ಮುನ್ನುಡಿ
ಪೌಲನು ತಿಮೊಥೇಯನಿಗೆ ಬರೆದ ಈ ಎರಡನೆಯ ಪತ್ರ ಬಹುಮಟ್ಟಿಗೆ, ಪ್ರೇಷಿತನಾದವನು ತನ್ನ ಕಿರಿಯ ಸಂಗಾತಿಯೂ ಸಹಾಯಕನೂ ಆದ ತಿಮೊಥೇಯನಿಗೆ ಕೊಟ್ಟ ಹಿತವಚನಗಳಿಂದ ತುಂಬಿದೆ.
ಸಂಕಟದಲ್ಲಿ ಸಹಿಷ್ಣುತೆ ಇರಬೇಕೆಂಬುದೇ ಈ ಪತ್ರದ ಮುಖ್ಯ ವಿಷಯ. ಎಷ್ಟೇ ಕಷ್ಟಕಾರ್ಪಣ್ಯಗಳು, ಅಡ್ಡಿ ಆತಂಕಗಳು ಬಂದೊದಗಿದರೂ ತಿಮೊಥೇಯನು ಕ್ರಿಸ್ತಯೇಸುವಿಗೆ ಜೀವಂತ ಹಾಗೂ ಪ್ರಾಮಾಣಿಕ ಸಾಕ್ಷಿಯಾಗಿರಬೇಕು; ಒಳ್ಳೆಯ ಬೋಧಕ ಹಾಗೂ ಶುಭಸಂದೇಶದ ಪ್ರಚಾರಕ ಆಗಿರಬೇಕು; ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು; ಹಳೆಯ ಮತ್ತು ಹೊಸ ಒಡಂಬಡಿಕೆಯ ಉದಾತ್ತ ಬೋಧನೆಯನ್ನು ಆದರ್ಶವಾಗಿಟ್ಟುಕೊಳ್ಳಬೇಕು.
ಅವಿವೇಕವಾದ, ಹುರುಳಿಲ್ಲದ ವಾಗ್ವಾದಗಳಲ್ಲಿ ಕಾಲಹರಣ ಮಾಡುವುದು ಕೆಲವರ ಹವ್ಯಾಸವಾಗಿತ್ತು. ಇಂಥ ವಾಗ್ವಾದಗಳು ಭಕ್ತರಿಗೆ ನಿಷ್ಪ್ರಯೋಜಕ ಮಾತ್ರವಲ್ಲ, ವಿಶ್ವಾಸದ ವಿನಾಶಕ್ಕೆ ಕಾರಣವಾಗುತ್ತವೆ, ಎಂದು ಲೇಖಕನು ತಿಮೊಥೇಯನನ್ನು ಬಹುವಾಗಿ ಎಚ್ಚರಿಸುತ್ತಾನೆ.
ಪೌಲನು ತನ್ನ ಜೀವನದ ಆದರ್ಶವನ್ನು ತಿಮೊಥೇಯನ ಕಣ್ಮುಂದೆ ಇರಿಸುತ್ತಾನೆ. ದೃಢವಿಶ್ವಾಸ, ಶಾಂತಿಸಹನೆ, ಪ್ರೀತಿವಾತ್ಸಲ್ಯ, ಕಷ್ಟಸಹಿಷ್ಣುತೆ, ಹಿಂಸೆಬಾಧೆಗಳಲ್ಲಿ ಸ್ಥೈರ್ಯ - ಇವೇ ಮುಂತಾದ ಸದ್ಗುಣಗಳನ್ನು ಅವನ ನೆನಪಿಗೆ ತಂದು ಅವನನ್ನು ಹುರಿದುಂಬಿಸುತ್ತಾನೆ.
ಪರಿವಿಡಿ
ಪೀಠಿಕೆ 1:1-2
ಪ್ರಶಂಸೆ-ಪ್ರೋತ್ಸಾಹ 1:3—2:13
ಸಲಹೆ-ಎಚ್ಚರಿಕೆ 2:14—4:5