Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 1 - ಕನ್ನಡ ಸತ್ಯವೇದವು C.L. Bible (BSI)


ಸೊಲೊಮೋನನಿಗೆ ದೇವರಿತ್ತ ವಿಶೇಷ ಜ್ಞಾನ
( ೧ ಅರಸು. 3:1-15 )

1 ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಸರ್ವೇಶ್ವರಸ್ವಾಮಿ ಅವನನ್ನು ಹರಸಿ ಮಹಾ ಬಲಾಢ್ಯನಾಗುವಂತೆ ಮಾಡಿದರು.

2 ಅವನು ತನ್ನ ಸಹಸ್ರಾಧಿಪತಿಗಳನ್ನು, ಶತಾಧಿಪತಿಗಳನ್ನು, ಸರಕಾರದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಇಸ್ರಯೇಲ್ ಕುಲಗೋತ್ರಗಳ ನಾಯಕರನ್ನು ಬರಮಾಡಿ, ಅವರ ಸಮೇತ ಗಿಬ್ಯೋನಿನಲ್ಲಿದ್ದ ಪೂಜಾಸ್ಥಳಕ್ಕೆ ಹೋದನು.

3 ಸರ್ವೇಶ್ವರನ ದಾಸನಾದ ಮೋಶೆ ಮರುಭೂಮಿಯಲ್ಲಿ ಮಾಡಿಸಿದ್ದ ದೇವದರ್ಶನದ ಗುಡಾರ ಅಲ್ಲಿಯೇ ಇತ್ತು.

4 ದಾವೀದನು ದೇವರ ಮಂಜೂಷವನ್ನು, ಈಗಾಗಲೇ ಕಿರ್ಯತ್ಯಾರೀಮಿನಿಂದ ತಾನು ಜೆರುಸಲೇಮಿನಲ್ಲಿ ಅದಕ್ಕೋಸ್ಕರ ಸಿದ್ಧಮಾಡಿದ್ದ ಗುಡಾರಕ್ಕೆ, ತೆಗೆದುಕೊಂಡು ಬಂದಿದ್ದನು.

5 ಆದರೂ ಊರೀಯನ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿಸಿದ್ದ ತಾಮ್ರದ ಬಲಿಪೀಠ, ಅಲ್ಲೇ ಗಿಬ್ಯೋನಿನಲ್ಲಿ ಸರ್ವೇಶ್ವರನ ಗುಡಾರದ ಮುಂದೆ ಇತ್ತು. ಈ ಕಾರಣ ಸೊಲೊಮೋನನೂ ಅವನ ಸಮಾಜದವರೂ ಅಲ್ಲಿಗೆ ದರ್ಶನಕ್ಕಾಗಿ ಹೋಗುತ್ತಿದ್ದರು.

6 ಸೊಲೊಮೋನನು, ದೇವದರ್ಶನದ ಗುಡಾರದ ಬಳಿ ಸರ್ವೇಶ್ವರನ ಮುಂದಿದ್ದ ಆ ತಾಮ್ರದ ಪೀಠದ ಮೇಲೆ, ಸಾವಿರ ದಹನಬಲಿಗಳನ್ನು ಅರ್ಪಿಸಿದನು.

7 ಅದೇ ರಾತ್ರಿ ದೇವರು ಸೊಲೊಮೋನನಿಗೆ ದರ್ಶನಕೊಟ್ಟು, “ನಿನಗೆ ಯಾವ ವರಬೇಕು, ಕೇಳಿಕೋ,” ಎಂದು ಹೇಳಿದರು.

8 ಸೊಲೊಮೋನನು, “ನೀವು ನನ್ನ ತಂದೆ ದಾವೀದನಿಗೆ ಮಹಾಕೃಪೆಯನ್ನು ತೋರಿಸಿದಿರಿ. ಅವರ ಸ್ಥಾನದಲ್ಲಿ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.

9 ಹೀಗೆ ಇರಲಾಗಿ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ ನುಡಿದದ್ದು ಸಾರ್ಥಕವಾಗಲಿ; ಧರೆಯ ಧೂಳಿನಷ್ಟು ಅಸಂಖ್ಯವಾದ ಜನಾಂಗದ ಮೇಲೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.

10 ನಿಮ್ಮ ಪ್ರಜೆಯಾದ ಈ ಮಹಾಜನಾಂಗವನ್ನು ಆಳುವುದಕ್ಕೆ ಸಮರ್ಥರಾರು! ನಾನು ಈ ಜನರ ನಾಯಕನಾಗಿ ಇವರನ್ನು ಪರಿಪಾಲಿಸುವುದಕ್ಕೆ ಬೇಕಾದ ಜ್ಞಾನ ವಿವೇಕಗಳನ್ನು ನನಗೆ ಅನುಗ್ರಹಿಸಿರಿ,” ಎಂದು ದೇವರನ್ನು ಬೇಡಿಕೊಂಡನು.

11 ಆಗ ದೇವರು ಸೊಲೊಮೋನನಿಗೆ, “ನೀನು ಘನಧನೈಶ್ವರ್ಯಗಳನ್ನಾಗಲಿ, ಶತ್ರುಗಳ ವಿನಾಶವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳಿಕೊಳ್ಳಲಿಲ್ಲ. ಬದಲಿಗೆ ನಾನು ಯಾರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಪ್ರಜೆಗಳನ್ನು ಪಾಲಿಸುವುದಕ್ಕೆ ಬೇಕಾದ ಜ್ಞಾನ ವಿವೇಕಗಳ ಮೇಲೆ ಮನಸ್ಸಿಟ್ಟು ಅವುಗಳನ್ನು ನಿನಗಾಗಿ ಬೇಡಿಕೊಂಡೆ. ಆದುದರಿಂದ ಅವು ನಿನಗೆ ದೊರಕುವುವು.

12 ಇದಲ್ಲದೆ, ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ. ಇಂಥ ಘನಧನೈಶ್ವರ್ಯಗಳು ನಿನಗಿಂತ ಮೊದಲಿದ್ದ ಅರಸರಲ್ಲಿ ಯಾರಿಗೂ ಇರಲಿಲ್ಲ, ನಿನ್ನ ಅನಂತರದವರಿಗೂ ಇರುವುದಿಲ್ಲ,” ಎಂದರು.


ಸೊಲೊಮೋನನ ವೈಭವ
( ೧ ಅರಸು. 10:26-29 )

13 ಆಮೇಲೆ ಅರಸ ಸೊಲೊಮೋನನು ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದ ದೇವದರ್ಶನದ ಗುಡಾರದಿಂದ ಜೆರುಸಲೇಮಿಗೆ ಬಂದು ಇಸ್ರಯೇಲ್ ರಾಜ್ಯವನ್ನು ಆಳಿದನು.

14 ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಅವನಿಗಿದ್ದ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲೇ ಇಟ್ಟುಕೊಂಡನು. ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದನು.

15 ಅವನ ಕಾಲದಲ್ಲಿ ಬೆಳ್ಳಿಬಂಗಾರ ಕಲ್ಲಿನಂತೆಯೂ, ದೇವದಾರು ಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆಯೂ ಜೆರುಸಲೇಮಿನಲ್ಲಿ ವಿಫುಲವಾಗಿದ್ದವು.

16 ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.

17 ರಥಕ್ಕೆ ಆರುನೂರು ಬೆಳ್ಳಿನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ ಕುದುರೆಗಳನ್ನೂ ಈಜಿಪ್ಟ್ ದೇಶದಿಂದ ತರಿಸುತ್ತಿದ್ದರು; ಹಿತ್ತಿಯರ ಮತ್ತು ಸಿರಿಯಾದವರ ಎಲ್ಲಾ ಅರಸರು ಇವರ ಮುಖಾಂತರವೇ ತರಿಸುತ್ತಿದ್ದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು