Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 12 - ಕನ್ನಡ ಸತ್ಯವೇದವು C.L. Bible (BSI)


ಜುದೇಯದ ಮೇಲೆ ಈಜಿಪ್ಟರ ದಾಳಿ
( ೧ ಅರಸು. 14:25-28 )

1 ರೆಹಬ್ಬಾಮನು ತನ್ನ ರಾಜ್ಯಾಧಿಕಾರವನ್ನು ಸುಭದ್ರಪಡಿಸಿಕೊಂಡ ಮೇಲೆ ಅವನೂ ಅವನ ಪ್ರಜೆಗಳಾದ ಇಸ್ರಯೇಲರೆಲ್ಲರೂ ಸರ್ವೇಶ್ವರನ ಧರ್ಮೋಪದೇಶವನ್ನು ಬಿಟ್ಟುಬಿಟ್ಟರು;

2 ಸರ್ವೇಶ್ವರನಿಗೆ ದ್ರೋಹಿಗಳಾದರು. ಅರಸ ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ

3 ಈಜಿಪ್ಟಿನ ಅರಸ ಶೀಶಕನು, ಸಾವಿರದ ಇನ್ನೂರು ರಥಗಳನ್ನೂ ಅರವತ್ತು ಸಾವಿರ ಮಂದಿ ರಾಹುತರನ್ನೂ ಈಜಿಪ್ಟಿನ, ಲಿಬ್ಯದ, ಸುಕ್ಕೀಯದ ಹಾಗೂ ಕೂಷ್ಯದ ಅಸಂಖ್ಯ ಸೈನಿಕರನ್ನೂ ಕೂಡಿಸಿಕೊಂಡು ಜೆರುಸಲೇಮಿಗೆ ಹೊರಟುಬಂದನು.

4 ಜುದೇಯ ನಾಡಿನ ಕೋಟೆಕೊತ್ತಲುಗಳಿಂದ ಕೂಡಿದ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡ ನಂತರ ಜೆರುಸಲೇಮನ್ನು ಸಮೀಪಿಸಿದನು.

5 ಆಗ ಪ್ರವಾದಿ ಶೆಮಾಯನು ರೆಹಬ್ಬಾಮನ ಬಳಿಗೆ ಹಾಗೂ ಶೀಶಕನಿಗೆ ಹೆದರಿ ಜೆರುಸಲೇಮಿನಲ್ಲಿ ಕೂಡಿದ್ದ ಯೆಹೂದ್ಯ ಪ್ರಧಾನರ ಬಳಿಗೆ ಬಂದು, “ನೀವು ನನ್ನನ್ನು ಬಿಟ್ಟದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಗೆ ಬಿಟ್ಟುಬಿಟ್ಟಿದ್ದೇನೆ,” ಎನ್ನುತ್ತಾರೆ ಸರ್ವೇಶ್ವರ ಎಂದು ಹೇಳಿದನು.

6 ಆಗ ಅರಸನೂ ಇಸ್ರಯೇಲ್ ಪ್ರಧಾನರೂ, ಸರ್ವೇಶ್ವರಸ್ವಾಮಿ ನ್ಯಾಯವಂತರೆಂದು ಒಪ್ಪಿಕೊಂಡು ತಮ್ಮನ್ನೇ ತಗ್ಗಿಸಿಕೊಂಡರು.

7 ಸರ್ವೇಶ್ವರ ಇದನ್ನು ನೋಡಿ ಶೆಮಾಯನಿಗೆ, “ಇವರು ತಮ್ಮನ್ನೇ ತಗ್ಗಿಸಿಕೊಂಡದ್ದರಿಂದ ಇವರನ್ನು ಸಂಹರಿಸುವುದಿಲ್ಲ; ಸ್ವಲ್ಪಕಾಲದಲ್ಲೇ ಇವರಿಗೆ ರಕ್ಷಣೆಯನ್ನು ಅನುಗ್ರಹಿಸುವೆನು; ಶೀಶಕನ ಮುಖಾಂತರ ನನ್ನ ರೌದ್ರವನ್ನು ಜೆರುಸಲೇಮಿನ ಮೇಲೆ ಸುರಿದುಬಿಡುವುದಿಲ್ಲ.

8 ಆದರೂ ನನ್ನ ಸೇವೆಗೂ ಅನ್ಯರಾಜ್ಯಗಳ ಸೇವೆಗೂ ಇರುವ ವ್ಯತ್ಯಾಸ ಇವರಿಗೆ ಗೊತ್ತಾಗುವಂತೆ ಇವರು ಶೀಶಕನಿಗೆ ದಾಸರಾಗಬೇಕು,” ಎಂದು ಹೇಳಿದರು.

9 ಹೀಗೆ ಜೆರುಸಲೇಮಿಗೆ ವಿರೋಧವಾಗಿ ಬಂದ ಈಜಿಪ್ಟಿನ ರಾಜ ಶೀಶಕನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಎಲ್ಲ ದ್ರವ್ಯವನ್ನೂ ಸೊಲೊಮೋನನು ಮಾಡಿಸಿದ್ದ ಬಂಗಾರದ ಗುರಾಣಿಗಳನ್ನೂ ದೋಚಿಕೊಂಡು ಹೋದನು.

10 ಅರಸ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು.

11 ಅರಸನು ಸರ್ವೇಶ್ವರನ ಆಲಯಕ್ಕೆ ಹೋಗುವಾಗಲೆಲ್ಲಾ ಮೈಗಾವಲಿನವರು ಅವುಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು; ಅಲ್ಲಿಂದ ಹಿಂದಕ್ಕೆ ಬಂದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿ ಇಡುತ್ತಿದ್ದರು.

12 ರೆಹಬ್ಬಾಮನು ತನ್ನನ್ನು ತಗ್ಗಿಸಿಕೊಂಡದ್ದರಿಂದ ಹಾಗೂ ಯೆಹೂದ್ಯರಲ್ಲಿ ಕೆಲವು ಸುಲಕ್ಷಣಗಳು ತೋರುತ್ತಿದ್ದುದರಿಂದ ಸರ್ವೇಶ್ವರಸ್ವಾಮಿ ರೆಹಬ್ಬಾಮನ ಮೇಲಿದ್ದ ಕೋಪವನ್ನು ತೊರೆದುಬಿಟ್ಟರು; ಅವನನ್ನು ಪೂರ್ತಿಯಾಗಿ ಹಾಳುಮಾಡಲಿಲ್ಲ.

13 ಅರಸ ರೆಹಬ್ಬಾಮನು ಜೆರುಸಲೇಮಿನಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಪಟ್ಟಕ್ಕೆ ಬಂದದ್ದು ತನ್ನ ನಲವತ್ತೊಂದನೆಯ ವರ್ಷದಲ್ಲಿ. ಸರ್ವೇಶ್ವರ ಎಲ್ಲಾ ಕುಲಪ್ರಾಂತ್ಯಗಳಿಂದ ತಮ್ಮ ಹೆಸರಿಗಾಗಿ ಆರಿಸಿಕೊಂಡ ಜೆರುಸಲೇಮಿನಲ್ಲಿ ಅವನು ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆ ಅವನ ತಾಯಿ.

14 ಅವನು ಸರ್ವೇಶ್ವರನಿಗೆ ವಿಧೇಯನಾಗಿ ನಡೆಯಲು ಮನಸ್ಸುಮಾಡದೆ ದ್ರೋಹಿಯಾದನು.

15 ರೆಹಬ್ಬಾಮನ ಪೂರ್ವೋತ್ತರ ಕೃತ್ಯಗಳು ಪ್ರವಾದಿಯಾದ ಶೆಮಾಯ ಹಾಗೂ ದರ್ಶಿಯಾದ ಇದ್ದೋ ಎಂಬುವರ ಚರಿತ್ರೆಗಳ ವಂಶಾವಳಿ ಭಾಗದಲ್ಲಿ ಬರೆದಿರುತ್ತವೆ. ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು.

16 ರೆಹಬ್ಬಾಮನು ಮೃತನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವಕ್ಕೆ ದಾವೀದ ನಗರದಲ್ಲಿ ಸಮಾಧಿಯಾಯಿತು. ಅವನ ಮಗ ಅಬೀಯನು ಅವನಿಗೆ ಬದಲಾಗಿ ಅರಸನಾದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು