2 ಥೆಸಲೋನಿಕದವರಿಗೆ 1 - ಕನ್ನಡ ಸತ್ಯವೇದವು C.L. Bible (BSI)ಪೀಠಿಕೆ 1 ನಮ್ಮ ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ - ಪೌಲ, ಸಿಲ್ವಾನ ಹಾಗು ತಿಮೊಥೇಯರು ಬರೆಯುವ ಪತ್ರ. 2 ತಂದೆಯಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ! ಪ್ರಭುವಿನ ಪುನರಾಗಮನ 3 ಸಹೋದರರೇ, ನಿಮಗಾಗಿ ನಾವು ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬದ್ಧರಾಗಿದ್ದೇವೆ; ಹಾಗೆ ಸಲ್ಲಿಸುವುದು ಯುಕ್ತವೂ ಹೌದು. ಏಕೆಂದರೆ, ನಿಮ್ಮ ವಿಶ್ವಾಸವು ಪ್ರವರ್ಧಿಸುತ್ತಾ ಇದೆ. ನಿಮ್ಮಲ್ಲಿರುವ ಪರಸ್ಪರ ಪ್ರೀತಿ ಹೆಚ್ಚುತ್ತಿದೆ. 4 ಯಾವಾಗಲೂ ಸಹನೆಯಿಂದಲೂ ಸ್ಥಿರ ವಿಶ್ವಾಸದಿಂದಲೂ ನಿಮಗೆ ಬಂದೊದಗಿರುವ ಕಷ್ಟಸಂಕಟಗಳನ್ನೂ ಚಿತ್ರಹಿಂಸೆಗಳನ್ನೂ ಅನುಭವಿಸುತ್ತಿದ್ದೀರಿ. ಅದಕ್ಕಾಗಿ ದೇವರ ಸಭೆಗಳಲ್ಲಿ ನಿಮ್ಮನ್ನು ಕುರಿತು ನಾವು ಹೆಮ್ಮೆಯಿಂದ ಮಾತನಾಡುತ್ತೇವೆ. 5 ನೀವು ಅನುಭವಿಸುತ್ತಿರುವುದೆಲ್ಲ ದೇವರ ಸಾಮ್ರಾಜ್ಯಕ್ಕಾಗಿ. ಈ ಕಷ್ಟಾನುಭವಗಳ ಮೂಲಕ ದೇವರು ನಿಮ್ಮನ್ನು ತಮ್ಮ ಸಾಮ್ರಾಜ್ಯಕ್ಕೆ ಅರ್ಹರನ್ನಾಗಿ ಮಾಡುತ್ತಾರೆ. ಇವುಗಳಲ್ಲಿ ನೀವು ತೋರಿಸುವ ಸಹನೆ ಹಾಗೂ ವಿಶ್ವಾಸ ಇವುಗಳೇ ದೇವರು ನ್ಯಾಯವಾದ ತೀರ್ಪು ಮಾಡುತ್ತಾರೆಂಬುದಕ್ಕೆ ಸ್ಪಷ್ಟ ನಿದರ್ಶನಗಳು. 6 ನ್ಯಾಯವಾದುದ್ದನ್ನೇ ಮಾಡುವ ದೇವರು ನಿಮ್ಮನ್ನು ಹಿಂಸಿಸುವವರಿಗೆ ಪ್ರತಿಹಿಂಸೆಯನ್ನೂ ಮತ್ತು ಹಿಂಸೆಯನ್ನು ಸಹಿಸುತ್ತಿರುವ ನಿಮಗೆ, ನಮ್ಮೊಡನೆ ಉಪಶಮನವನ್ನೂ ದಯಪಾಲಿಸುವರು. 7-8 ಪ್ರಭು ಯೇಸು ತಮ್ಮ ಪ್ರಭಾವಯುತ ದೂತರೊಂದಿಗೆ ಸ್ವರ್ಗದಿಂದ ಪ್ರತ್ಯಕ್ಷರಾಗುವಾಗ, ಬೆಂಕಿಯ ಜ್ವಾಲೆಗಳು ಕಂಡುಬರುವುವು; ದೇವರನ್ನು ಅರಿತು ಅಲ್ಲಗಳೆದವರಿಗೂ ನಮ್ಮ ಪ್ರಭು ಯೇಸುವಿನ ಶುಭಸಂದೇಶಕ್ಕೆ ಅವಿಧೇಯರಾಗಿ ವರ್ತಿಸಿದವರಿಗೂ ತಕ್ಕ ಪ್ರತೀಕಾರವಾಗುವುದು. 9 ಇವರು ಪ್ರಭುವಿನ ಸನ್ನಿಧಿಯಿಂದಲೂ ಅವರ ಪ್ರಭಾವದ ಮಹಿಮೆಯಿಂದಲೂ ಬಹಿಷ್ಕೃತರಾಗಿ, ನಿತ್ಯದಂಡನೆಗೆ ಗುರಿಯಾಗುವರು. 10 ಪ್ರಭು ತಮ್ಮ ಸದ್ಭಕ್ತರೆಲ್ಲರಿಂದ ಸನ್ಮಾನವನ್ನೂ ವಿಶ್ವಾಸಿಗಳೆಲ್ಲರಿಂದ ಗೌರವವನ್ನೂ ಪಡೆಯುವ ಆ ದಿನದಲ್ಲಿ ಇದೆಲ್ಲಾ ಸಂಭವಿಸುವುದು. ನಾವು ನಿಮಗಿತ್ತ ಸಾಕ್ಷಿಯನ್ನು ನಂಬಿದ ನೀವೆಲ್ಲರೂ ಅವರೊಂದಿಗಿರುವಿರಿ. 11 ಇದಕ್ಕಾಗಿ ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯರಾಗಿ ಬಾಳುವಂತಾಗಲಿ; ದೇವರ ಮಹಿಮಾಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸಪ್ರೇರಿತ ಕಾರ್ಯಗಳು ಪೂರ್ಣವಾಗಲಿ. 12 ಹೀಗೆ ನಿಮ್ಮ ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಮ್ಮ ದೇವರ ಹಾಗು ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India