Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಥೆಸಲೋನಿಕದವರಿಗೆ 3 - ಕನ್ನಡ ಸತ್ಯವೇದವು C.L. Bible (BSI)


ಪ್ರೇಷಿತರಿಗಾಗಿ ಪ್ರಾರ್ಥನೆ

1 ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ.

2 ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ.

3 ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು.

4 ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ.

5 ದೇವರ ಪ್ರೀತಿಯನ್ನೂ ಕ್ರಿಸ್ತಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.


ದುಡಿಯಲೊಲ್ಲದವನು ಉಣಲೂ ಬಾರದು

6 ಪ್ರಿಯ ಸಹೋದರರೇ, ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ: ನಾವು ನಿಮಗೆ ಬೋಧಿಸಿದ ಸದಾಚಾರವನ್ನು ಪಾಲಿಸದೆ, ಮೈಗಳ್ಳತನದಿಂದ ದಿನಗಳೆಯುವ ಯಾವ ಸೋದರನೊಂದಿಗೂ ಸಂಪರ್ಕವಿಟ್ಟುಕೊಳ್ಳಬೇಡಿ.

7 ನಾವು ಹೇಗೆ ನಡೆದುಕೊಂಡೆವೋ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ.

8 ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ.

9 ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು.

10 ನಾವು ನಿಮ್ಮೊಡನಿದ್ದಾಗ, “ದುಡಿಯಲೊಲ್ಲದವನು ಉಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.

11 ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದುಬಂದಿದೆ.

12 ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.

13 ನೀವಾದರೋ ಸಹೋದರರೇ, ಸತ್ಕಾರ್ಯದ ಸಾಧನೆ ಸಾಕಾಯಿತೆಂದು ಹೇಳಿದಿರಿ.

14 ಈ ಪತ್ರದ ಮೂಲಕ ನಾವು ಹೇಳಿರುವ ಮಾತನ್ನು ಯಾರಾದರೂ ಕೇಳದಿದ್ದರೆ, ಅಂಥವನನ್ನು ಗುರುತಿಸಿ ಅವನ ಸಹವಾಸವನ್ನೇ ತೊರೆದುಬಿಡಿ. ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.

15 ಆದರೂ ಅವನನ್ನು ಶತ್ರುವೆಂದು ಭಾವಿಸದೆ, ಸಹೋದರನಂತೆ ಕಂಡು, ಬುದ್ಧಿಹೇಳಿರಿ.


ಶುಭಾಶಯಗಳು

16 ಶಾಂತಿದಾತರಾದ ಪ್ರಭು ಎಲ್ಲ ಕಾಲಕ್ಕೂ ಎಲ್ಲ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭು ನಿಮ್ಮೆಲ್ಲರೊಡನೆ ಇರಲಿ!

17 ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದಲೇ ಇದನ್ನು ಬರೆಯುತ್ತಿದ್ದೇನೆ. ನನ್ನ ಪ್ರತಿ ಪತ್ರಕ್ಕೂ, ನಾನು ಹಾಕುವ ಸಹಿ ಹಾಗು ನಾನು ಬರೆಯುವ ಧಾಟಿ ಇದೇ. ನಿಮಗೆ ನನ್ನ ಶುಭಾಶಯಗಳು!

18 ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರೊಡನೆ ಇರಲಿ!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು