2 ಥೆಸಲೋನಿಕದವರಿಗೆ 2 - ಕನ್ನಡ ಸತ್ಯವೇದವು C.L. Bible (BSI)ಪಾಪಪುರುಷ 1 ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ: 2 ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದುಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ. 3 ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ಧವಾದ ‘ಅಂತಿಮ ಪ್ರತಿಭಟನೆ’ ಉಂಟಾಗುವುದು. ‘ಪಾಪಪುರುಷನಾದ’ ಅಧರ್ಮಿ ತಲೆ ಎತ್ತಿಕೊಳ್ಳುವನು. 4 ದೇವರೆನಿಸಿಕೊಳ್ಳುವ ಎಲ್ಲವನ್ನೂ ಅಲ್ಲಗಳೆಯುವನು; ಆರಾಧನೆಗೈಯುವ ಎಲ್ಲವನ್ನೂ ಇಲ್ಲಗೊಳಿಸುವನು; ಇವೆಲ್ಲಕ್ಕೂ ತಾವೇ ಮಿಗಿಲೆಂದು ಭಾವಿಸಿ ದೇವಮಂದಿರದಲ್ಲಿ ಕುಳಿತುಕೊಂಡು ತಾನೇ ದೇವರೆಂದು ಘೋಷಿಸಿಕೊಳ್ಳುವನು. 5 ನಾನು ನಿಮ್ಮೊಡನೆ ಇದ್ದಾಗಲೇ ಇದೆಲ್ಲವನ್ನು ತಿಳಿಸಿದ ನೆನಪು ನಿಮಗಿಲ್ಲವೇ? 6 ನಿಯಮಿತ ಕಾಲಕ್ಕೆ ಮುಂಚೆ ಕಾಣಿಸಿಕೊಳ್ಳದಂತೆ ಅವನನ್ನು ತಡೆಹಿಡಿದಿರುವುದು ಯಾವುದೆಂದು ನೀವು ಬಲ್ಲಿರಿ. 7 ಅಧರ್ಮವು ಈಗಾಗಲೇ ಗುಪ್ತವಾಗಿ ತನ್ನ ಕೆಲಸವನ್ನು ಸಾಧಿಸುತ್ತಿದೆ; ತಡೆಗಟ್ಟಿರುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. 8 ಆಮೇಲೆ ಆ ಅಧರ್ಮಿ ಕಾಣಿಸಿಕೊಳ್ಳುವನು. ಅವನನ್ನು ಪ್ರಭು ಯೇಸು ತಮ್ಮ ಬಾಯುಸಿರಿನಿಂದಲೇ ಕೊಂದುಹಾಕುವರು; ತಮ್ಮ ಪ್ರತ್ಯಕ್ಷತೆಯ ತೇಜಸ್ಸಿನಿಂದಲೇ ತರಿದುಬಿಡುವರು. 9 ಆ ಅಧರ್ಮಿ ಸೈತಾನನ ಶಕ್ತಿಯೊಂದಿಗೆ ಬರುವನು. ಮೋಸಗೊಳಿಸುವ ಎಲ್ಲಾ ಬಗೆಯ ಪವಾಡಗಳನ್ನು, ಚಮತ್ಕಾರಗಳನ್ನು ಮತ್ತು ಶಕ್ತಿಯುತ ಕಾರ್ಯಗಳನ್ನು ಮಾಡಿತೋರಿಸುವನು. 10 ಸತ್ಯವನ್ನು ಪ್ರೀತಿಸದೆ, ಜೀವೋದ್ಧಾರವನ್ನು ನಿರಾಕರಿಸಿ, ವಿನಾಶದ ಮಾರ್ಗದಲ್ಲಿರುವವರನ್ನು ಎಲ್ಲಾ ತರಹದ ಕುಯುಕ್ತಿಯಿಂದ ಅವನು ವಂಚಿಸುವನು. 11 ಆದಕಾರಣ, ಅಸತ್ಯವನ್ನು ನಂಬುವಂಥ ಗಾಢಭ್ರಮೆಗೆ ದೇವರು ಅವರನ್ನು ಒಳಪಡಿಸುವರು. 12 ಹೀಗೆ ಸತ್ಯವನ್ನು ವಿಶ್ವಾಸಿಸದೆ, ಅಧರ್ಮದಲ್ಲಿ ಆನಂದಿಸುವವರೆಲ್ಲರೂ ಖಂಡನೆಗೆ ಗುರಿಯಾಗುವರು. ಪ್ರಥಮ ಫಲ 13 ಸಹೋದರರೇ, ಪ್ರಭುವಿಗೆ ಪ್ರಿಯರಾದವರೇ, ನಿಮಗಾಗಿ ನಿರಂತರವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾವು ಬದ್ಧರು. ಏಕೆಂದರೆ, ದೇವರು ನಿಮ್ಮನ್ನು ಪವಿತ್ರಾತ್ಮರ ಮುಖಾಂತರ ಪಾವನಗೊಳಿಸಿ, ನೀವು ಸತ್ಯದಲ್ಲಿ ವಿಶ್ವಾಸವಿಡುವಂತೆ ಮಾಡಿ, ಜೀವೋದ್ಧಾರವನ್ನು ಪಡೆಯುವಂತೆ ನಿಮ್ಮನ್ನು ಪ್ರಥಮ ಫಲವನ್ನಾಗಿ ಆರಿಸಿಕೊಂಡಿದ್ದಾರೆ. 14 ಹೀಗೆ ಉದ್ಧಾರಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ. 15 ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿಮಾತಿನಿಂದಾಗಲಿ, ಪತ್ರದ ಮೂಲವಾಗಲಿ ಬೋಧಿಸಿರುವ ಸತ್‍ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ 16 ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. 17 ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India