭಗಳು
( ೧ ಅರಸು. 7:15-22 )

15 ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು 5:5 ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು 2:2 ಮೀಟರ್ ಎತ್ತರವಿದ್ದವು.

16 ಗರ್ಭಗುಡಿಯ ಸರಪಣಿಯಂಥ ಸರಪಣಿಗಳನ್ನು ಮಾಡಿಸಿ, ಆ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ, ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕಟ್ಟಿಸಿದನು.

17 ಆ ಕಂಬಗಳನ್ನು, ದೇವಾಲಯದ ಮುಂಭಾಗದಲ್ಲಿ ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿ, ಬಲಗಡೆಯದಕ್ಕೆ ‘ಯಾಕೀನ್’ ಎಂದೂ ಎಡಗಡೆಯದಕ್ಕೆ ‘ಬೋವಜ್’ ಎಂದೂ ಹೆಸರಿಟ್ಟನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು