2 ತಿಮೊಥೆಯನಿಗೆ 2 - ಕನ್ನಡ ಸತ್ಯವೇದವು C.L. Bible (BSI)ನಿಷ್ಠಾವಂತ ಸೈನಿಕ 1 ಪ್ರಿಯ ಪುತ್ರನೇ, ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅನುಗ್ರಹದಲ್ಲಿ ನೀನು ದೃಢನಾಗಿರು. 2 ಹಲವರ ಮುಂದೆ ನಾನು ಮಾಡಿದ ಉಪದೇಶವನ್ನು ನೀನೇ ಕೇಳಿದ್ದೀ. ಅದೇ ಉಪದೇಶವನ್ನು ಇತರರಿಗೂ ಬೋಧಿಸಲು ಪ್ರಾಮಾಣಿಕ ವ್ಯಕ್ತಿಗಳನ್ನು ನೇಮಿಸು. 3 ಕ್ರಿಸ್ತಯೇಸುವಿನ ನಿಷ್ಠಾವಂತ ಸೈನಿಕನಂತೆ ಕಷ್ಟದುಃಖಗಳನ್ನು ತಾಳ್ಮೆಯಿಂದ ಸಹಿಸಿಕೋ. 4 ಯುದ್ಧಕ್ಕೆ ಹೋಗುವ ಯಾವ ಸೈನಿಕನೂ ಲೋಕವ್ಯವಹಾರಗಳಲ್ಲಿ ಸಿಕ್ಕಿಕೊಳ್ಳನು. ಏಕೆಂದರೆ, ತನ್ನನ್ನು ಸೈನ್ಯಕ್ಕೆ ಸೇರಿಸಿಕೊಂಡವನನ್ನು ಮೆಚ್ಚಿಸಲು ಅವನು ಪ್ರಯತ್ನಿಸುತ್ತಾನೆ. 5 ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟು ಅದರ ನಿಯಮಗಳನ್ನು ಪಾಲಿಸದಿದ್ದರೆ ಬಹುಮಾನ ಗಳಿಸಲು ಸಾಧ್ಯವಿಲ್ಲ. 6 ವ್ಯವಸಾಯದ ಹುಟ್ಟುವಳಿಯಲ್ಲಿ ಮೊತ್ತಮೊದಲನೆಯ ಪಾಲು ಕಷ್ಟಪಟ್ಟ ರೈತನಿಗಲ್ಲವೇ? 7 ನಾನು ಹೇಳುತ್ತಿರುವುದನ್ನು ಆಲೋಚಿಸಿ ನೋಡು; ಇದೆಲ್ಲವನ್ನು ಚೆನ್ನಾಗಿ ಗ್ರಹಿಸಲು ಪ್ರಭು ನಿನಗೆ ನೆರವಾಗುವರು. 8-9 ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. 10 ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ. 11 ಈ ಮಾತು ನಂಬತಕ್ಕದ್ದಾಗಿದೆ: 12 ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ. 13 ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. ಪ್ರಾಮಾಣಿಕ ಸೇವಕ 14 ಈ ವಿಷಯಗಳನ್ನು ನಿನ್ನ ಸಭೆಯವರಿಗೆ ಜ್ಞಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು. 15 ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು. 16 ಪ್ರಾಪಂಚಿಕ ಹರಟೆಗಳಿಂದ ದೂರವಿರು. ಅವುಗಳಲ್ಲಿ ಕಾಲಹರಣ ಮಾಡುವವರು ದೇವರಿಂದ ದೂರಸರಿಯುತ್ತಾರೆ. 17 ಅವರ ಮಾತು ರಾಜ ಹುಣ್ಣಿನಂತೆ ಹರಡಿಕೊಳ್ಳುತ್ತದೆ. ಹುಮೆನಾಯ ಮತ್ತು ಫಿಲೇತ ಇಂಥವರ ಗುಂಪಿಗೆ ಸೇರಿದ್ದಾರೆ. 18 ಇವರು ಸತ್ಯಮಾರ್ಗವನ್ನು ತ್ಯಜಿಸಿದ್ದಾರಲ್ಲದೆ ನಮ್ಮ ಪುನರುತ್ಥಾನವು ಈಗಾಗಲೇ ಮುಗಿದುಹೋಗಿದೆಯೆಂದು ಹೇಳುತ್ತಾ ಕೆಲವರ ವಿಶ್ವಾಸವನ್ನು ಕೆಡಿಸುತ್ತಿದ್ದಾರೆ. 19 ಆದರೆ ದೇವರು ಹಾಕಿದಂಥ ಸುಸ್ಥಿರವಾದ ಅಸ್ತಿವಾರವನ್ನು ಯಾರಿಂದಲೂ ಕದಲಿಸಲಾಗದು. ಅದರಲ್ಲಿ “ತನ್ನವರು ಯಾರು ಎಂದು ಪ್ರಭು ಅರಿತಿದ್ದಾರೆ; ಮತ್ತು ತಾನು ಪ್ರಭುವಿನವನೆಂದು ಹೇಳಿಕೊಳ್ಳುವವರೆಲ್ಲರೂ ದುರ್ಮಾರ್ಗದಿಂದ ದೂರವಿರಲಿ,” ಎಂದು ಲಿಖಿತವಾಗಿದೆ. 20 ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಹಾಗೂ ಮಣ್ಣಿನ ಪಾತ್ರೆಗಳೂ ಇರುತ್ತವೆ. ಇವುಗಳಲ್ಲಿ ಕೆಲವು ಉತ್ತಮ ಬಳಕೆಗೂ ಇನ್ನೂ ಕೆಲವು ಸಾಮಾನ್ಯ ಬಳಕೆಗೂ ಬರುವುದುಂಟು. 21 ಹೀಗಿರಲಾಗಿ, ಒಬ್ಬನು ಕೀಳುತನದಿಂದ ತನ್ನನ್ನು ತಾನೇ ಶುದ್ಧೀಕರಿಸಿಕೊಂಡರೆ, ಅವನು ಉತ್ತಮ ಬಳಕೆಗೆ ಯೋಗ್ಯನಾಗುತ್ತಾನೆ. ಅಂಥವನು ದೇವರ ಸೇವೆಗೆ ಮೀಸಲಾಗುತ್ತಾನೆ. ಸತ್ಕಾರ್ಯಗಳನ್ನು ಕೈಗೊಳ್ಳಲು ಸಿದ್ಧನಾಗಿರುತ್ತಾನೆ. 22 ನೀನು ಯೌವನದ ಭಾವೋದ್ರೇಕಗಳಿಗೆ ತುತ್ತಾಗದೆ ಧರ್ಮ, ವಿಶ್ವಾಸ, ಪ್ರೀತಿ ಮತ್ತು ಶಾಂತಿ - ಇವುಗಳನ್ನು ರೂಢಿಸಿಕೋ. ಈ ದಿಸೆಯಲ್ಲಿ ಶುದ್ಧ ಹೃದಯದಿಂದ ದೇವರನ್ನು ಅರಸುವವನು ನಿನಗೆ ಆದರ್ಶವಾಗಿರಲಿ. 23 ಮೂರ್ಖ ಹಾಗೂ ಅನರ್ಥ ವಾಗ್ವಾದಗಳು ಜಗಳಕ್ಕೆ ಕಾರಣಗಳು. ಅವುಗಳ ಗೊಡವೆ ನಿನಗೆ ಬೇಡ. 24 ಪ್ರಭುವಿನ ಶರಣನಿಗೆ ಜಗಳ ಸಲ್ಲದು. ಆತನು ಎಲ್ಲರೊಡನೆ ಸೌಹಾರ್ದದಿಂದ ನಡೆದುಕೊಳ್ಳಬೇಕು. 25 ಬೋಧನೆಯಲ್ಲಿ ಪ್ರವೀಣನೂ ಕೇಡನ್ನು ಸಹಿಸದವನೂ ವಿರೋಧಿಗಳನ್ನು ತಾಳ್ಮೆಯಿಂದ ತಿದ್ದುವವನೂ ಆಗಿರಬೇಕು. ಆ ವಿರೋಧಿಗಳು ಪಶ್ಚಾತ್ತಾಪಪಟ್ಟು ಸನ್ಮಾರ್ಗವನ್ನು ಹಿಡಿಯುವಂತೆ ದೇವರು ಅವರಿಗೆ ಅನುಗ್ರಹಿಸಬಹುದು. 26 ಸೈತಾನನ ಬಲೆಯಲ್ಲಿ ಸಿಕ್ಕಿಕೊಂಡು ಅವನ ಇಚ್ಛಾನುಸಾರ ನಡೆಯುವವರು ಹೀಗೆ ಬಿಡುಗಡೆಹೊಂದಲು ಸಾಧ್ಯವಾಗಬಹುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India