Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ತಿಮೊಥೆಯನಿಗೆ 3 - ಕನ್ನಡ ಸತ್ಯವೇದವು C.L. Bible (BSI)


ಅಂತಿಮ ದಿನಗಳು

1 ಅಂತಿಮ ದಿನಗಳು ಕಷ್ಟಕರವಾದ ಕಾಲವಾಗಿರುತ್ತದೆಂಬುದನ್ನು ಜ್ಞಾಪಕದಲ್ಲಿಡು.

2 ಜನರು ಸ್ವಾರ್ಥಚಿಂತಕರೂ ಲೋಭಿಗಳೂ ಅಹಂಕಾರಿಗಳೂ ಬಡಾಯಿಕೋರರೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಘ್ನರೂ ಭಕ್ತಿಹೀನರೂ ಆಗುವರು.

3 ಅವರು ಮಮತೆ ಇಲ್ಲದವರೂ ಸಮಾಧಾನ ಸಹಿಸದವರೂ ಚಾಡಿಕೋರರೂ ಸ್ವೇಚ್ಛಾವರ್ತಿಗಳೂ ಕ್ರೂರಿಗಳೂ ಒಳಿತನ್ನು ದ್ವೇಷಿಸುವವರೂ ಆಗುವರು.

4 ನಂಬಿಕೆದ್ರೋಹಿಗಳೂ ದುಡುಕುವವರೂ ಮಹಾಗರ್ವಿಗಳೂ ಆಗುವರು. ದೇವರನ್ನು ಅರಸದೆ ಭೋಗಗಳನ್ನೇ ಬಯಸುವರು.

5 ಅವರು ಭಕ್ತಿಯ ವೇಷ ಧರಿಸಿದ್ದರೂ ಅದರ ನಿಜವಾದ ಶಕ್ತಿಯನ್ನು ಅಲ್ಲಗಳೆಯುವರು. ಇಂಥವರ ಸಹವಾಸ ನಿನಗೆ ಬೇಡ.

6 ಇವರಲ್ಲಿ ಕೆಲವರು ಮನೆಮನೆಗಳಿಗೆ ನುಸಳಿ ನಾನಾ ಪಾಪಗಳಿಂದಲೂ ಕಾಮನೆಗಳಿಂದಲೂ ಕೂಡಿರುವ ಮತಿಗೆಟ್ಟ ಮಹಿಳೆಯರನ್ನು ವಶಪಡಿಸಿಕೊಳ್ಳುವರು.

7 ಆ ಮಹಿಳೆಯರಾದರೋ ಯಾರಿಗೆ ಬೇಕಾದರೂ ಕಿವಿಗೊಡುವರು. ಸತ್ಯವನ್ನು ಮಾತ್ರ ಮನಗಾಣರು.

8 ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.

9 ದುರ್ಮತಿಗಳೂ ವಿಶ್ವಾಸಭ್ರಷ್ಟರೂ ಆಗಿದ್ದಾರೆ. ಆದರೆ ಅವರ ಮೂರ್ಖತನ ದೀರ್ಘಕಾಲ ಬಾಳದು. ಯನ್ನ ಮತ್ತು ಯಂಬ್ರಳ ದೋಷದಂತೆ ಅದು ಸರ್ವರಿಗೂ ಬಟ್ಟಬಯಲಾಗುತ್ತದೆ.


ಕೆಲವು ಸಲಹೆಗಳು

10 ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.

11 ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.

12 ಕ್ರಿಸ್ತಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ.

13 ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.

14 ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು.

15 ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ.

16 ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ.

17 ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು