Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 16 - ಕನ್ನಡ ಸತ್ಯವೇದವು C.L. Bible (BSI)


ಇಸ್ರಯೇಲ್ ರಾಜ ಬಾಷನು ಕೊಟ್ಟ ಕಾಟ
( ೧ ಅರಸು. 15:17-22 )

1 ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಯೇಲ್ ರಾಜ ಬಾಷನು ಯೆಹೂದ್ಯರಿಗೆ ವಿರೋಧವಾಗಿ ಹೊರಟುಬಂದನು. ಯಾರೂ ಯೆಹೂದ್ಯರ ಅರಸ ಆಸನ ಬಳಿಗೆ ಹೋಗಿಬರುವುದಕ್ಕಾಗದಂತೆ ರಾಮಕೋಟೆಯನ್ನು ಕಟ್ಟಿಸಿದನು.

2 ಆಗ ಆಸನು ಸರ್ವೇಶ್ವರನಾಲಯದ ಮತ್ತು ಅರಮನೆಯ ಭಂಡಾರಗಳಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿದ್ದ ಸಿರಿಯಾದ ಅರಸ ಬೆನ್ಹದದನಿಗೆ ಕಳುಹಿಸಿ,

3 “ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಂದು ಒಪ್ಪಂದ ಇದೆಯಲ್ಲವೆ? ಇಗೋ, ನಿನಗೆ ಬೆಳ್ಳಿಬಂಗಾರವನ್ನು ಕಳುಹಿಸಿದ್ದೇನೆ; ಇಸ್ರಯೇಲರ ಅರಸ ಬಾಷನು ನನ್ನನ್ನು ಬಿಟ್ಟುಹೋಗುವಂತೆ ಮಾಡು; ಅವನ ಸಂಗಡ ನೀನು ಮಾಡಿಕೊಂಡಿರುವ ಒಪ್ಪಂದವನ್ನು ಮುರಿದುಬಿಡು,” ಎಂದು ಹೇಳಿಕಳುಹಿಸಿದನು.

4 ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಇಸ್ರಯೇಲರ ಪಟ್ಟಣಗಳಿಗೆ ವಿರುದ್ಧ ಕಳುಹಿಸಿದನು; ಅವರು ಇಯ್ಯೋನ್, ದಾನ್, ಆಬೇಲ್ಮಯಿಮ್ ಇವುಗಳನ್ನೂ ನಫ್ತಾಲ್ಯರ ಪಟ್ಟಣಗಳ ಎಲ್ಲ ಉಗ್ರಾಣಗಳನ್ನೂ ಹಾಳುಮಾಡಿದರು.

5 ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು.

6 ಅನಂತರ ಅರಸ ಆಸನು ಎಲ್ಲಾ ಯೆಹೂದ್ಯರನ್ನು ಕರೆಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರ ತೆಗೆದುಕೊಂಡು ಹೋಗಿ ಗೆಬ, ಮಿಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.


ದರ್ಶಿಯಾದ ಹನಾನಿ

7 ಆ ಕಾಲದಲ್ಲಿ ದರ್ಶಿಯಾದ ಹನಾನಿಯು ಯೆಹೂದ್ಯರ ಅರಸ ಆಸನ ಬಳಿಗೆ ಬಂದು, “ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಆಶ್ರಯಿಸಿಕೊಳ್ಳದೆ ಸಿರಿಯಾದ ಅರಸನನ್ನು ಆಶ್ರಯಿಸಿಕೊಂಡದ್ದರಿಂದ ಸಿರಿಯಾ ರಾಜನ ಸೈನ್ಯವು ನಿಮ್ಮ ಕೈಗೆ ಬೀಳದಂತೆ ನುಣಿಚಿಕೊಂಡಿತು.

8 ಸುದಾನ್ ಹಾಗೂ ಲಿಬಿಯರ ಸೈನ್ಯ ಅಪರಿಮಿತ ರಥಾಶ್ವಬಲಗಳುಳ್ಳ ಮಹಾ ಸೈನ್ಯವಲ್ಲವೇ? ನೀವು ಸರ್ವೇಶ್ವರನನ್ನು ಆಶ್ರಯಿಸಿಕೊಂಡದ್ದರಿಂದ ಅವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟರು.

9 ಸರ್ವೇಶ್ವರ ಭೂಲೋಕದ ಎಲ್ಲಾ ಕಡೆ ದೃಷ್ಟಿಹರಿಸುತ್ತಾ ತಮ್ಮ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತಮ್ಮ ಪ್ರತಾಪವನ್ನು ತೋರ್ಪಡಿಸುತ್ತಾರೆ. ನೀವು ಈ ಕಾರ್ಯದಲ್ಲಿ ಬುದ್ಧಿಹೀನರಾಗಿ ನಡೆದುಕೊಂಡಿದ್ದೀರಿ; ಇಂದಿನಿಂದ ನಿಮಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದು ಹೇಳಿದನು.

10 ಆಸನು ಈ ಮಾತುಗಳಿಂದ ಬೇಸರಗೊಂಡು, ದರ್ಶಿಯ ಮೇಲೆ ಕುಪಿತನಾಗಿ, ಅವನನ್ನು ಸೆರೆಮನೆಯಲ್ಲಿಡಿಸಿ ಕೋಳಹಾಕಿದನು. ಇದಲ್ಲದೆ, ಜನರಲ್ಲಿ ಕೆಲವರನ್ನು ಪೀಡಿಸಿದನು.

11 ಆಸನ ಪೂರ್ವೋತ್ತರ ಚತರಿತ್ರೆಯನ್ನು ಯೆಹೂದ ಮತ್ತು ಇಸ್ರಯೇಲ್ ರಾಜರ ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.

12 ಅವನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಸರ್ವೇಶ್ವರನ ಸಹಾಯವನ್ನು ಕೋರಲಿಲ್ಲ; ವೈದ್ಯರ ಸಹಾಯವನ್ನು ಮಾತ್ರ ಕೋರಿದನು.

13 ಅವನು ತನ್ನ ಆಳ್ವಿಕೆಯ ನಲವತ್ತ ಒಂದನೆಯ ವರ್ಷದಲ್ಲಿ ತೀರಿಕೊಂಡು ಪಿತೃಗಳ ಬಳಿಗೆ ಸೇರಿದನು.

14 ಅವನ ಶವವನ್ನು ಬುಕ್ಕಿಟ್ಟುಗಾರನ ಕಸಬಿನ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗಾಗಿ ದಾವೀದನಗರದಲ್ಲಿ ತೋಡಿಸಿದ್ದ ಸಮಾಧಿಯಲ್ಲಿ ಅದನ್ನು ಇಟ್ಟರು. ಹೇರಳವಾಗಿ ಧೂಪಹಾಕಿ ಸಂತಾಪ ಸೂಚಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು